ಆ ಹುಡುಗ ಮೈಸೂರಿನಲ್ಲಿ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ ಕೋರ್ಸ್‌ನ ಅಗತ್ಯಕ್ಕಾಗಿ ಒಂದು ಡಾಕುಮೆಂಟರಿ ಚಿತ್ರೀಕರಿಸಬೇಕಿರುತ್ತೆ. ಆದಿವಾಸಿ ಬುಡಕಟ್ಟುಗಳ ಮೇಲೆ ಸಾಕ್ಷ್ಯಚಿತ್ರ ನಿರ್ಮಿಸಲೆಂದು ಆತ ಕೊಡಗಿನ ಆದಿವಾಸಿ ಹಾಡಿಗಳಿಗೆ ತೆರಳುತ್ತಾನೆ. ಹಾಡಿಯ ಬುಡಕಟ್ಟು ಜನರ ಪ್ರತಿನಿಧಿಯೊಬ್ಬ ‘ನಿಮ್ಮ ಸ್ವಾರ್ಥ ಸಾಧನೆಗಾಗಿ ನಮ್ಮನ್ನು ಏಕೆ ಬಳಸಿಕೊಳ್ಳುತ್ತೀರಿ? ಮೊದಲು ಇಲ್ಲಿಂದ ಜಾಗ ಖಾಲಿ ಮಾಡಿ’ ಎನ್ನುತ್ತಾರೆ. ನಿಧಾನಕ್ಕೆ ಪರಿಚಯವಾಗಿ ಈ ಹುಡುಗ ಯಾರ ಮಗನೆಂದು ತಿಳಿದ ತಕ್ಷಣ ಆಶ್ಚರ್ಯ ಗಾಭರಿಯಿಂದ ‘ಅಯ್ಯೋ ಹೀಗೆ ಪ್ರಶ್ನೆ ಮಾಡುವುದನ್ನು ಕಲಿಸಿದ್ದೇ ನಿಮ್ಮ ತಂದೆ’ ಎಂದು ತಂದೆಯು ಹೇಗೆ ಹಗಲು ರಾತ್ರಿ ನಮ್ಮ ಪರವಾಗಿ ಹೋರಾಟ ಮಾಡಿದ್ದರು ಎಂದು ಗುಣಗಾನ ಮಾಡುತ್ತಾ ಹುಡುಗನ ಸಾಕ್ಷ್ಯಚಿತ್ರಕ್ಕೆ ಸಹಕರಿಸುತ್ತಾರೆ.

ಆಗ ಆತನಕ ತನ್ನ ತಂದೆಯ ಬಗ್ಗೆ ತಿಳಿಯದ ಸಂಗತಿಗಳನ್ನು ತಿಳಿದು ತನ್ನ ತಂದೆಯ ಬಗ್ಗೆ ಹೆಮ್ಮೆ ಮೂಡಿ, ಕಣ್ಣುಗಳು ಒದ್ದೆಯಾಗುತ್ತವೆ. ತನ್ನ ತಂದೆಯನ್ನು ಇಂದೇ ನೋಡಬೇಕೆಂದು ಕೊಡಗಿನಿಂದ ಚಿತ್ರದುರ್ಗಕ್ಕೆ ಬಂದು ಅಪ್ಪನ ಕಾಲಿಡಿದು ‘ನಿಜವಾಗಲೂ ನನ್ನ ಹೀರೋ ಕಣಪ್ಪ ನೀನು’ ಎಂದು ಹುಡುಗ ಗದ್ಗದಿತನಾಗುತ್ತಾನೆ. ಇದೊಂದು ಭಾವನಾತ್ಮಕ ಸನ್ನಿವೇಶ. ಓದಿದ ಯಾರಿಗೂ ದುಃಖ ತಡೆಯಲಾಗದೆ ಗಂಟಲುಬ್ಬಿ ಕಣ್ಣುಗಳು ಒದ್ದೆಯಾಗುತ್ತವೆ. ಆ ಹುಡುಗ ಸತ್ಯಪ್ರಕಾಶ್ ಸಿ.ವೈ., ಕಳೆದ ವರ್ಷ ನಮ್ಮನ್ನು ಅಗಲಿದ ಚಳವಳಿಗಾರ ಚಂದ್ರಶೇಖರ ತೋರಣಘಟ್ಟ ಅವರ ಮಗ. ಇದು ಸಮುದಾಯಗಳ ಪರವಾದ ಹೋರಾಟದ ಕಾರಣಕ್ಕೆ ಅವರ ಸ್ಮೃತಿಲೋಕದಲ್ಲಿ ಶಾಶ್ವತವಾಗಿ ಬೇರುಬಿಟ್ಟ ಒಬ್ಬ ನಿಷ್ಠಾವಂತ ಹೋರಾಟಗಾರನ ಸಾರ್ಥಕ ಚಿತ್ರವಿದು.

