ಮಧ್ಯಭಾರತದ ಬಕ್ಸ್ ವಾಹಾದಲ್ಲಿ ವಜ್ರಗಳ ಗಣಿಗಾರಿಕೆಗಾಗಿ ಲಕ್ಷಾಂತರ ಮರಗಳಿಗೆ ಕೊಡಲಿ

ಸಾಧಾರಣ ಮರವೊಂದರ ಆರ್ಥಿಕ ಬೆಲೆ ಕಟ್ಟುವಂತೆ ಸುಪ್ರೀಮ್ ಕೋರ್ಟು ವರ್ಷದೊಪ್ಪತ್ತಿನ ಹಿಂದೆ ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ನಾಲ್ಕು ತಿಂಗಳ ಹಿಂದೆ ವಿಚಾರಣೆಯೊಂದರ ಸಂದರ್ಭದಲ್ಲಿ ಈ ಸಮಿತಿಯ ವರದಿಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತ್ತು.

500 ಕೋಟಿ ರೂಪಾಯಿ ವೆಚ್ಚದ ರೇಲ್ವೆ ಮೇಲ್ಸೇತುವೆಯೊಂದನ್ನು ಕಟ್ಟಲು 356 ಭಾರೀ ಮರಗಳ ನಾಶವನ್ನು ವಿರೋಧಿಸಿದ್ದ ಅರ್ಜಿಯೊಂದು ಆ ಹೊತ್ತು ನ್ಯಾಯಾಲಯದ ಮುಂದಿತ್ತು.

ಸಾಧಾರಣ ಮರವೊಂದು ವರ್ಷಕ್ಕೆ 74,500 ರೂಪಾಯಿಗಳ ಬೆಲೆಯ ಆಮ್ಲಜನಕ, ಸೂಕ್ಷ್ಮ ಪೌಷ್ಠಿಕಾಂಶಗಳು ಮತ್ತು ಜೈವಿಕ ಗೊಬ್ಬರವನ್ನು ನೀಡುತ್ತವೆಂದು ವರದಿ ಲೆಕ್ಕ ಹಾಕಿತ್ತು. 74,500 ರೂಪಾಯಿಗಳನ್ನು ಅದರ ಆಯಸ್ಸಿನ ಜೊತೆಗೆ ಗುಣಾಕಾರ ಮಾಡಿದರೆ ಸಿಗುವ ಮೊತ್ತವೇ ಮರವೊಂದರ ಬೆಲೆ ಎಂಬ ತೀರ್ಮಾನಕ್ಕೆ ಬಂದಿತ್ತು ಸಮಿತಿ. ನೂರು ವರ್ಷಗಳ ಆಯಸ್ಸಿನ ಮರವೊಂದಕ್ಕೆ ಒಂದು ಕೋಟಿ ರುಪಾಯಿಯ ಬೆಲೆ ಕಟ್ಟಬಹುದು ಎಂದೂ ಹೇಳಿತ್ತು.

ಪಶ್ಚಿಮ ಬಂಗಾಳದ ರೇಲ್ವೆ ಮೇಲ್ಸೇತುವೆಗೆ ಬಲಿಯಾಗಬೇಕಿದ್ದ ಮರಗಳ ಆರ್ಥಿಕ ಮೌಲ್ಯ 356 ಕೋಟಿ ರುಪಾಯಿಗಳು ಎಂದಾಗಿತ್ತು. ಈ ಮೊತ್ತ ಕೇವಲ ಆರ್ಥಿಕ ಮೌಲ್ಯ ಎಂಬುದನ್ನು ಇಲ್ಲಿ ಒತ್ತಿ ಹೇಳಲೇಬೇಕಿದೆ. ಹಾಗೆ ಮರಗಳಿಗೆ ಅಡವಿಗಳಿಗೆ ಬೆಲೆ ಕಟ್ಟಲಾದೀತೇ? ಭೂಮಂಡಲವನ್ನು ಪೊರೆಯುವ ಈ ಆಸ್ತಿಗಳು ಅಮೂಲ್ಯ ಇಳೆಯ ಮೇಲೆ ಲಭ್ಯವಿರುವ ಶೇ.75ರಷ್ಟು ಸಿಹಿನೀರಿಗೆ ಅರಣ್ಯಗಳೇ ಕಾರಣ ಎನ್ನುತ್ತಾರೆ ವಿಜ್ಞಾನಿಗಳು.

