ಕವಿ ಸಿದ್ಧಲಿಂಗಯ್ಯನವರು ಮಣಿಪಾಲ್ ಆಸ್ಪತ್ರೆ ಸೇರಿದ್ದಾರೆ ಎಂದು ನಾಗತಿಹಳ್ಳಿ ಚಂದ್ರಶೇಖರ ಫೋನ್ ಮಾಡಿದಾಗ, ಅವರ ಆರೋಗ್ಯದ ಬಗ್ಗೆ ಅರಿವಿದ್ದ ನನಗೆ ಅವರು ಮರಳಿ ಬರುವ ಬಗ್ಗೆ ಅನುಮಾನಗಳಿದ್ದವು. ಆದರೆ ಯಾರೋ ಕಿಡಿಗೇಡಿಗಳು ಅವರು ಹೋಗೇಬಿಟ್ಟರೆಂದು ಸುದ್ದಿ ಹಬ್ಬಿಸಿದರು. ಖಚಿತ ಮಾಡಿಕೊಳ್ಳಲು ನಾಗತಿಹಳ್ಳಿ ಚಂದ್ರನಿಗೆ ಫೋನ್ ಮಾಡಿದಾಗ, ಇಂತಹ ಸುಳ್ಳು ಸುದ್ದಿ ನಂಬಬೇಡ, ಸುಳ್ಳುಸುದ್ದಿಯ ಕಿಡಿಗೇಡಿಗಳ ಸಂಖ್ಯೆ ಜಾಸ್ತಿಯಾಗಿದೆ ಎಂದ. ಆದರೀಗ ಕವಿಗಳು ತೀರಿಕೊಂಡ ಬಗ್ಗೆ ನಮ್ಮೂರಿನಿಂದಲೇ ಫೋನ್ ಬಂದಾಗ ನಂಬಿದೆ, ಏಕೆಂದರೆ ಕವಿಗಳು ತನ್ನ ಅಕ್ಕನ ಮಗನಿಗೆ ಹೆಣ್ಣು ತೆಗೆದುಕೊಂಡು ಹೋಗಿರುವುದು ನಮ್ಮೂರಿಂದಲೇ.
ಅದು ಎಪ್ಪತ್ತರ ದಶಕ. ತಮಟೆ ಶಬ್ದ ಕೇಳಿದ ಕೆಲವರಿಗೆ, ಮೈ ನರನಾಡಿಯಲ್ಲೆಲ್ಲಾ ರಣೋತ್ಸಾಹ ಉಕ್ಕಿ ಕುಣಿಯುವಂತಾಗುತ್ತಿತ್ತು. ಅಂತಹದ್ದೊಂದು ಅನುಭವವನ್ನು ಸಿದ್ಧಲಿಂಗಯ್ಯನವರ ಕಾವ್ಯ ಉಂಟುಮಾಡಿತ್ತು. ಅಂದು ವಿಧಾನಸೌಧದಿಂದ ಹಿಡಿದು ಶಾಸಕರ ಭವನದವರೆಗೆ ದಲಿತ ಕಾಳಜಿಯ ರಾಜಕಾರಣಿಗಳ ಕೈಯಲ್ಲಿ ’ಹೊಲೆಮಾದಿಗರ ಹಾಡು’ ಪುಸ್ತಕವಿರುತ್ತಿತ್ತು. ಅದರಲ್ಲಿನ ಕವನಗಳನ್ನ ಓದಿಕೊಂಡಂತೆ, ಪ್ರತಿಭಟನೆಯ ಹಾಡಾಗಿ ಅವು ಹೊರಹೊಮ್ಮುತ್ತಿದ್ದವು. ಗಂಟೆ ಸದ್ದಿಗೆ ಮರುಳಾಗುವ ಕೆಲವು ಜನ, ಇದು ಕಾವ್ಯವೆ ಎಂದಾಗ ಲಂಕೇಶ್ “ಸುಮ್ಮನೆ ಕೇಳಿಸಿಕೊಳ್ಳಿ ಆತ ಏನನ್ನು ಹೇಳ್ತಾಯಿದ್ದಾನೆ” ಎಂದಿದ್ದರು. ಅಂದು ಲಂಕೇಶರ ಜೊತೆಯಿದ್ದ ಡಿ.ಆರ್ ನಾಗರಾಜ್, ಶೂದ್ರ ಶ್ರೀನಿವಾಸ್, ಕಿರಂ ನಾಗರಾಜ್‌ರಿಗೆಲ್ಲ ಸಿದ್ಧಲಿಂಗಯ್ಯ ಅಚ್ಚುಮೆಚ್ಚಿನ ಕವಿಯಾಗಿದ್ದರು.
