Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-3: ಶಂಖದ ಹುಳುವಿನ ಮಾಮೇರಿ ಸೈನ್ಯದ ಬಗ್ಗೆ ನಿಮಗೆ ಗೊತ್ತೆ?

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-3: ಶಂಖದ ಹುಳುವಿನ ಮಾಮೇರಿ ಸೈನ್ಯದ ಬಗ್ಗೆ ನಿಮಗೆ ಗೊತ್ತೆ?

- Advertisement -
- Advertisement -

ಮಾರ್ಚ್‌ ಏಪ್ರಿಲ್‌ ತಿಂಗಳಲ್ಲಿ ನಿಮಗೆ ನಮ್ಮ ತೋಟದಲ್ಲಿ ಹುಡುಕಿದರೂ ಒಂದು ಶಂಖದ ಹುಳು ಸಿಕ್ಕುವುದಿಲ್ಲ. ಅವು ಇದ್ದ ಕುರುಹಾಗಿ ಅಲ್ಲಿ ಇಲ್ಲಿ ಬಿದ್ದ ಅವುಗಳ ಚಿಪ್ಪುಗಳು ಸಿಕ್ಕಿದರೆ ಸಿಕ್ಕಬಹುದು ಅಷ್ಟೆ.

ಜೂನ್‌ ಜುಲೈ ಹೊತ್ತಿಗೆ ಅಲ್ಲೊಂದು ಇಲ್ಲೊಂದು ಬೀಜರೂಪವಾಗಿ ಕಾಣಿಸಿಕೊಳ್ಳುತ್ತವೆ. ಹಿಂಗಾರು ಮಳೆ ಆರಂಭವಾಗಿ ನೆಲ ತೇವಗೊಂಡು ಜೀವ ಸಂಚಾರದ ವೇಗ ಹೆಚ್ಚುತ್ತದೆ. ಆಗಸ್ಟ್‌ ಸೆಪ್ಟೆಂಬರ್‌ ಹೊತ್ತಿಗೆ ಎಲ್ಲಿ ಕಾಲಿಟ್ಟರೂ ಈ ಶಂಖದ ಹುಳುವಿನ ಮೇಲೆ ಇಡಬೇಕಾಗುತ್ತದೆ. ಈಗ್ಗೆ ಹತ್ತು ವರ್ಷಗಳ ಹಿಂದೆ ಹೀಗಿರಲಿಲ್ಲ. ಆಗ ಅವು ತುಂಬಾ ವಿರಳವಾಗಿದ್ದವು. ಅವು ಎಲ್ಲಿದ್ದವೋ ಏನೋ ಗೊತ್ತಿಲ್ಲ, ವರ್ಷಗಳೆರಡು ಕಳೆದಂತೆ ಅವುಗಳ ಸಂಖ್ಯೆ ಲಕ್ಷದ ಲೆಕ್ಕದಲ್ಲಿ ಹೆಚ್ಚಿದವು. ಈಗ ಪ್ರತಿ ವರ್ಷ ಸೆಪ್ಟೆಂಬರ್‌, ಶಂಖದ ಹುಳುವಿನ ತಿಂಗಳಾಗಿ ಪರಿವರ್ತನೆಯಾಗಿದೆ. ಆಗಸ್ಟ್‌ ತಿಂಗಳಲ್ಲಿ ನಿಮಗೆ ಒಂಟಿ ಹುಳ ಕಾಣುವುದೇ ಇಲ್ಲ, ಏನಿದ್ದರೂ ಜಂಟಿ ಹುಳುಗಳೇ. ನಂತರದ ಒಂದು ತಿಂಗಳ ಅವಧಿಯಲ್ಲಿ ಎಲ್ಲಿ ನೋಡಿದರೂ ಹೆಸರು ಕಾಳು ಗಾತ್ರದ ಹಳದಿ ಮೊಟ್ಟೆಗಳ ಪುಟ್ಟ ಪುಟ್ಟ ರಾಶಿಗಳನ್ನು ನೋಡಬಹುದು. ಇವು ಸುಮಾರು ಮುವತ್ತರಿಂದ ನಲವತ್ತು ಮೊಟ್ಟೆಗಳನ್ನು ಇಡುತ್ತವೆ. ಯಾವ ಪ್ರತಿರೋಧದ ದರಕಾರವೂ ಇಲ್ಲದೆ ತಾಯಿ ಹುಳುದ ಕಾವೂ ಇಲ್ಲದೆ ಮರಿಯಾಗುತ್ತವೆ. ಆ ಮೊಟ್ಟೆಗಳನ್ನು ಇತರ ಯಾವ ಜೀವಿಗಳೂ ತಿಂದಂತೆ ಕಾಣುವುದಿಲ್ಲ. ಹೀಗಾಗಿ ಅವುಗಳ ಸಂಖ್ಯೆ ಲಕ್ಷ ಲಕ್ಷವಾಗಿ ಹಬ್ಬುತ್ತದೆ. ತೋಟವೆಲ್ಲಾ ಶಂಖದ ಹುಳುಗಳಿಂದ ಅಲಂಕೃತವಾಗುತ್ತದೆ. ಕಾಲಿಟ್ಟ ಕಡೆಯೆಲ್ಲಾ ಮಾರಣಹೋಮವೂ ನಡೆಯುತ್ತಿರುತ್ತದೆ. ನರಿಗ್‌ ನರಿಗ್‌ ಎಂಬ ಶಬ್ಧ ಮಾರ್ದನಸುತ್ತದೆ.