ಮರಗಳು ನೀರನ್ನು ಹೀರಿ ನೆಲದಡಿ ರವಾನಿಸುತ್ತವೆ. ಅಂತರ್ಜಲದ ಮರುಪೂರಣಕ್ಕೆ ಕಾರಣವಾಗುತ್ತವೆ. ಲೆಕ್ಕವಿಲ್ಲದಷ್ಟು ನದಿಗಳು ಹಳ್ಳಗಳು ನೀರಿನ ಬುಗ್ಗೆಗಳಿಗೆ ನೀರು ಉಣಿಸುತ್ತವೆ. ಆಗಸದೆತ್ತರದ ಪರ್ವತ ಪ್ರದೇಶಗಳಲ್ಲಿ ಮೋಡಗಳನ್ನು ಸೆಳೆಯುವ ಅರಣ್ಯಗಳು ಮಂಜು ಮತ್ತು ಮೋಡಗಳಿಂದ ತೇವಾಂಶವನ್ನು ಹೀರಿಕೊಳ್ಳುತ್ತವೆ ಕೂಡ.

ಅಡವಿಗಳು ಗಾಳಿಯಲ್ಲಿನ ಮಾಲಿನ್ಯವನ್ನು ಸೋಸಿ ತೊಳೆಯುತ್ತವೆ. ವಿಷಾನಿಲಗಳಾದ ಸಲ್ಫರ್ ಡೈ ಆಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಹಾಗೂ ಅತಿಸೂಕ್ಷ್ಮ ಧೂಳಿನ ಕಣಗಳನ್ನು ಸೋಸಿ ಸ್ವಚ್ಛಗೊಳಿಸುತ್ತವೆ. ಸೌರಶಕ್ತಿಯನ್ನು ಹೀರಿ ತೇವಾಂಶವನ್ನು ಬಿಟ್ಟುಕೊಡುತ್ತವೆ. ಹೀಗಾಗಿಯೇ ಅರಣ್ಯಗಳ ಛತ್ರ ಛಾಯೆಗಳ ಅಡಿಯಲ್ಲಿನ ಉಷ್ಣಾಂಶ ನಗರಗಳಿಗಿಂತ ಅದೆಷ್ಟೋ ಪಾಲು ಕಡಿಮೆ ಇರುತ್ತದೆ. ಎರಡು ಸಾಧಾರಣ ಮನೆಗಳನ್ನು ತಂಪಾಗಿರಿಸಲು ಬಳಸಲಾಗುವ ಏರ್ ಕಂಡೀಷನರ್ ಸಾಧನಗಳಷ್ಟೇ ತಂಪನ್ನು ಅಡವಿಯಲ್ಲಿನ ಮರವೊಂದು ವಾತಾವರಣಕ್ಕೆ ಸೂಸುತ್ತದಂತೆ.

ಅಡವಿಗಳು ಭಾರೀ ಪ್ರಮಾಣದಲ್ಲಿ ತೇವಾಂಶವನ್ನು ಆವಿಯಾಗಿಸುತ್ತವೆ. ಅವುಗಳು ಪರಾಗರೇಣು ಮತ್ತು ಶಿಲೀಂಧ್ರ ಜಾಳಿಗೆಗಳಂತಹ ಜೈವಿಕ ಕಣಗಳನ್ನು ವಾತಾವರಣಕ್ಕೆ ಸೂಸಿ ತೇಲಿಸುತ್ತವೆ. ಈ ಕಣಗಳು ಮಳೆಯ ಹನಿಗಳು ಮತ್ತು ಮಂಜಿನ ಹಗುರ ಚಕ್ಕೆಗಳು ರೂಪು ತಳೆಯಲು ಜೀವಕಣ ಕೇಂದ್ರಗಳಂತೆ ಕೆಲಸ ಮಾಡುತ್ತವೆ. ಹೀಗಾಗಿ ಮಳೆ ಸುರಿಯುವಿಕೆ ಅಡವಿಗಳನ್ನು ಅವಲಂಬಿಸಿರುತ್ತದೆ. ಕರಾವಳಿ ಅಡವಿಗಳು ನೆರೆಯ ಸಮುದ್ರದಿಂದ ಭಾರೀ ಪ್ರಮಾಣದಲ್ಲಿ ತೇವಾಂಶಭರಿತ ಗಾಳಿಯನ್ನು ಸೆಳೆದುಕೊಂಡು ಒಣ ಒಳನಾಡು ಪ್ರದೇಶಗಳತ್ತ ಕೊಂಡೊಯ್ಯುತ್ತವೆ. ಸಾವಿರಾರು ಕಿ.ಮೀ. ದೂರ ದೂರದಲ್ಲೂ ಈ ಪರಿಣಾಮ ಅನುಭವಕ್ಕೆ ಬಂದೀತು. ಮತ್ತೆ ಮತ್ತೆ ಬರಗಾಲಗಳು ಕವಿದು ಬೀಳುತ್ತಿರುವ ಈ ದಿನಮಾನಗಳಲ್ಲಿ ಮನುಕುಲದ ಆಶಾಕಿರಣಗಳು ಅರಣ್ಯಗಳು.