’ಹೊಲೆಮಾದಿಗರ ಹಾಡು’ ಕನ್ನಡ ಸಾಹಿತ್ಯದ ಮೇಲೆ ಎಂತಹ ಪರಿಣಾಮ ಬೀರಿತ್ತೆಂದರೆ ಅಂದು ಧರ್ಮಸ್ಥಳದಲ್ಲಿ ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ನಡೆಯಲ್ಲಿದ್ದ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಬಂಡಾಯ ಸಾಹಿತ್ಯಕ್ಕೆ ಒಂದು ಗೋಷ್ಠಿಯನ್ನು ಕೊಡಬೇಕೆಂಬ ಒತ್ತಾಯಕ್ಕೂ ಅದು ಕಾರಣವಾಗಿತ್ತು. ಆದರೆ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಹಂಪಾನಾ ಇಲ್ಲಿ ದಲಿತ ಬಲಿತ ಅನ್ನುವ ಗೋಷ್ಠಿಗೆ ಅವಕಾಶವಿಲ್ಲ, ಬಂದು ಭಾಗವಹಿಸಿ ಅಷ್ಟೇ ಎಂದು ಮುಲಾಜಿಲ್ಲದೆ ಹೇಳಿದ್ದರು. ಇದರಿಂದ ಕೆರಳಿದ ಬಂಡಾಯ ಸಾಹಿತಿಗಳು, ಬೆಂಗಳೂರಲ್ಲೇ ಒಂದು ಪರ್ಯಾಯ ಸಾಹಿತ್ಯ ಸಮ್ಮೇಳನ ಮಾಡಿದರು. ಆಗ ಧರ್ಮಸ್ಥಳಕ್ಕೆ ಹೋಗಿದ್ದ ಲಂಕೇಶರು ನಾನಿಲ್ಲಿದ್ದರೂ ನನ್ನ ಮನಸ್ಸೆಲ್ಲಾ ಬೆಂಗಳೂರಿನ ಬಂಡಾಯದ ಗೆಳೆಯರೊಟ್ಟಿಗಿದೆ ಎಂದಿದ್ದರು.
ಅದು ದೇವರಾಜ ಅರಸುಯುಗ. ನಮ್ಮೆಲ್ಲಾ ದಲಿತ ಕೇರಿಗಳು ಎಚ್ಚೆತ್ತುಕೊಂಡಿದ್ದ ಕಾಲ. ಹೊಸ ತಲೆಮಾರಿನ ಹುಡುಗರಿಗೆ ’ಹೊಲೆಮಾದಿಗರ ಹಾಡು’ ಪ್ರತಿಭಟನೆಯ ಅಸ್ತ್ರವಾಗಿ ಸಿಕ್ಕಿತು. ಹಾಗೆ ನೋಡಿದರೆ ಸಿದ್ಧಲಿಂಗಯ್ಯನವರು ಅಂಬೇಡ್ಕರ್ ಕುರಿತು ಬರೆದ “ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ” ಎಂಬ ಹಾಡು ಸಿದ್ಧಲಿಂಗಯ್ಯನವರಿಗೇ ಅನ್ವಯಿಸುವಂತದ್ದು. ಈ ಕೂಗಿಗೆ ಮಾರುಹೋದ ನಾವೊಂದಿಷ್ಟು ಹುಡುಗರು ಸೇರಿಕೊಂಡು ಕವಿಯನ್ನ ನೋಡುವ ಆಸೆಯಿಂದ ಅಜ್ಜಂಪುರಕ್ಕೆ ಆಹ್ವಾನಿಸಿದೆವು. ಸಿದ್ಧಲಿಂಗಯ್ಯನವರ ಗುರುಗಳಾದ ಕಾಳೇಗೌಡ ನಾಗವಾರರು, ಕರೆದುಕೊಂಡು ಬಂದರು. ಇನ್ನೂ ವಿದ್ಯಾರ್ಥಿಯಾಗಿದ್ದ ಸಿದ್ಧಲಿಂಗಯ್ಯ ಅದಾಗಲೇ ಕವಿಯಾಗಿ ಹೆಸರು ಮಾಡಿದ್ದರಿಂದ ಪುಟ್ಟ ವಿದ್ವಾಂಸನಂತೆ ಗಂಭೀರವಾಗಿ ಮಾತನಾಡಿದರೂ ಅದರಲ್ಲಿ ನವಿರಾದ ಹಾಸ್ಯ ತುಂಬಿತ್ತು. ಎಷ್ಟೇ ನಗಿಸಿದರು ತಾವು ಮಾತ್ರ ನಗುತಿರಲಿಲ್ಲ.
