ಹಿಂದೂ ಮಹಾಸಾಗರದ ಪೂರ್ವಕ್ಕಿರುವ ಸೊಮಾಲಿಯಾ ದೇಶದ ರಾಜಧಾನಿ ಮೊಗದಿಶು (ಹಮಾರ್). ಸುಲ್ತಾನರ ಆಡಳಿತದಲ್ಲಿ ಈ ನಗರ 9ರಿಂದ 13ನೇ ಶತಮಾನದವರೆಗೆ ಮಹಾಸಾಗರದ ಚಿನ್ನದ ವ್ಯಾಪಾರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. 13ನೇ ಶತಮಾನದಿಂದ 15ರವರೆಗೆ ಅಜೂರನ್ ಸಾಮ್ರಾಜ್ಯದ ಆಡಳಿತದಲ್ಲಿ ರೇಷ್ಮೆ ರಹದಾರಿಯ ಮುಖ್ಯ ವ್ಯಾಪಾರ ಸ್ಥಳಗಳಲ್ಲಿ ಒಂದಾಗಿತ್ತು. 1989ರಲ್ಲಿ ಈ ಕರಾವಳಿಯ ನಗರದಲ್ಲಿ ಹುಟ್ಟಿದ ಹುಡುಗಿ ಇಫ್ರಾ ಅಹಮದಳಿಗೆ ಈ ಯಾವ ಭವ್ಯ ಇತಿಹಾಸದ ಪರಿಚಯವೂ ಇರಲಿಲ್ಲ. ಅವಳು ಬೆಳೆವಾಗ ಭವ್ಯತೆಯ ಯಾವ ಕುರುಹುಗಳೂ ಇರಲಿಲ್ಲ. ಇಟಲಿಯಿಂದ ಬ್ರಿಟಿಷರಿಗೆ ವಸಾಹತು ವರ್ಗಾವಣೆಯಾಗಿ ನಂತರ ಸ್ವಾತಂತ್ರ್ಯ ದೊರಕಿದ ಮೇಲೆ ತೀವ್ರವಾಗಿದ್ದ ಆಂತರಿಕ ನಾಗರಿಕ ಯುದ್ಧಕ್ಕೆ ಇಡೀ ನಗರ ಅಕ್ಷರಷಃ ನಲುಗಿಹೋಗಿತ್ತು. 2006ರಲ್ಲಿ ಈ ಯುದ್ಧ ಇನ್ನಷ್ಟು ತೀವ್ರತೆ ಪಡೆದಾಗ ಜೀವ ಉಳಿಸಿಕೊಳ್ಳುವುದೇ ದುಸ್ಸಾಹಸವಾಯಿತು. ಸಿಕ್ಕಸಿಕ್ಕವರನ್ನು ಗುಂಡಿಕ್ಕಿ ಕೊಲುತ್ತಿದ್ದ ಅಲ್-ಶಬಾಬ್‌ನ ಬಂಡುಕೋರರ ದಾಳಿಯಿಂದ ತಪ್ಪಿಸಕೊಂಡು, ಜೀವ ಉಳಿಸಿಕೊಂಡು ತನ್ನ ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದಳು ಇಫ್ರಾ. 50ರ ಮುದುಕನನ್ನು ಬಿಟ್ಟು ಹೀಗೆ ತಪ್ಪಿಸಿಕೊಂಡು ಓಡಿ ಬಂದ್ದಕ್ಕಾಗಿ ಅಜ್ಜಿ ಎಲ್ಲಿ ಬೈಯುತ್ತಾಳೋ ಎಂಬ ಭಯ ಬೇರೆ. ಹೀಗೆ 17ರ ಹರೆಯದ ಇಫ್ರಾ ತನ್ನ ಅಪ್ಪನಿಗಾಗಿ ಕಾಯುತ್ತಿರುವಾಗ, ಅವಳ ಮನೆಯಲ್ಲೇ ಬಂಡುಕೋರರ ಗುಂಪೊಂದು ಇವಳ ಮೇಲೆ ಅತ್ಯಾಚಾರ ಮಾಡಿತ್ತು.

