ಕರ್ನಾಟದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದೆ. ರಾಜ್ಯ ಸರ್ಕಾರ ಈ ಹಿಂದೆ ಜಾರಿ ಮಾಡಿದ್ದ ಕಠಿಣ ಲಾಕ್‌ಡೌನ್ ಅನ್ನು ಜೂನ್ 14 ರಿಂದಲೇ ಸಡಿಲಿಸಿದೆ. ಮಧ್ಯಾಹ್ನ 2 ಗಂಟೆಯ ವರೆಗೆ ಸುಗಮ ವ್ಯವಹಾರ ಮತ್ತು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಕೆಲವೇ ಕೆಲವು ಜಿಲ್ಲೆಗಳ ಹೊರತುಪಡಿಸಿ ರಾಜಧಾನಿ ಬೆಂಗಳೂರು ಸೇರಿ ಬಹುತೇಕ ಕರ್ನಾಟಕ ಅನ್‌ಲಾಕ್ ಆಗಿದೆ. 50% ಉದ್ಯೋಗಿಗಳೊಂದಿಗೆ ಉದ್ಯಮಗಳಿಗೆ ಸರ್ಕಾರ ಅನುಮತಿಯನ್ನು ನೀಡಿದೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಲಾಕ್‌ಡೌನ್ ಅನ್ನು ಇನ್ನಷ್ಟು ಸಡಿಲಿಸುವ ಸೂಚನೆಯನ್ನು ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಲಾಕ್‌ಡೌನ್ ಸಡಿಲಗಳಿಸಿ ಅನ್‌ಲಾಕ್ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಇಂದು ಮತ್ತು ನಾಳೆ ಎರಡು ದಿನಗಳ ಪರಿಸ್ಥಿತಿಯನ್ನು ಅವಲೋಕಿಸಿ ಈ ವಾರಾಂತ್ಯದ ಹೊತ್ತಿಗೆ ಮುಂದಿನ ತೀರ್ಮಾನಗಳನ್ನು ಮಾಡುತ್ತೇವೆ. ತಜ್ಞರ ಸಲಹೆ, ತಜ್ಞರ ಸಮಿತಿಯ ವರದಿ, ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗಿನ ಸಭೆಯ ನಂತರ ಲಾಕ್‌ಡೌನ್ ಸಡಿಲಿಸುವ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಈಗ ಅವಕಾಶ ನೀಡಿರುವ ವಾಣಿಜ್ಯ ಚಟುವಟಿಕೆ ನಡುವೆ ಇನ್ನಷ್ಟು ವಾಣಿಜ್ಯ ಚಟುವಟಿಕೆಗಳಿಗೂ ಅವಕಾಶ ಕೊಡಬೇಕು ಎಂಬ ಬೇಡಿಕೆ ಸರ್ಕಾರದ ಮುಂದಿದೆ. ಅದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ಇಂದು ತಿಳಿಸಿದ್ದಾರೆ.
ಇದನ್ನೂ ಓದಿ :ಪಂಜಾಬ್ ಮುಖ್ಯಮಂತ್ರಿ ನಿವಾಸದೆದುರು ಸುಖಬೀರ್ ಬಾದಲ್ ಪ್ರತಿಭಟನೆ – ಬಂಧನ


