(ಇದು ಕಳೆದ ವಾರದ ನ್ಯಾಯಪಥದಲ್ಲಿ ಪ್ರಕಟವಾದ ಲೇಖನ)

ಕೊರೊನಾ ವೈರಾಣು ವೇಷಾಂತರಿಸುತ್ತ ಮಾರಣ ಹೋಮ ಮಾಡುತ್ತ ಜನರನ್ನು ಕಂಗಾಲಾಗಿಸುತ್ತಿದೆ; ಮತ್ತೊಂದೆಡೆ ಈ ರೋಗವನ್ನು ನಿಯಂತ್ರಿಸುವ ಸರ್ಕಾರಿ ನಿಯಮಗಳ ಹೆಸರಲ್ಲಿ ಅಧಿಕಾರಿಗಳು ಅಮಾಯಕರ ಗೋಳು ಹುಯ್ದುಕೊಳ್ಳುತ್ತಿದ್ದಾರೆ. ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಜನಸಂದಣಿ ಸೇರದಿರುವುದು, ಸಭೆ-ಸಮಾರಂಭ, ಮದುವೆ-ಮೆಹಂದಿ ಬೇಕಾಬಿಟ್ಟಿಯಾಗಿ ನಡೆಸದಂತ ನಿಯಮಾವಳಿಗಳನ್ನೇನೋ ಆಡಳಿತಗಾರರು ಘೋಷಿಸಿದ್ದಾರೆ. ಆದರೆ ಈ ನಿಯಮಗಳನ್ನು ಪ್ರಾಮಾಣಿಕವಾಗಿ ಪಾಲಿಸಲು ಪ್ರಯತ್ನಿಸುವ ಜನಸಾಮಾನ್ಯರಿಗೆ ತಿಳಿಹೇಳಿ, ತಾವೂ ನಿಯಮಗಳನ್ನು ಪಾಲಿಸಿ ಮಾದರಿಯಾಗಬೇಕಾದ ಆಯಕಟ್ಟಿನ ಅಧಿಕಾರಸ್ಥರೇ ಬುದ್ಧಿಪೂರ್ವಕವಾಗಿ ನಿಯಮ ಧಿಕ್ಕರಿಸುತ್ತ ಜನಜಂಗುಳಿಯಲ್ಲಿ ಮೈಮರೆಯುತ್ತಿರುವುದು ವಿಪರ್ಯಾಸವೇ ಸರಿ.

ಲಾಕ್‌ಡೌನ್, ಸೆಮಿಲಾಕ್‌ಡೌನ್, ಕರ್ಫ್ಯೂ, ಸೆಕ್ಷನ್-144ನಂಥ ನಿಯಮಗಳನ್ನು ಜಾರಿಗೊಳಿಸುವಾಗ ಅಧಿಕಾರಿಗಳು ಕಿರಾತಕರಂತೆ ಕಾಡುತ್ತಿರುವುದು ಘೋರವಾಗಿದೆ! ನಿಯಮಾವಳಿ ತರುವ ಮೊದಲು ಅಗತ್ಯ ಸಿದ್ಧತೆ-ಬದ್ಧತೆಗಳಿಲ್ಲದೆ ಪಾಪದ ಮಂದಿಗೆ ಚಿತ್ರಹಿಂಸೆ ಕೊಡಲಾಗುತ್ತಿದೆ. ಹಾಲು-ತರಕಾರಿ ದಿನಸಿಯಂಥ ಜೀವನಾವಶ್ಯಕ ವಸ್ತು ತರಲೆಂದು ಹೊರಬರುವವರನ್ನು ಜೀವರಕ್ಷಕ ಔಷಧ ಖರೀದಿಗೆಂದು ಮೆಡಿಕಲ್ ಶಾಪ್‌ಗೆ ಹೋಗುವವರನ್ನು ಬಿಡದೆ ಬೆನ್ನಟ್ಟಿ ಬಡಿಯುವ ಅತಿರೇಕದ ವರ್ತನೆಯನ್ನು ಪೊಲೀಸರು ಮತ್ತು ಜಿಲ್ಲಾಡಳಿತ ನಿರ್ದಯವಾಗಿ ಪ್ರದರ್ಶಿಸುತ್ತಿದ್ದಾರೆ ಎಂಬ ಸಿಟ್ಟು ಜನಸಮೂಹದಲ್ಲಿ ಹೆಪ್ಪುಗಟ್ಟಿದೆ. ಅಧಿಕಾರಸ್ಥರು, ಅವರ ನೆಂಟರು-ಇಷ್ಟರಿಗೆ ಈ ಕೋವಿಡ್ ಕಾನೂನು ಅನ್ವಯವಾಗುತ್ತಿಲ್ಲ ಎಂಬುದು ದಿನಬೆಳಗಾದರೆ ಜರುಗುವ “ವಿವಿಐಪಿ ಪ್ರಹಸನಗಳಿಂದ” ಸಾಬೀತಾಗಿಹೋಗಿದೆ!