ಪ್ರಜ್ಞೆ ತಪ್ಪಿ ಬಿದ್ದಿದ್ದ ಇಫ್ರಾಳಿಗೆ ಸ್ಥಳೀಯ ವೈದ್ಯ (ಅವಳ ಅಜ್ಜಿಯ ತಮ್ಮ) ಶಸ್ತ್ರಚಿಕಿತ್ಸೆ ಮಾಡುತ್ತಾನೆ. ಅವಳ ಚಿಕ್ಕಮ್ಮ ಅಮೆರಿಕೆಯ ಮಿನಿಸೋಟದಿಂದ ಕಳಿಸಿದ ಹಣವನ್ನು ಫೀಸಾಗಿ ಅಜ್ಜಿ ಅವನಿಗೆ ಕೊಡುತ್ತಾಳೆ. ಮಗಳನ್ನು ಹೇಗಾದರೂ ಮಾಡಿ ಅಲ್ಲಿಂದ ಹೊರಗೆ ಸಾಗಿಹಾಕಲು ಅವಳ ತಂದೆ ಇನ್ನಷ್ಟು ಹಣ ತರಿಸಿಕೊಂಡು ಇಥಿಯೋಪಿಯಾದ ರಾಜಧಾನಿ ಅದ್ದಿಸ್‌ಅಬಾಬಗೆ ಕಳಿಸಲು, ಹಮಾರ್‌ನಿಂದ ಇಥಿಯೋಪಿಯಾದ ಗಡಿಗೆ ಹೋಗುವ ಬಸ್ ಹತ್ತಿಸುತ್ತಾನೆ. ಗಡಿಯಲ್ಲಿ ಈಕೆಯ ಜೊತೆಗೆ ಇನ್ನಷ್ಟು ಹೆಂಗಸರು ಅದ್ದಿಸ್‌ಅಬಾಬಗೆ ಬಸ್ಸು ಬದಲಾಯಿಸುವಾಗ ಮಾನವ ಕಳ್ಳಸಾಗಣೆದಾರನೊಬ್ಬನ ಕಣ್ಣಿಗೆ ಬೀಳುತ್ತಾಳೆ. ಸೊಮಾಲಿಯಾದ ಹೆಣ್ಣು ಮಕ್ಕಳನ್ನು ಸೌದಿ ಅರೇಬಿಯಾಗೆ ಜೀತಕ್ಕಾಗಿ ಮಾರುವುದು ಅವನ ಕಸುಬು. ಆದರೆ ಅದೃಷ್ಟವಷಾತ್ ಸಹಪ್ರಯಾಣಿಕ ಕುಟುಂಬವೊಂದರ ಸಹಾಯದಿಂದ ತಪ್ಪಿಸಿಕೊಂಡು ಕೆಲವು ದಿನ ಅವರ ಮನೆಯಲ್ಲೇ ಕಳೆಯುತ್ತಾಳೆ.

ಮಿನಿಸೋಟಾದಲ್ಲಿದ್ದ ಅವಳ ಚಿಕ್ಕಮ್ಮನ ಹತ್ತಿರ ಕಳಿಸಲು ಹಸನ್ ಎಂಬ ವ್ಯಕ್ತಿಯ ಮೂಲಕ ಆ ಕುಟುಂಬ ವ್ಯವಸ್ಥೆ ಮಾಡುತ್ತದೆ. ನಕಲಿ ಪಾಸ್‌ಪೋರ್ಟ್‌ಒಂದರ ಸಹಾಯದಿಂದ ಇಫ್ರಾ ಮೊದಲ ಬಾರಿಗೆ ವಿಮಾನದಲ್ಲಿ ಕೂರುತ್ತಾಳೆ. ಮಧ್ಯೆ ವಿಮಾನ ಬದಲಿಸಬೇಕಾಗುತ್ತದೆ. ಮತ್ತೆ ವಿಮಾನವೇರಿ, ಇಳಿದು ಇಮ್ಮಿಗ್ರೇಶನ್ ದಾಟಿಕೊಂಡು ಟ್ಯಾಕಿಯಲ್ಲಿ ಕೂತಾಗ, ಒಂದು ಚೀಟಿಯನ್ನು ಕೈಗಿತ್ತು, ರಾಜಕೀಯ ಆಶ್ರಯ ಪಡೆಯಲು ಬೇಡಿಕೊಳ್ಳುವಂತೆ ಹಸನ್ ಹೇಳಿದಾಗಲೇ ಅವಳಿಗೆ ತಿಳಿಯುವುದು, ತಾನು ಚಿಕ್ಕಮ್ಮನಿರುವ ಮಿನಿಸೋಟಾದ ಬದಲಿಗೆ ಐರ್ಲೆಂಡಿಗೆ ಬಂದಿದ್ದೇನೆಂದು. ಐರ್ಲೆಂಡಿನ ಬಾಲ್ಸ್‌ಬ್ರಿಡ್ಜ್ ಬಳಿಯ ಅಮೆರಿಕದ ರಾಯಭಾರ ಕಛೇರಿಯ ಬಾಗಿಲಲ್ಲಿ ಚೀಟಿ ಹಿಡಿದು ನಿಂತ ಹುಡುಗಿಗೆ ಅಲ್ಲಿನ ಭಾಷೆ, ಸಂಸ್ಕೃತಿ ಯಾವುದೂ ಗೊತ್ತಿರುವುದಿಲ್ಲ. ಅಸಲಿಗೆ ಐರ್ಲೆಂಡ್ ಎಂಬ ಹೆಸರನ್ನೇ ಆಕೆ ಮೊದಲ ಬಾರಿಗೆ ಕೇಳಿರುತ್ತಾಳೆ.

