Homeಅಂಕಣಗಳುದ್ವೇಷ-ಅಸೂಯೆ ಮತ್ತು ಹಿಂಸೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡದಿರೋಣ

ದ್ವೇಷ-ಅಸೂಯೆ ಮತ್ತು ಹಿಂಸೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡದಿರೋಣ

- Advertisement -
- Advertisement -

ಏಪ್ರಿಲ್ ಮಧ್ಯಭಾಗದಲ್ಲಿ ಉಲ್ಬಣಗೊಂಡ ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆ ಒಂದು ತಿಂಗಳಾದರೂ ಇನ್ನೂ ಏರುಗತಿಯಲ್ಲಿಯೇ ಇದೆ. ಇಂತಹ ಸಮಯದಲ್ಲಿ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯದ ನಡುವೆಯೂ, ಸಾಮಾನ್ಯ ಜನರೇ ಒಗ್ಗಟ್ಟಾಗಿ ಹಲವು ರೀತಿಯ ಸೇವೆಗಳಲ್ಲಿ ನಿರತರಾಗಿದ್ದಾರೆ. ಅದು ಕೋವಿಡ್ ತುರ್ತು ರೋಗಿಗಳಿಗೆ ಬೆಡ್ ಹುಡುಕುವುದು ಇರಲಿ, ಆಕ್ಸಿಜನ್ ಪೂರೈಕೆ ಮಾಡುವುದಿರಲಿ, ತಾತ್ಕಾಲಿಕವಾಗಿ ಫೋನ್ ಕಂಟ್ರೋಲ್ ರೂಮ್‌ಗಳನ್ನು ಕಟ್ಟಿಕೊಂಡು ಆತಂಕಿತರ ಜೊತೆ ಸಮಾಲೋಚನೆ ನಡೆಸುವುದಾಗಲಿ, ಅವರ ನೆರವಿಗೆ ಮುಂದೇನು ಮಾಡಬೇಕೆಂದು ಗೈಡ್ಡ್ ಮಾಡುತ್ತಿರುವ ಕೆಲಸವಾಗಲೀ, ಸೋಂಕಿತರ ಮನೆಗೆ ಆಹಾರ-ಔಷಧಿಗಳನ್ನು ಕೊಂಡು ಕೊಡುವುದಿರಲಿ – ಹೀಗೆ ನಾನಾ ಕೆಲಸಗಳನ್ನು ಸ್ವಯಂಪ್ರೇರಣೆಯಿಂದ ಮಾಡುತ್ತಾ, ಬಿಡುವಿಲ್ಲದ ಸಮಯದಲ್ಲಿ ಉಸಿರು ಬಿಗಿಹಿಡಿದು ಉಸಿರಾಟದ ತೊಂದರೆಯನ್ನು ನಿವಾರಿಸುವುದಕ್ಕೆ, ನಿರ್ವಹಿಸುವುದಕ್ಕೆ ಪ್ರಯತ್ನಿಸುತ್ತಿದ್ದರೆ, ತೇಜಸ್ವಿ ಸೂರ್ಯ ಎಂಬ ಸಂಸದ ಮತ್ತು ಆತನ ಸಹಚರ ಶಾಸಕರಾದ ಸತೀಶ್ ರೆಡ್ಡಿ (ಬೊಮ್ಮನಹಳ್ಳಿ), ರವಿ ಸುಬ್ರಮಣ್ಯ (ಬಸವನಗುಡಿ), ಉದಯ್ ಗರುಡಾಚಾರ್ (ಚಿಕ್ಕಪೇಟೆ) ಇದೇ ಸಮಯದಲ್ಲಿ ಕೋಮುದ್ವೇಷ ಹರಡುವ ತಮ್ಮ ಪಕ್ಷದ ಅಜೆಂಡಾವನ್ನು ಇಂಪ್ಲಿಮೆಂಟ್ ಮಾಡಲು ಹಗಲಿರುಳು ಶ್ರಮಿಸುತ್ತಿದ್ದರು.

