ಕೆಲವೊಮ್ಮೆ ಮುತ್ತುಗಳನ್ನು ಅಕಸ್ಮಾತ್ ಒಡೆದು ಹಾಕುತ್ತೇವೆ, ಅಯ್ಯೋ, ಮತ್ತೆ ಸಿಗುತ್ತದಲ್ಲವಾ ಎಂಬ ಉಢಾಪೆಯಲ್ಲಿ. ಆದರೆ ಕಾಲ ಮಿಂಚಿರುತ್ತದೆ. ಅದು ನಮಗೆ ಮತ್ತೆ ಸಿಗುವುದಿಲ್ಲ ಅಥವಾ ಸಿಗದ ಲೋಕಕ್ಕೆ ಅದು ಹೋಗಿರುತ್ತದೆ. ಕವಿ ಸಿದ್ಧಲಿಂಗಯ್ಯನವರಿಗೆ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ.
ನನ್ನ ಮತ್ತು ಕವಿ ಸಿದ್ದಲಿಂಗಯ್ಯನವರ ಸಂಬಂಧ ಬಹಳ ಹಿಂದಿನದು. ದಲಿತ ಕವಿ ಎಂಬುದಕ್ಕಿಂತಲೂ ಮಹತ್ತರ ಹಿನ್ನೆಲೆಯದು. ಬಹುಶಃ 1987-88ರ ಸಮಯವದು. ಸಿದ್ಧಲಿಂಗಯ್ಯನವರು ವಿಧಾನಪರಿಷತ್ ಸದಸ್ಯರಾಗಿದ್ದರು. ಪ್ರತಿ ದಿನ ರೇಡಿಯೋದಲ್ಲಿ ಸಂಜೆ 7:35ಕ್ಕೆ ವಾರ್ತೆಗಳು ಮುಗಿದನಂತರ 8 ಗಂಟೆಗೆ ವಿಧಾನಮಂಡಲದ ಕಲಾಪಗಳು ಪ್ರಸಾರವಾಗುತ್ತಿತ್ತು. ರಾಜಕೀಯದಲ್ಲಿ ಬಹು ಆಸಕ್ತಿ ಹೊಂದಿದ್ದ ನನ್ನ ಅಪ್ಪ ಬಸವಯ್ಯ ಕಡ್ಡಾಯವಾಗಿ ಆ ಕಲಾಪವನ್ನು ಕೇಳುತ್ತಿದ್ದರು. ಅವರ ಜೊತೆ ನಾನು ಕೂಡ ಅದನ್ನು ಕೇಳುತ್ತಿದ್ದಾಗ ಪ್ರತಿದಿನ ಆ ಕಲಾಪದಲ್ಲಿ ಪ್ರಸ್ತಾಪವಾಗುತ್ತಿದ್ದದ್ದು ಸಿದ್ಧಲಿಂಗಯ್ಯನವರ ಹೆಸರು! ಸಿದ್ಧಲಿಂಗಯ್ಯ ಆ ಪ್ರಶ್ನೆ ಕೇಳಿದರು, ಈ ಪ್ರಶ್ನೆ ಕೇಳಿದರು, ಸಚಿವರು ಉತ್ತರಿಸಿದರು… ಹೀಗೆ.
