Homeಕರೋನಾ ತಲ್ಲಣಕುಂಭಮೇಳದಿಂದ ಬಂದ ವ್ಯಕ್ತಿಯಿಂದ ಬೆಂಗಳೂರಿನ 33 ಜನರಿಗೆ ಕೊರೋನಾ: ಕುಂಭಯಾತ್ರಿಗಳೇ ಸುಪರ್-ಸ್ಪ್ರೆಡರ್ಸ್?

ಕುಂಭಮೇಳದಿಂದ ಬಂದ ವ್ಯಕ್ತಿಯಿಂದ ಬೆಂಗಳೂರಿನ 33 ಜನರಿಗೆ ಕೊರೋನಾ: ಕುಂಭಯಾತ್ರಿಗಳೇ ಸುಪರ್-ಸ್ಪ್ರೆಡರ್ಸ್?

- Advertisement -
- Advertisement -

ಕಳೆದ ತಿಂಗಳು ಉತ್ತರಾಖಂಡದ ಕುಂಭಮೇಳದಿಂದ ಹಿಂದಿರುಗಿದ ಬೆಂಗಳೂರು ಮಹಿಳೆಯೊಬ್ಬರಿಗೆ ಪಾಸಿಟಿವ್ ಕಂಡುಬಂದಿದ್ದು, ಅವರಿಂದ 33 ಮಂದಿಗೆ ಕೊರೋನಾ ಸೋಂಕು ತಗುಲಿದೆ ಎಂದು ಬೆಂಗಳೂರಿನ ಸ್ಪಂದನಾ ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಅದೃಷ್ಟವಶಾತ್, ಸೋಂಕಿಗೆ ಒಳಗಾದವರಲ್ಲಿ ಹೆಚ್ಚಿನವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಬಿಬಿಎಂಪಿ ಅಧಿಕಾರಿಯೊಬ್ಬರ ಪ್ರಕಾರ, ಕುಂಭಮೇಳದಿಂದ ಹಿಂತಿರುಗಿದ ಮಹಿಳೆಗೆ ಕೊರೊನಾ ದೃಢಪಟ್ಟಿತ್ತು. ಅವರ ಸೊಸೆ ಮನೋವೈದ್ಯರಾಗಿದ್ದು ಅವರಿಗೂ ಸೋಂಕು ತಗುಲಿದೆ. ನಂತರ ಅವರು 13 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರಿಗೆ ಸೋಂಕು ಹರಡಿತು. ಒಟ್ಟಿನಲ್ಲಿ ಕುಂಭಮೇಳಕ್ಕೆ ಹೋಗಿ ಬಂದ ಮಹಿಳೆಯಿಂದ 33 ಜನರಿಗೆ ಸೋಂಕು ತಗುಲಿದ್ದು ದೃಢಪಟ್ಟಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಮಾರ್ಚ್ 31 ಮತ್ತು ಏಪ್ರಿಲ್ 24 ರ ನಡುವೆ ನಡೆದ ಉತ್ತರಾಖಂಡದ ಹರಿದ್ವಾರದಲ್ಲಿನ ಕುಂಭಮೇಳದಲ್ಲಿ 3.5 ದಶಲಕ್ಷಕ್ಕೂ ಹೆಚ್ಚು (ಅಂದರೆ 35 ಲಕ್ಷಕ್ಕೂ ಹೆಚ್ಚು!) ಭಕ್ತರು ಪಾಲ್ಗೊಂಡಿದ್ದರು. ಶೇ 90ಕ್ಕೂ ಹೆಚ್ಚಿನ ಭಕ್ತರು ಮಾಸ್ಕ್ ಧರಿಸಿರಲಿಲ್ಲ ಮತ್ತು ಅಲ್ಲಿ ಸುರಕ್ಷಿತ ಅಂತರ ಎಂಬ ಮಾತಿಗೆ ಅರ್ಥವೇ ಇರಲಿಲ್ಲ. ಈ ಕುಂಭಮೇಳಕ್ಕೆ ಹೋಗಿ ಬಂದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ವಿಪಕ್ಷ ನಾಯಕ ಅಖಿಲೇಶ್ ಯಾದವ್ ಅವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಕೆಲವು ಹಿರಿಯ ಸಾಧು-ಸಂತರು ಕೋವಿಡ್‌ಗೆ ಬಲಿಯಾಗಿದ್ದರು.

ಈ ಕುಂಭಮೇಳ ಒಂದು ಸುಪರ್-ಸ್ಪ್ರೆಡರ್ಸ್ ಇವೆಂಟ್ ಆಗಲಿದೆ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದರು.

ಎಷ್ಟು ಕುಂಭಿಗಳು ರಾಜ್ಯಕ್ಕೆ ಬಂದರು?

ಈ ಬಗ್ಗೆ ರಾಜ್ಯ ಸರ್ಕಾರದ ಬಳಿ ಮಾಹಿತಿಗಳೇ ಇಲ್ಲ. ಕುಂಭಮೇಳ ನಡೆಯುತ್ತಿದ್ದಾಗ, ಅಲ್ಲಿಂದ ಬಂದವರೆಲ್ಲರ ಟೆಸ್ಟ್ ಮಾಡುವುದಲ್ಲದೇ ಅವರನ್ನು ಕ್ವಾರಂಟೈನ್ ಮಾಡುವುದಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದರು.

