Homeಅಂಕಣಗಳುಪುಸ್ತಕ ವಿಮರ್ಶೆ; ಗುಣಸಾಗರಿ: ಜಾನಪದ ತಂತುವಿನ ಮೇಲೆ ನುಡಿಯುವ ಗಾಂಧಿತನದ ಕಥೆಗಳು

ಪುಸ್ತಕ ವಿಮರ್ಶೆ; ಗುಣಸಾಗರಿ: ಜಾನಪದ ತಂತುವಿನ ಮೇಲೆ ನುಡಿಯುವ ಗಾಂಧಿತನದ ಕಥೆಗಳು

- Advertisement -
- Advertisement -

ಪ್ರಬಂಧಕಾರ, ವಿಮರ್ಶಕ, ಛಾಯಾಗ್ರಾಹಕ ಹೀಗೆ ಸೃಜನಶೀಲತೆಯ ವಿವಿಧ ಪ್ರಕಾರಗಳೇ ಆಗಿರುವ ಜಿ.ವಿ ಆನಂದಮೂರ್ತಿಯವರ ಹೊಸ ಕಥಾಸಂಕಲನ ‘ಗುಣಸಾಗರಿ’. ಸಂಕಲನವಾಗಿ ಕೈಸೇರುತ್ತಿರುವುದು ಹೊಸದಾಗೇ ಆದರೂ, ಇದರೊಳಗಿನ ಕಥೆಗಳಲ್ಲಿ ಕೆಲವನ್ನು ಇಪ್ಪತ್ತು ವರ್ಷಕ್ಕೂ ಹಿಂದೆಯೇ ಬರೆದದ್ದು. ತುಂಬಾ ಹಿಂದಿನಿಂದಲೂ ಬರೆಸಿಕೊಂಡಿರುವ ಕಥೆಗಳೇ ಆದರೂ ಅವುಗಳ ತಾಜಾತನ ಇಂದಿಗೂ ಉಳಿದಿರುವುದು ಅವುಗಳ ಸಲ್ಲುವ ಗುಣದಿಂದಾಗಿ. ಇದೊಂದು ಜಾನಪದದ ಫ್ಲೇವರ್ ಇರಬಹುದಾದ ಸಂಕಲನವೇ ಎಂಬುದರ ಸುಳಿವನ್ನ ಶೀರ್ಷಿಕೆಯೇ ಬಿಟ್ಟುಕೊಡುವುದರಿಂದ ಆ ಸ್ವಾದಕ್ಕೆ ಧಕ್ಕೆ ಇಲ್ಲದಂತೆ ಎಲ್ಲಾ ಹಂತದಲ್ಲೂ ಸವಿಯಬಹುದಾಗಿದೆ.

ಕಥೆಗಾರರ ಬಹಳ ಮುಖ್ಯ ಆಸಕ್ತಿಯಾದ ಜಾನಪದದ ಮಿಡಿತವನ್ನ ಇಲ್ಲಿನ ಬಹುತೇಕ ಕಥೆಗಳಲ್ಲಿ ಕಾಣಬಹುದು. ಅದು ಕೆಲವು ಕಥೆಗಳಲ್ಲಿ ನೇರವಾಗಿ ಬಿಡುಬೀಸಾಗಿ ಕಾಣಿಸಿಕೊಂಡರೆ ಇನ್ನುಳಿದ ಕೆಲ ಕಥೆಗಳಲ್ಲಿ ದನಿಪೂರ್ಣವಾಗಿ ಅಂತರ್ಗತವಾಗಿರುವುದನ್ನ ಕಾಣಬಹುದು. ಈ ಸಂಕಲನ ವಿವಿಧ ರೀತಿಯ ಕಥನ ಮಾದರಿಗೂ ಸಾಕ್ಷಿಯಾಗಿದೆ. ಪುಂಖಾನುಪುಂಖವಾಗಿ ಕಥಿಸುವ ಕಥೆಗಾರರಲ್ಲಿ ಏಕತಾನತೆಯ ಮಾದರಿಯೊಂದು ಏರ್ಪಟ್ಟು ಅವುಗಳಿಂದ ಬಿಡಿಸಿಕೊಳ್ಳುವುದೊಂದು ಸವಾಲೆ ಆಗಿರುತ್ತದೆ. ಆದರೆ ಜಿ.ವಿ ಆನಂದ ಮೂರ್ತಿಯವರ ಕಥನ ಮಾದರಿಗಳು ಕಥೆಯಿಂದ ಕಥೆಗೆ ಭಿನ್ನವಾಗಿರುವುದನ್ನ ಕಾಣಬಹುದಾಗಿದೆ. ಬಹುಶಃ ಇಲ್ಲಿನ ಕಥೆಗಳು ವಿವಿಧ ಕಾಲದಲ್ಲಿ ರಚನೆಯಾಗಿರುವುದೂ ಇದಕ್ಕೆ ಕಾರಣವಿರಬಹುದು. ಹಾಗಾಗಿ ಇದೊಂದು ಕಥನ ಮಾದರಿಗಳ ಕಲಿಕೆಗಿರುವ ಪ್ರಾತಿನಿಧಿಕ ಸಂಕಲನವೂ ಆದೀತು.