ಇಷ್ಟೇ ಅಲ್ಲ, ಭೂಮಂಡಲದ ಪರಿಸರ ಸಮತೋಲನವನ್ನು ಕಾಯಲು ನೆಲದ ಆಡಿಯಲ್ಲೂ ಬಿಡುವಿಲ್ಲದೆ ದುಡಿಯುತ್ತವೆ ಚಗಳು. ಸಾವಿರಾರು ಎಕರೆ ಅರಣ್ಯ ಹಬ್ಬಿ ಹರಿದ ಹಸಿರುರಾಶಿಯನ್ನು ನೆಲದ ಮೇಲೆ ಕಾಣುತ್ತೇವೆ. ಹಾಗೆಯೇ ನೆಲದ ಅಡಿಯ ’ಅರಣ್ಯ’ವನ್ನು ಕಲ್ಪಿಸಿಕೊಳ್ಳಿರಿ. ಸಾವಿರಾರು ಎಕರೆಗಳ ವಿಸ್ತಾರಕ್ಕೆ ನಲೆದಡಿ ಹರಡಿ, ಆಳಕ್ಕೆ ಇಳಿಸಿದ ಬೇರುಗಳ ಜಾಲದ ಅದ್ಭುತ ದೃಶ್ಯವನ್ನು ಕಣ್ಣಮುಂದೆ ತಂದುಕೊಳ್ಳಿರಿ. ಭೂಮಿಯ ಕಾವನ್ನು ತಗ್ಗಿಸುತ್ತವೆ. ವನ್ಯಜೀವಿ ವೈವಿಧ್ಯಕ್ಕೆ ಆಶ್ರಯ ನೀಡುತ್ತವೆ.

ಮಧ್ಯಭಾರತದ ಆದಿವಾಸಿ ಸೀಮೆಯಲ್ಲಿ ಜರುಗಿರುವ ಮತ್ತೊಂದು ವಿನಾಶಕಾರಿ ವಿದ್ಯಮಾನವಿದು- ವಜ್ರಗಳ ಗಣಿಗಾರಿಕೆಗಾಗಿ ದಟ್ಟ ಅಡವಿಯನ್ನು ಬರಿದಾಗಿಸುವ ದಿವಾಳಿಕೋರ ದಂಧೆ. ಬುಂದೇಲಖಂಡದ ಕಾಡು ಶತಮಾನಗಳಷ್ಟು ಹಳೆಯದು. ಕಪಿಗಳು ಭಾರೀ ಸಂಖ್ಯೆಯಲ್ಲಿರುವ ಕಾರಣ ಈ ಕಾಡಿಗೆ ’ಬಂದರ್’ ಹೆಸರು ತಗುಲಿಕೊಂಡಿದೆ. ಹಿಂದೀಯಲ್ಲಿ ಬಂದರ್ ಎಂದರೆ ಕಪಿ ಎಂದರ್ಥ.

ಈ ಸಂರಕ್ಷಿತ ಅರಣ್ಯದ 382.131 ಹೆಕ್ಟೇರುಗಳನ್ನು ಐವತ್ತು ವರ್ಷಗಳ ಅವಧಿಯ ಗಣಿಗಾರಿಕೆಗೆ ಉಪಯೋಗಿಸಿಕೊಳ್ಳುವ ಗುತ್ತಿಗೆಯನ್ನು ಹರಾಜು ಕೂಗಿ ಪಡೆದಿರುವ ಕಂಪನಿ ಆದಿತ್ಯ ಬಿರ್ಲಾ ಉದ್ಯಮ ಸಮೂಹದ ಎಸ್ಸೆಲ್ ಮೈನಿಂಗ್ ಇಂಡಸ್ಟ್ರೀಸ್.