ರಾಜಕೀಯ ಆಶ್ರಯ ಪಡೆದು, ರಾಯಭಾರ ಕಛೇರಿಯ ನಿಯಮದಂತೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಆಕೆಯನ್ನು ಪರೀಕ್ಷಿಸಿದ ವೈದ್ಯರಿಗೆ ಆಘಾತ ಕಾದಿರುತ್ತದೆ. ಆಕೆಯ ಜನನಾಂಗವನ್ನು ದಾರದಿಂದ ಹೊಲೆಯಲಾಗಿರುತ್ತದೆ. ಅದು ಹಾಗೇಕೆಂದು ವಿಚಾರಿಸಿದಾಗ ಅವಳ ಬಳಿ ಕಣ್ಣೀರು ಬಿಟ್ಟು ಬೇರೇನೂ ಉತ್ತರವಿರುವುದಿಲ್ಲ. ’ಅದು ತಮ್ಮ ಸಂಸ್ಕೃತಿ’ ಎಂಬುದಷ್ಟೇ ಅವಳಿಗೆ ಗೊತ್ತಿರುವುದು. ಈ ವಿಷಯದಲ್ಲಿ ಅವಳು ಒಬ್ಬಂಟಿಯಾಗಿರಲಿಲ್ಲ. ತನ್ನೊಂದಿಗಿದ್ದ ಸೊಮಾಲಿಯಾದ ಎಲ್ಲಾ ಹೆಣ್ಣು ಮಕ್ಕಳೂ ಇದೇ ಸಂಸ್ಕೃತಿಯಲ್ಲಿ ಸಿಲುಕಿರುವವರೆ!

ತಾನು ಐದನೇ ವಯಸ್ಸಿನಲ್ಲಿದ್ದಾಗ ಅಜ್ಜಿ ಈದ್-ಅಲ್-ಫಿತರ್‌ನ ಪವಿತ್ರ ಶುಕ್ರವಾರದ ದಿನ ತನ್ನ ತಮ್ಮನನ್ನು ಆಕೆಯ ಗುಡಿಸಿಲಿಗೆ ಕರೆಸಿದ್ದಳು. ಇವಳೊಂದಿಗೆ ತನ್ನ ತಂಗಿಯರೂ, ಚಿಕ್ಕಪ್ಪನ ಮಕ್ಕಳು, ನೆರೆಹೊರೆಯವರೂ ಸೇರಿ ಇಪ್ಪತ್ತಕ್ಕೂ ಅಧಿಕ ಹೆಣ್ಣು ಮಕ್ಕಳಿದ್ದರು. ಅವರುಗಳನ್ನೆಲ್ಲ ಶುದ್ಧೀಕರಿಸಿ ಸ್ತ್ರೀಸ್ಥಾನಕ್ಕೇರುವ ದೀಕ್ಷೆ ನೀಡಲು ಆ ವೈದ್ಯ ಕೈಯಲ್ಲಿ ಬಿಸಿ ನೀರಿನ ಬಟ್ಟಲು, ರೇಜರ್ ಬ್ಲೇಡು ಹಿಡಿದು ಒಳಗಡೆ ಕಾಯುತ್ತಿದ್ದ. ಆ ಪುಟ್ಟ ಕಂದಮ್ಮಗಳ ಯೋನಿಯ ಚಂದ್ರನಾಡಿಯನ್ನು ಕುಯ್ದು, ಮೇಲಕ್ಕೆತ್ತಿ ಹೊಲಿಗೆ ಹಾಕುವುದು ಅವನ ಕೆಲಸ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು FEMALE GENITAL MUTILATION(FGM) ಸ್ತ್ರೀ ಜನನಾಂಗ ವಿರೂಪಕ್ರಿಯೆ ಎಂದು ಕರೆಯುತ್ತಾರೆ. ಇವುಗಳಲ್ಲಿ TYPE-1, TYPE-2,TYPE-3 ªÀÄvÀÄÛ TYPE-4 ಎಂದು ನಾಲ್ಕು ಮಾದರಿಗಳಿದ್ದು ಮೂರು ಮತ್ತು ನಾಲ್ಕನೆಯ ಮಾದರಿಯು ಪ್ರಾಣ ಹಾನಿಯಷ್ಟು ಅಪಾಯಕಾರಿ.