ನಾಲ್ಕು ದಶಕಗಳ ಕಾಲ ದೀನ ದಲಿತ ಆದಿವಾಸಿ ಬುಡಕಟ್ಟುಗಳ ಅಧಿಕಾರ ರಹಿತ ಜನರ ಬದುಕನ್ನು ಹಸನು ಮಾಡಲೆಂದು ದಣಿವರಿಯದೆ ಬದ್ಧತೆಯಿಂದ ಹೋರಾಡಿ, ಅರ್ಧಕ್ಕೆ ತನ್ನ ಪಯಣ ನಿಲ್ಲಿಸಿ ಅಗಲಿದ ಹಿರಿಯ ಸಂಗಾತಿ ಚಂದ್ರಶೇಖರ ತೋರಣಘಟ್ಟ (ಚಂತೋ) ಅವರ ಬಗೆಗಿನ ಆಪ್ತವಾದ ಪುಸ್ತಕವನ್ನು ಗೆಳೆಯ ಕೈದಾಳ ಕೃಷ್ಣಮೂರ್ತಿ ಸಂಪಾದಿಸಿಕೊಟ್ಟಿದ್ದಾರೆ. ‘ಚಂದ್ರ ಶಿಖಾರಿ’, ಚಂತೋ ಅವರ ಹೋರಾಟಕ್ಕೆ ರೂಪಕವೆಂಬಂತೆ ಕೃತಿ ಮೈದಾಳಿದೆ.

ಚಂದ್ರಶೇಖರ ತೋರಣಘಟ್ಟ

‘ವಿಪ್ಲವ’ ಎಂದರೆ ಕ್ರಾಂತಿ, ಅವಳೇ ನಮ್ಮ ತಾಯಿ, ಅದಕ್ಕಾಗಿ ವಿಪ್ಲವ ತಾಯಿಗೆ ಎಂದೂ ದ್ರೋಹ ಬಗೆಯಬಾರದು ಎನ್ನುವುದು ಚಳವಳಿಗಾರ ಚಂದ್ರಶೇಖರ ತೋರಣಘಟ್ಟ (ಚಂತೋ) ಅವರ ನಂಬುಗೆಯಾಗಿತ್ತು. ಸಂಧಾನ ಸಾವು ತಂದರೆ, ಸಂಘರ್ಷ ಜೀವ ತುಂಬುತ್ತದೆ ಎನ್ನುವುದು ಬದುಕಿನ ಧ್ಯೇಯವಾಗಿತ್ತು. ತನ್ನ ಸ್ವಾರ್ಥಕ್ಕಾಗಿ ಬದುಕುವ ಜೀವನ, ಹಕ್ಕಿಯ ಪುಕ್ಕದಷ್ಟೇ ಹಗುರ, ಇನ್ನೊಬ್ಬರ ಬದುಕಿಗಾಗಿ ಬದುಕುವ ಜೀವನ ಹಿಮಾಲಯ ಪರ್ವತಕ್ಕಿಂತಲೂ ಭಾರ! ಎನ್ನುವುದು ಚಂತೋ ಅವರು ಕಾರ್ಯಕರ್ತರಿಗೆ ಹೇಳುವ ಮಾತುಗಳಾಗಿದ್ದವು. ಇವು ಕೇವಲ ಮಾತುಗಳಾಗಿರಲಿಲ್ಲ. ಇದು ಅವರ ನಡೆಯೂ ಆಗಿತ್ತು. ಹೀಗಾಗಿಯೇ ಚಂದ್ರಶೇಖರ ತೋರಣಘಟ್ಟ ಅವರ ಘನತೆಯ ಬದುಕಿನ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಅಂತಹ ಬದುಕನ್ನು ಚಂದ್ರಶಿಖಾರಿ ತೆರೆದಿಡುತ್ತದೆ.