ದಿನಕ್ಕೊಂದರಂತೆ ಬದಲಾಗುವ ಕೋವಿಡ್ ಕಾಯ್ದೆಗಳು ಜನಸಾಮಾನ್ಯರ ಹೈರಾಣಾಗಿಸಿ ಬಿಟ್ಟಿದೆ; ಅಪ್ರಜ್ಞಾಪೂರ್ವಕ ಸಣ್ಣ ಪ್ರಮಾದವಾದರೂ ದೊಡ್ಡ “ದಂಡ” ಪ್ರಯೋಗವಾಗುತ್ತಿದೆ. ಹಾಗಂತ ಮಂತ್ರಿ-ಮಾಂಡಲೀಕರು ಮತ್ತವರ ಅಧಿಕಾರಿ ಪಂಡಿತರು ರಾಜಾರೋಷವಾಗಿ ಕಾನೂನು ಮುರಿದು ದಕ್ಕಿಸಿಕೊಳ್ಳುತ್ತಿದ್ದಾರೆ. ಗೊಂದಲದಲ್ಲಿರುವ ಕಾನೂನು ಪಾಲಕರೇ ಎಡಬಿಡಂಗಿಗಳಾಗಿದ್ದಾರೆ. ಕಳೆದ ವಾರ ಕರಾವಳಿಯ ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ನಡೆದ ಎರಡು ಮೆಹಂದಿ-ಮದುವೆ ಸಡಗರದಲ್ಲಿ ವಿಧಾನಸಭೆ ಅಧ್ಯಕ್ಷ ಸಾಹೇಬರು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾವ ಮುಲಾಜು-ಮುಜುಗರವಿಲ್ಲದೆ ಭಾಗವಹಿಸಿರುವುದು ಕೋವಿಡ್ ಕಾನೂನುಗಳನ್ನೆಲ್ಲ ಅಣಕಿಸಿರುವಂತಿದೆ!

ಕಳೆದ ಶನಿವಾರ ಉತ್ತರಕನ್ನಡದ ಸಿದ್ಧಾಪುರ ತಾಲ್ಲೂಕಿನ ಮನಮನೆ ಎಂಬಲ್ಲಿ ಮಾಜಿ ಜಿಪಂ ಸದಸ್ಯರೊಬ್ಬರ ಮಗಳ ಮದುವೆ ನಡೆದಿತ್ತು. ಮಾಜಿ ತಾಪಂ ಅಧ್ಯಕ್ಷೆಯ ಮಗ ವರ. ಇದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಕ್ಷೇತ್ರ ಶಿರಸಿಯ ಹಳ್ಳಿ. ಕಾಗೇರಿ ಅವರು ಹೇಳಿಕೇಳಿ ಸಂಘಪರಿವಾರದ ಕುಂಕುಮಧಾರಿ ದೇಶಭಕ್ತರು. ದೇಶದ ನೀತಿ ನಿಯಮ ಕಾನೂನುಗಳನ್ನು ಗುತ್ತಿಗೆ ಹಿಡಿದಂತೆ ವ್ಯಾಖ್ಯಾನಿಸಬಲ್ಲವರು. ಇಂಥ ಕಾಗೇರಿಯವರು ಸದರಿ ವಿವಾಹ ಸಮಾರಂಭದಲ್ಲಿ ಕೋವಿಡ್ ಕಾನೂನು ಕಡೆಗಣಿಸಿ ಕಾಣಿಸಿಕೊಂಡಿದ್ದರು! ಅದಕ್ಕಾಗಿ ಬೆಂಗಳೂರಿಂದಲೇ ಬಂದಿದ್ದರೆಂಬುದು ಸುದ್ದಿ.