ಕೋವಿಡ್ ಎರಡನೆ ಅಲೆ ದೊಡ್ಡಮಟ್ಟದಲ್ಲಿ ಅಪ್ಪಳಿಸುವುದಕ್ಕೂ ಮುಂಚೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳಲ್ಲಿ ವಿವಾದಾತ್ಮಕ-ಪ್ರಚೋದನಾಕಾರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಬೆಂಗಳೂರು ದಕ್ಷಿಣದ – ಮೊದಲ ಸಲದ ಸಂಸದ, ಕೊರೊನಾ ಅಲೆ ಪತ್ರಿಕೆಗಳಲ್ಲಿ ಸದ್ದು ಮಾಡುತ್ತಿದ್ದಂತೆ ಜಾಣತನದಿಂದ ಕಾಣೆಯಾಗಿದ್ದರು. ಇದರ ಬಗ್ಗೆ ’ದ ಪ್ರಿಂಟ್’ ಒಂದು ವರದಿ ಕೂಡ ಮಾಡಿತ್ತು. ನಂತರ ಟ್ವಿಟ್ಟರ್‌ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಈತ, ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಮುನ್ನಾದಿನ (ಮೇ 1) ಟ್ವೀಟ್ ಮಾಡಿ “ನಾಳೆ ಬಹಳ ಮುಖ್ಯವಾದ ದಿನ. ಪಶ್ಚಿಮ ಬಂಗಾಳದಲ್ಲಿ ಹೊಸ ಅಧ್ಯಾಯ ಶುರುವಾಗಲಿದೆ ಮತ್ತು ಅಭಿವೃದ್ಧಿಯ ಹೊಸಯುಗ ಆರಂಭವಾಗಲಿದೆ ಮತ್ತು ನಾಗರಿಕತೆಯು ಮರುಹುಟ್ಟು ಪಡೆಯಲಿದೆ” ಎಂಬಿತ್ಯಾದಿಯಾಗಿ ಅಹಂಕಾರದ ಟ್ವೀಟ್ ಮಾಡಿದಾಗಲೇ ಬಹುತೇಕರಿಗೆ ತಿಳಿದಿತ್ತು ಈತನ ಬಂಡವಾಳ. ಇಡೀ ರಾಜ್ಯ ಸಂಕಷ್ಟಕ್ಕೆ ಒಳಗಾಗಿ ಬೆಡ್ ಮತ್ತು ಆಕ್ಸಿಜನ್‌ಗೆ ಪರದಾಡುತ್ತಿದ್ದರೆ ಈತ ತನ್ನ ’ತಿರುಕನ ಕನಸಿನಿಂದ’ ಪುಳಕಿತನಾಗಿದ್ದ.

ಯಾವಾಗ ಪಶ್ಚಿಮ ಬಂಗಾಳದ ಜನರು ದ್ವೇಷದ, ಕೋಮು ಹಗೆತನದ ಅಜೆಂಡಾವನ್ನು ತಿರಸ್ಕರಿಸಿ ತೃಣಮೂಲ ಕಾಂಗ್ರೆಸ್‌ಅನ್ನು ಮೂರನೇ ಬಾರಿಗೆ ಆರಿಸಿ ಪ್ರತಿಷ್ಠಾಪಿಸಿದರೋ, ಇಲ್ಲಿ ’ತಿರುಕನ ಕನಸು’ ಕಾಣುತ್ತಿದ್ದ ಹಲವರಿಗೆ ಆಘಾತವಾದಂತಾಗಿ ಏನೇನೋ ಕನವರಿಸುವಂತಾದರು. ಕೋಮು ವೈರಸ್ ಕೂಡ ಕೊರೊನಾ ವೈರಸ್‌ನಷ್ಟೇ ಅಥವಾ ಅದಕ್ಕಿಂತಲೂ ಅಪಾಯಾಕಾರಿಯದದ್ದು. ಪ್ರಕಾಶ್ ಬೆಳವಾಡಿ ಎಂಬ ರಂಗನಿರ್ದೇಶಕ ಮತ್ತು ನಟ, ಬೆಂಗಾಳದಲ್ಲಿ ಕೋಮು ಗಲಭೆಗೆ ಕರೆ ಕೊಟ್ಟು ಫೇಸ್ಬುಕ್‌ನಲ್ಲಿ ಬರೆದು, ಜನರು ಅದನ್ನು ಪ್ರಶ್ನಿಸಲು ಪ್ರಾರಂಭಿಸಿದಾಗ ತನ್ನ ಅಕೌಂಟ್‌ಅನ್ನೆ ಡಿಆಕ್ಟಿವೇಟ್ ಮಾಡಿಕೊಂಡರು. ಇನ್ನು ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿರುವ ತೇಜಸ್ವಿ ಸೂರ್ಯ, ಬಂಗಾಳದಲ್ಲಿ ತನ್ನ ಪಕ್ಷದ ಅಜೆಂಡಾಕ್ಕೆ ಉಂಟಾದ ಸೋಲಿನ ಹತಾಶೆಯನ್ನು, ಕನ್ನಡನಾಡಿನಲ್ಲಿ ಕೋಮುದ್ವೇಷಕ್ಕೆ ತಿರುಗಿಸಲು ಪ್ರಯತ್ನಿಸಿದ್ದು, ಕೊರೊನಾ ಸಂಕಷ್ಟ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಕನ್ನಡನಾಡಿಗೆ ಬಗೆಯಬಹುದಾದ ದ್ರೋಹವಲ್ಲದೆ ಮತ್ತೇನೂ ಅಲ್ಲ.

