ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಏಪ್ರಿಲ್-ಮೇ ತಿಂಗಳಲ್ಲಿ ಮಾರಣಾಂತಿಕ ಸಾಂಕ್ರಾಮಿಕ ಉಲ್ಬಣಗೊಂಡ ನಂತರ, ಈಗೀಗ ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಕ್ಷೀಣಿಸುತ್ತಿವೆ ಮತ್ತು ದೇಶದ ಕೆಲವು ಭಾಗಗಳು ಕಟ್ಟುನಿಟ್ಟಾದ ಲಾಕ್‌ಡೌನ್‌ಗಳಿಂದ ಹಂತಹಂತವಾಗಿ ಹೊರಬರುತ್ತಿವೆ.
ಪಿಎಂ ಮೋದಿಯವರು ತಮ್ಮ ಸರ್ಕಾರದ ಲಸಿಕಾ ನೀತಿಯ ಕುರಿತು ಮಾತನಾಡಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ವಿವಿಧ ರಾಜ್ಯಗಳು ಮತ್ತು ತಜ್ಞರು ಕೇಂದ್ರದ ಲಸಿಕಾ ನೀತಿಯನ್ನು ಸತತವಾಗಿ ಟೀಕಿಸುತ್ತಲೇ ಬಂದಿದ್ದಾರೆ.
ಮಾರ್ಚ್-ಏಪ್ರಿಲ್‍ನಲ್ಲಿ ಎರಡನೇ ಅಲೆಯು ಭಾರತವನ್ನು ತೀವ್ರ ಬಿಕ್ಕಟ್ಟಿಗೆ ದೂಡಿದಾಗ ಲಸಿಕೆಗಳ ಕುರಿತ ಕೇಂದ್ರದ ಸರ್ಕಾರದ ನಿರ್ಧಾರಗಳು, ನೀತಿಗಳು ಭಾರಿ ಹಿನ್ನಡೆ ಅನುಭವಿಸಿದವು. ಸರ್ಕಾರವು ತನ್ನ “ಲಸಿಕೆ ಮೈತ್ರಿ” ಕಾರ್ಯಕ್ರಮದಡಿ ಕೋವಿಡ್ ಲಸಿಕೆಗಳ ರಫ್ತು ಮಾಡಿದ್ದರ ಬಗ್ಗೆಯೂ ಆಕ್ಷೇಪಗಳು ಕೇಳಿ ಬಂದಿದ್ದವು. ಎಲ್ಲಾ ವಯಸ್ಕರಿಗೆ ಲಸಿಕೆಗಳನ್ನು ವಿಸ್ತರಿಸಿದ್ದರಿಂದ ದೇಶದಲ್ಲಿನ ಕೊರತೆಯನ್ನು ನಿಭಾಯಿಸಲು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಸಂಗ್ರಹಿಸಲು ಸರ್ಕಾರ ಪರದಾಡಿತು. ಈಗಲೂ ಆ ಪರದಾಟ ಮುಂದುವರೆದೇ ಇದೆ.
ಕೋವಿಡ್‌ನ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಸಿರುವುದರಿಂದ, ನಿಧಾನಗತಿಯಲ್ಲಿ ಲಸಿಕೆ ಪೂರೈಕೆಯು ರಾಜ್ಯಗಳಿಗೆ ಕಳವಳದ ವಿಷಯವಾಗಿದೆ.
ಇದೆಲ್ಲಕ್ಕೂ ಮುಖ್ಯವಾಗಿ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಬೇಕಿದ್ದ ಕೇಂದ್ರ ಸರ್ಕಾರ, ಲಸಿಕೆಗಳಿಗೆ ಮೂರು ಬಗೆಯ ದರಗಳನ್ನು ವಿಧಿಸಿದ್ದು, ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಂಡು ರಾಜ್ಯ ಸರ್ಕಾರಗಳ ಮೇಲೆ ಭಾರ ಹಾಕಿದ್ದೂ ಕೂಡ ಟೀಕೆಗೆ ಒಳಗಾಗಿವೆ.
ಪ್ರಧಾನಿ ಈ ಎಲ್ಲ ಟೀಕೆಗಳಿಗೆ ಇಂದು 5ಕ್ಕೆ ಉತ್ತರ ನೀಡುತ್ತಾರೆಯೇ, ಪರಿಹಾರ ಒದಗಿಸುತ್ತಾರೆಯೇ ಎಂಬ ಕುತೂಹಲ ಜನರಲ್ಲಿದೆ. ಈ ನಡುವೆ ಈಗಾಗಲೇ ಅಮಿತ್ ಶಾರವರು “ಮೋದಿಯವರ ನೇತೃತ್ವದಲ್ಲಿ ಭಾರತವು ಎರಡನೇ ಅಲೆಯನ್ನು ಬಹುಬೇಗ ನಿಯಂತ್ರಿಸಿತು” ಎಂದು ಹೇಳಿಕೆ ನೀಡುವ ಮೂಲಕ ಮೋದಿಯವರ ವರ್ಚಸ್ಸನ್ನು ಹೆಚ್ಚಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಸಮಗ್ರ ಪ್ಯಾಕೇಜ್ ನೀಡದಿದ್ದರೆ ಸಿಎಂ ನಿವಾಸದ ಮುಂದೆ ಖಾಲಿ ಚೀಲ ಹಿಡಿದು ಪ್ರತಿಭಟನೆ: ಜನಾಗ್ರಹ ಆಂದೋಲನ ಎಚ್ಚರಿಕೆ