ಚಂದ್ರಶೇಖರ ತೋರಣಘಟ್ಟ ಅವರು ಭದ್ರಾವತಿಯಲ್ಲಿ ಪದವಿ ಓದುತ್ತಿರುವಾಗಲೆ ಚಳವಳಿಯಲ್ಲಿ ಧುಮುಕುತ್ತಾರೆ. ಕುದರಮೋತಿ ಕಾಮುಕ ಸ್ವಾಮಿಯ ವಿರುದ್ಧ ಪ್ರಗತಿಪರ ವಿದ್ಯಾರ್ಥಿ ಒಕ್ಕೂಟದ ನಾಯಕತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಸೇರಿಸಿ ದೊಡ್ಡ ಪ್ರತಿರೋಧ ರೂಪಿಸುತ್ತಾರೆ. ಆನಂತರ ಚಂದ್ರಗುತ್ತಿ ಬೆತ್ತಲೆಸೇವೆ ನಿಲ್ಲಿಸುವ ಹೋರಾಟದಲ್ಲಿ ಬಿ.ಕೃಷ್ಣಪ್ಪರ ಜೊತೆಗೂಡಿ ಸಾವುಬದುಕಿನ ಹೋರಾಟದಂತೆ ಈ ಚಳವಳಿಯನ್ನು ರೂಪಿಸುತ್ತಾರೆ. ಇದರಲ್ಲಿ ಚಂತೋ ತೋರಿದ ದಿಟ್ಟತನ, ಸಮಯಪ್ರಜ್ಞೆ, ಎದೆಗುಂದದ ದೈರ್ಯ ಅವರನ್ನು ಗಟ್ಟಿಗೊಳಿಸುತ್ತದೆ.

ನಮ್ಮಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯಗಳ ಬಗೆಗಿನ ಅಧ್ಯಯನ ಮತ್ತು ಹೋರಾಟದ ಹಲವು ಮಾದರಿಗಳಿವೆ. ಬುಡಕಟ್ಟುಗಳನ್ನು ಅಧ್ಯಯನದ ಸರಕನ್ನಾಗಿ ಭಾವಿಸಿ ಅಂಕೆಸಂಖ್ಯೆಗಳಂತೆ ದಾಖಲಿಸುವ ಸುಕುಮಾರತನದ ಅಕಾಡೆಮಿಕ್ ಮಾದರಿಯಿದೆ. ಅಧ್ಯಯನ ಪೂರ್ವದಲ್ಲಿ ದಾರುಣವಾಗಿ ಚಿತ್ರಿಸಿ, ಅಧ್ಯಯನದ ನಂತರ ಸಮಸ್ಯೆಗಳೆಲ್ಲಾ ಬಗೆಹರಿದು ಸುಖವಾಗಿದ್ದಾರೆ ಎಂದು ಫಂಡ್ ಖರ್ಚು ತೋರಿಸುವ ಎನ್.ಜಿ.ಓ ಮಾದರಿಗಳಿವೆ. ಈ ಎರಡೂ ಬಗೆಯ ಅಧ್ಯಯನಗಳಿಂದ ಅಲೆಮಾರಿ ಬುಡಕಟ್ಟುಗಳು ಬೇಸತ್ತಿವೆ. ನಿಮ್ಮ ನಿಮ್ಮ ಲಾಭಕ್ಕಾಗಿ ನಮ್ಮನ್ನೇಕೆ ಬಳಸಿಕೊಳ್ಳುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಳ್ಳುವ ಹಂತಕ್ಕೆ ಸಮುದಾಯಗಳು ಬಂದಿವೆ. ಆದರೆ ಚಂದ್ರಶೇಖರ ತೋರಣಘಟ್ಟ ಅವರ ಅಲೆಮಾರಿ ಬುಡಕಟ್ಟುಗಳ ಹೋರಾಟದ ಮಾದರಿ ಇವೆರಡಕ್ಕಿಂತ ಭಿನ್ನವಾದುದು. ಈ ಹೋರಾಟ ಅಲೆಮಾರಿ, ಬುಡಕಟ್ಟುಗಳ ಒಳಿತಿಗಾಗಿಯೇ ತುಡಿಯುವಂಥದ್ದು.

