ಬಂಗಾಳ ಬಿಜೆಪಿಯಲ್ಲಿ ಪಕ್ಷಾಂತರದ ಪರ್ವ ಆರಂಭವಾಗಿದೆ. ಒಬ್ಬರ ನಂತರ ಒಬ್ಬರು ಬಿಜೆಪಿ ತೊರೆದು ತಮ್ಮ ಹಳೆಯ ಟಿಎಂಸಿ ಪಕ್ಷ ಸೇರುತ್ತಿದ್ದಾರೆ. ಇದು ಅಲ್ಲಿನ ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವಾಗಿದೆ. ಈ ಕುರಿತು ನಿನ್ನೆ ಪಕ್ಷದ ಶಾಸಕರೊಂದಗೆ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಬಂಗಾಳ ರಾಜ್ಯಪಾಲರನ್ನು ಭೇಟಿಯಾದರು. ಆದರೆ ಮೂರನೇ ಒಂದು ಭಾಗ ಅಂದರೆ 74 ಶಾಸಕರಲ್ಲಿ 24 ಶಾಸಕರು ಸುವೆಂದು ಅಧಿಕಾರಿಯಿಂದ ದೂರವುಳಿದಿದ್ದು, ರಾಜ್ಯಪಾಲರ ಭೇಟಿಗೆ ಗೈರು ಹಾಜರಾಗಿದ್ದಾರೆ. ಇದು ಬಂಗಾಳ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರಾಗಿದೆ.
‘ತೋಡ್ನಾ-ಜೋಡ್ನಾ (ಕಳಿಸುವುದು-ಕರೆದುಕೊಳ್ಳುವುದು)’ ಟಿಎಂಸಿಯ ಕೊಳಕು ರಾಜಕೀಯದ ಒಂದು ಭಾಗವಾಗಿದೆ. ಅವರು ಕಳೆದ 10 ವರ್ಷಗಳಿಂದ ಇದನ್ನು ಮಾಡುತ್ತಿದ್ದಾರೆ ಮತ್ತು ಯಾರೂ ಇದನ್ನು ವಿರೋಧಿಸಲಿಲ್ಲ. ಆದರೆ ಇದೀಗ ಇದನ್ನು ವಿರೋಧಿಸಲಾಗುತ್ತಿದೆ ಮತ್ತು ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸುವೆಂದು ಅಧಿಕಾರಿ ಹೇಳಿದ್ದಾರೆ.
'Todna-Jodna' is part of TMC's dirty politics. They have been doing this for the past 10 years & nobody opposed it. But it is being opposed now & action will be taken under anti-defection law: BJP leader & Leader of Opposition in State Assembly Suvendu Adhikari pic.twitter.com/s1Z2pcksU2
— ANI (@ANI) June 14, 2021
ನಾನು ಎಲ್ಲ ಶಾಸಕರಿಗೂ ಕರೆ ಮಾಡಿದ್ದೆ. 50 ಶಾಸಕರು ಇಂದು ನಮ್ಮೊಂದಿಗೆ ಸೇರಿದ್ದಾರೆ. ರಾಜ ಭವನದಲ್ಲಿ ರಾಜ್ಯಪಾಲ ಜಗದೀಪ್ ಧಂಖರ್ ಅವರನ್ನು ಭೇಟಿಯಾಗಿ ಪಕ್ಷಾಂತರ ವಿರೋಧಿ ಕಾನೂನು ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಲಿದ್ದೇವೆ. ಉಳಿದ ಶಾಸಕರನ್ನು ಇಂದು ನಮ್ಮನ್ನು ಸೇರಿಕೊಳ್ಳುತ್ತಾರೆ, ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಿಕ್ಷೆ ಅನುಭವಿಸುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಭೆಗೆ ಹಾಜರಾಗದ 24 ಶಾಸಕರು ಮರಳಿ ಟಿಎಂಸಿಯೆಡೆಗೆ ಮಹಾವಲಸೆ ನಡೆಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡತೊಡಗಿವೆ. ಕೆಲ ಶಾಸಕರು ಬಹಿರಂಗ ಹೇಳಿಕೆಗಳನ್ನು ಸಹ ನೀಡಿರುವುದು ಇದಕ್ಕೆ ಪುಷ್ಠಿ ನೀಡಿದೆ. ಹಲವು ಶಾಸಕರು ಬಿಜೆಪಿಯಲ್ಲಿ ಸುವೆಂದು ಅಧಿಕಾರಿಯ ನಾಯಕತ್ವವನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ ಎನ್ನಲಾಗಿದೆ.
ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆತ್ಮೀಯರಾಗಿದ್ದ ಸುವೇಂಧು ಅಧಿಕಾರಿ, ಈ ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿ ಸೇರಿ ರಾಜ್ಯದ ಅಗ್ರ ನಾಯಕರಾಗಿ ಬೆಳೆದಿರುವುದು ಹಲವರಿಗೆ ಇರಿಸು ಮುರಿಸು ತಂದಿದೆ. ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಗಿದೆ. ಚಂಡಮಾರುತದಿಂದಾದ ಹಾನಿ ಪರಿಶೀಲನಾ ಸಭೆಯಲ್ಲಿಯೂ ಮೋದಿ ಸುವೆಂದುಗೆ ಆಹ್ವಾನ ನೀಡಿದ್ದರು.
ಈ ಎಲ್ಲಾ ಬೆಳವಣಿಗೆಗಳಿಂದ ಈಗಗಾಲೇ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಪಕ್ಷ ತೊರೆದಿದ್ದಾರೆ. ಬಿಜೆಪಿಯಲ್ಲಿನ ಉಸಿರುಕಟ್ಟಿಸುವ ವಾತಾವರಣದಿಂದಾಗಿ ತನ್ನ ಪುತ್ರನೊಂದಿಗೆ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದೇನೆ ಎಂದು ಅವರು ಹೇಳಿದ್ದರು. ಅವರು ಟಿಎಂಸಿ ಸೇರಿದ ನಂತರ ರಾಜೀಬ್ ಬ್ಯಾನರ್ಜಿ ಮತ್ತು ದೀಪೇಂಡು ಬಿಸ್ವಾಸ್ ಸೇರಿದಂತೆ ಹಲವಾರು ನಾಯಕರು ಇದನ್ನು ಅನುಸರಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಇದೇ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಈ ಹಿಂದೆ ಪಕ್ಷ ತೊರೆದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಅಭಿಯಾನ ಆರಂಭಿಸಿದ್ದಾರೆ. ಕನಿಷ್ಠ 30 ಬಿಜೆಪಿ ಶಾಸಕರೊಂದಿಗೆ ಟಿಎಂಸಿ ಸಂಪರ್ಕದಲ್ಲಿದೆ ಎಂಬ ಮಾತುಗಳು ಕೇಳಿಬಂದಿದ್ದು ಇದು ಬಿಜೆಪಿಗೆ ತಲೆನೋವಾಗಿದೆ. ಹಾಗಾಗಿ ಅವರು ಪಕ್ಷಾಂತರ ನಿಷೇಧ ಕಾಯ್ದೆಯ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಮುಕುಲ್ ರಾಯ್ ನಿರ್ಗಮನ: ಬಂಗಾಳ ಬಿಜೆಪಿಯಲ್ಲಿ ಆಂತರೀಕ ಕಲಹ ಆರಂಭ