ಇದನ್ನು ಮಾಡುವಾಗ ಅವರಿಗೆ ಯಾವುದೇ ಅರಿವಳಿಕೆ ನೀಡುತ್ತಿರಲಿಲ್ಲ. ಅಜ್ಜಿ ಮಕ್ಕಳ ಕಾಲನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಿದ್ದಳು. ಆತ ಕೆಲಸ ಮುಗಿಸಿದ ಮೇಲೆ ಎರಡೂ ಕಾಲುಗಳನ್ನು ಅಲುಗಾಡದ ಹಾಗೆ ಕಟ್ಟಿ ನಲವತ್ತು ದಿನಗಳವರೆಗೆ ಗುಡಿಸಿಲಿನಲ್ಲಿಯೇ ಇಡುತ್ತಿದ್ದರು. ಉರಿಊತ, ಕೀವುಗಳು ತುಂಬಿಕೊಂಡು ನರಳಿ ನಲವತ್ತು ದಿನಗಳನ್ನು ದಾಟಿ ಬರುವುದೇ ಒಂದು ಜನುಮವನ್ನು ಗೆದ್ದಹಾಗೆ. ಈ ಕ್ರಿಯೆಗೊಳಗಾದ ತನ್ನ ಗೆಳತಿಯೊಬ್ಬಳು ಮೂತ್ರ ಕಟ್ಟಿಕೊಂಡು, ಕೀವಾಗಿ ಹೊಟ್ಟೆಯುಬ್ಬರ ಬಂದು ತೀರಿಹೋಗಿದ್ದನ್ನು ಇಫ್ರಾ ಕಣ್ಣಾರೆ ಕಂಡಿದ್ದಳು.

ರಾಯಭಾರಿ ಕಚೇರಿಯ ವೈದ್ಯರು ಹೊಲಿಗೆ ಹಾಕಿದ್ದ ತನ್ನ ಯೋನಿಯ ಬಗ್ಗೆ ಪ್ರಶ್ನಿಸಿದಾಗ ಇವೆಲ್ಲವೂ ಈಗ ನಡೆದ ಘಟನೆಗಳಂತೆ ಆಕೆಗೆ ಕಣ್ಣಮುಂದೆ ಬರುತ್ತವೆ. ಅವರ ಪ್ರಶ್ನೆಗಳೇ ಇವಳವೂ ಆಗಿದ್ದವು. ಅವಕ್ಕೆ ಉತ್ತರ ಕಂಡುಕೊಳ್ಳುವ ಪಣ ತೊಡುತ್ತಾಳೆ. ತನಗಾಗಿದ್ದ ಅನ್ಯಾಯವನ್ನು ಜಗತ್ತಿಗೆ ಹೇಳುವ ದೀಕ್ಷೆ ತೊಡುತ್ತಾಳೆ. ಓದು ಬರಹ ಬರದ ಆಕೆ, ಇಂಗ್ಲಿಷ್ ಭಾಷೆಯನ್ನು ಕಲಿತು, ತಾನು ಅನುಭವಿಸಿದ ನೋವನ್ನು ಹಿಡಿದಿಡುವ ಪದಗಳನ್ನು ಹುಡುಕುತ್ತಾಳೆ. ಈ ವಿಷಯದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಂಡು, ತಮ್ಮ ಖಾಸಗೀತನವನ್ನು ಕಾಪಾಡಿಕೊಳ್ಳಲೇಬೇಕಾದ ಮುಸಲ್ಮಾನ ಹುಡುಗಿಯರ ಸಾಂಪ್ರದಾಯಿಕ ಚೌಕಟ್ಟಿನಿಂದ ಆಚೆ ನಿಂತು ಧೈರ್ಯವಾಗಿ, ತನ್ನ ಜೊತೆಗಾರ್ತಿಯರೊಂದಿಗೆ ಶಾಲಾ ಕಾಲೇಜುಗಳಲ್ಲಿ ಈ ವಿಷಯದ ಬಗ್ಗೆ ಮಾತನಾಡಲು ಶುರುಮಾಡುತ್ತಾಳೆ. 2010ರಲ್ಲಿ ತನ್ನ ಗೆಳತಿಯರೊಡನೆ ಸೇರಿ ಎಫ್‌ಜಿಎಂ ನಿಷೇಧಿಸುವ ಧ್ಯೇಯದೊಂದಿಗೆ ಯುನೈಟೆಡ್ ಯೂತ್ ಆಫ್ ಐಲೆಂಡ್ ಮತ್ತು ಇಫ್ರಾ ಫೌಂಡೇಶನ್ ಸ್ಥಾಪಿಸುತ್ತಾಳೆ. ಐಲೆಂಡಿನ ಲೇಬರ್ ಪಾರ್ಟಿಯ ಜೋ ಕಾಸ್ಟೆಲೋರ ಪರಿಚಯವಾಗುತ್ತದೆ. ಅವರ ಮುಖಾಂತರ ಆಗ ಐಲೆಂಡಿಗೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರವರ ಸಾರ್ವಜನಿಕ ರ್‍ಯಾಲಿಯಲ್ಲಿ FGM ನಿಷೇಧಿಸುವ ಹಕ್ಕೊತ್ತಾಯದ ಬ್ಯಾನರ್ ಹಿಡಿದು ಗಮನಸೆಳೆಯುವ ಪ್ರಯತ್ನ ವಿಫಲವಾಗುತ್ತದೆ. ಎದೆಗುಂದದೆ, ತನ್ನಂತೆಯೇ ನೋವುಂಡ ಗೆಳತಿಯರನ್ನು ಜೊತೆಗೂಡಿಸಿ FGM ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಡಬ್ಲಿನ್‌ನ ಹೋಟೆಲ್‌ಒಂದರಲ್ಲಿ ಫ್ಯಾಷನ್‌ಶೋ ಏರ್ಪಡಿಸುತ್ತಾಳೆ. ಆ ಕಾರ್ಯಕ್ರಮಕ್ಕೆ ಜೋರವರ ಪತ್ನಿ, ಡಬ್ಲಿನ್‌ನ ಸೆನೆಟರ್ ಎಮರ್ ಕ್ಯಾಸ್ಟೆಲ್ಲೋ ಮುಖ್ಯ ಅತಿಥಿಯಾಗಿ ಬರುತ್ತಾರೆ. ನಂತರ ಎಮರ್ ಯೂರೋಪಿನ ಒಕ್ಕೂಟದ ಸಂಸದರಾಗಿ ಆಯ್ಕೆಯಾಗುತ್ತಾರೆ. ಲೇಬರ್ ಪಾರ್ಟಿಯ ಸಹಾಯದಿಂದ ಐರ್ಲೆಂಡಿನ ಸ್ತ್ರೀ ಜನನಾಂಗ ವಿರೂಪಕ್ರಿಯೆಗೊಳಗಾದ ಮಹಿಳೆಯರಿಗೆ ನ್ಯಾಯ ಒದಗಿಸುವ ಶಾಸನ (FEMALE GENITAL MUTILATION CRIMINAL JUSTICE BILL) ತರಲು ಶ್ರಮಿಸಿತ್ತಾರೆ. ಐರ್ಲೆಂಡಿನ ಅಧ್ಯಕ್ಷೀಯ ಚುನಾಣೆಯ ನಂತರ ಅಲ್ಲಿನ ಅಧ್ಯಕ್ಷರು ಸಹಿ ಹಾಕಿದ ಮೊದಲ ಕಾನೂನು ಅದಾಯಿತು.