ಕೊಡಗಿನಲ್ಲಿ ಉಸಿರು ಬಿಗಿ ಹಿಡಿದು ಬದುಕುತ್ತಿದ್ದ ಜೇನುಕುರುಬ, ಹಾಲುಕುರುಬ, ಕುಂಬಳ ಕುರುಬ, ಮುಳ್ಳುಕುರುಬ, ಸೊಪ್ಪು ಕುರುಬ, ಅಂಡೆಕುರುಬ, ಪಂಜರ ಎರವರು, ಬಡಗ ಎರವ, ಬೈನಾಡ ಎರವ ಮುಂತಾದ ಬುಡಕಟ್ಟುಗಳ ಜತೆ ದಶಕಗಳ ಕಾಲ ಜೊತೆ ಜೊತೆಗೆ ಬದುಕಿ ಅವರೊಳಗೆ ಹೋರಾಟದ ಬೆಳಕು ಕಾಣಿಸುತ್ತಾರೆ. ಅವರ ಜತೆಯೇ ಇದ್ದು, ಅವರ ಜತೆಯೇ ಕೂಲಿಮಾಡಿ, ಅವರ ಜತೆಯೇ ಉಂಡುಟ್ಟು ಮಲಗಿ ಆ ಸಮುದಾಯಗಳ ನಾಡಿಮಿಡಿತವನ್ನು ಅರಿಯುತ್ತಾರೆ. ಕೊಡಗಿನ ಬುಡಕಟ್ಟುಗಳ ಪರವಾಗಿ ನಿಲ್ಲುವುದೆಂದರೆ, ಅಲ್ಲಿನ ಬಲಾಡ್ಯ ಎಸ್ಟೇಟ್ ಮಾಲಿಕರ ಎದುರು ನಿಲ್ಲುವುದು ಎಂತಲೇ ಅರ್ಥ. ಅದೊಂದು ತುಂಬಾ ಕಠಿಣವಾದ ಹೋರಾಟದ ಹಾದಿ. ಇದು ಚಂತೋ ಅವರ ದಿಟ್ಟತನವನ್ನೂ, ಬುಡಕಟ್ಟುಗಳ ಬಗೆಗಿನ ಕರುಳಬಳ್ಳಿಯಂಥಹ ಸಂಬಂಧದ ಸಾಂಗತ್ಯವನ್ನು ಕಾಣಿಸುತ್ತದೆ. ಹಾಗಾಗಿ ಚಂತೋ ರೂಪಿಸಿದ ಬುಡಕಟ್ಟು ಅಲೆಮಾರಿಗಳ ಹೋರಾಟ ಭಿನ್ನವಾಗಿದೆ. ಈ ಮಾದರಿ ಆದಿವಾಸಿಗಳಲ್ಲಿ ಸಂಘಟನೆಯ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ‘ಆದಿವಾಸಿ ಸಮರ ಸಂಘ’ ಕಟ್ಟುತ್ತಾರೆ. ಹತ್ತಾರು ಆದಿವಾಸಿ ಬುಡಕಟ್ಟು ಯುವಕರನ್ನು ಹೋರಾಟದ ಮುನ್ನಲೆಗೆ ತರುತ್ತಾರೆ. ತಮ್ಮ ಸಮಸ್ಯೆಗಳ ಬಗ್ಗೆ ತಾವೇ ಸಂಘಟಿತರಾಗಿ ಧ್ವನಿ ಎತ್ತುವ ಸ್ವಾಭಿಮಾನದ ಹೋರಾಟದ ಮಾದರಿ ರೂಪಿಸುತ್ತಾರೆ.

ಹೋರಾಟದ ಜತೆ ಸಾಹಿತ್ಯದ ನಂಟನ್ನು ಬೆಸೆಯುವುದು ಚಂತೋ-ಯಶೋಧ ಅವರ ಒಂದು ವಿಶಿಷ್ಠತೆಯಾಗಿದೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ ಮುಗಿಸಿದ ಯಶು-ಚಂದು ತೆರಳುವುದು ಸಿದ್ಧರಹಳ್ಳಿಯ ಹೋರಾಟ ರೂಪಿಸುತ್ತಿರುವ ಹಕ್ಕಿಪಿಕ್ಕಿಗಳ ಜಾಗಕ್ಕೆ. ಅಲ್ಲಿಯೇ ಉಳಿಯುತ್ತಾರೆ. ಗುಡಿಸಲಲ್ಲಿ ಹಕ್ಕಿಪಿಕ್ಕಿಗಳ ಜತೆಜತೆಗೇ ಬದುಕಿಬಿಡುತ್ತಾರೆ. ಇದೆಲ್ಲಾ ಸಾಹಿತ್ಯದ ಓದಿನ ಸೂಕ್ಷ್ಮತೆಯಿಂದ ಬಂದ ಗ್ರಹಿಕೆ. ಹಕ್ಕಿಪಿಕ್ಕಿಗಳ ವಸತಿ ಹೋರಾಟ ಮಾಡಿ ನೆಲೆ ಒದಗಿಸಿದ ನಗರ ‘ಗೌತಮ ನಗರ’ವಾಗುತ್ತದೆ. 1985-86ರಲ್ಲಿ ಭದ್ರಾವತಿ ನಗರದ ದಲಿತ ಆಟೋಚಾಲಕರಿಗಾಗುತ್ತಿದ್ದ ವಿಪರೀತ ಕಿರುಕುಳ ತಪ್ಪಿಸಿ ಚನ್ನಗಿರಿಗೆ ಹೋಗುವ ದಾರಿಯಲ್ಲಿ ಖಾಯಂ ಜಾಗ ಕಲ್ಪಿಸುತ್ತಾರೆ. ಆ ಆಟೋ ನಿಲ್ದಾಣಕ್ಕೆ ಇಡುವ ಹೆಸರು ‘ಕುವೆಂಪು ಆಟೋರಿಕ್ಷಾ ನಿಲ್ದಾಣ’. ಚಂತೋ ಒಂದು ಕಡೆ, ‘ಸಾಹಿತ್ಯವೆಂದರೆ ಭಜನೆ ಮಾಡುವ ಕೆಲಸವಲ್ಲ ಸಮಾಜದಲ್ಲಿ ನಡೆಯುವ ಒಳ-ಹೊರ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಪ್ರತಿಬಿಂಬ’ ಎನ್ನುತ್ತಾರೆ. ಕುವೆಂಪು ಅವರ ಸರಳವಿವಾಹ ಪದ್ದತಿಯ ‘ಮಂತ್ರ ಮಾಂಗಲ್ಯ’ದಿಂದ ಮೋಹಿತರಾಗಿದ್ದ ಇವರು ಸ್ವತಃ ಅಂತರ್ಜಾತಿಯ ಸರಳ ವಿವಾಹ ಮಾಡಿಕೊಂಡು ಪಾಲಿಸುತ್ತಾರೆ. ಚಳವಳಿಯ ಸಂಗಾತಿಗಳಿಗೂ ಮಂತ್ರಮಾಂಗಲ್ಯ ಮಾದರಿ ವಿವಾಹಗಳನ್ನು ಮಾಡಿಸುತ್ತಾರೆ.