ಶಂಖದ ಹುಳುಗಳು ಕೊಳೆತ ಕಸ ಕಡ್ಡಿ, ತಿಂದು ಜೀವಿಸುತ್ತವೆ. ಅವುಗಳಿಗೆ ಹಸಿರು ಸೊಪ್ಪು ವರ್ಜ್ಯವಲ್ಲ. ಅದಕ್ಕೆ ಹೊಲದ ರೈತರಿಗೆ ಈ ಶಂಖದ ಹುಳು ಆಗಿಬರುವುದಿಲ್ಲ. ಅವು ಹೊಲದಲ್ಲಿನ ಎಳೆ ಬೆಳೆಯನ್ನು ನಗ್ಗುಯ್ಯುತ್ತವೆ, ರೇಷ್ಮೆಹುಳು ಬೇಕು ಇವು ಬೇಡ, ನೆಲಸಮ ಮಾಡಿಬಿಡುತ್ತವೆ. ಅವುಗಳನ್ನು ನಿಯಂತ್ರಿಸಲು ರೈತರು ನಾನಾ ಬಗೆಯ ಕಸರತ್ತು ನಡೆಸುತ್ತಾರೆ. ಆದರೆ ನಮ್ಮಂತಹ ಉಳುಮೆ ಇಲ್ಲದ ತೋಟಗಳು ಅವಕ್ಕೆ ಕ್ಷೇಮಸ್ವರ್ಗ. ಯಾರ ಭಯವೂ ಇಲ್ಲದೇ ನಮ್ಮಲ್ಲಿಗೆ ಬಂದು ಇದ್ದು ಮರಿಮಾಡಿಕೊಂಡು ಬೆಳೆದು ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುವ ಹೊತ್ತಿಗೆ ತಮ್ಮ ಆಟ ಮುಗಿಸಿ ಕಣ್ಮರೆಯಾಗುತ್ತವೆ.

ಆ ಲಕ್ಷ ಲಕ್ಷ ಜೀವಿಗಳು ವಿಸರ್ಜಿಸಿದ ಮಲ ಮೂತ್ರದ ಪಾತ್ರ ಗಿಡಮರಗಳಲ್ಲಿ ಫಲದ ರೂಪದಲ್ಲಿ ಪಲ್ಲವಿಸತೊಡಿಗಿರುತ್ತದೆ. ಅಷ್ಟೇ ಅಲ್ಲದೆ ಅವು ತಮ್ಮನ್ನು ತಾವು ಇಲ್ಲಿಯೆ ವಿಸರ್ಜಿಸಿಕೊಳ್ಳುವ ಕಾರಣ ಅವು ಋಣಮುಕ್ತವಾಗುತ್ತವೆ.