ಇಫ್ರಾ ಅಹಮದ್ ಜನಪ್ರಿಯಳಾಗುತ್ತಾಳೆ. ಐಲೆಂಡ್ ದೇಶವು ಇಫ್ರಾ ಅಹಮದಳಿಗೆ ಪೌರತ್ವ ನೀಡಿ ಗೌರವಿಸಿತು. ಇದೆಲ್ಲ ನಡೆಯುವಾಗ ಎಂದಿನಂತೆ ಸಂಪ್ರದಾಯವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವಳ ವಿರುದ್ಧ ಮುಗಿಬಿದ್ದರು. ಇವಳನ್ನು ಐರ್ಲೆಂಡಿಗೆ ಕರೆತಂದು ಬಿಟ್ಟಿದ್ದ ಹಸನ್, ’ಇವನ್ನೆಲ್ಲ ಬಿಟ್ಟು ಒಳ್ಳೆಯ ಮುಸ್ಲಿಂ ಹುಡುಗಿಯಾಗಿ ಬದುಕದಿದ್ದರೆ ಕತ್ತು ಸೀಳುವುದಾಗಿ’ ಬೆದರಿಕೆ ಹಾಕುತ್ತಾನೆ. ಇವೆಲ್ಲವನ್ನೂ ಇಫ್ರಾ ಮೀರುತ್ತಾಳೆ.
ಆದರೆ ಇಫ್ರಾ ಅಹಮದ್‌ಳ ಗುರಿ ಕೇವಲ ಐರ್ಲೆಂಡ್‌ನಲ್ಲಿ ಕಾನೂನು ತರುವುದಾಗಿರಲಿಲ್ಲ. ಜೀವಂತ ನರಕ ತೋರಿಸಿದ ತನ್ನೂರಿನಲ್ಲಿ ಬದಲಾವಣೆಯಾಗಬೇಕಿತ್ತು. ಅಲ್ಲಿ ಜನಿಸುವ ತನ್ನ ಸಹೋದರಿಯರನ್ನು ಕಾಪಾಡಬೇಕಿತ್ತು. ಅದೇ ಸಮಯಕ್ಕೆ ಮಿನಿಸೊಟಾದಿಂದ ಚಿಕ್ಕಮ್ಮ ಮಿಂಚಂಚೆ ಕಳಿಸಿರುತ್ತಾಳೆ. ವಿಶ್ವ ಸಂಸ್ಥೆಯ ಸಹಾಯದಿಂದ ಇಫ್ರಾಳ ತಂಗಿಯೊಬ್ಬಳು ಇಟಲಿಯಲ್ಲಿರುವುದಾಗಿ ಮತ್ತು ಅವಳ ತಂದೆ ಉಗಾಂಡಾದ ನಿರಾಶ್ರಿತ ಶಿಬಿರದಿಂದ ಮೊಗದಿಶುವಿಗೆ ವಾಪಸಾಗಿರುವುದಾಗಿ ಅದರಿಂದ ತಿಳಿಯುತ್ತದೆ. ತನ್ನವರೆಲ್ಲ ಯುದ್ಧದಲ್ಲಿ ಇನ್ನಿಲ್ಲವಾಗಿರಬಹುದು ಎಂದು ಭಾವಿಸಿದ್ದವಳಿಗೆ ಪುನರ್ಜನ್ಮ ಸಿಕ್ಕಿದಂತಾಯಿತು. ಆದರೆ ತನ್ನ ಹೋರಾಟದ ಬಗ್ಗೆ ತಿಳಿದರೆ ತಂದೆ ಹೇಗೆ ಪ್ರತಿಕ್ರಿಯಿಸುತ್ತಾನೋ ಎಂಬ ಭಯವೂ ಕಾಡಿತ್ತು.