ಅಡವಿಯ ನೆಲದಾಳದ ವಜ್ರಗಳನ್ನು ಅಗೆದು ತೆಗೆಯಲು ಎರಡೂ ಕಾಲು ಲಕ್ಷ ಮರಗಳ ’ಮರಮೇಧ’ ಜರುಗಲಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಆತ್ಮಘಾತುಕ ಕ್ರಿಯೆಗೆ ಸದ್ಯಕ್ಕೆ ತಡೆಯಾಜ್ಞೆ ನೀಡಿದೆ. ಸರ್ಕಾರಗಳು ನೆಲ ಜಲ ಕಾಡು ಕಣಿವೆ ಗುಡ್ಡಗಳನ್ನು ಮಾರಿಕೊಳ್ಳುವ ಇಂದಿನ ದಿನಮಾನದಲ್ಲಿ ಈ ತಡೆಯಾಜ್ಞೆಯ ಕೌಪೀನ ಕಳಚಿ ಬೀಳಲು ಎಷ್ಟು ಹೊತ್ತೂ ಬೇಕಿಲ್ಲ. ಸರ್ಕಾರವೇ ನೀಡಿರುವ ಪರಿಸರ ಅನುಮೋದನೆ ಮರಗಳ ಸಂಖ್ಯೆಯನ್ನು 2.15 ಲಕ್ಷ ಎನ್ನುತ್ತದೆ. ವಾಸ್ತವವಾಗಿ ಈ ಸಂಖ್ಯೆ ಇನ್ನೂ ಹೆಚ್ಚು ಎನ್ನುತ್ತಾರೆ ಪರಿಸರವಾದಿಗಳು.

ಸುಪ್ರೀಮ್ ಕೋರ್ಟಿಗೆ ಸಲ್ಲಿಸಲಾಗಿರುವ ತಜ್ಞರ ವರದಿಯ ಪ್ರಕಾರ ಲೆಕ್ಕ ಹಾಕಿದರೆ ಈ ಎರಡೂ ಕಾಲು ಲಕ್ಷ ಮರಗಳ ಆರ್ಥಿಕ ಮೌಲ್ಯ ಎರಡೂಕಾಲು ಲಕ್ಷ ಕೋಟಿ ರುಪಾಯಿಗಳು! ಇವುಗಳ ಪರಿಸರ ಮೌಲ್ಯ ಬೆಲೆ ಕಟ್ಟಲಾಗದ್ದು.

ಈ ಪ್ರದೇಶದಲ್ಲಿ ಹದಿನೇಳು ಆದಿವಾಸಿ ಹಳ್ಳಿಗಳಿವೆ. ವನ ಉತ್ಪನ್ನಗಳನ್ನೇ ನೆಚ್ಚಿರುವ ಏಳು ಸಾವಿರ ಮಂದಿ ಆದಿವಾಸಿಗಳು ಇಲ್ಲಿ ಜೀವಿಸಿದ್ದಾರೆ. ನೀರಿನ ಅಭಾವವಿರುವ ಈ ಸೀಮೆಯಲ್ಲಿ ಈ ಉದ್ಯಮ ವರ್ಷಕ್ಕೆ 590 ಕೋಟಿ ಲೀಟರಿನಷ್ಟು ನೀರನ್ನು ಗಟಾಯಿಸಲಿದೆ.