ಅಜ್ಜಂಪುರದ ವಾಸವಿ ದೇವಸ್ಥಾನದ ಆವರಣದಲ್ಲೇ ಕಾರ್ಯಕ್ರಮ ಏರ್ಪಡಿಸಿದ್ದೆವು. ರಾತ್ರಿ ಟಿ.ಬಿ.ಯಲ್ಲಿ ಅವರ ಅನುಭವಗಳನ್ನೆಲ್ಲಾ ಕೇಳುತ್ತ ಸಂದರ್ಶನ ಮಾಡಿದೆ. ಊರದೇವರಾದ ಕಿರಾಳಮ್ಮನಿಗೆ ಅಸಾದಿ ಬಾರಿಸುವ ಚಂದ್ರನನ್ನು ಕರೆಸಿದ ಕವಿಗಳು ಆತನಿಂದ ಕೇಳಲಸಾಧ್ಯವಾದ ಅಶ್ಲೀಲ ಪದಗಳನ್ನ ಬರೆದುಕೊಂಡರು. ಆಗ ಕುವೆಂಪು ನಂತರ ನಮ್ಮ ಮನಸ್ಸು ಗೆದ್ದ ಕವಿಯಾಗಿ ಸಿದ್ಧಲಿಂಗಯ್ಯ ಕಾಣಿಸಿದರು. ಅವರ ಭಾಷಣ ಕೇಳಲು ಎಲ್ಲೇ ಬಂಡಾಯ ಸಾಹಿತ್ಯ ಸಮ್ಮೇಳನ ನಡೆದರೂ ಅಲ್ಲಿಗೆ ಹೋಗುತ್ತಿದ್ದೆವು. ಈ ತರ ಇರುವಾಗ ಅವರ ಎಂ.ಎ ಓದು ಮುಗಿದು, ಬೆಂಗಳೂರ ಯೂನಿವರ್ಸಿಟಿಯಲ್ಲೇ ಉಪನ್ಯಾಸಕರಾದರು ಎಂಬ ವಾರ್ತೆ ಬಂದಿತು. ಮೈಸೂರು ಯೂನಿವರ್ಸಿಟಿಗೆ ಕುವೆಂಪು ಕುಲಪತಿಗಳಾಗಿದ್ದಾಗ ಹೇಗೆ ಒಂದು ರೀತಿಯ ಸಾಮಾಜಿಕ ಕ್ರಾಂತಿ ಜರುಗಿತೋ ಹಾಗೆಯೇ ಜಿ.ಎಸ್ ಶಿವರುದ್ರಪ್ಪನವರು ಬೆಂಗಳೂರು ವಿ.ವಿಯ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥರಾಗಿದ್ದಾಗ ಪ್ರತಿಭಾವಂತರ ಪರಿಶೆಯೇ ನೆರೆದಿತ್ತು.