ವಿಶ್ವ ಸಂಸ್ಥೆಯ ಸಹಾಯದೊಂದಿಗೆ ಇಫ್ರಾ ತನ್ನ ಕುಟುಂಬವನ್ನು ಕಾಣಲು ತನ್ನೂರಿಗೆ ವಾಪಸಾಗುತ್ತಾಳೆ. ತನ್ನ ಕುಟುಂಬವನ್ನು ಸೇರುತ್ತಾಳೆ. ತನ್ನ ಹೋರಾಟದ ಬಗ್ಗೆ ತಿಳಿಸುತ್ತಾಳೆ. ಇವಳು ಭಾವಿಸಿದಂತೆಯೇ ಅವರೆಲ್ಲರೂ ಆಕೆಯ ಕೆಲಸದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ತಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಅವಮಾನಿಸಿದಕ್ಕಾಗಿ ಶಪಿಸುತ್ತಾರೆ. ಆದರೆ, ಮೊಗದಿಶುವಿನಲ್ಲಿ ಬದಲಾವಣೆಯ ಗಾಳಿ ಬೀಸಿತ್ತು. ಅಲ್-ಶಬಾಬ್‌ನ ಬಂಡುಕೋರರನ್ನು ಮಣಿಸಿ ಸರ್ಕಾರವೊಂದು ರಚನೆಯಾಗಿ ಪುನರ್‌ನಿರ್ಮಾಣ ಕಾರ್ಯಗಳು ಆರಂಭವಾಗಿದ್ದವು. ಅಲ್ಲಿನ ಸರಕಾರದ ಮಹಿಳಾ ಮತ್ತು ಮಕ್ಕಳ ಸಚಿವರನ್ನು ಭೇಟಿಯಾಗಿ ಎಫ್‌ಜಿಎಂ ನಿಷೇಧಿಸುವ ಕಾನೂನನ್ನು ತರುವಂತೆ ಪ್ರಾರ್ಥಿಸುತ್ತಾಳೆ. ಆದರೆ ಅದು ತನ್ನಿಂದ ಅಸಾಧ್ಯವಾದುದೆಂದು ಹೇಳಿ, ಆದರೆ ಆಕೆಗೆ ಬೇಕಾದ ನೈತಿಕ ಬೆಂಬಲವನ್ನು ನೀಡುವುದಾಗಿ ಅವರು ತಿಳಿಸುತ್ತಾರೆ. ತನ್ನ ಅಜ್ಜಿಯನ್ನು ಕೊನೆಯ ಬಾರಿಗೆ ಮಾತನಾಡಿಸಿ ವಾಪಸು ಹೊರಡಲು ಸಿದ್ಧವಾದಳು. ತಮ್ಮ ಸಂಸ್ಕೃತಿಯಲ್ಲಿ ಸ್ತ್ರೀ ಜನನಾಂಗ ವಿರೂಪಕ್ರಿಯೆ ನಡೆಯುವ ಕಾರಣವನ್ನು ತಿಳಿಸಲು ಬೇಡಿದಳು. ಆಕೆಯ ವಿವರಣೆ ಹೀಗಿತ್ತು: ಮದುವೆಯ ಮಾರನೆಯ ದಿನ ಹೆಣ್ಣಿನ ಶೀಲವನ್ನು ಪರೀಕ್ಷಿಸುತ್ತಾರೆ. ವಧುವಿನ ಯೋನಿಯನ್ನು ಕತ್ತರಿಸಿರಲಿಲ್ಲವೆಂದರೆ ಅವಳ ಗಂಡ ಆಕೆ ಶೀಲವಂತೆಯಲ್ಲವೆಂದು ತಿಳಿಸಲು ಗುಂಡಿಯೊಂದನ್ನು ತೋಡುತ್ತಾನೆ. ಹೀಗಾದರೆ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತದೆ. ಅಕಸ್ಮಾತಾಗಿ ತನ್ನ ಗಂಡ ಎಲ್ಲಾದರೂ ದೂರಕ್ಕೆ ಹೋಗಬೇಕಾದ ಪ್ರಮೇಯ ಬಂದರೆ ಅವಳನ್ನು ಶುದ್ಧವಾಗಿಡಲು ಯೋನಿಯನ್ನು ಮೇಲಕ್ಕೆತ್ತಿ ಹೊಲೆಯಲಾಗುತ್ತದೆ. ಆತ ತನ್ನ ಪತ್ನಿಯನ್ನು ಮತ್ತೆ ಹುಡುಕಿಕೊಂಡು ಬರಲಿ ಎಂಬುದು ಇದರ ಹಿಂದಿನ ಉದ್ದೇಶ. ಇತರೆ ಮುಸಲ್ಮಾನ ಸಮುದಾಯಗಳಲ್ಲಿಲ್ಲದ ಈ ಕಾನೂನು ತನ್ನ ದೇಶದಲ್ಲಿ ಬಂದ ಬಗ್ಗೆ ಯಾವುದೇ ಹಿನ್ನೆಲೆ ಇಫ್ರಾಗೆ ಸಿಗಲಿಲ್ಲ. ಆದರೆ ವರದಕ್ಷಿಣೆಯಿಂದ ತಪ್ಪಿಸಿಕೊಳ್ಳಲು ಹೆಣ್ಣು ಹೆತ್ತವರು ಇಷ್ಟವಿಲ್ಲದಿದ್ದರೂ ಈ ಅನಿಷ್ಟ ಆಚರಣೆಯನ್ನು ನಡೆಸಿಕೊಂಡು ಬಂದಿರುವುದು ಅರ್ಥವಾಗುತ್ತದೆ. ಸಂಪ್ರದಾಯಗಳು ಆರ್ಥಿಕ ಸ್ಥಿತಿಯನ್ನೂ ಸಹ ಅವಲಂಬಿಸಿರುತ್ತವೆ.