ಈ ಕೃತಿಯು ಕರ್ನಾಟಕದ ದಲಿತ ಹೋರಾಟದ ಚರಿತ್ರೆಯ ಆಕರವೂ ಆಗಿದೆ. ದಲಿತ ಸಂಘರ್ಷ ಸಮಿತಿಯ ಹೋರಾಟದ ತೀವ್ರತೆಯನ್ನೂ, ಇಳಿಮುಖವನ್ನೂ, ವಿಘಟನೆಯನ್ನೂ ಈ ಕಥನ ಕಾಣಿಸುತ್ತದೆ. ಬಿ.ಕೃಷ್ಣಪ್ಪ ಅವರ ನಾಯಕತ್ವದಲ್ಲಿ ಚಂದ್ರಗುತ್ತಿಯ ಬೆತ್ತಲೆ ಪೂಜೆ ವಿರೋಧಿಸಿ ನಡೆದ ಧೀರೋದತ್ತ ಹೋರಾಟ ಅದರಲ್ಲಿ ಒಂದು. ಬಿ.ಕೃಷ್ಣಪ್ಪ 1991ರಲ್ಲಿ ಕೋಲಾರ ಲೋಕಸಭಾ ಚುನಾವಣ ಅಭ್ಯರ್ಥಿಯಾಗಿ ನಿಲ್ಲುವ ಸಂದರ್ಭದಲ್ಲಿ ಭದ್ರಾವತಿಯಲ್ಲಿ ನಡೆದ ಸಭೆಯಲ್ಲಿ ಕೃಷ್ಣಪ್ಪರ ನಡೆಯನ್ನು ಚಂತೋ ಒಳಗೊಂಡಂತೆ ಬಹುತೇಕರು ವಿರೋಧಿಸುತ್ತಾರೆ. ಇದೇ ಸಮಯಕ್ಕೆ ದಸಂಸದ ಕಾರ್ಯಕರ್ತ ಕೆ.ಸಿ.ಗುರ್ರಪ್ಪ ‘ಚುನಾವಣಾ ಆಯೋಗ ನಿಮಗೆ ತಟ್ಟೆಯ ಗುರುತನ್ನು ಕೊಡಬೇಕು’ ಎಂದು ಗೇಲಿ ಮಾಡಿದ್ದಕ್ಕೆ ಬಿ.ಕೃಷ್ಣಪ್ಪ ಕೋಪಗೊಂಡು ‘ನನಗೇ ಬುದ್ದಿ ಹೇಳಂಗ ಆಗ್ಬಿಟ್ರಾ’ ಎಂದು ಗುರ್ರಪ್ಪನ ಕಪಾಳಕ್ಕೆ ಬಾರಿಸುತ್ತಾರೆ.