ಕಾಗೇರಿ ಮಾಸ್ಕ್ ಹಾಕಿಕೊಳ್ಳದೆ ಜನರ ಮಧ್ಯೆ ಬೆರೆತಿದ್ದು ಆಕ್ಷೇಪಕ್ಕೆ ಕಾರಣವಾಗಿದೆ. ಕೊರೊನಾ ವೈರಾಣು ಹಾವಳಿ ಹೆಚ್ಚಾಗಿರುವ ಬೆಂಗಳೂರಿನಿಂದ ಬಂದಿದ್ದ ಕಾಗೇರಿಯವರು ಕನಿಷ್ಠ ಅಂತರವೂ ಕಾಯ್ದುಕೊಳ್ಳದೆ ಮದುಮಕ್ಕಳಿಗೆ ಅಂಟಿಕೊಂಡೇ ಹರಸಿದ್ದು, ಫೋಟೊ ಶೂಟ್‌ಗೆ ಫೋಸ್ ಕೊಟ್ಟಿದ್ದು ಜನಸಾಮಾನ್ಯರಲ್ಲಿ ಬೇಸರ ಮತ್ತು ಆತಂಕ ಮೂಡಿಸಿಬಿಟ್ಟಿದೆ. ಕೋವಿಡ್ ಕಾನೂನು ಅನುಷ್ಠಾನಗೊಳಿಸುವ ರಾಜಕಾರಣಿ-ಅಧಿಕಾರಿಗಳ ಢೋಂಗಿತನ ಮನದಟ್ಟು ಮಾಡಿದೆ. ತಾನು ಫೋಟೊಗಷ್ಟೇ ಮಾಸ್ಕ್ ತೆಗೆದಿದ್ದೆನೆಂದು ಕಾಗೇರಿ ಸಮಜಾಯಿಷಿ ಕೊಡುತ್ತಿದ್ದಾರೆ. ಹಾಗೆ ಮಾಸ್ಕ್ ತೆಗೆಯುವುದೇ ಅಪರಾಧವಲ್ಲವಾ ಎಂಬುದು ಜನರ ಪ್ರಶ್ನೆ. ನೀರು ಕುಡಿಯಲೆಂದೋ, ಅಥವಾ ಇನ್ಯಾವುದೋ ಕಾರಣಕ್ಕೆ ಒಂದು ಕ್ಷಣ ಮಾಸ್ಕ್ ಸರಿಸಿದ್ದಕ್ಕೆ ಎಷ್ಟು ಜನ ದಂಡ ಹಾಕಿಸಿಕೊಂಡಿಲ್ಲ?

ಇದಕ್ಕೂ ಒಂದು ದಿನ ಮೊದಲು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೆಚ್ಚುವರಿ ಎಸ್‌ಪಿ ಕುಮಾರಚಂದ್ರರ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಕೋವಿಡ್-19ರ ಅಷ್ಟೂ ನಿಯಮ ಧಿಕ್ಕರಿಸಿ ಪಾಲ್ಗೊಂಡಿದ್ದು ನೆಟ್ಟಿಗರು ಮತ್ತು ಸಾಮಾನ್ಯ ಜನರಲ್ಲಿ ಆಕ್ರೋಶ, ಸಿಟ್ಟು ಮೂಡಿಸಿದೆ! ಸಾಮಾಜಿಕ ಜಾಲತಾಣದಲ್ಲಿ “#ಶೇಮ್‌ಆನ್‌ಸಿಸ್ಟಮ್ #ಡಿಸಿಉಡುಪಿ” ಎಂಬ ಹ್ಯಾಶ್ ಟ್ಯಾಗ್ ಅಭಿಯಾನದಲ್ಲಿ ಡಿಸಿ ಸಾಹೇಬರು ಒಂದೇಸಮನೆ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