ಮೊಗದಿಶುವಿನಿಂದ ವಾಪಸಾದ ಇಫ್ರಾ ಅಹಮದ್ 2013ರಲ್ಲಿ ಬ್ರ್ರಸೆಲ್ಸ್‌ನಲ್ಲಿ ನಡೆದ ಯೂರೋಪಿನ ಪಾರ್ಲಿಮೆಂಟಿನಲ್ಲಿ ತನ್ನ ದೇಶದಲ್ಲಿ ಹೆಣ್ಣಿನ ಮೇಲಾಗುತ್ತಿರುವ ಅನ್ಯಾಯವನ್ನು ವಿವರಿಸಿ ಅದನ್ನು ನಿಷೇಧಿಸಲು ಅಂತಾರಾಷ್ಟ್ರೀಯ ಒತ್ತಡ ಹೇರಲು ಕೋರಿಕೊಳ್ಳುತ್ತಾಳೆ. 2014ರಲ್ಲಿ ಸೊಮಾಲಿಯಾ ದೇಶದ ಅಧ್ಯಕ್ಷ ಮೊಹಮದ್‌ರವರ ಆಹ್ವಾನದ ಮೇರೆಗೆ ತನ್ನ ದೇಶಕ್ಕೆ ಹಿಂದಿರುಗಿ ಎಫ್‌ಜಿಎಂಅನ್ನು ನಿರ್ಮೂಲನೆ ಮಾಡುವ ಕಾರ್ಯ ಪ್ರಾರಂಭಿಸುತ್ತಾಳೆ. ಈಗಲೂ ಅದು ಮುಂದುವರೆಯುತ್ತಿದೆ. 2030ರ ಹೊತ್ತಿಗೆ ಸೊಮಾಲಿಯಾದಿಂದ ಎಫ್‌ಜಿಎಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಅವಳ ಸಂಸ್ಥೆ ಹೊಂದಿದೆ.

ಜಗತ್ತಿನಾದ್ಯಂತ ಪೂರ್ವ, ಪಶ್ಚಿಮ ಮತ್ತು ಈಶಾನ್ಯ ಆಫ್ರಿಕಾ ದೇಶಗಳು, ಮಧ್ಯಪ್ರಾಚ್ಯ ಮತ್ತು ಏಷಿಯಾದ ಇಪ್ಪತ್ತು ಕೋಟಿ ಮಹಿಳೆಯರು ಎಫ್‌ಜಿಎಂ ಕ್ರೌರ್ಯಕ್ಕೆ ತುತ್ತಾಗಿದ್ದಾರೆ. ಒಂದು ವರದಿಯ ಪ್ರಕಾರ ವಾರ್ಷಿಕ ಮೂವತ್ತು ಲಕ್ಷ ಜನ ಈ ಅಪಾಯವನ್ನು ಎದುರಿಸುತ್ತಿದ್ದಾರೆ.