ಆದರೆ ಈ ಕೆಲಸವನ್ನು ರಾಜ್ಯ ಸರ್ಕಾರ ಮಾಡಿತೆ? ಅಥವಾ ಇಲ್ಲವೇ? ಈ ಕುರಿತಂತೆ ಆರೋಗ್ಯ ಸಚಿವರನ್ನು ನಾನುಗೌರಿ.ಕಾಂ ಸಂಪರ್ಕಿಸಲು ಯತ್ನಿಸಿತು, ಅವರು ಸಂಪರ್ಕಕ್ಕೆ ಸಿಗಲಿಲ್ಲ.

‘ಚೆಕ್‌ಪೋಸ್ಟೇ ಇಲ್ಲಾರಿ!’

ಕುಂಭಮೇಳದಿಂದ ಜಿಲ್ಲೆಗೆ ಎಷ್ಟು ಜನ ವಾಪಸಾಗಿದ್ದಾರೆ ಎಂಬ ವಿಷಯ ತಿಳಿಯಲು, ಗದಗ ಜಿಲ್ಲೆಯ ಜಿಲ್ಲಾಸ್ಪತ್ರೆ ‘ಜಿಮ್ಸ್’ ನಿರ್ದೇಶಕ ಡಾ. ಭೂಸರೆಡ್ಡಿಯವರನ್ನು ಮಾತನಾಡಿಸಿದಾಗ ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಜಿಲ್ಲಾ ಆರೋಗ್ಯ ಅಧಿಕಾರಿ-ಡಿಎಚ್‌ಒ ಅವರನ್ನು ಸಂಪರ್ಕಿಸಿ’ ಎಂದರು. ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಡಿಎಚ್‌ಒ ಡಾ. ಸತೀಶ ಬಸರಿಗಿಡದ ‘ಇಲ್ಲ, ಕುಂಭಮೇಳದಿಂದ ಜಿಲ್ಲೆಗೆ ಬಂದವರ ಸಂಖ್ಯೆ ಗೊತ್ತಿಲ್ಲ. ಕೋವಿಡ್ ಒಂದನೇ ಅಲೆಯಲ್ಲಿ ಚೆಕ್‌ಪೋಸ್ಟ್‌ಗಳಿದ್ದವು. ಈಗ ಏನೂ ಇಲ್ಲ. ಯಾರಾದರೂ ಬರಬಹುದು’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಈ ಕುರಿತು ಕೇಳಲು ಗದಗ ಡಿಸಿ, ಎಸ್‌ಪಿ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಟ್ರೇಸಿಂಗ್ ಮರೆತ ದೇಶ!

ಕೊವಿಡ್ ಮೊದಲ ಅಲೆ ಸಂದರ್ಭದಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂಂದವರನ್ನು ಪ್ರಾಥಮಿಕ, ದ್ವಿತೀಯ ಹಂತದ ಸೋಂಕಿತರು ಎಂದೆಲ್ಲ ಟ್ರೇಸ್ ಮಾಡಿ, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು. ಅವರು ಇರುವ ಮನೆ, ಅಪಾರ್ಟ್ಮೆಂಟ್ ಅಥವಾ ಇಡೀ ಏರಿಯಾವನ್ನೇ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗುತ್ತಿತ್ತು.

ಅದೆಲ್ಲ ಈಗ ಎರಡನೇ ಸಂದರ್ಭದಲ್ಲಿ ನಡೆಯುತ್ತಲೇ ಇಲ್ಲ. ಅಥವಾ ಆಗ ನಡೆದ ಈ ಪ್ರಕ್ರಿಯೆ ಫಲಕೊಡಲಿಲ್ಲವೇ? ಅಲ್ಲ ಅನ್ನುವುದಾದರೆ, ಈಗೇಕೆ ಈ ಪ್ರಕ್ರಿಯೆ ನಡೆಯುತ್ತಿಲ್ಲ?

ತಬ್ಲಿಗಿ ಸಂಪರ್ಕಿತರನ್ನು ಹುಡುಕಿ ಹುಡುಕಿ ತೆಗೆದಂತೆ ಕುಂಭಮೇಳ ಯಾತ್ರಿಗಳನ್ನು ಮತ್ತು ಅವರ ಸಂಪರ್ಕಿತರನ್ನು ಪತ್ತೆ ಹಚ್ಚಬೇಕಿತ್ತಲ್ಲವೇ? ಅವರೇ ಈಗ ಸುಪರ್-ಸ್ಪ್ರೆಡರ್ಸ್ ಆಗುತ್ತಿದ್ದಾರಾ? ಬೆಂಗಳೂರಿನ ಘಟನೆ ಇದಕ್ಕೆ ಸಾಕ್ಷಿಯಾಗಿದೆ ಎಲ್ಲವೇ?

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಊರಿಗೆಲ್ಲ ಬುದ್ಧಿ ಹೇಳೋರು ಕೋವಿಡ್ ನಿಯಮ ಕಡೆಗಣಿಸಿದ ಕತೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...