ಸಿದ್ಧಲಿಂಗಯ್ಯನವರನ್ನು ಪ್ರೋತ್ಸಾಹಿಸಿದ ಶಿವರುದ್ರಪ್ಪನವರು ಅವರ ಅಭ್ಯುದಯಕ್ಕೆ ಕಾರಣರಾದರು. ವೇಗವಾಗಿ ಬೆಳೆದ ಕವಿ ಎಮ್ಮೆಲ್ಸಿಯಾದರು. ಶಾಸಕರ ಭವನದಲ್ಲಿದ್ದ ಅವರ ಕೊಠಡಿ ದಲಿತ ಬಂಡಾಯದ ಹುಡುಗರ ಕಾವ್ಯ ಕ್ರಿಯೆಯ ತಾಣವಾಯ್ತು. ಕಾವ್ಯದ ಕತ್ತಿ ಗುರಾಣಿ ಚಾಕು ಹಿಡಿದ ಹುಡುಗರು ಕ್ಷಣ ಮಾತ್ರದಲ್ಲಿ ಕವನ ಕೆರೆದು ಕೊಡುತ್ತಿದ್ದರು. ಕವಿಗಳು ಪುರಾಣ ಗಡ್ಡದ ಬುದ್ಧನಂತೆ ನಗುತ್ತ ಎಲ್ಲವನ್ನು ಸಹಿಸಿಕೊಳ್ಳುವ ಅಸಾಮಾನ್ಯತೆಯಿಂದ ಕಂಗೊಳಿಸುತ್ತಿದ್ದರು. ಅವರು ಎಮ್ಮೆಲ್ಸಿಯಾದುದನ್ನು ಟೀಕಿಸುತ್ತ ತಿರುಗುತ್ತಿದ್ದ ನನಗೆ, ಅವರ ಬಳಿಗೆ ಹೋಗಿ ಶಿಫಾರಸು ಕೆಳುವ ಸ್ಥಿತಿ ಬಂದಿತು. ಆಗ ನಾನು ಶಿವಮೊಗ್ಗ ಹೌಸಿಂಗ್ ಬೋರ್ಡಿಗೆ ಒಂದು ಎಲ್‌ಐಜಿ ಮನೆಕೋರಿ ಅರ್ಜಿ ಹಾಕಿದ್ದೆ. ಈ ಮನೆ ನಿಮಗೆ ಸಿಗಬೇಕಾದರೆ ದೊಡ್ಡ ಪ್ರಮಾಣದ ಶಿಫಾರಸ್ಸು ಬೇಕು ಎಂದು ಹಲವರು ಅಂದರು. ಕವಿಗಳಾಗ ಎಮ್ಮೆಲ್ಸಿಯಾಗಿದ್ದುದ್ದು ಜ್ಞಾಪಕಕ್ಕೆ ಬಂತು. ಕೂಡಲೇ ಶಾಸಕರ ಭವನಕ್ಕೆ ಹೋದಾಗ ಕವಿಗಳ ರೂಮು ಬಂಡಾಯದ ಹುಡುಗರಿಂದ ತುಂಬಿತ್ತು.

ನನ್ನನ್ನು ನೋಡಿ ಆತ್ಮೀಯವಾಗಿ ಕರೆದು ಕೂರಿಸಿಕೊಂಡು “ಏನು ವಿಷಯ” ಎಂದರು. ವಿಷಯ ಹೇಳಿದೆ ಕೂಡಲೇ ಅಂದಿನ ಹೌಸಿಂಗ್ ಬೋರ್ಡು ಛೇರ್ಮನ್ನರಾದ ಕಾಗೋಡು ತಿಮ್ಮಪ್ಪನವರಿಗೆ ಪತ್ರ ಬರೆಯುತ್ತ ಇವರು ಅಸಾಮಾನ್ಯ ಸಾಹಿತಿಗಳು, ಕನ್ನಡ ಸಾಹಿತ್ಯದ ಅಪರೂಪದ ಪ್ರತಿಭೆ ಎಂದು