ಈ ಸಂಕಲನದ ಕಥೆಗಳಲ್ಲಿ ಕಥೆಗಾರರ ಆಸಕ್ತಿಯ ಜಾನಪದ ಮೌಲ್ಯಗಳೊಂದಿಗೆ ಗಾಂಧೀ ತತ್ವಗಳೂ ಬೆರೆತಿದ್ದು, ಈ ಆಧುನಿಕ ಕಾಲದಲ್ಲಿ ಇವೆರಡರ ಸಮ್ಮಿಶ್ರವನ್ನ ಕಾಣುವ, ಕಂಡು ಆಶಿಸುವ ಸೋಜುಗ ಓದುಗನದ್ದಾಗುತ್ತದೆ. ಆದ್ದರಿಂದಲೇ ಇದರೊಳಗೆ ಸಿರಿಧಾನ್ಯ, ಸಾವಯವ, ಕೃಷಿ ಬಿಕ್ಕಟ್ಟು, ಜಾತಿ ಸಾಮರಸ್ಯದಿಂದ ಕೂಡಿದ ಗ್ರಾಮ್ಯ ಬದುಕಿನ ಜೊತೆಜೊತೆಗೆ ಕೋಮು ದ್ವೇಷ, ದಳ್ಳುರಿ ಅದರ ಪರಿಣಾಮಗಳಿಂದಾಗುವ ಅನಾಹುತಗಳ ದರ್ಶನವೂ ಆಗುತ್ತದೆ. ಈ ಮೂಲಕ ಕಥೆಗಾರರನ್ನು ಕಾಡಿದ ಆತಂಕಗಳಾದ ವಿನಾಶದತ್ತ ಸಾಗುತ್ತಿರುವ ಗ್ರಾಮ್ಯ ಬದುಕಿನ ಮೌಲ್ಯಗಳು, ಭವಿಷ್ಯದ ಕಾರ್ಮೋಡಗಳು ಇಲ್ಲಿ ಕಥೆಗಳಾಗಿವೆ.