ಮುಂದೆ ನನ್ನ ಪದವಿ ಮತ್ತು ಬಿಎಡ್‌ನಲ್ಲಿ ಸಾಹಿತ್ಯ ಓದುವ ಸಂದರ್ಭ ಸಿಕ್ಕಿತಾದರೂ, ಆಗ ಬಹುಜನ ಚಳವಳಿಯಲ್ಲಿ ಹೊಮ್ಮಿದ ಒಂದು ಕೆಟ್ಟ ವಿಮರ್ಶೆ ಸಿದ್ಧಲಿಂಗಯ್ಯ, ದೇವನೂರ ಮಹಾದೇವ ಹೀಗೆ ಈ ಎಲ್ಲರ ಬರಹಗಳನ್ನು ನಮ್ಮಿಂದ ಕಿತ್ತುಕೊಂಡಿತು ಅಥವಾ ದೂರ ತಳ್ಳಿತು. ಆ ವಿಮರ್ಶೆ ಯಾವುದೆಂದರೆ “ದಲಿತ ಸಾಹಿತ್ಯ ಅದು, ಹಾರಾಟದ ಸಾಹಿತ್ಯ, ಚೀರಾಟದ ಸಾಹಿತ್ಯ… ಹಾಗೆ ಹೀಗೆ” ಎಂದು. ಈ ಕೆಟ್ಟ ವಿಮರ್ಶೆಯ ಪ್ರಭಾವ ಎಷ್ಟರ ಮಟ್ಟಿಗಿತ್ತೆಂದರೆ, ಸಿದ್ಧಲಿಂಗಯ್ಯ, ದೇವನೂರ ಮಹಾದೇವ ಹೀಗೆ ಅನೇಕ ಹಿರಿಯರ ಬರಹಗಳನ್ನು ನಾನು ಮತ್ತು ನನ್ನ ತಲೆಮಾರಿನ ಅನೇಕ ಸಾಹಿತ್ಯ ಪ್ರೇಮಿಗಳು ಓದುವ ಅವಕಾಶ ಕಳೆದುಕೊಂಡೆವು. ಈ ನಿಟ್ಟಿನಲ್ಲಿ ನಮಗೆ ನಾವೇ ಈ ಬಗ್ಗೆ ಶಪಿಸಿಕೊಳ್ಳಬೇಕಿದೆ. ಆದರೆ ಅದೃಷ್ಟವಶಾತ್ ಒಮ್ಮೆ ಸಿದ್ಧಲಿಂಗಯ್ಯನವರು ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹ ದೊಡ್ಡುಹುಲ್ಲೂರು ರುಕ್ಕೋಜಿಯವರು ಸಂಪಾದಿಸಿದ್ದ ’ಸದನದಲ್ಲಿ ಸಿದ್ಧಲಿಂಗಯ್ಯ’ ಕೃತಿ ಸಿಕ್ಕಿತು. ಅದನ್ನು ಓದಿದ ನನಗೆ ಸಿದ್ಧಲಿಂಗಯ್ಯನವರ ಅಗಾಧ ಜ್ಞಾನ, ತಳ ಸಮುದಾಯಗಳ ಹಕ್ಕುಗಳ ಬಗ್ಗೆ ಅವರಿಗಿದ್ದ ಕೆಚ್ಚು, ಹೋರಾಟದ ಶಕ್ತಿ ಅಕ್ಷರಶಃ ಪರಿಚಯ ಆಯಿತು. ಈ ಬಗ್ಗೆ ನಾನು ಸಾಮಾಜಿಕ ಜಾಲತಾಣದಲ್ಲಿ ಬರಹವೊಂದನ್ನು ಕೂಡ ಹಂಚಿಕೊಂಡಿದ್ದೆ. ಈ ಮೂಲಕ ಸಿದ್ಧಲಿಂಗಯ್ಯನವರ ಬಗ್ಗೆ ನನಗೆ ವಿಚಿತ್ರ ಪ್ರೀತಿ ಮತ್ತು ಕುತೂಹಲ ಮೂಡುತ್ತಾ ಹೋಯಿತು.