ದಾಖಲಿಸತೊಡಗಿದರು. ನಾನು “ಸಾರ್ ಸಾರ್ ಇದೇನ್ ಸಾರ್ ಹಿಂಗೆ ಬರಿತಿರಿ ಬೇಡಿ ಸಾರ್” ಎಂದೆ. ಚಂದ್ರೇಗೌಡ್ರೆ ಶಿಫಾರಸ್ಸು ಪತ್ರ ಉತ್ಪ್ರೇಕ್ಷಿತ ಸುಳ್ಳಿನಿಂದ ಕೂಡಿದ್ರೆ ಕೆಲಸ ಆಗದು ಎಂದು ನಕ್ಕರು. ನಾನೂ ನಗಾಡಿದೆ. ಆ ಮನೆಯ ಬೇಡಿಕೆಗಾಗಿ ಹಲವು ಅರ್ಜಿಗಳಿದ್ದರೂ ಕಾಗೋಡು ತಿಮ್ಮಪ್ಪ ಸಿದ್ಧಲಿಂಗಯ್ಯನವರ ಶಿಫಾರಸ್ಸನ್ನು ಮಾನ್ಯ ಮಾಡಿದ್ದರಿಂದ, ನನಗೆ ಮನೆಯಾಯ್ತು. ಈ ವಿಷಯವನ್ನವರಿಗೆ ತಿಳಿಸಿ ಒಮ್ಮೆ ಮನೆಗೆ ಬರಬೇಕೆಂದು ಕೇಳಿದೆ. ಆ ಕಡೆ ಬಂದಾಗ ಬರ್ತಿನಿ ಎಂದಿದ್ದವರು, ಶಂಕರಮೂರ್ತಿಯ ಜೊತೆ ಸಮಾರಂಭವೊಂದಕ್ಕೆ ಬಂದರು. ಈ ಶಂಕರ ಮೂರ್ತಿ ನಮ್ಮ ಸಿಟ್ಟಿಗೆ, ಅಸಹನೆಗೆ ಗುರಿಯಾದ ವ್ಯಕ್ತಿ. ಇಂತಹವರ ಜೊತೆ ಬಂದವುರಲ್ಲಾ ನಮ್ಮ ಕವಿ ಎಂದುಕೊಳ್ಳುತ್ತಲೇ ಕರ್ನಾಟಕ ಸಂಘಕ್ಕೆ ಹೋಗುವಷ್ಟರಲ್ಲಿ ಸಭೆ ಮುಗಿದು ಕವಿಗಳು ಹೊರಬಂದರು. ಕೂಡಲೇ ನಾನು ಏನು ಸಾರ್ ಇವುರ ಜೊತೆ ಬಂದಿದ್ದೀರಿ ಎಂದೆ. ’ನಿಮ್ಮ ಅಸಮಾಧಾನ ಗೊತ್ತು ನನಗೆ, ಆದ್ರೆ ಅಂತರ್ಜಾತಿ ವಿವಾಹಿತರಿಗೆ ಅನುಕೂಲ ಮಾಡುವ, ಅವರ ಮಕ್ಕಳಿಗೆ ಮೀಸಲಾತಿ ನೀಡುವ ಚರ್ಚೆನ ನಾನು ಸದನದಲ್ಲಿ ಮಾಡುವಾಗ ನನಿಗೆ ಸಪೋರ್ಟಾಗಿ ಮಾತಾಡಿದವರು ಶಂಕರಮೂರ್ತಿ. ಅಂತರಾತ್ಮದಲ್ಲಿ ಆ ತರಹದವರಲ್ಲ’ ಎಂದರು. ನಂಬಿಸಿ ವಂಚಿಸುವುದೇ ಬಿಜೆಪಿಗಳ ಸಿದ್ಧಾಂತ. ಈ ತರ ನಂಬುತ್ತಲೇ ಮೋಸಹೋಗುತ್ತಲೇ ಸಿದ್ಧಲಿಂಗಯ್ಯ ಬಿಜೆಪಿ ಪಾಸಲೆಗೆ ಹೋಗಿ ನಿಂತರು.