PC : The Indian Express

ಮೇ 4ರಂದು ಏಕಾಏಕಿ ಬಿಬಿಎಂಪಿ ಕೋವಿಡ್ ವಾರ್ ರೂಮಿಗೆ ನಡೆದ ಸೂರ್ಯ, ತನ್ನ ಕೈಯಲ್ಲಿ ಹಿಡಿದಿದ್ದ 16 ಜನರ ಪಟ್ಟಿಯನ್ನು ಓದುತ್ತಾ ಏರುದನಿಯಲ್ಲಿ ಆ ಪಟ್ಟಿಯಲ್ಲಿರುವವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದು ಹೇಗೆ ಎಂಬಿತ್ಯಾದಿಯಾಗಿ ಕಿರುಚಾಡುತ್ತಿದ್ದರೆ, ಅವನ ಬಾಲಂಗೋಚಿ ಶಾಸಕರಲ್ಲಿ ಒಬ್ಬರು ’ಮದರಸ’ದಿಂದ ಕರೆದುಕೊಂಡಿರುವುದೇ ಎಂದು ಹೇಳಿ ತಮ್ಮ ಕೊಳಕುತನವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದರು. ಇನ್ನು ಬಿಬಿಎಂಪಿಯವರು ಈ ಸಂಸದ ಮತ್ತು ಶಾಸಕರ ನಡೆಯನ್ನು ಪ್ರಶ್ನಿಸಿ ಅವರ ವಿರುದ್ಧ ದೂರು ನೀಡುವುದನ್ನು ಬಿಟ್ಟು ಆತ ಓದಿದ 16 ಜನರ ಪಟ್ಟಿಗೆ ತಾವೂ ಒಬ್ಬನ ಹೆಸರನ್ನು ಸೇರಿಸಿ ಅವರು ಮಾಡುತ್ತಿದ್ದ ತಾತ್ಕಾಲಿಕ ಕೆಲಸದಿಂದ ತಾತ್ಕಾಲಿಕವಾಗಿ ವಜಾ ಮಾಡಿದರು. (ಮೇ 10ರಂದು ಅವರೆಲ್ಲರನ್ನೂ ಮತ್ತೆ ವಾಪಸ್ ಕೆಲಸಕ್ಕೆ ಕರೆಸಿಕೊಂಡಿರುವುದಾಗಿ ತಿಳಿದುಬಂದಿದೆ). ಆದರೆ ಬಿಬಿಎಂಪಿಯ ತಿಕ್ಕಲುತನಕ್ಕೆ ಉತ್ತರ ನೀಡುವವರು ಯಾರೂ ಇರಲಿಲ್ಲ!

ಇದು ಬೇರೆ ಸಮಯದಲ್ಲಾದರೇ ಲಿಂಚಿಂಗ್-ಗಲಭೆಗಳಿಗೆ ಕಾರಣವಾಗುತ್ತಿತ್ತೇನೋ. ಆತ ಪಟ್ಟಿ ಓದಿ ಮುಗಿಸುವಷ್ಟ್ಟರಲ್ಲೆ 16 ಜನರ ಆ ಮುಗ್ಧ ಕೆಲಸಗಾರರ ಹೆಸರುಗಳನ್ನು ಭಯೋತ್ಪಾದಕರು ಎಂದು ಬಿಂಬಿಸುವ ವಾಟ್ಸ್‌ಆಪ್ ಮೆಸೇಜ್‌ಗಳನ್ನು ’ಎಲೀಟ್’ ಜನರು ಹಬ್ಬಲು ಪ್ರಾರಂಭಿಸಿದ್ದರು. ಅಂದರೆ ಈ ಕೆಲಸದಲ್ಲಿ ಬಿಜೆಪಿ ಐಟಿ ಸೆಲ್ ಕೂಡ ಭಾಗಿಯಾಗಿ, ಇದು ಪೂರ್ವನಿಯೋಜಿತವಾದ ಕೆಲಸವಾಗಿತ್ತು ಎಂದು ಮೇಲ್ನೋಟಕ್ಕೇ ತಿಳಿಯುತ್ತದೆ.