‘ಗುಣಸಾಗರಿ’ ಹಾಗು ‘ದಯಾ ಎಂಬ ನದಿಯಕಥೆ’ ಈ ಎರಡೂ ಕಥೆಗಳಲ್ಲಿ ಕ್ರಮವಾಗಿ ಕೆರೆ ಮತ್ತು ನದಿಗಳು ಮಾತಾಡುತ್ತವೆ. ನದಿಗಳೋ ಅಥವ ಕೆರೆಗಳೋ ಮಾತಾಡುವುದು ಹೊಸ ತಂತ್ರವಲ್ಲದಿದ್ದರೂ, ‘ಗುಣಸಾಗರಿ’ಯಲ್ಲಿನ ಕೆರೆಗಳ ಮಾತಿನಲ್ಲಿರುವ ಜಾನಪದೀಯ ಅಂಶ ಬೇರೆಲ್ಲೂ ಸಿಗದಂತದ್ದು. ಪರಿಸರ ವಿನಾಶಕ್ಕೆ ತುತ್ತಾಗುವ ಕೆರೆಗಳು ತಮಗೆ ಬಂದ ಸ್ಥಿತಿಯನ್ನು ಪರಂಪರೆಯಲ್ಲಿದ್ದ ತಮ್ಮ ಸಮೃದ್ಧಿಯ ಹಿನ್ನೆಲೆಯಲ್ಲಿ ಸ್ವಗತದಂತೆ ಚರ್ಚಿಸಿದರೆ, ‘ದಯಾ ಎಂಬ ನದಿ’ ಕಥೆಯಲ್ಲಿ ಯುದ್ಧಕ್ಕೆ ತುತ್ತಾಗುವ (ಸಾಕ್ಷಿಯಾಗುವ) ನದಿಯ ಸ್ವಗತವಿದೆ. ಕೆರೆ, ನದಿಗಳು ಮಾತಾಡುವುದರಿಂದ ಇದೊಂದು ನಾಟಕೀಯ ಗುಣವನ್ನು ಪಡೆದುಕೊಂಡ ಕಥೆಯಾಗಿದೆ. ಕೆರೆಗಳೇ ಮಾತಾಡುವಾಗ ಇದ್ದಕ್ಕಿದ್ದಂತೆ ಬಂದ ಮನುಷ್ಯ ಪಾತ್ರವೊಂದು (ಪೂರ್ವದ ಗುಣಸಾಗರಿ) ಚರ್ಚೆಯಲ್ಲಿ ಪಾಲ್ಗೊಳ್ಳುವುದು ತೊಡರೆನಿಸುತ್ತದೆ.

‘ಮೊಗ್ಗು’ ಕಥೆ ಕೋಮುದ್ವೇಷಕ್ಕೆ ತುತ್ತಾಗುವ ಹಳ್ಳಿಯೊಂದು ಹೇಗೆ ತನ್ನ ಮುಗ್ಧತೆಯನ್ನು ಬಲಿ ಕೊಡುತ್ತದೆ ಎಂಬುದನ್ನ ಚರ್ಚಿಸುತ್ತದೆ. ಇಲ್ಲಿನ ರತ್ನಮ್ಮ ತುಂಬು ಬಸುರಿಯಾಗಿರುವುದು ಒಂದು ರೂಪಕದಂತೆಯೇ ಇದ್ದು ದುರಿತದ ತೀವ್ರತೆಯನ್ನು ಧ್ವನಿಸಲು ಸಾಕಾರವಾಗಿದೆ. ಕಥೆಯ ಪ್ರಾರಂಭದಲ್ಲೇ ಬರುವ ರತ್ನಮ್ಮ ಬಾಳೆಗಿಡ ಕತ್ತರಿಸಲು ಮುಂದಾದಾಗ ಅದು ‘ಎಲ್ಲಾರ ಉಂಟೇನಮ್ಮ ಬಸುರೆಂಗ್ಸು, ಫಲ ಕೊಡೊ ಗಿಡ ಕತ್ತರಿಸೋದುಂಟ’ ಎಂದು ಹೇಳುತ್ತದೆ. ಇಂಥ ಜಾನಪದೀಯ ಗುಣಗಳನ್ನು ಉಸಿರಿಸುತ್ತಲೇ ಕೋಮುದ್ವೇಷಕ್ಕೆ ಅದೇ ಹೆಂಗಸು ಪ್ರಾಣತೆತ್ತುವ ವಿಷಾದದಿಂದ ಕೊನೆಗಂಡು ತೀವ್ರ ಗದ್ಗತೆಯನ್ನು ಉಂಟುಮಾಡುತ್ತದೆ. ಈ ಕಥೆಯ ಪ್ರತಿಯೊಂದು ಸನ್ನಿವೇಶವೂ ಅಳೆದು ತೂಗಿ ಅಚ್ಚುಕಟ್ಟಾಗಿ ಕಡೆದು ನಿಲ್ಲಿಸಿದಂತಿದೆ.