ಅಸಹಾಯಕ ಜನಸಾಮಾನ್ಯರ ಮೇಲೆ ದಾಳಿ ಮಾಡಿ ಕೋವಿಡ್ “ದಂಡ” ಕಠೋರವಾಗಿ ಚಲಾಯಿಸಿ, ಕಾನೂನು ನಿಷ್ಠ ಅಧಿಕಾರಿ ಗೆಟಪ್‌ನಲ್ಲಿ ಓಡಾಡುವ ಡಿಸಿ ಜಗದೀಶ್ ತಾವೆ ಆ ನಿಯಮಗಳನ್ನು ಮನಸೋ ಇಚ್ಛೆ ಮುರಿದು ಸಂಭ್ರಮಿಸಿದ್ದು ಕರಾವಳಿಯಲ್ಲಿ ಭರ್ಜರಿ “ವೈರಲ್ ಸುದ್ದಿಯಾಗಿದೆ.

ಉಡುಪಿ ಹೆಚ್ಚುವರಿ ಎಸ್‌ಪಿ ಕುಮಾರಚಂದ್ರರ ಮಗಳ ಮದುವೆಯ ಮುಂಚಿನ ಮೆಹಂದಿ ಕಾರ್ಯಕ್ರಮ 23-4-2021 ರ ರಾತ್ರಿ ಅವರ ಅಧಿಕೃತ ನಿವಾಸದಲ್ಲಿ ಆಯೋಜಿಸಲಾಗಿತ್ತು. ಆ ಅದ್ಧೂರಿ ಸಮಾರಂಭಕ್ಕೆ ನೂರಾರು ಮಂದಿ ಬಂದಿದ್ದರು. ಮದುಮಗಳನ್ನು ನೃತ್ಯ ತಂಡ ಮೆರವಣಿಗೆಯಲ್ಲಿ ಕರೆತಂದಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಥ ಜನದಟ್ಟಣೆ ಸಮಾರಂಭಕ್ಕೆ ಜಿಲ್ಲಾಧಿಕಾರಿ ಜಗದೀಶ್ ಮಡದಿಯೊಂದಿಗೆ ಬಂದಿದ್ದರು! ಡಿಸಿ, ಎಸ್‌ಪಿ ಅವರ ಧರ್ಮ ಪತ್ನಿಯರು ಮತ್ತು ಮದುಮಗಳು ಹೀಗೆ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ ಮತ್ತು ಸಾಮಾಜಿಕ ಅಂತರವೂ ಇರಲಿಲ್ಲ. ಮದುಮಗಳನ್ನು ನಿಕಟವಾಗಿ ನಿಂತು ಹಾರೈಸಿದ್ದಾರೆ. ಫೋಟೊ ಶೂಟ್‌ಗೆ ನಗುನಗುತ್ತಲೇ ಡಿಸಿ ಪರಿವಾರ ಪೋಸು ನೀಡಿದೆ!