ನಾನು ಹೆಚ್ಚೇನೂ ಕ್ರಿಯಾಶೀಲವಾಗಿಲ್ಲದೆ, ಒಂದು ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಇದ್ದೇನೆ. ಅದು ಹೈಸ್ಕೂಲಿನ ಗೆಳೆಯರ ಗುಂಪು. ಅಲ್ಲಿಯೂ ಈ ಮೆಸೇಜು ಬಂದುಬಿತ್ತು. ಅಲ್ಲಿದ್ದ ಪತ್ರಕರ್ತೆಯೊಬ್ಬರು ಇದು ಯಾರದೋ ಒಬ್ಬನ ಅಜೆಂಡಾ ಎಂದು ನಿರಾಕರಿಸಿದ್ದು, ಹಾಗೂ ಸರ್ಕಾರಿ ಸೇವೆಯಲ್ಲಿ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಶ್ರಮಿಸುತ್ತಿರುವ ಗೆಳೆಯನೊಬ್ಬ ಇದು ಸುಳ್ಳೆಂದು ಪ್ರತಿಕ್ರಿಯಿಸಿದ್ದು ಬಿಟ್ಟರೆ ಉಳಿದ ಅರವತ್ತು ಚಿಲ್ಲರೆ ಜನರು ಮೌನವಾಗಿಯೇ ಇದ್ದರು. ಆ ಮೆಸೇಜ್ ಕಳುಹಿಸಿದವ, ತಾನು ಮಾಡಿದ ತಪ್ಪು ಅರಿವಾಯಿತೆಂದೋ, ಅದನ್ನು ತಿದ್ದಿಕೊಂಡೆನೆಂದೋ ತಿಳಿಸುವ ಗೋಜಿಗೆ ಹೋಗಲೇ ಇಲ್ಲ. ಅಲ್ಪಸಂಖ್ಯಾತ ಕೋಮಿನ ವಿರುದ್ಧದ ದ್ವೇಷದ ಭಾವನೆಯಲ್ಲಿ ನಾವು ಅಷ್ಟು ಜಡ್ಡುಗಟ್ಟಿಹೋಗಿದ್ದೇವೆ. ಹಲವು ಪೀಳಿಗೆಗಳಿಂದ ಮುಸ್ಲಿಮ್ ಮತ್ತು ತಳಸಮುದಾಯಗಳ ವಿರುದ್ಧ ದ್ವೇಷ, ಅವರನ್ನು ಅನ್ಯವಾಗಿಸುವ ಸುಳ್ಳು ಕಂತೆಗಳ ಪುರಾಣಗಳು ಬಳುವಳಿಯಾಗಿ ಹಸ್ತಾಂತರವಾಗುತ್ತಲೇ ಇವೆ.

ಇಷ್ಟೆಲ್ಲಾ ನಡೆದರೂ, ಬಿಜೆಪಿ ತಂಡದ ದ್ವೇಷಪೂರಿತ ಪ್ರಚೋದನೆಗೆ ಒಳಗಾಗಲು, ಬಹುಷಃ ವಿಷಪೂರಿತ ಸಿದ್ಧಾಂತಕ್ಕೆ ಇಂಡಾಕ್ಟರನೇಟ್ ಆಗಿರುವ ಜನಕ್ಕೂ ಈ ಹೊತ್ತಿನಲ್ಲಿ ಪುರುಸೊತ್ತು ಇರಲಿಲ್ಲ. ಅವರಲ್ಲೂ ಬಹಳಷ್ಟು ಜನ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಸರಿಯಾದ ಸಮಯಕ್ಕೆ ವೈದ್ಯಕೀಯ ನೆರವು ಸಿಕ್ಕೆದೆ ಶೋಕತಪ್ತರಾಗಿ ನೋವಿನಲ್ಲಿ ಇದ್ದರೆ ಇನ್ನಷ್ಟು ಜನ ತಮ್ಮ ಕೈಲಾದಷ್ಟು ನೆರವು ನೀಡಲು ಒದ್ದಾಡುತ್ತಿದ್ದರು.