PC : Prajavani (ಜಿ.ವಿ ಆನಂದಮೂರ್ತಿ)

ವಸ್ತು, ಶೈಲಿ, ನಿರೂಪಣೆಯ ದೃಷ್ಟಿಯಿಂದ ‘ಚಿತ್ತಯ್ಯ’ ಕಥೆ ವಿಶಿಷ್ಟವಾದುದು. ಮೊದಲಿಗೆ ಇದು ಯಾವ ರೀತಿಯ ಕಥಾ ಮಾದರಿ ಎಂಬ ಪ್ರಶ್ನೆಯನ್ನು ಹುಟ್ಟಿಸುತ್ತಲೇ ಓದಿಸಿಕೊಂಡು ಹೋಗುತ್ತದೆ. ಆಧುನಿಕರ ಮತದಾನ ಬಹಿಷ್ಕಾರದಂತ ಇವತ್ತಿನ ವಸ್ತುವೊಂದನ್ನು ಇಟ್ಟುಕೊಂಡು ಗೊಲ್ಲರಹಟ್ಟಿ ಪ್ರವೇಶಿಸುವ ನಿರೂಪಕನಿಗೆ, ಆಚೆ ಬರುವಾಗ ತಾನು ಮೊದಲು ಎತ್ತಿಕೊಂಡು ಬಂದಿದ್ದ ಪ್ರಶ್ನೆಯೇ ಹಿಂದಕ್ಕೆ ಸರಿದಿರುತ್ತದೆ. ಹಟ್ಟಿಯಲ್ಲಿ ಬರುವ ಅಹಿಂಸಾವಾದಿ ಚಿತ್ತಯ್ಯನ ವ್ಯಕ್ತಿತ್ವದಿಂದಾಗಿ ಬೇರೊಂದು ಮೌಲ್ಯ ಆವರಿಸಿಕೊಂಡುಬಿಡುತ್ತದೆ. ಈ ಕತೆ ‘ಕಾಡನೋಡ ಹೋದೆ, ಕವಿತೆಯೊಡನೆ ಬಂದೆ’ ಎಂಬ ಹಾಡಿನ ಸಾಲಿನಂತೆ ಓದುಗ ಪ್ರವೇಶ ಪಡೆದದ್ದೆ ಏನೋ ಒಂದಾದರೆ ಅಂದುಕೊಂಡು ಹೊರಬಂದದ್ದೆ ಬೇರೆಯದ್ದಾಗಿ. ಹೀಗಾಗಿ ಮೊದಲು ಎತ್ತಿಕೊಂಡ ಮತದಾನ ಬಹಿಷ್ಕಾರದಂತ ಪ್ರಸಂಗ ಕೇವಲ ತೋರಿಕೆಯೆಂಬಂತೆ ಕಾಣುತ್ತದೆ.

ಇಲ್ಲಿನ ಕಥೆಗಳಲ್ಲಿ ಇವತ್ತಿನ ಗ್ರಾಮೀಣ ಜನರ ಸಂಕಟಗಳಿವೆ. ಕೃಷಿ ಭೂಮಿಯನ್ನು ನಾನಾ ಕಾರಣಗಳಿಂದಾಗಿ ಕಳೆದುಕೊಳ್ಳುತ್ತಿರುವುದರಿಂದ ಹಿಡಿದು ಕೋಮುದಳ್ಳುರಿಗೆ ತುತ್ತಾಗುತ್ತಿರುವ ಆತಂಕಗಳು ಮನೆಮಾಡಿವೆ. ಕಥೆಗಾರರು ಕೋಮುದ್ವೇಷವನ್ನು, ಅದರ ಕಾರಣ ಪರಿಣಾಮಗಳನ್ನು ಚರ್ಚಿಸಿದಷ್ಟು ಮುಕ್ತವಾಗಿ ಹಳ್ಳಿಗಳಲ್ಲಿ ಬೀಡುಬಿಟ್ಟಿರುವ ಜಾತಿದ್ವೇಷವನ್ನು ಕಾಣಿಸುವುದಿಲ್ಲ. ಗಾಂಧಿಗು ಅಷ್ಟೇ ಅಲ್ಲವೆ! ಅವರಿಗೆ ಕೋಮು ಸಾಮರಸ್ಯದ ಪ್ರಾಧಾನ್ಯತೆಯ ಮುಂದೆ ಜಾತಿಯು ಕ್ಷೀಣವಾಗಿ ಒಳಗಿನ ಸಮಸ್ಯೆಯಾಗಷ್ಟೆ ಕಂಡಿದ್ದಿತು. ಅದಕ್ಕಾಗೆ ಅವರು ಜಾತಿಯನ್ನು ಹೊರಗಿಟ್ಟು ನೋಡಿರಲಿಲ್ಲ.