ಕೋವಿಡ್-19 ಮಾರ್ಗಸೂಚಿ ಪ್ರಕಾರ ಮದುವೆಗಳಲ್ಲಿ 50 ಮಂದಿಗಿಂತ ಹೆಚ್ಚಿನವರಿಗೆ ಅವಕಾಶವಿಲ್ಲ. ಇಂಥ ಮದುವೆಗೂ ಮೊದಲು ತಾಲ್ಲೂಕು ಕಚೇರಿಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಹಾಗಂತ ಮಾರ್ಗಸೂಚಿ ಪಟ್ಟಿಯಲ್ಲಿ ಮೆಹಂದಿ ಫಂಕ್ಷನ್ ಉಲ್ಲೇಖವಿಲ್ಲ. ಅಂದರೆ ಅನುಮತಿಯಿಲ್ಲದ ಮೆಹಂದಿ ಕಾರ್ಯಕ್ರಮ ತಡೆಯಬೇಕಿದ್ದ, ಕಾನೂನು ಕ್ರಮ ಕೈಗೊಳ್ಳಬೇಕಿದ್ದ ಜಿಲ್ಲಾಧಿಕಾರಿ ತಾವೇ ಸಮಾರಂಭದಲ್ಲಿ ಭಾಗಿಯಾಗಿದ್ದು ಅಕ್ಷಮ್ಯ ಅಪರಾಧವೆಂದು ಜನ ಆಡಿಕೊಳ್ಳುತ್ತಿದ್ದಾರೆ.

“ಪೊಲೀಸ್ ಅಧಿಕಾರಿಯೊಬ್ಬರ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಸುರಕ್ಷಿತ ಅಂತರವೂ ಇಲ್ಲದೆ, ಮಾಸ್ಕ್ ಹಾಕದೆ ನಗುತ್ತ ನಿಂತಿರುವ ಪರಿ ನೋಡಿ ಕಾನೂನು, ಶಿಕ್ಷೆ, ಬೈಗುಳ, ಒದೆ ಎಲ್ಲ ಸಾಮಾನ್ಯ ಜನರಿಗೆ ಮಾತ್ರ ಅಲ್ಲವೆ, ಜಿಲ್ಲಾಧಿಕಾರಿಯೇ? ಉಡುಪಿ ಡಿಸಿ ಜಗದೀಶ್, ಶೇಮ್ ಆನ್ ಯು. ಅಂದಹಾಗೆ ಈ ಮದುವೆಗೆ ಹೋಗುವ ಅತಿಥಿಗಳು, ಆಧಾರ್ ಕಾರ್ಡ್ ಪರೀಕ್ಷಿಸಿ ಪಡಕೊಂಡ ಪಾಸ್ ಪಟ್ಟಿಯಲ್ಲಿ ಜಿಲ್ಲಾಧಿಕಾರಿ ಹೆಸರಿತ್ತೇ ಉತ್ತರಿಸಲೇಬೇಕು ಡಿಸಿ ಸಾಹೇಬರು” ಎಂಬ ಚರ್ಚೆ ಫೇಸ್‌ಬುಕ್‌ನಲ್ಲಿ ನಡೆಯುತ್ತಿದೆ.

“ಅದೆಷ್ಟೋ ಬಡ ಕುಟುಂಬಗಳ ಮನೇಲಿ ಇಂದು ನಡೆಯಬೇಕಿದ್ದ ಮೆಹಂದಿ-ಮದುವೆಗಳು ನಿಂತಿವೆ. ಕೇವಲ ಬಡವರ ಮೇಲೆ ಅಪ್ಲೈ ಆಗುವ ಕಾನೂನಿಗೆ ಹೆದರಿ ಅವು ನಿಂತಿರಬಹುದು. ಆದರೆ ಉಡುಪಿ ಡಿಸಿ ಮಾತ್ರ ಮೆಹಂದಿಗೆ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡದೆ ಭಾಗವಹಿಸಿದ್ದು ಹೀಗೆ. ಇದು ನಮ್ಮ ವ್ಯವಸ್ಥೆ” ಎಂಬ ಟೀಕೆಗಳು ಫೇಸ್‌ಬುಕ್ ಅಭಿಯಾನದಲ್ಲಿ ವ್ಯಕ್ತವಾಗುತ್ತಿವೆ. ಸ್ವತಃ ತಾವೇ ವಿಧಿಸಿದ ನಿಯಮಗಳನ್ನು ಡಿಸಿ ಜಗದೀಶ್ ಉಲ್ಲಂಘಿಸಿದ್ದಾರೆ. ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಮಾತ್ರ ತಪ್ಪಿತಸ್ಥ ಡಿಸಿ ಜಗದೀಶ್ ಪರ ವಕಾಲತ್ತು ಮಾಡುತ್ತಿರುವುದು ಜನರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.