ನಾವು ದೂರನಿಂತು ಬೆರಗಾಗಿ ನೋಡುತ್ತಿದ್ದರೆ, ಅವರು ಎಡೂರಪ್ಪನನ್ನೆ ಆಧುನಿಕ ಬಸವಣ್ಣ ಎಂದು ಹೊಗಳಿಬಿಟ್ಟರು. ತಾವೇ ಬರೆದ ಸಾಲುಗಳ ವಿಷಯದಲ್ಲಿ ನನ್ನನ್ನ ದಲಿತಕವಿ ಅನ್ನೋದು ಬೇಡಿ ಬೇಕಿದ್ದರೆ ಶ್ರೇಷ್ಠಕವಿ ಅನ್ನಿ ಎಂದು ನಗಿಸುತ್ತಿದ್ದರು. ತನಗೆ ಒಗ್ಗದ ಸಿದ್ಧಾಂತಗಳೊಳಗೆ ಸಿಕ್ಕಿ ಬಿದ್ದಾಗ, ಹಾಸ್ಯಗಾರ ಇನ್ನು ಹಾಸ್ಯ ಮಾಡುವಂತೆ ಕವಿಗಳು ತುಂಬಾ ತಮಾಶೆ ಮಾಡುತ್ತಿದ್ದರು. ಅವರು ಹೋಗಿ ನಿಂತ ವೇದಿಕೆಗೆ ಸೇರಿದ್ದ ರಾಜಕಾರಣಿಗಳು ’ಸಂವಿಧಾನ ಬದಲಾಯಿಸುತ್ತೇವೆ, ಅದಕ್ಕೆ ನಾವು ಬಂದಿರುವುದು’ ಎಂದು ಬೊಬ್ಬೆ ಹೊಡೆದಾಗಲೂ ಬಂಡಾಯದ ದನಿ ಉಡುಗಿ ಹೋಗಿತ್ತು. ’ದಲಿತರು ಮತ್ತು ಅಲ್ಪಸಂಖ್ಯಾತರು ಆಸ್ತಿವಂತರಾಗಬಾರದು, ವಿದ್ಯಾವಂತರಾಗಬಾರದು, ಅವರಿಗೆ ಮೀಸಲಾತಿ ಇರಬಾರದು ಸದಾ ಮೇಲ್ವರ್ಗದವರ ಭಿಕ್ಷೆಯಲ್ಲೇ ಬದುಕಬೇಕು’ ಎಂಬ ಸಿದ್ಧಾಂತವನ್ನ ದೊಡ್ಡ ಗಂಟಲಲ್ಲೇ ಪ್ರತಿಪಾದಿಸುವವರ ಜೊತೆ ಸಿದ್ದಲಿಂಗಯ್ಯ ಆರಾಮವಾಗಿರುತ್ತಿದ್ದುದು ಆಶ್ಚರ್ಯ. ಎಡೂರಪ್ಪನನ್ನ ಕಂಡಾಗ ಅಭಿನವ ಬಸವಣ್ಣ ಎನ್ನುತ್ತಿದ್ದ ಅವರು, ಸಿದ್ದರಾಮಯ್ಯನವರನ್ನು ದಲಿತರ ಹೃದಯ ಗೆದ್ದ ನಾಯಕ ಎನ್ನುತ್ತಿದ್ದರು. ಹೀಗೆ ಅವರ ಹೊಗಳುಬುಟ್ಟಿಯಲ್ಲಿ ಕುಮಾರಸ್ವಾಮಿ, ದೇವೇಗೌಡರನ್ನು ಕುರಿತ ಪದಪುಂಜಗಳೂ ಇದ್ದವು. ಅವರ ಇಂತಹ ಗುಣ ನಮ್ಮನ್ನ ಅವರಿಂದ ದೂರ ಇರುವಂತೆ ಮಾಡಿದವು. ಇನ್ನೊಂದು ವಿಶೇಷವೆಂದರೆ ಅವರ ಹೊಗಳಿಕೆ ಸಿಕ್ಕ ನಾಯಕರು ಎಂತಹವರೆಂದು ಖಾಸಗಿಯಾಗಿ ಗುಟ್ಟಾಗಿ ಹೇಳುವ ಗುಣವೂ ಅವರಲ್ಲಿತ್ತು.