‘ಕನ್ನೇರಮ್ಮ’ ಕಥೆ ಅದು ಪ್ರಾರಂಭವಾಗುವ ರೀತಿಯಿಂದ ಆಸೆ ಹುಟ್ಟಿಸಿತಾದರೂ, ಅದು ಜಾನಪದ ಮೌಲ್ಯದ ಕಡೆಗು ಸಾಗದೆ, ಯುದ್ಧಕಾಲದ, ಯುದ್ಧಭೂಮಿಯ ವಿವರಣೆಯಂತಿದ್ದು ಕೋಮುದ್ವೇಷಕ್ಕೆ ಬಲಿಯಾಗುವ ಸ್ಲಂನ ಮುಗ್ಧ ಜನತೆಯನ್ನು ಚಿತ್ರಿಸುತ್ತದೆ. ಬದುಕು ಸುಟ್ಟ ಬೂದಿಯಲ್ಲಿ ರಂಗೋಲಿ ಬಿಡಿಸುವ ಮಕ್ಕಳ ಚಿತ್ರಣದಂತಹ ಆರ್ದ್ರತೆಯ ಹೊರತಾಗಿಯೂ, ಕಥೆ ತೀವ್ರವಾಗಿ ಕಾಡಿದಂತೆ ಅನಿಸುವುದಿಲ್ಲ.