ಈ ಅನಿರೀಕ್ಷಿತ ಘಟನೆ ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ. ತೋರಣಘಟ್ಟ ಅವರು ತಾವು ಅತಿಯಾಗಿ ಪ್ರೀತಿಸುತ್ತಿದ್ದ ಗುರು ಸಮಾನ ಕೃಷ್ಣಪ್ಪರನ್ನು ಗುರ್ರಪ್ಪನ ಕ್ಷಮೆ ಕೇಳುವಂತೆ ಒತ್ತಾಯಿಸುತ್ತಾರೆ. ಆದರೆ ಕೃಷ್ಣಪ್ಪ ಇದಕ್ಕೆ ಸ್ಪಂದಿಸುವುದಿಲ್ಲ. ಈ ಘಟನೆಯೇ ದಸಂಸದ ವಿಘಟನೆಯ ಕತೆಗೆ ಮುನ್ನುಡಿಯಂತಿದೆ. ಆ ನಂತರ ತೋರಣಘಟ್ಟ ಕೂಡ ದಸಂಸದ ಜತೆ ಅಂತರ ಕಾಯ್ದುಕೊಳ್ಳುತ್ತಾರೆ. ಹೋರಾಟಗಾರರು ಕಣ್ಣಮುಂದೆಯೇ ಕಡುಭ್ರಷ್ಟರಾಗಿ ಚಳವಳಿಗಳನ್ನು ಬಲಿಕೊಡುವುದು ಇವರನ್ನು ಕಂಗೆಡಿಸುತ್ತದೆ. ಕಾರೇಹಳ್ಳಿ ಭೂ ಹೋರಾಟದ ಸಂದರ್ಭದಲ್ಲಿ ಬಿ.ಕೃಷ್ಣಪ್ಪ ಅವರ ನೇತೃತ್ವದ ಬಣ ಜಿಲ್ಲಾಡಳಿತದೊಂದಿಗೆ ರಾಜಿಯಾಗಿ ಇಡೀ ಹೋರಾಟದ ದಿಕ್ಕನ್ನು ತಪ್ಪಿಸಲಾಗುತ್ತದೆ. ಇದು ಭೂಮಿ ಪಡೆಯಲು ಬಂದ ಬಡ ರೈತರಿಗೆ ಬಗೆದ ದ್ರೋಹವಾಗಿತ್ತು ಎಂದು ಆರ್. ಕೈಲಾಶ್ ಕುಮಾರ್ ಬರೆಯುತ್ತಾರೆ. ಈ ಎಲ್ಲಾ ನಡೆಗಳು ಚಂತೋ ಅವರನ್ನು ದಸಂಸದಿಂದ ಎಡಪಂಥೀಯ ಸಂಘಟನೆಗಳ ಕಡೆ ಚಲಿಸುವಂತೆ ಮಾಡುತ್ತವೆ. ದಾವಣಗೆರೆಯಲ್ಲಿ ಕೋಮುಸೌಹಾರ್ದ ಚಳವಳಿಯನ್ನು ಕಟ್ಟಲು ಶ್ರಮಿಸುತ್ತಾರೆ.

ಕೈದಾಳ ಕೃಷ್ಣಮೂರ್ತಿ

ಕರ್ನಾಟಕದ ಭೂ ಹೋರಾಟಗಳ ಚರಿತ್ರೆಯಲ್ಲಿ ಅಷ್ಟಾಗಿ ದಾಖಲಾಗದ ಹಲವು ಭೂ ಹೋರಾಟಗಳನ್ನು ಈ ಕೃತಿ ಪರಿಚಯಿಸುತ್ತದೆ. ಹನ್ನೊಂದು ದಿನಗಳ ಕಾಲ ಸಾವಿರಾರು ರೈತರು ಒಟ್ಟಾಗಿ ನಡೆಸುವ ಕಾರೇಹಳ್ಳಿ ಭೂ ಹೋರಾಟ, 1989ರಿಂದ 1992ರ ತನಕ ಪಿ.ಟಿ.ಸಿ.ಎಲ್ ಜಮೀನುಗಳನ್ನು ತೆರವುಗೊಳಿಸುವುದರ ವಿರುದ್ಧದ ಹೋರಾಟದಲ್ಲಿ ಅರಣ್ಯ ಇಲಾಖೆಯು ತೆರವುಗೊಳಿಸಿದ ಭೂಮಿಯನ್ನು ಹೋರಾಟ ಮೂಲಕ ಪಡೆಯುವುದು, 1993-96ರಲ್ಲಿ ಕೇಂದ್ರ ಸಚಿವೆಯಾಗಿದ್ದ ಬಸವರಾಜೇಶ್ವರಿ ಅಕ್ರಮವಾಗಿ ಕಬಳಿಸಿದ್ದ 300 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ರೂಪಿಸಿದ ರಾಯಚೂರು ಸಮೀಪದ ಗೆಜ್ಜಲಗಟ್ಟೆ ಭೂ ಹೋರಾಟ ಪ್ರಮುಖವಾದವು.