ತೋಟಕ್ಕೆ ಬಂದವರು ಹೇಳುತ್ತಾರೆ “ನಿಮ್ಮ ತೋಟ ಚೆನ್ನಾಗಿದೆ”. ಅವರು ಮುಂದುವರಿಸುತ್ತಾರೆ, ನಿಮ್ಮ ತೋಟದಲ್ಲಿ ಶಂಖದ ಹುಳುಗಳು ಅತಿಯಾಗಿವೆ. ಎರಡೂ ನಿಜವೇ. ಅವು ಅತಿಯಾಗಿರಲು ಅವಕ್ಕೆ ಇಲ್ಲಿ ತಾಣವಿದೆ, ಆಹಾರವಿದೆ, ಅವಕ್ಕೆ ಗಟ್ಟಿಯಾದ ಚಿಪ್ಪಿನ ಕವಚವಿದೆ.

ಸಾಂಬಾರ್ಗಾಗೆಗಳು ಈ ಶಂಖದ ಹುಳುಗಳನ್ನು ತಿನ್ನುತ್ತವಾದರೂ ಅಷ್ಟು ಇಷ್ಟಪಟ್ಟು ತಿನ್ನುವುದಿಲ್ಲ, ನವಿಲುಗಳು ಏನೂ ಆಹಾರ ಸಿಕ್ಕದಿದ್ದಾಗ ಮಾತ್ರ ಹಾಗೊಂದು ಹೀಗೊಂದು ಈ ಶಂಖದ ಹುಳುಗಳನ್ನು ಸೇವಿಸುವ ಪರಿಪಾಠ ಇಟ್ಟುಕೊಂಡಿವೆ. ಮಿಕ್ಕಂತೆ ಇವುಗಳಿಗೆ ಇನ್ನಾರ ಭಯವೂ ಇರುವಂತಿಲ್ಲ. ನಮ್ಮಲ್ಲಿನ ಕೆಲವು ಜನ ಒಮ್ಮೊಮ್ಮೆ ಐವತ್ತರಿಂದ ನೂರು ಗ್ರಾಮ್‌ ತೂಗುವ ಈ ಶಂಖದ ಹುಳುಗಳನ್ನು ನೋಡಿ ತಿನ್ನುವ ಆಸೆ ವ್ಯಕ್ತಪಡಿಸಿದರೂ ಇನ್ನು ಅದು ಅವರಿಗೆ (ನನ್ನನ್ನೂ ಒಳಗೊಂಡು) ಸಾಧ್ಯವಾಗಿಲ್ಲ.

PC : Freepik

ಏನೇ ಆಗಲಿ ಈ ಶಂಖದ ಹುಳುಗಳ ಬೆಳೆ ನಮ್ಮ ತೋಟಕ್ಕೆ ಬಲು ಒಳ್ಳೆಯದು ಮಾಡಿದೆ. ಇವು ಇಡುವ ಮಿಲಿ ಗ್ರಾಮ್‌ ಲೆಕ್ಕದ ಹಿಕ್ಕೆಗೆ ಬೆಲೆ ಕಟ್ಟಲಾಗದು. ಅದು ತೂಕಕ್ಕಾಗಲಿ ಲೆಕ್ಕಕ್ಕಾಗಲಿ ಸಿಗುವಂತಾದ್ದಲ್ಲ. ಅದು ಅನೂಹ್ಯ, ಆದರೆ ಲೆಕ್ಕ ಮಾಡುವವರಿಗೆ ಒಳ್ಳೆಯ ವಸ್ತು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ: ಕೋಟಿ ಕೀಟಗಳ ಉಳುಮೆ, ಹುಲ್ಲು ಬೇರಿನ ಮಹಿಮೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಶಂಖದ ಹುಳುಗಳು ಅಡಿಕೆಗೆ ಆಗಿ ಬರುವುದಿಲ್ಲ. ಹಗಲುಹೊತ್ತು ಮರದ ಬುಡ ಸೇರುವ ಅವು ಸಂಜೆಯಾದಂತೆ ಮರ ಏರಿ ಎಳೆಯ ಸಿಂಗಾರದ (ಹೂ ಗೊಂಚಲು) ಬುಡದ ತಿರುಳನ್ನು ತಿಂದು ಇಡೀ ಗೊನೆಯನ್ನು ಹಾಳುಮಾಡುತ್ತವೆ. ಆದ್ರಿಂದ, ಅಡಿಕೆ ತೋಟದಲ್ಲಿ ಅವು ಅನಪೇಕ್ಷಿತ ಅತಿಥಿಗಳು.

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...