ಹೀಗೆ 5ನೇ ವಯಸ್ಸಿಗೇ ದೌರ್ಜನ್ಯಕ್ಕೊಳಗಾಗಿ 15ಕ್ಕೇ ವಯಸ್ಸಿಗೆ ಮದುವೆಯಾಗಿ, ಯುದ್ಧಪೀಡಿತ ದೇಶದಿಂದ, ಮಾನವ ಕಳ್ಳಸಾಗಣೆಯ ಧೂರ್ತರಿಂದ ತಪ್ಪಿಸಿಕೊಂಡು, ಹೆಸರೇ ಕೇಳಿರದ ದೇಶದಲ್ಲಿ ನೆಲೆನಿಂತು, ತನಗಾದ ಅನ್ಯಾಯಕ್ಕೆ ನ್ಯಾಯ ಪಡೆವುದರೊಟ್ಟಿಗೆ, ಇನ್ನ್ಯಾರಿಗೂ ಆ ಕಷ್ಟ ಬರದಂತೆ ತಡೆಯಲು ಪ್ರಯತ್ನಿಸುತ್ತಿರುವ ಮಾನವೀಯ ಮೌಲ್ಯದ ಹೋರಾಟಗಾರ್ತಿ ಇಫ್ರಾ ಅಹಮದ್.

ಇಫ್ರಾ ಅಹಮದ್‌ಳ ಜೀವನ ಯಾವುದೇ ಸಿನೆಮಾ ಕಥೆಗಿಂತಲೂ ಮಿಗಿಲು. ಇವಳ ಜೀವನದಿಂದ ಸ್ಫೂರ್ತಿ ಹೊಂದಿದ ಐರ್ಲೆಂಡಿನ ಸಿನೆಮಾ ನಿರ್ದೇಶಕಿ ಮೇರಿ ಮೆಕ್‌ಗ್ಯುಕಿನ್, ಚಿತ್ರಕಥೆ ಬರದು ‘A GIRL FROM MOGADISHU’ ಎಂಬ ಸಿನೆಮಾವನ್ನು 2019ರಲ್ಲಿ ನಿರ್ದೇಶಿಸಿ ನಿರ್ಮಿಸಿದ್ದಾರೆ. ಡಬ್ಲಿನ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅಮೆರಿಕದ ಕಪ್ಪು ಕಲಾವಿದೆ ಅಜಾ ನವೋಮಿ ಕಿಂಗ್, ಇಫ್ರಾ ಅಹಮದ್‌ಳ ಜೀವನವನ್ನು ಅಕ್ಷರಶಃ ಜೀವಿಸಿದ್ದಾರೆ.

ಸಿನೆಮಾ ಮುಗಿಯುವ ಹೊತ್ತಿಗೆ ಆ ಪಾತ್ರ ನಮ್ಮನ್ನು ಸಂಪೂರ್ಣವಾಗಿ ಆವರಿಸಿ ಕಾಡಿರುತ್ತದೆ. ಸೋಮಾಲಿಯಾದ ಹೆಣ್ಣುಮಕ್ಕಳ ನೋವು, ಸಂಕಟವು ನಮ್ಮ ಕರುಳನ್ನು ಹಿಂಡಿರುತ್ತದೆ. ಅವರ ಚೀತ್ಕಾರ ಕಿವಿಯಲ್ಲಿ ಗುಯ್‌ಗುಟ್ಟಿರುತ್ತದೆ. ಇಫ್ರಾ ನಡೆಯುತ್ತಿರುವ ಹಾದಿ ನಮ್ಮನ್ನು ಸಹ ಸಣ್ಣ ಮಟ್ಟಕ್ಕೆ ಮಾನವೀಯ ಕಾರ್ಯ ಕೈಗೆತ್ತಿಕೊಳ್ಳಲು ಪ್ರೇರೇಪಿಸುತ್ತದೆ. ಚಲನಚಿತ್ರ ನೋಡಿದ ನೆಪದಲ್ಲಿ ಮೊಗದಿಶುವಿನ ಹುಡುಗಿಯ ಸಂಪೂರ್ಣ ಕಥೆಯನ್ನು ಹೇಳಬೇಕಾಯಿತು. ಒಮ್ಮೆ ನೀವೂ ನೋಡಿ.

ಹೇಮಂತ್ ಎಲ್

ಬೆಸ್ಕಾಂನಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕಬೆಳವಂಗಲದ ಹೇಮಂತ್ ಅವರಿಗೆ ಸಿನಿಮಾ ಮತ್ತು ಸಾಹಿತ್ಯದಲ್ಲಿ ಆಸಕ್ತಿ. ಪತ್ರಿಕೆಗಳಿಗೆ ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಾರೆ.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here