‘ಮೀನು ಶಿಕಾರಿ’ ಮತ್ತೆ ಮತ್ತೆ ಕಾಳ ಶೆಟ್ಟಿಯ ಬದುಕಿನ ವಿಧಾನವನ್ನು ಆಸೆಪಡುವಂತೆ ಮಾಡುವ ಕಥೆ. ಮಲೆಗಳಲ್ಲಿ ಮದುಮಗಳುವಿನ ಪ್ರಾರಂಭದ ಭಾಗದಲ್ಲಿರುವ ಲವಲವಿಕೆಯ ಓದಿನ ಅನುಭವ ಇಲ್ಲೂ ಆಗುತ್ತದೆ. ಈ ಕಥೆ ಬಿಚ್ಚಿಕೊಳ್ಳುವ ಬಗೆ ಆತ ಕೃಷಿಯ ಬಗೆಗಿನ ತನ್ನ ಮುನಿಸನ್ನ ಊರೂರ ಮೇಲೆ ಒಪ್ಪಿಸಿಕೊಂಡು ಹೋಗುವ ಹಿನ್ನೆಲೆಯಲ್ಲಿದೆ. ಕಥೆ ಮುಗಿದಾದ ಬಡಪಾಯಿ ಕಾಳ ಶೆಟ್ಟಿ-ಚಂದ್ರಿಯ ಕುಟುಂಬವನ್ನು ಶಿಕಾರಿ ಮಾಡುವ ಬಸಪ್ಪನಂತಹ ಬಲಿಷ್ಠನಿಂದಾಗಿ ಮೀನು ಶಿಕಾರಿ ಶೀರ್ಷಿಕೆ ಅರ್ಥ ಪಡೆದುಕೊಳ್ಳುತ್ತದೆ. ಕೊನೆಗೆ ತಂಬೂರಿ ಹಿಡಿದು ಪುರಂದರದಾಸನಂತೆ ‘ಕಾಳ ಶೆಟ್ಟಿ’ ಹೋಗೇಬಿಡುತ್ತಾನೆಂಬ ಭಾವ ಓದುಗನದ್ದಾಗುತ್ತದೆ. ಆದರೆ ಕಾಳ ಶೆಟ್ಟಿಯ ಹೆಂಡತಿ ಚಂದ್ರಿ, ಜಮೀನು ಲಪಟಾಯಿಸಲು ಪಿತೂರಿ ಹೂಡಿರುವ ಗೌಡನ ವಿರುದ್ಧ ಅಂಗಳಕ್ಕೆ ಬಂದು ಕ್ರೋಧಗೊಂಡು ಬೈದುಕೊಳ್ಳುತ್ತಾಳೆ. ಅವಳ ಮುಖ ಕೆಂಪಗೆ ಉರಿಯುವುದರೊಂದಿಗೆ ಕಥೆ ಅಂತ್ಯಗೊಳ್ಳುತ್ತದೆ. ಇದರಿಂದ ಕಥೆಗೆ ಇನ್ನೊಂದು ಬಂಡಾಯದ ಅರ್ಥ ಸಿಕ್ಕಂತಾಗಿದೆ. ಹೆಣ್ಣು ಮತ್ತು ಗಂಡಿನ ನಡುವಿರುವ ಬದುಕಿನ ಬಗೆಗಿನ ಭಿನ್ನ ಧೋರಣೆಗಳೂ ಇಲ್ಲಿ ಕಾಣಿಸಿಕೊಳ್ಳುತ್ತದೆ. ಹೆಣ್ಣು ಬದುಕು ನೋಡುವ ಕ್ರಮವೇ ಇಲ್ಲಿ ಮುಖ್ಯವಾಗುತ್ತದೆ. ಒಂದೇ ಗ್ರಾಮ್ಯ ಲಯದಲ್ಲಿ ಓದಿಸಿಕೊಳ್ಳುತ್ತಿದ್ದ ಕಥೆಯಲ್ಲಿ ಒಮ್ಮೆಲೆ ಎದುರಾಗುವ ‘ನಿರುಪಯೋಗಿ’ ಪದದಿಂದ ಸಣ್ಣ ಕಲ್ಲು ಸಿಕ್ಕಂತೆ ಭಾಸವಾಗುತ್ತದೆ.

‘ಸಂಕಲವ್ವ’ ಸಿಟ್ಟು ಹತಾಶೆ ಎಲ್ಲವನ್ನೂ ಆತ್ಯಂತಿಕವಾಗಿ ಕೆದಕಿ ಕೆರಳಿಸುವ ಕಥೆ. ಮಡುಗಟ್ಟುವ ಆಕ್ರೋಶವನ್ನ ಅಷ್ಟೇ ತಣ್ಣಗೆ ಏನೂ ಇಲ್ಲವೆನ್ನಿಸುವ ಕಥನ ತಂತ್ರ ಕಥೆಗಾರರದ್ದು. ಈ ಮೂಲಕ ಕಥೆ ಬಯಸುವ ಕೆಂಡದಂತ ಆಕ್ರೋಶವನ್ನು ಬಲವಂತವಾಗಿ ಮೊಟಕುಗೊಳಿಸುವ ಕಥೆಗಾರರು ತಾವು ನಂಬಿದ ಗಾಂಧಿತ್ವವನ್ನು ಮುನ್ನೆಲೆಗೆ ತಂದು ಮೆರೆಸಿದ್ದಾರೆ. ಇಷ್ಟೊಂದು ಆಕ್ರೋಶ ತರಿಸಿದಾಗಲೂ ಗಾಂಧಿತನ ಬೇಕೇ ಎಂಬ ಜಿಜ್ಞಾಸೆಯನ್ನ ಕಥೆ ಹಾಗೆಯೇ ಉಳಿಸುತ್ತದೆ. ಮೀನು ಶಿಕಾರಿಯಲ್ಲಿನ ಚಂದ್ರಿ ತನ್ನ ಗಂಡನಿಗೆ ಅನ್ಯಾಯವಾದಾಗ ಪ್ರತಿಭಟಿಸಿ ಬೀದಿಗಿಳಿಯುತ್ತಾಳೆ. ಆದರೆ ಸಂಕಲವ್ವ ತನ್ನ ಗಂಡನನ್ನು ಜೀವಂತ ಸುಟ್ಟಿದ್ದನ್ನು ನೋಡಿಯೂ ನ್ಯಾಯಾಲಯದಲ್ಲಿ ಸಾಕ್ಷಿ ಹೇಳದ ಅಸಹಾಯಕಳಾಗುತ್ತಾಳೆ. ಇವೆರಡೂ ವೈರುಧ್ಯಗಳನ್ನ ಕಥೆಗಾರ ಹಾಗೆಯೇ ಉಳಿಸಿದ್ದಾರೆ.