ಈ ಕೃತಿಯಲ್ಲಿ ಚಂತೋ ಅವರನ್ನು ನಿಕಶಕ್ಕೊಡ್ಡಿದಂತಿದೆ. ಅದುವೆ ಈ ಪುಸ್ತಕದ ಶಕ್ತಿ ಕೂಡ. ಈ ಕೃತಿಯ ಚೌಕಟ್ಟಿನಲ್ಲಿ ಆರು ಭಾಗಗಳಿವೆ. ಮೊದಲ ಭಾಗದಲ್ಲಿ ಕರುಳಬಳ್ಳಿಯ ಚಿತ್ರಗಳು. ಚಂತೋ ಅವರು ತಂದೆಯ ಸಾಹಸಮಯ ಹೋರಾಟದ ಕಥನದ ಮೂಲಕ ಕೊಡುವ ಹೀರೋ ಎಂಟ್ರಿಯ ಹಾಗೆ ಓದು ಸಿನಿಮೀಯವಾಗಿ ಆರಂಭವಾಗುತ್ತದೆ. ಎರಡು ಶತಮಾನದ ಹಿಂದಿನ ಚಂತೋ ಮುತ್ತಜ್ಜ ಬಳೆಗಾರ ಲಕ್ಷ್ಮಿನಾರಾಯಣಪ್ಪನಿಂದ ಶುರುವಾಗಿ, ಇವರ ವಂಶದ ವರದಪ್ಪನ ಮಗನಾಗಿ ಹುಟ್ಟುವ ಕೃಷ್ಣಪ್ಪ ಸ್ವಾತಂತ್ರ್ಯ ಹೋರಾಟಗಾರ. ಈತನ ಮಗನಾಗಿ ಚಂದ್ರಶೇಖರ ತೋರಣಘಟ್ಟ ಜನಿಸುತ್ತಾರೆ. ಕೃಷ್ಣಪ್ಪನ ಜೈಲಿನ ಕತೆಯೇ ರೋಚಕವಾಗಿ ತೆರೆದುಕೊಳ್ಳುತ್ತದೆ. ಹಾಗಾಗಿ ಹೋರಾಟದಿಂದ ಆರಂಭವಾದ ಕೃತಿ ಹೋರಾಟದ ಜೊತೆಜೊತೆಗೆ ಮುಕ್ತಾಯವಾಗುತ್ತದೆ. ಎರಡನೇ ಭಾಗದಲ್ಲಿನ ಯಶೋಸಾಂಗತ್ಯ ಈ ಕೃತಿಯ ಹೃದಯಭಾಗದಂತಿದೆ. ಹೆಣ್ಣಿನ ಕಣ್ಣೋಟದಲ್ಲಿ ರೂಪುಗೊಳ್ಳುತ್ತಾ ಹೋಗುವ ಚಂತೋ ನಮ್ಮೊಳಗೆ ಇಳಿಯತೊಡಗುತ್ತಾರೆ. ಅಂತೆಯೇ ಇಡೀ ತೋರಣಘಟ್ಟರ ಬದುಕಿನ ಕನ್ನಡಿಯಲ್ಲಿ ಯಶೋಧ ಅವರ ಪ್ರತಿಬಿಂಬವೇ ಮತ್ತೆ ಮತ್ತೆ ಎದುರಾಗುತ್ತದೆ. ಈ ಅರ್ಥದಲ್ಲಿ ಈ ಕೃತಿ ಯಶೋಧ ಅವರ ಬದುಕಿನ ಕಥನ ಕೂಡ.