ತಮ್ಮ ಬಗ್ಗೆ ಮೇಲರಿಮೆಯ ಆದರೆ ಮುಸ್ಲಿಮರು, ಇತರ ಅಲ್ಪಸಂಖ್ಯಾತ ಮತ್ತು ತಳಸಮುದಾಯದ ಜನರ ಬಗೆಗಿನ ದ್ವೇಷ ಕಾರುವ ಇಂತಹ ಅನಗತ್ಯ ಮತ್ತು ವಿನಾಶಕಾರಿ ಬಳುವಳಿಯನ್ನು ನಮ್ಮ ಮಕ್ಕಳಿಗೆ ವರ್ಗಾಯಿಸದೆ ಇರುವ ಬಗ್ಗೆ ಎಚ್ಚರಿಕೆಯ ನಡೆಯನ್ನು ನಾವಿಂದು ಇರಿಸಬೇಕಿದೆ. ಆ ಹಿನ್ನೆಲೆಯಲ್ಲಿ ನೋಡುವುದಾದರೆ ಸುಳ್ಳು ಸುಳ್ಳೇ ಕಿರುಚಿ ಕೋಮು ದ್ವೇಷಕ್ಕೆ ಆಸ್ಪದ ಮಾಡಿಕೊಡಲು ಹೋದ ತೇಜಸ್ವಿ ಸೂರ್ಯನ ಪಿತೂರಿಗೆ ಈ ಬಾರಿ ಹಿನ್ನಡೆಯಾಗಿರುವುದಂತೂ ಸತ್ಯ. ಸಾಮಾಜಿಕ ಜಾಲತಾಣಗಳಲ್ಲಿ ಜನ ಎಚ್ಚೆತ್ತುಕೊಂಡು ಸಂಸದನಿಗೆ ಜಾಡಿಸಿದ್ದಲ್ಲದೆ ಆತನ ರಾಜೀನಾಮೆಗೂ ಒತ್ತಡ ಸೃಷ್ಟಿಯಾಯಿತು. ಅಂದು ಬಿಬಿಎಂಪಿ ಕೋವಿಡ್ ವಾರ್ ರೂಮಿನಲ್ಲಿ ತೇಜಸ್ವಿ ಸೂರ್ಯನ ಜೊತೆಗೆ ಪೋಸು ಕೊಡುತ್ತಿದ್ದ ಬೊಮ್ಮನಹಳ್ಳಿ ಶಾಸಕ ಬಿಜೆಪಿ ಪಕ್ಷದ ಸತೀಶ್ ರೆಡ್ಡಿಯ ಆಪ್ತ ಸಹಾಯಕನ ಸಂಬಂಧಿ ರೋಗಿಗಳಿಗೆ ಹಾಸಿಗೆ ಕೊಡಿಸುವುದಕ್ಕೆ ಒತ್ತಡ ತರುವುದರಿಂದ ಹಿಡಿದು, ಶಾಸಕನ ಸಹಚರರು ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಅನುಚಿತ ವರ್ತನೆ ತೋರಿದ ವರದಿಗಳು ’ಮುಖ್ಯವಾಹಿನಿ’ಯ ಕೆಲವು ಮಾಧ್ಯಮಗಳು ಪ್ರಕಟಿಸಿದವು.