ಈ ಕಥೆಗಳಲ್ಲಿನ ಜಾನಪದದ ಸ್ವಾದದಿಂದಾಗಿ ಓದು ಎಲ್ಲೂ ಒಣ ಎನಿಸುವುದಿಲ್ಲ. ಬದಲಿಗೆ ನಶಿಸುತ್ತಿರುವ ಆ ಗ್ರಾಮ್ಯ ಬದುಕನ್ನ ಮತ್ತೆ ಆಶಿಸುವಂತೆ ಮಾಡುತ್ತದೆ ಮತ್ತು ಸಾಮರಸ್ಯ ಎಂಬುದು ಅಪರೂಪವೇ ಆಗುತ್ತಿರುವ ಈ ಕಾಲದಲ್ಲಿ ಗಾಂಧಿತನದ ಮಹತ್ವವನ್ನ ಅರಿಯುವಂತೆ ಮಾಡುತ್ತದೆ.

ಗುರುಪ್ರಸಾದ್ ಕಂಟಲಗೆರೆ

ಗುರುಪ್ರಸಾದ್ ಕಂಟಲಗೆರೆ
ಕಥೆಗಾರ ಗುರುಪ್ರಸಾದ್ ಅವರ ಎರಡು ಕಥಾಸಂಕಲನಗಳು ಪ್ರಕಟವಾಗಿದೆ. ’ಗೋವಿನ ಜಾಡು’ ಮೊದಲ ಕಥಾಸಂಕಲನ. ’ಕೆಂಡದ ಬೆಳದಿಂಗಳು’ ಕಥಾ ಸಂಕಲನ ಇತ್ತೀಚಿಗೆ ಪ್ರಕಟವಾಗಿದೆ. ತಮ್ಮ ಕಥೆಗಳಿಗೆ ಹಲವು ಬಹುಮಾನಗಳನ್ನು ಪಡೆದಿರುವ ಲೇಖಕರು, ಪತ್ರಿಕೆಗಳಿಗೆ ನಿಯತವಾಗಿ ಬರೆಯುತ್ತಾರೆ.


ಇದನ್ನೂ ಓದಿ: ವಿಶ್ವ ಪುಸ್ತಕ ದಿನ; ಸಂಶೋಧನೆಯ ಕೆಲಸದಲ್ಲಿ ನನ್ನ ಅನುಭವವನ್ನು ವಿಸ್ತರಿಸಿದ ಪುಸ್ತಕದ ಅಂಗಡಿಗಳು ಮತ್ತು…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್ ವಿನ್ಯಾಸ, ನಿರ್ವಣಾ ವಿಧಾನದ ಬಗ್ಗೆ ಗಂಭೀರ ಪ್ರಶ್ನೆಗಳಿವೆ: ಕಾಂಗ್ರೆಸ್

0
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಸಮಗ್ರತೆ ಮತ್ತು ನೀಟ್ ಅನ್ನು ವಿನ್ಯಾಸಗೊಳಿಸಿದ, ನಿರ್ವಹಿಸುವ ವಿಧಾನದ ಬಗ್ಗೆ "ಗಂಭೀರ ಪ್ರಶ್ನೆಗಳು" ಇವೆ ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ. ಸಂಸತ್ತಿನ ಹೊಸ ಸ್ಥಾಯಿ ಸಮಿತಿಗಳು ರಚನೆಯಾದಾಗ, ಅದು ನೀಟ್,...