ಅಂದಹಾಗೆ ಅದೊಂದು ದಿನ 2014ರಲ್ಲಿ ಇರಬೇಕು. ಬೆಂಗಳೂರಿನ ಒಂದು ಕಾರ್ಯಕ್ರಮದಲ್ಲಿ ನಾನು ನನ್ನ ’ಎದೆಗೆ ಬಿದ್ದ ಗಾಂಧಿ’ ಕೃತಿಯನ್ನು ಸಭೆಯ ಹೊರಗಡೆ ಮಾರಾಟ ಮಾಡುತ್ತಿದ್ದೆ. ಅಲ್ಲಿಗೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಸಿದ್ಧಲಿಂಗಯ್ಯನವರು ಕಾರ್ಯಕ್ರಮ ಮುಗಿದ ನಂತರ ಪುಸ್ತಕ ಕೊಳ್ಳಲು ನನ್ನ ಬಳಿ ಬಂದಾಗ ನಾನೇ ಅವರಿಗೆ ಪುಸ್ತಕ ಕೊಡುಗೆಯಾಗಿ ನೀಡಲು ಮುಂದಾದೆ. ಆಗ ಸಿದ್ಧಲಿಂಗಯ್ಯನವರು, “ರಘೋತ್ತಮ್ ನೀವೇನಾ? ಈ ಪುಸ್ತಕ ನಾನು ಓದಿದ್ದೇನೆ. ಏನ್ ಚೆನ್ನಾಗಿ ಬರೆದಿದ್ದೀಯ. ಹೇ, ಬ್ಯೂಟಿಫುಲ್ ರೈಟಿಂಗ್. ಅದರಲ್ಲೂ ಈ ಕೃತಿಯಲ್ಲಿ ಪೌರಕಾರ್ಮಿಕರ ಕುರಿತು, ದಲಿತರು ಮತ್ತು ಕೀಳು ವೃತ್ತಿಗಳು ಎಂದು ಬರೆದಿದ್ದೀಯಲ್ಲ ಅದಂತು ಗ್ರೇಟ್” ಅಂದರು. ನನಗೆ ಆಶ್ಚರ್ಯ! ನಾನು ಪುಸ್ತಕ ಕೊಡೋಣ ಎಂದು ಹೋದರೆ ಅವರು ಆಗಲೇ ಆ ಪುಸ್ತಕ ಓದಿ ಅದರ ಲೇಖನವನ್ನು ಸಹ ಉಲ್ಲೇಖ ಮಾಡುತ್ತಿದ್ದಾರೆ! ಹಾಗೆ ಹೋಗುವಾಗ ಸಿದ್ಧಲಿಂಗಯ್ಯನವರು “ಬರಿ, ಎಷ್ಟು ಸಾಧ್ಯವೋ ಅಷ್ಟು ಬರಿ” ಎಂದು ಬೆನ್ನುತಟ್ಟಿಹೋದರು.
ಮತ್ತೊಮ್ಮೆ, ಅದು ಈ ವರ್ಷ ಫೆಬ್ರವರಿ ತಿಂಗಳು. ನಾನು ನನ್ನದೆ ’ಜೈಭೀಮ್ ಬಿಸಿನೆಸ್ ಫೋರಂ’ ಎಂಬ ಸಂಸ್ಥೆಯ ಉದ್ಘಾಟನೆಗೆ ಸಾಹಿತಿ ದೇವನೂರ ಮಹಾದೇವರವರ ಸಹೋದರ ಬಸವರಾಜ ದೇವನೂರ ಅವರನ್ನು ಕರೆಯಲು ಹೋದಾಗ ಬಸವರಾಜುರವರು ಸಿದ್ಧಲಿಂಗಯ್ಯನವರ ಜೊತೆ ದೂರವಾಣಿ ಕರೆಯಲ್ಲಿ ಮಾತಾಡುತ್ತಿದ್ದರು. ಆಗ ಅವರು ನನ್ನ ಕೈಲಿ ಫೋನ್ ಇಟ್ಟು ಸಿದ್ಧಲಿಂಗಯ್ಯನವರ ಜೊತೆ ಮಾತಾಡುವಂತೆ ಹೇಳಿದರು. ನಾನು “ಸರ್, ಚೆನ್ನಾಗಿದಿರ. ಆರೋಗ್ಯನಾ ಸರ್. ನಮ್ಮದೊಂದು ಕಾರ್ಯಕ್ರಮ ಇದೆ, ನೀವು ಬರಬೇಕಿತ್ತು” ಎಂದಾಗ ಸಿದ್ಧಲಿಂಗಯ್ಯನವರು “ಇರಲಿ ರಘೋತ್ತಮ್, ಮುಂದೆ ಒಂದು ದಿನ ಬರೋಣ. ಆದರೆ