ತನ್ನ ಕುಕೃತ್ಯ ಎಲ್ಲೂ ಫಲ ಕೊಡದ ಕಾರಣ, ಇದೇ ತೇಜಸ್ವಿ ಸೂರ್ಯ ಮತ್ತೆ ಮೇ 10ರಂದು ಪತ್ರಿಕಾ ಗೋಷ್ಠಿ ಕರೆದು, ತಾನು ಪಾರದರ್ಶಕತೆ ಸೃಷ್ಟಿ ಮಾಡಲು ಕೋವಿಡ್ ವಾರ್ ರೂಮ್‌ಗೆ ಹೋಗಿದ್ದು, ಯಾವ ಕೋಮು ಭಾವನೆಯಿಂದ ಆ ಹೆಸರುಗಳನ್ನು ಓದಲಿಲ್ಲ, ಯಾರೋ ಅಧಿಕಾರಿ ನನ್ನ ಕೈಗೆ ಕೊಟ್ಟ ಪಟ್ಟಿಯನ್ನು ಓದಿ ಹೇಳಿದೆ ಎಂದು ಹೇಳಿ ತಿಪ್ಪೆ ಸಾರಿಸಲು ಪ್ರಯತ್ನ ಪಟ್ಟರೂ – ಯಾವ ಅಧಿಕಾರಿ ಅದು? ಆ ಪಟ್ಟಿಯನ್ನಷ್ಟೇ ಏಕೆ ಓದಿದಿರಿ? ಅವರನ್ನು ಸಸ್ಪೆಂಡ್ ಮಾಡಿದ್ದರ ಬಗ್ಗೆ ನೀವ್ಯಾಕೆ ಪ್ರಶ್ನಿಸಲಿಲ್ಲ? ನಿಮ್ಮ ಜೊತೆಗಿದ್ದ ಉಳಿದ ಮೂರು ಜನ ಶಾಸಕರು ’ಮದರಸ’ವನ್ನು ಎಳೆದು ತಂದಿದ್ದರ ಬಗ್ಗೆ ನೀವು ಮೌನವಾಗಿರುವುದೇಕೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಬೆಚ್ಚಿಬಿದ್ದು ಎದ್ದು ಹೋದ ಘಟನೆಯೂ ಜರುಗಿಹೋಯಿತು. ಒಟ್ಟಿನಲ್ಲಿ ಪಂಚ ರಾಜ್ಯಗಳಲ್ಲಿ ಕೋಮು ದಳ್ಳುರಿಯ ಕಿಚ್ಚು ಹಚ್ಚಿ ಚುನಾವಣೆಯನ್ನು ಗೆಲ್ಲಲು ಪ್ರಯತ್ನಿಸಿ ಸೋತಿದ್ದ ಹತಾಶೆಯನ್ನು ಕಳೆದುಕೊಳ್ಳುವುದಕ್ಕೆ ಕರ್ನಾಟಕದಲ್ಲಿ ಕೋಮುದ್ವೇಷ ಸೃಷ್ಟಿಸುವ ಯೋಜನೆಗೆ ಭಾರಿ ಮುಖಭಂಗವಾಗಿತ್ತು!

ನಿಮ್ಮೊಡನಿದ್ದೂ ನಿಮ್ಮಂತಾಗದೆ!

ಇಡೀ ಕರ್ನಾಟಕವೇ ನೋವಿನ ಸಮಯದಲ್ಲಿ ಇರಬೇಕಾದರೆ, ಏನನ್ನು ಬೇಕಾದರೂ ದಕ್ಕಾಸಿಕೊಳ್ಳಬಹುದು ಎಂಬ ದುರಹಂಕಾರವನ್ನು ಇಂತಹ ಕೋಮುವಾದಿ ರಾಜಕಾರಣಿಗಳು ತಳೆಯುವುದೇಕೆ? ಕೊರೊನಾ ಮೊದಲನೇ ಅಲೆಯಲ್ಲಿ ತಬ್ಲೀಗಿ ಜಮಾತ್‌ನವರೆ ವೈರಸ್ ಹರಡಲು ಕಾರಣ ಎಂಬಂತಹ ದ್ವೇಷದ ಪ್ರೊಪೋಗಾಂಡಕ್ಕೆ ಹಲವು ಮುಖ್ಯವಾಹಿನಿ ಮಾಧ್ಯಮಗಳು ಕೂಡ ಕೈಜೋಡಿಸಿಬಿಟ್ಟಿದ್ದವು. ಸದ್ಯ ಅಂತಹುದೇ ಗೇಮ್ ಪ್ಲಾನ್ ಇಂದು ಮಣ್ಣುಮುಕ್ಕಿದೆ. ಇಂತಹವಕ್ಕೆ ಅವಕಾಶ ನೀಡದ ಎಕೋಸಿಸ್ಟಮ್ ಕಟ್ಟಿಕೊಳ್ಳುವುದಕ್ಕೆ ನಾವು ನಾಗರಿಕರು ಇನ್ನಾದರೂ ಮುಂದಾಗಬೇಕು.