ಇದೆಲ್ಲದರ ನಡುವೆ ಅವರು ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಎಂಥದೊ ಅರ್ಥೈಸಲಾಗದ ಖುಷಿಯಾಯ್ತು. ಆ ಐತಿಹಾಸಿಕ ಘಟನೆ ವೀಕ್ಷಿಸುತ್ತ ಶ್ರವಣಬೆಳಗೊಳದ ರಾಜಬೀದಿಯಲ್ಲಿ ನಿಂತಿದ್ದಾಗ ಸಿದ್ಧಲಿಂಗಯ್ಯ ದಂಪತಿಗಳನ್ನು ಹೊತ್ತ ಎತ್ತಿನಗಾಡಿ ಬರತೊಡಗಿತು. ಕವಿಗಳು ಪ್ರಸನ್ನತೆಯಿಂದ ಕೈಬೀಸುತ್ತ ಮೆರವಣಿಗೆ ಖುಷಿ ಅನುಭವಿಸುತ್ತಿದ್ದರು. ಗಾಡಿ ಹೊಡೆಯುತ್ತಿದ್ದ ಬಾಲಕೃಷ್ಣ ಶ್ರವಣಬೆಳಗೊಳದ ಶಾಸಕ. ಬಹಳ ಹಿಂದಿನಿಂದಲೂ ಹೆಗ್ಗಳವಾಗಿ ಬದುಕಿದ್ದ ಬಾಲಕೃಷ್ಣೇಗೌಡನ ಹಿರಿಯರು, ಹೊಲೆಮಾದಿಗರು ನಮ್ಮ ಸೇವೆಗೆಂದೇ ಇರುವವರು, ಅವರಿಂದ ತಮ್ಮ ಗದ್ದೆ ತೋಟ ಮತ್ತು ಮನೆಗಳ ಕೆಲಸ ಮಾಡಿಸಿಕೊಳ್ಳುವುದು ತಮ್ಮ ಹಕ್ಕೆಂದು ಭಾವಿಸಿದ್ದವರು. ಅಂತಹ ಪರಂಪರೆಯ ಬಾಲಕೃಷ್ಣೇಗೌಡ ಎತ್ತಿನಗಾಡಿ ರಥದಲ್ಲಿ ದಲಿತ ಕವಿಯನ್ನು ಕೂರಿಸಿಕೊಂಡು ಮೂರು ಗಂಟೆ ಗಾಡಿ ಹೊಡೆದದ್ದು ಸಾಹಿತ್ಯ ಲೋಕದಲ್ಲಿ ಮಾತ್ರ ಸಂಭವಿಸಬಹುದಾದ ಘಟನೆ. ಆಶ್ಚರ್ಯವೆಂದರೆ ಇತಿಹಾಸದಲ್ಲಿ ದಾಖಲಾದ ಈ ಸಾಹಿತ್ಯ ಸಮ್ಮೇಳನದಲ್ಲಿ ಪುರೋಹಿತ ಶಾಹಿಗಳು, ಸಾಹಿತ್ಯದ ವಿರೋಧಿಗಳು, ಮುಖ್ಯವಾಗಿ ಕಾವ್ಯದ ವಿರೋಧಿಗಳು, ಸಮಾನತೆಯ ಒಂದು ಸಣ್ಣ ಕರೆಂಟ್ ಶಾಕಿಗೂ ಪಲಾಯನ ಮಾಡುವ ಅವರು ಅಲ್ಲೆಲ್ಲೂ ಕಾಣಲೇ ಇಲ್ಲ. ಈ ನಮ್ಮ ಕವಿಗಳು ಅಂತಹವರ ಜೊತೆಯಲ್ಲೂ ಅರಾಮವಾಗಿರಬಲ್ಲವರಾಗಿದ್ದರು.