ನೀನು ತುಂಬಾ ಚೆನ್ನಾಗಿ ಬರೆಯುತ್ತೀಯ ಕಣಪ್ಪ. ಅದರಲ್ಲೂ ಸಂಘ ಪರಿವಾರದವರಿಗೆ, ಅದು ಸಾಮಾಜಿಕ ಮಾಧ್ಯಮ ಇರಬಹುದು, ಪತ್ರಿಕೆ ಇರಬಹುದು ಸರಿಯಾಗಿ ಉತ್ತರ ಕೊಡುತ್ತಿದ್ದೀಯ. ನಮ್ಮಲ್ಲು ಒಬ್ಬ ಈ ಥರ ಬರೆಯುತ್ತಿರುವುದು, ಅದರಲ್ಲೂ ನಮ್ಮೆಲ್ಲರ ಪರವಾಗಿ ಬರೆಯುತ್ತಿದೀಯಲ್ಲ ಇದು ನಿಜಕ್ಕೂ ಒಳ್ಳೆಯದು. ಬರೆ, ಒಂಚೂರು ತಲೆ ಕೆಡಿಸಿಕೊಳ್ಳಬೇಡ, ಬರೆ” ಎಂದರು. ಅಂದಹಾಗೆ ಕೆಲವು ದಿನಗಳ ಹಿಂದೆ ಸಾಮರಸ್ಯ ವೇದಿಕೆಯ ವಾದಿರಾಜ್‌ರವರ ಲೇಖನವೊಂದಕ್ಕೆ ಪ್ರತಿಕ್ರಿಯೆಯಾಗಿ ವಾಚಕರವಾಣಿಯ ನನ್ನ ಒಂದು ಪತ್ರ ಉಲ್ಲೇಖಿಸಿ ಸಿದ್ಧಲಿಂಗಯ್ಯನವರು ಹಾಗೆ ಹೇಳಿದ್ದರು. ಆ ನಿಟ್ಟಿನಲ್ಲಿ ಸಿದ್ಧಲಿಂಗಯ್ಯನವರ ಆ ಮೆಚ್ಚುಗೆಯ ಮಾತುಗಳು, ಅದರಲ್ಲೂ ಸಾಮಾಜಿಕ ಮಾಧ್ಯಮದ ನನ್ನ ಬರಹಗಳನ್ನು ಗಮನಿಸಿ ಅವರು ನೀಡಿದ್ದ ಪ್ರತಿಕ್ರಿಯೆ ಅಕ್ಷರಶಃ ನನಗೆ ಹೊಸ ಚೈತನ್ಯ, ಶಕ್ತಿ ನೀಡಿತ್ತು.
ಆಶ್ಚರ್ಯ ಎಂದರೆ ಇದೇ ಮಾರ್ಚ್‌ನಲ್ಲಿ ಸಿದ್ಧಲಿಂಗಯ್ಯನವರು ಪುಸ್ತಕ ಬಿಡುಗಡೆ ಸಮಾರಂಭವೊಂದಕ್ಕೆ ಮೈಸೂರಿಗೆ ಬಂದರು. ಕಾರ್ಯಕ್ರಮದ ಅವರ ಭಾಷಣವನ್ನು ನನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿದೆ. ಸಿದ್ಧಲಿಂಗಯ್ಯನವರು ಸುಮಾರು ಅರ್ಧ ಗಂಟೆ ಬಿಡುಗಡೆಗೊಂಡ ಆ ಕೃತಿ ಕುರಿತು ಮಾತಾಡಿದರು. ಹಾಗೆ ಕಾರ್ಯಕ್ರಮದ ಕೊನೆಯಲ್ಲಿ ಸಿದ್ಧಲಿಂಗಯ್ಯನವರನ್ನು ಭೇಟಿಮಾಡಿ ಒಂದು ಸೆಲ್ಫಿ ತೆಗೆಸಿಕೊಂಡೆ. ಅವರು ಅಷ್ಟೇ ಪ್ರೀತಿಯಿಂದ “ಬೆಂಗಳೂರಿಗೆ ಬನ್ನಿ ರಘೋತ್ತಮ್ ನನ್ನ ಮನೆಗೆ. ಅನೇಕ ಕೃತಿಗಳನ್ನು ನಿಮಗೆ ಕೊಡಬೇಕು. ಓದಿ, ಬರೆಯಿರಿ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ” ಎಂದರು. ಅಕ್ಷರಶಃ, ನೇರ ಭೇಟಿಯ ಮೂಲಕ ಅವರು ನುಡಿದ ಈ ಸ್ಫೂರ್ತಿಯ ನುಡಿಗಳು ನನ್ನಲ್ಲಿ ಮತ್ತಷ್ಟು ಚೈತನ್ಯ ತಂದಿತ್ತು. ಕೊರೊನಾ ಮುಗಿದನಂತರ ಒಮ್ಮೆ ಅವರ ಮನೆಗೆ ಹೋಗಿ ಅವರ ಸಂಗ್ರಹದ ಎಲ್ಲಾ ಪುಸ್ತಕಗಳನ್ನು ಕಣ್ತುಂಬಿಕೊಂಡು ಒಂದಷ್ಟು ಪಡೆದುಕೊಂಡು ಬರಬೇಕು ಎಂದುಕೊಂಡೆ. ದುರಂತ ಆ ಸಮಯ ಬರಲೇ ಇಲ್ಲ. ಸಿದ್ಧಲಿಂಗಯ್ಯನವರು ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರ ಸ್ಪೂರ್ತಿ ತುಂಬುವ ಮಾತುಗಳು, ಚೈತನ್ಯದಾಯಕ ಆ ನುಡಿಗಳು, ಜೊತೆಗೆ ತೆಗೆಸಿಕೊಂಡ ಒಂದಷ್ಟು ಸೆಲ್ಫಿ ಇಷ್ಟೇ ನನಗೆ ಉಳಿದದ್ದು.