ಈ ಕೃತಿಯ ಮೂರನೆಯ ಭಾಗ ‘ಬೀದಿಯಲ್ಲಿ ರೂಪುಗೊಂಡ ಚಿತ್ರಗಳು’. ಇವು ಚಂತೋ ಅವರನ್ನು ಮತ್ತೊಂದು ನೆಲೆಯಲ್ಲಿ ಕಟ್ಟುತ್ತಾ ಹೋಗುತ್ತವೆ. ಭಾಗ ನಾಲ್ಕರ ‘ತತ್ವ ಮತ್ತು ತರ್ಕ’ದಲ್ಲಿ ಚಂತೋ ಅವರ ಚಳವಳಿ ಬದ್ಧತೆ ಕುರಿತ ಒಂದು ಕ್ರಿಟಿಕಲ್ ನೋಟವೂ ಸಾಧ್ಯವಾಗಿದೆ. ಇನ್ನು ಭಾಗ ಐದರಲ್ಲಿ ಎರಡು ತಲೆಮಾರುಗಳ ನಡುವಿನ ಚಿತ್ರಣವಿದೆ. ಸ್ವತಃ ತೋರಣಘಟ್ಟರ ಪತ್ರ, ಮಗನ ಆಪ್ತ ಬರಹ ಮನಸ್ಸನ್ನು ಒದ್ದೆಯಾಗಿಸುತ್ತವೆ. ಕೊನೆಯದಾಗಿ ಚಂತೋ ಅನುವಾದಿಸಿದ ಪ್ರಖರವಾದ ಹೋರಾಟದ ಧ್ವನಿಗಳ ಕಾವ್ಯವಿದೆ. ಹೀಗೆ ಇಡೀ ಪುಸ್ತಕ ಒಮ್ಮುಖವಾಗದೆ, ಕೇವಲ ಅಭಿಮಾನ, ಅಚ್ಚರಿಗಳ ದಾಖಲೆಯಾಗದೆ, ಒಂದರೊಳಗೊಂದು ಪೊರೆಬಿಚ್ಚಿಕೊಳ್ಳುವ, ಒಂದರಿಂದ ಮತ್ತೊಂದು ವಿಸ್ತಾರ ಪಡೆಯುವ ಕಾರಣಕ್ಕೆ ಇಡೀ ಕೃತಿಯ ಸ್ವರೂಪ ಬದ್ಧತೆಯ ಹೋರಾಟಗಾರರ ಕಥನ ಕಟ್ಟುವಿಕೆಗೆ ಒಂದು ಮಾದರಿಯಂತಿದೆ. ಯಶೋಧ ಅವರ ಪ್ರವೇಶ ತೋರಣಘಟ್ಟ ಅವರ ಬದುಕಿನ ಮಹತ್ವದ ತಿರುವಾಗಿದೆ. ಅವರಿಗೆ ಹಿಂದಣ ಹೆಮ್ಮರದಂತೆ ನೆರಳಾಗಿ ನಿಲ್ಲುತ್ತಾರೆ. ಬದುಕಿನ ತೀವ್ರತೆರನಾದ ಹೊಡೆತಗಳಿಗೆ ಹೆಬ್ಬಂಡೆಯಂತೆ ಮೈಯೊಡ್ಡುವ ಯಶೋಧ ಅವರ ಬದುಕಿನ ಹೋರಾಟ ಕೂಡ ಇಲ್ಲಿದೆ. ಈ ಅರ್ಥದಲ್ಲಿ ಈ ಕೃತಿಯು ಯಶು-ಚಂದುವಿನ ನವಿರಾದ ಪ್ರೇಮಭರಿತ ಹೋರಾಟದ ಕಥನವೂ ಕೂಡ. ಇಂತಹ ಕೃತಿಯನ್ನು ಆಗುಮಾಡಿದ ಕೈದಾಳ ಕೃಷ್ಣಮೂರ್ತಿಯೂ, ಪುಸ್ತಕವನ್ನು ತಮ್ಮದೇ ವಿಪ್ಲವ ಪ್ರಕಾಶನದ ಮೊದಲ ಕೃತಿಯಾಗಿ ಪ್ರಕಟಿಸಿದ ಸಿ.ವೈ.ಯಶೋಧ ಅವರೂ ಅಭಿನಂದನಾರ್ಹರು.

ಅರುಣ್ ಜೋಳದಕೂಡ್ಲಿಗಿ

ಅರುಣ್ ಜೋಳದಕೂಡ್ಲಿಗಿ
ಬಳ್ಳಾರಿ ಜಿಲ್ಲೆಯ ಜೋಳದಕೂಡ್ಲಿಗಿಯವರು. ಸದ್ಯಕ್ಕೆ ಪ್ರೊ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಜನಪದ ಕವಿಗಳ ಕುರಿತು ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ. ನೆರಳು ಮಾತನಾಡುವ ಹೊತ್ತು, ಸಂಡೂರು ಭೂಹೋರಾಟ, ಅವ್ವನ ಅಂಗನವಾಡಿ, ಕನ್ನಡ ಜಾನಪದ ತಾತ್ವಿಕ ನೆಲೆಗಳು ಪ್ರಮುಖ ಕೃತಿಗಳು


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಗುಣಸಾಗರಿ: ಜಾನಪದ ತಂತುವಿನ ಮೇಲೆ ನುಡಿಯುವ ಗಾಂಧಿತನದ ಕಥೆಗಳು

LEAVE A REPLY

Please enter your comment!
Please enter your name here