ಅವರು ಕವಿಯಾಗಿ ಅರಳುತ್ತಿದ್ದ ಕಾಲದಲ್ಲಿ ಗೋಪಾಲಕೃಷ್ಣ ಅಡಿಗರು ಪಾಪ ಇದೀಗತಾನೆ ಪ್ರಭುತ್ವ ಮಾನಕ್ಕೆ ಬರುತ್ತಿರುವ ಯುವ ಕವಿಯನ್ನ ಹೊಗಳಿ ಹೊಗಳಿ ಹಾಳು ಮಾಡುತ್ತಿದ್ದಾರೆ ಎಂದು ಎಚ್ಚರಿಸಿದ್ದರು. ಆದರೆ
ನಮ್ಮ ಜನ ಕವಿಯನ್ನ ಹಾಳು ಮಾಡಿದ್ದೇ ಬೇರೆ ರೂಪದಲ್ಲಿ! ಐವತ್ತು ತುಂಬುವಷ್ಟರಲ್ಲಿ ಸೂಕ್ಷ್ಮದೇಹಿಗಳಾಗಿದ್ದರು. ಈಚೆಗೆ ಭೇಟಿಯಾದಾಗ ಶೂದ್ರ ಸಮೂಹದ ಸಾಂಪ್ರದಾಯಿಕ ಆತಿಥ್ಯವಿಲ್ಲದೆ ಕಳುಹಿಸುವುದೇಗೆಂದು ಸಣ್ಣ ಚೀಲದಲ್ಲಿ ದಪ್ಪನೆ ಬದನೆಕಾಯಿ ತಂದಂತೆ ಒಂದು ಬಾಟಲಿ ತಂದು ರಾಜರಾಜೇಶ್ವರಿ ನಗರದ ಕ್ಲಬ್ಬಿನಲ್ಲಿ ನನಗೆ ಮತ್ತು ನಟರಾಜ್ ಹುಳಿಯಾರ್‌ಗೆ ಆತಿಥ್ಯ ನೀಡಿದ್ದರು.
ಈಚೆಗೆ ಹೆಗ್ಗೋಡಿನ ಚರಕ ಉತ್ಸವಕ್ಕೆ ಬಂದು ಭಾಗವಹಿಸಿ ಪ್ರಸನ್ನರಿಂದ ಬೀಳ್ಕೊಂಡು ಬರುವಾಗ ರಸ್ತೆ ಪಕ್ಕದಲ್ಲಿದ್ದ ಸಿಗಂದೂರೇಶ್ವರಿ ಎಜುಕೇಶನ್ ಟ್ರಸ್ಟಿನ ಕಾಲೇಜು ಬಳಿ ಕಾರು ಕೆಟ್ಟು ನಿಂತಿತು. ಕವಿಗಳು ಹೋಗಿ ಶಾಲಾ ಮೈದಾನದ ಮಧ್ಯೆ ಕುಳಿತರು. ಪತ್ತೆಹಚ್ಚಿದ ಹುಡುಗರು ಕವಿಗಳು ಮತ್ತು ನಟರಾಜ್ ಹುಳಿಯಾರ್‌ರಿಂದ ಭಾಷಣ ಮಾಡಿಸಿದರು. ಕವಿಗಳು ಎಂದಿನಂತೆ ತಮಾಶೆಯ ಭಾಷಣ ಮಾಡಿ ಮಕ್ಕಳನ್ನ ನಗಿಸಿದರೆ, ನಟರಾಜ್ ಹುಳಿಯಾರ್ ವಿದ್ಯಾರ್ಥಿಗಳಿಂದ ವರದಕ್ಷಿಣೆಯಿಲ್ಲದೆ ಮದುವೆಯಾಗುತ್ತೇವೆ, ಮೂಢನಂಬಿಕೆ ವಿರೋಧಿಸುತ್ತೇವೆ, ಜಾತಿಗಳನ್ನು ನಂಬುವುದಿಲ್ಲ ಎಂದು ಪ್ರಮಾಣವಚನ ಬೋಧಿಸಿದರು. ನಂತರ ಶ್ರೀನಿವಾಸ್, ಕರಿಯಪ್ಪ, ಹುಳಿಯಾರ್ ಮತ್ತ ಕವಿಗಳು ಶಿವಮೊಗ್ಗದ ನನ್ನ ಮನೆಗೆ, ಸಿದ್ಧಲಿಂಗಯ್ಯನವರು ಕೊಡಿಸಿದ್ದ ಮನೆಗೆ ಬಂದು ಸೊಪ್ಪುಸಾರು ಮುದ್ದೆ ಉಂಡು ಹೋದರು ಅದೇ ಕೊನೆಯ ಭೇಟಿ.

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.
ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


