ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ 70 ಲಕ್ಷ ಕುಟುಂಬಗಳಿಗೆ ಸಮಗ್ರ ಪಡಿತರ ನೀಡಬೇಕು ಮತ್ತು 10 ಸಾವಿರ ನೆರವು ಧನ ನೀಡಬೇಕು. ದುಡಿವವರನ್ನು ಕಳೆದುಕೊಂಡ ಅನಾಥಗೊಂಡಿರುವ ಕುಟುಂಬಗಳಿಗೆ 5 ಲಕ್ಷ ಪರಿಹಾರ ಧನ ನೀಡಬೇಕು. ರೈತರ ಬಿತ್ತನೆ ಬೀಜ – ಗೊಬ್ಬರಕ್ಕೆ ವಿಶೇಷ ಸಬ್ಸಿಡಿ ಘೋಷಿಸಬೇಕು ಎಂಬ ಸಮಗ್ರ ಪ್ಯಾಕೇಜ್‌ಗೆ ಆಗ್ರಹಿಸಿ ಸಿಎಂ ಮನೆಯೆಡೆಗೆ ಜನಾಗ್ರಹ ನಡಿಗೆ ಆರಂಭಿಸಿದ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.
ಮಾವಳ್ಳಿ ಶಂಕರ್, ಕೋಡಿಹಳ್ಳಿ ಚಂದ್ರಶೇಖರ್, ಬಾಲನ್ ಎಸ್, ಯೂಸೂಫ್ ಕನ್ನಿ, ವಿ. ನಾಗರಾಜ್, ಹಬೀಬುಲ್ಲಾ, ಅಫ್ಸರ್ ಕೊಡ್ಲಿಪೇಟೆ, ಕುಮಾರ್ ಸಮತಳ, ಗೌರಿ, ವರದರಾಜೇಂದ್ರ ಸೇರಿದಂತೆ ಒಟ್ಟು 40 ಮಂದಿಯನ್ನು ಬಂಧಿಸಿ ಹೈಗ್ರೌಂಡ್ಸ್ ಠಾಣೆಗೆ ಕರೆದೊಯ್ಯಲಾಗಿದೆ.
ಕೋವಿಡ್ ಚಿಕಿತ್ಸೆಯನ್ನು ಉಚಿತಗೊಳಿಸಬೇಕು, ವ್ಯವಸ್ಥಿತಗೊಳಿಸಬೇಕು, ಗ್ರಾಮಗಳಿಗೂ ವಿಸ್ತರಿಸಬೇಕು. ಎಲ್ಲರಿಗೂ ಸರ್ಕಾರದಿಂದಲೇ ಉಚಿತ ವ್ಯಾಕ್ಸಿನ್ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು. ಸೆಪ್ಟೆಂಬರ್ ಒಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂಬ ಸಮಗ್ರ ಪ್ಯಾಕೇಜ್‌ಗಾಗಿ ಕಳೆದ 2 ತಿಂಗಳಿಂದ ಜನಾಗ್ರಹ ಆಂದೋಲನ ನಿರಂತರವಾಗಿ ಹೋರಾಡುತ್ತಿದೆ. ಈಗಾಗಲೇ ಮುಖ್ಯಮಂತ್ರಿಗಳಿಗೆ 2 ಬಾರಿ ಪತ್ರ ಬರೆದರೂ ಸ್ಪಂದಿಸಿಲ್ಲ ಎಂದು ಮುಖಂಡರು ದೂರಿದ್ದಾರೆ.
ಜನಾಗ್ರಹ, ಜನರಪರ ಸಂಘಟನೆಗಳು ಹಾಗೂ ಮಾಧ್ಯಮಗಳ ಒತ್ತಡದಿಂದಾಗಿ ಸರ್ಕಾರ ಎರಡು ಅರೆಮನಸ್ಸಿನ ಪ್ಯಾಕೇಜುಗಳನ್ನು ಘೋಷಿಸಿದೆ. ಆದರೆ ಅವು ಏತಕ್ಕೂ ಸಾಲದ ಪ್ಯಾಕೇಜುಗಳು. ಕೆಲಸವಿಲ್ಲದೆ ದುಡಿಯುವ ಜನರ ಜೇಬು ಮತ್ತು ಮನೆ ಪಾತ್ರೆ ಎರಡೂ ಖಾಲಿಯಾಗಿವೆ. ಹಸಿವಿನ ಹಾಗೂ ಹಣ ಅಭಾವದ ಹಾಹಾಕಾರ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಅಪಾಯದಲ್ಲಿರುವ ಜನಸಾಮಾನ್ಯರೆಲ್ಲರ ಜೀವ ಉಳಿಸಿಕೊಳ್ಳಲು, ಕುಸಿಯುತ್ತಿರುವ ಲಕ್ಷಾಂತರ ಕುಟುಂಬಗಳ ಜೀವನೋಪಾಯವನ್ನು ರಕ್ಷಿಸಿಕೊಳ್ಳಲು ಇಂದು ಬೀದಿಗಿಳಿಯುವುದು ಅನಿವಾರ್ಯ ಅಗತ್ಯವಾಗಿದೆ ಎಂದು ಮಾವಳ್ಳಿ ಶಂಕರ್ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳನ್ನು ಭೇಟಿಯಾಗಲೇಬೇಕು ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದು, ಸದ್ಯಕ್ಕೆ ಪೊಲೀಸ್ ಠಾಣೆಯಲ್ಲಿಯೇ ಧರಣಿ ಆರಂಭಿಸಿದ್ದಾರೆ. ನಾಲ್ಕು ಜನರ ನಿಯೋಗಕ್ಕೆ ಸಿಎಂ ಭೇಟಿಗೆ ಅವಕಾಶ ನೀಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಂಪೂರ್ಣ ಪ್ಯಾಕೇಜ್‌ಗಾಗಿ ಆಗ್ರಹ: ನಾಳೆ ಮುಖ್ಯಮಂತ್ರಿಯವರ ಮನೆಯಡೆಗೆ ಜನಾಗ್ರಹ ನಡಿಗೆ