ಕನ್ನಡ ಸಾರಸ್ವತ ಲೋಕ ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ. ಅದು ಗುಡಿಸಲಲ್ಲಿ ಹುಟ್ಟಿ ಮುಗಿಲೆತ್ತರಕೆ ಬೆಳೆದು ನಿಂತ ರತ್ನ. ಅದನ್ನು ದಲಿತ ಕವಿ ಎಂತಲೊ ಅಥವಾ ಬರೀ ಕವಿ ಎಂತಲೊ ಹೇಗಾದರೂ ಕರೆಯಿರಿ. ಆದರೆ ಅದು ಹುಟ್ಟು ಹಾಕಿದ ಸಾಹಿತ್ಯ ಕ್ರಾಂತಿ “ಇಕ್ರರ್ಲಾ ವದಿರ್‍ಲಾ” ಎಂಬ ಅದರ ಗಟ್ಟಿ ದನಿ ಎಂದೂ ಕೂಡ ಆರುವುದಿಲ್ಲ. ಸ್ಫೂರ್ತಿಯ ಸೆಲೆಯಾಗಿ ಚೈತನ್ಯದ ಹೊಳೆಯಾಗಿ ಸದಾ ನಮ್ಮಲ್ಲಿ ಅದು ನೆಲೆಗೊಂಡಿರುತ್ತದೆ. ಸಿದ್ಧಲಿಂಗಯ್ಯ ಸರ್, ಹೋಗಿ ಬನ್ನಿ. ನಿಮ್ಮ ಪರಂಪರೆಯನ್ನು ನಾವು ಉಳಿಸುತ್ತೇವೆ. ದಲಿತ ಸಾಹಿತ್ಯವನ್ನು ಮುಗಿಲೆತ್ತರಕೆ ಕೊಂಡೊಯ್ಯುತ್ತೇವೆ. ಎಲ್ಲರಿಗೂ ಉತ್ತರ ಕೊಡುತ್ತ ನಮ್ಮ ಜನರಿಗೂ ದನಿಯಾಗುತ್ತ ನಿಮ್ಮ ಆಶಯದಂತೆ ನಡೆಯುತ್ತೇವೆ.
ಜೈಭೀಮ್.

ರಘೋತ್ತಮ ಹೊ.ಬ
ಹೊಸ ತಲೆಮಾರಿನ ಪ್ರಖರ ಚಿಂತಕರಲ್ಲಿ ರಘೋತ್ತಮ ಸಹಾ ಒಬ್ಬರು. ಬಹುಜನ ಚಳವಳಿಯ ಭಾಗವಾಗಿ ಗಟ್ಟಿದನಿಯಲ್ಲಿ ವಿಚಾರ ಮಂಡಿಸುತ್ತಾ ಗಮನ ಸೆಳೆದ ಅವರು, ಅಂಬೇಡ್ಕರ್‌ನ್ನು ಆಳವಾಗಿ ಓದಿಕೊಂಡಿದ್ದು ತಮ್ಮ ನಿಷ್ಠುರ ಅನಿಸಿಕೆಗಳನ್ನು ಹೇಳಲು ಹಿಂಜರಿಯದ ವ್ಯಕ್ತಿತ್ವವುಳ್ಳವರು