ಎರಡೂವರೆ ಸಾವಿರ ಕೋಟಿ ಬಂಡವಾಳ ಹೂಡಿ 55 ಸಾವಿರ ಕೋಟಿ ರೂಪಾಯಿಗಳ ಲಾಭ ಗಳಿಸುವ ಇರಾದೆಯನ್ನು ಆದಿತ್ಯ ಬಿರ್ಲಾ ಕಂಪನಿ ಹೊಂದಿದೆ. ಆಸ್ಟ್ರೇಲಿಯಾ ಮೂಲದ ರಿಯೋ ಟಿಂಟೋ ಎಂಬ ವಿಶ್ವಪ್ರಸಿದ್ಧ ವಜ್ರೋದ್ಯಮ ಕಂಪನಿ ಈ ಹಿಂದೆ ಇಲ್ಲಿ 954 ಹೆಕ್ಟೇರುಗಳಲ್ಲಿ ವಜ್ರದ ಗಣಿಗಾರಿಕೆ ನಡೆಸಲು ಬಯಸಿತ್ತು. ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಅನುಮೋದನೆ ನೀಡಿತ್ತು. ಅರಣ್ಯನಾಶ, ಪನ್ನಾ ಹುಲಿ ಅಭಯಾರಣ್ಯ ಮತ್ತು ನೌರಾದೇಹಿ ವನ್ಯಜೀವಿ ಸಂರಕ್ಷಣಾ ಧಾಮದ ನಡುವಣ ಹಬ್ಬಿರುವ ’ಟೈಗರ್ ಕಾರಿಡಾರ್’ನ್ನು  ನಾಶ ಮಾಡುವ ಮತ್ತು ಆದಿವಾಸಿಗಳ ಬದುಕುಗಳನ್ನು ಒಕ್ಕಲೆಬ್ಬಿಸುವ ವಿರುದ್ಧ ಜನಾಂದೋಲನ ಸಿಡಿದ ಕಾರಣ ಈ ಯೋಜನೆಯನ್ನು ಕೈಬಿಡಲಾಗಿತ್ತು. ರಿಯೋ ಟಿಂಟೋ ನಿರಾಶೆಯಿಂದ ಜಾಗ ಖಾಲಿ ಮಾಡಿತ್ತು.

ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ವಿನಾಶಕಾರಿ ಯೋಜನೆಗೆ ಮರುಜೀವ ನೀಡಿತು. ವಿಸ್ತೀರ್ಣವನ್ನು ತಗ್ಗಿಸಿ ಗುತ್ತಿಗೆ ನೀಡಿತು. ವರ್ಷಕ್ಕೆ 1,550 ಕೋಟಿ ರಾಜಧನ ಸಿಗಲಿದೆ ಎಂದು ಜೊಲ್ಲು ಸುರಿಸಿತ್ತು. ಇದೀಗ ಕಾಂಗ್ರೆಸ್ ಸರ್ಕಾರವನ್ನು ಕೆಡವಿ ಪುನಃ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರದ ಬಾಯಲ್ಲೂ ನೀರೂರಿದೆ.

ವಿಜ್ಞಾನ ತಂತ್ರಜ್ಞಾನ ದಾಪುಗಾಲಿಟ್ಟು ಬೆಳೆದಿರುವ ಈ ದಿನಗಳಲ್ಲಿ ವಜ್ರಗಳಿಗಾಗಿ ಮರಮೇಧ ನಡೆಸುವ ಅಗತ್ಯವಿಲ್ಲ. ಗಾಳಿಯಲ್ಲಿನ ಇಂಗಾಲವನ್ನು ಬಳಸಿ ಪ್ರಯೋಗಶಾಲೆಯಲ್ಲಿ ಗುಣಮಟ್ಟದ ವಜ್ರಗಳನ್ನು ತಯಾರಿಸುವ ತಂತ್ರಜ್ಞಾನ ಯಶಸ್ವಿಯಾಗಿದೆ. ಹಲವು ಕಂಪನಿಗಳು ಈ ಉದ್ಯಮದಲ್ಲಿ ತೊಡಗಿಕೊಂಡಿವೆ ಕೂಡ.

ಪ್ರಯೋಗಶಾಲೆಯಲ್ಲಿ ವಜ್ರಗಳನ್ನು ತಯಾರಿಸಬಹುದು ಆದರೆ ಅಡವಿಗಳನ್ನು ಬೆಳೆಸುವುದು ಸಾಧ್ಯವಿಲ್ಲ. ಚಿನ್ನಕ್ಕಾಗಿ ಅನ್ನ ನೀರು ನೆರಳನ್ನು ಕಟ್ಟಕಡೆಗೆ ಉಸಿರಾಡುವ ಶುದ್ಧ ಗಾಳಿಯನ್ನೂ ಕಳೆದುಕೊಳ್ಳುವುದು ಮನುಕುಲದ ಆತ್ಮಘಾತಕತನ.

ಪ್ರಾಣವನ್ನು ತೆತ್ತು ಮರಣವನ್ನು ಖರೀದಿಸುತ್ತಿದೆಯೇ ಮನುಕುಲ?


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-3: ಶಂಖದ ಹುಳುವಿನ ಮಾಮೇರಿ ಸೈನ್ಯದ ಬಗ್ಗೆ ನಿಮಗೆ…

LEAVE A REPLY

Please enter your comment!
Please enter your name here