ತನ್ನ ಬದುಕಿನ ಅನುಭವ ಅಲ್ಲದೆ ಹೋದರೂ, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ಪೂರ್ವಗ್ರಹಗಳನ್ನು ಬೆಳೆಸುವ ಸಂಗತಿಗಳು ಯಾವುವು ಎಂಬ ಪ್ರಶ್ನೆಗಳನ್ನು ಕೇಳಿಕೊಂಡು, ಅದರ ಸತ್ಯದರ್ಶನ ಮಾಡಿಸುವ ಕೆಲಸಗಳು ಜಾಗೃತವಾಗಬೇಕು. ದಕ್ಷಿಣ ಭಾರತದಲ್ಲಿ ಗೋರಕ್ಷಣೆ, ಪುರಾಣದ ನಂಬಿಕೆಯೂ ಇಲ್ಲ ಅಥವಾ ಅದಕ್ಕಾಗಿ ನಡೆದ ರಾಜಕೀಯ-ಐತಿಹಾಸಿಕ ಹೋರಾಟವೂ ಇಲ್ಲಿಲ್ಲ. ಹೀಗಿದ್ದರೂ ಎಷ್ಟೋ ಯುವ ಮನಸ್ಸುಗಳನ್ನು ಹೈಜಾಕ್ ಮಾಡಿ ಗೋರಕ್ಷಣೆಯ ಮಿಥ್ಯೆಯನ್ನು ತುಂಬಿದ್ದು ಹೇಗೆ?

ಇವೆಲ್ಲಾ ಪ್ರಶ್ನೆಗಳಿಗೆ ನಾವಿಂದು ಉತ್ತರ ಕಂಡುಕೊಂಡು ನಮ್ಮ ಮುಂದಿನ ಪೀಳೆಗೆಯನ್ನು ಎಚ್ಚರಿಕೆಯತ್ತ ಕರೆದುಕೊಂಡು ಹೋಗಬೇಕಿದೆ.

ಕೊನೆಯ ಎರಡು ಮಾತು: ಒಂದು: 2020ರಲ್ಲಿ ಅಶೋಕ ವಿಶ್ವವಿದ್ಯಾಲಯದ ಇತಿಹಾಸ ಪ್ರೊಫೆಸರ್ ಅಪರ್ಣ ವೈದಿಕ್ ಅವರು ’ಮೈ ಸನ್ಸ್ ಇನ್‌ಹೆರಿಟೆನ್ಸ್’ – ’ಎ ಸಿಕ್ರೆಟ್ ಹಿಸ್ಟರಿ ಆಫ್ ಲಿಂಚಿಂಗ್ ಅಂಡ್ ಬ್ಲಡ್ ಜಸ್ಟಿಸ್ ಇನ್ ಇಂಡಿಯಾ’ ಎಂಬ ಒಂದು ಪುಟ್ಟ ಪುಸ್ತಕವನ್ನು ಬರೆದರು. ತಮ್ಮ ವೈಯಕ್ತಿಕ ಉದಾಹರಣೆಗಳಿಂದ ಪ್ರಾರಂಭವಾಗಿ, ತಮ್ಮ ತಾತನೇ ಹೇಗೆ ಹಿಂದುತ್ವದ ಪ್ರತಿಪಾದಕನಾಗಿದ್ದ ಎಂಬುದರ ಬಗ್ಗೆ ವಿವರಿಸಿ, ಭಾರತೀಯ ಪುರಾಣಗಳು ಮತ್ತು ಹಬ್ಬಗಳು ಹೇಗೆ ತಳಸಮುದಾಯದವರನ್ನು ಕೊಲ್ಲುವುದನ್ನು ಸಮರ್ಥಿಸಿಕೊಳ್ಳುತ್ತವೆ ಮತ್ತು ಹಿಂಸೆಯನ್ನು ಸಾಮಾನ್ಯೀಕರಿಸುತ್ತವೆ ಎಂದು ವಿವರಿಸುತ್ತಾ, ಪ್ರಸಕ್ತದಲ್ಲಿ ಆಗುತ್ತಿರುವ ವಿನಾಶಕಾರಿ ಘಟನೆಗಳಿಗೆ ಇವೆಲ್ಲ ಹೇಗೆ ಕೊಡುಗೆ ನೀಡಿವೆ ಎಂದು ತಮ್ಮ ಮಗ ಬಾಬುವಿಗೆ ವಿವರಿಸುವ ಪುಸ್ತಕ ಇದು.