ಸದರಿ ಮೆಹಂದಿ ಕಾರ್ಯಕ್ರಮಕ್ಕೂ ಮೂರ್ನಾಲ್ಕು ದಿನ ಮೊದಲು ಇದೇ ಡಿಸಿಯವರು, ಕೋವಿಡ್ ನಿಯಮ ಉಲ್ಲಂಘಿಸಿ ಜನ ತುಂಬಿದ್ದಾರೆಂದು ಆರೋಪಿಸಿ, ನಡುರಸ್ತೆಯಲ್ಲೇ ಬಸ್ ಒಂದರ ಮೇಲೆ ರೇಡು ಮಾಡಿದ ಘಟನೆ ನಡೆದಿತ್ತು. ಉಡುಪಿ ಹತ್ತಿರದ ಸಂತೆಕಟ್ಟೆ ಎಂಬಲ್ಲಿ ಬಸ್ ಅಡ್ಡಹಾಕಿದ್ದ ಡಿಸಿ ಜಗದೀಶ್ ಅದರಲ್ಲಿ ನಿಂತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರನ್ನು ಕೆಳಗಿಳಿಸಿದ್ದರು. ಈ ವಿದಾರ್ಥಿನಿಯರು ತಾವು ಪರೀಕ್ಷೆಗೆ ಹೋಗುತ್ತಿದ್ದೇವೆ ನಮಗೆ ಬೇರೆ ಖಾಲಿ ಬಸ್‌ಗಳು ಸಿಗುವುದಿಲ್ಲ, ನಾವೀಗ ನಡುಬೀದಿಯಲ್ಲಿ ಹೀಗೆ ನಿಂತರೆ ಪರೀಕ್ಷೆ ಸಮಯ ಮೀರುತ್ತದೆಂದು ಪರಿಪರಿಯಾಗಿ ಬೇಡಿಕೊಂಡರೂ ಡಿಸಿ ಜಗದೀಶ್ ಅವರ ಕಲ್ಲು ಹೃದಯ ಕರಗಿರಲಿಲ್ಲ!

ತಾವು ಕಷ್ಟಪಟ್ಟು ಓದಿದ್ದು ವ್ಯರ್ಥವಾಗುತ್ತದೆಂದು ವಿದ್ಯಾರ್ಥಿನಿಯರು ಪರಿಪರಿಯಾಗಿ ತಿಳಿಸಿಹೇಳಿದರೂ, ಇದ್ಯಾವುದೂ ಅರ್ಥವಾಗದಂತೆ ವರ್ತಿಸಿದ ಡಿಸಿ “ನೀವು ಎಜ್ಯುಕೇಟೆಡ್‌ಗಳಾ? ಶಾಲೆ-ಕಾಲೇಜಿಗೆ ಹೋಗೋರು… ನಿಮಗೆ ಪ್ರಜ್ಞೆ ಬೇಡವಾ” ಎಂದು ನಿಯಮಾವಳಿಗಳನ್ನು ದರ್ಪದಿಂದ ಬೋಧಿಸಿದ್ದರು. ಮೆಹಂದಿ ಕಾರ್ಯಕ್ರಮದಲ್ಲಿ ಈ ನಿಯಮಾವಳಿಗಳನ್ನೆಲ್ಲಾ ಗಾಳಿಗೆ ತೂರಲಾಗಿತ್ತು.
ಕೋವಿಡ್ ನಿಯಮಾವಳಿಗಳನ್ನು ಹೇರುವ ಆದರೆ ತಾವೇ ಪಾಲಿಸದ ಹುಚ್ಚಾಟಕ್ಕೆ ಕೊನೆಯೇ ಇಲ್ಲವೇ?

ಶುದ್ಧೋದನ

LEAVE A REPLY

Please enter your comment!
Please enter your name here