ಬಹುಶಃ ನಾವೆಲ್ಲರೂ ಕೂಡ ನಮ್ಮ ವೈಯಕ್ತಿಕ ಉದಾಹರಣೆಗಳೊಂದಿಗೇ ನಮ್ಮ ಹಿಂದಿನ ಪೀಳಿಗೆಯವರು (ಅದು ತಂದೆ ತಾಯಿ ತಾತ ಮುತ್ತಾತ ಯಾರೇ ಇರಲಿ) ನಮಗೆ ಕೊಟ್ಟ ಬಳುವಳಿಯಲ್ಲಿ ಯಾವುದು ಜೊಳ್ಳು ಯಾವುದು ಸುಳ್ಳು ಎಂಬುದನ್ನು ತಿಳಿದು ವಿಂಗಡಿಸಿ ಅದು ಮುಂದಕ್ಕೆ ಹೋಗದಂತೆ ತಡೆಯಬೇಕಾಗಿದೆ.

ಎರಡು: ತೇಜಸ್ವಿ ಸೂರ್ಯನ ಪ್ರಕರಣದಲ್ಲಿ ಆತನನ್ನು ಪ್ರಶ್ನಿಸಿ ಕನ್ನಡದ ಜನಪ್ರಿಯ ಗಾಯಕಿ ಎಂಡಿ ಪಲ್ಲವಿ ಅವರು ಫೇಸ್ಬುಕ್ ಪೋಸ್ಟ್ ಒಂದನ್ನು ಬರೆದಿದ್ದರು. ತೇಜಸ್ವಿ ಸೂರ್ಯನ ಹಿಂಬಾಲಕರು ಮತ್ತು ಆತನ ಪಕ್ಷದವರು ಪಲ್ಲವಿಯವರ ಮೇಲೆ ಅತಿ ಕೆಟ್ಟದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ದಾಳಿ ನಡೆಸಿದರು. ಬೇರೆ ಸಮಯದಲ್ಲಿ ಅವರ ಜೊತೆ ಫೋಟೋ ತೆಗೆಸಿ ಹಾಕಿಕೊಳ್ಳುವ ಕಥೆಗಾರರು, ತಮ್ಮ ಹಾಡುಗಳನ್ನು ಅವರು ಹಾಡಬೇಕು ಎಂದು ಅಪೇಕ್ಷಿಸುವವರು, ದೊಡ್ಡ ದೊಡ್ಡ ಕವಿಪುಂಗವ ರಲ್ಲಿ ಹಲವರು, ಪಲ್ಲವಿಯವರ ಮೇಲೆ ನಡೆದ ದಾಳಿಯ ವಿರುದ್ಧವಾಗಲೀ, ತೇಜಸ್ವಿ ಸೂರ್ಯನ ಕೋಮು ಅಜೆಂಡಾದ ವಿರುದ್ಧವಾಗಲಿ ನಿಲ್ಲುವ, ಮಾತಾಡುವ ತ್ರಾಸ ತೆಗೆದುಕೊಳ್ಳಲಿಲ್ಲ. ಸಾಹಿತ್ಯವನ್ನು ಮಾರುವ ಆರಾಮ ಕುರ್ಚಿ ಬಿಟ್ಟು ಏಳಲಿಲ್ಲ. ಕನ್ನಡ ಸಾಹಿತ್ಯ ಲೋಕದ ಒಂದು ವಲಯ ಇಂದು ಇಂತಹ ಅಧೋಗತಿಗೆ ಇಳಿದಿದೆ. ಅವರ ಈ ಮೌನ ತಮ್ಮ ಆತ್ಮಸಾಕ್ಷಿಗಳನ್ನು ತಾವೇ ಲಿಂಚ್ ಮಾಡಿಕೊಂಡಿರುವುದಕ್ಕೆ ಸಾಕ್ಷಿ.

ಇರಲಿ, ಕನ್ನಡನಾಡಿನಲ್ಲಿ ಹಲವು ಯುವಪೀಳಿಗೆಯ ಜನ ಇಂದು ತೇಜಸ್ವಿ ಸೂರ್ಯನ ಅಜೆಂಡಾಗೆ ಮಣ್ಣುಮುಕ್ಕಿಸಿ ಆತನನ್ನು ಕಕ್ಕಾಬಿಕ್ಕಿಯಾಗಿಸಿದ್ದಾರೆ. ಇದು ಹೀಗೆಯೇ ಮುಂದುವರೆದು ಸಾಗರವಾಗಲಿ.


ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮುಬಣ್ಣ: ಪತ್ರಕರ್ತರ ಮುಖ್ಯ ಪ್ರಶ್ನೆಗಳಿಗೆ ಸಂಸದ ತೇಜಸ್ವಿ ಸೂರ್ಯ ನಿರುತ್ತರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...