ಇಡೀ ರಾಷ್ಟ್ರ ಕೋವಿಡ್ ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿದೆ. ಪ್ರಕರಣಗಳ ಸಂಖ್ಯೆ ಇಳಿಯುತ್ತಿರುವುದರಿಂದ ನಿಟ್ಟುಸಿರು ಬಿಡುವಂತಾಗಿರುವ ಸಮಯದಲ್ಲಿಯೇ ಮಹಾರಾಷ್ಟ್ರದಲ್ಲಿ 2-4 ವಾರಗಳಲ್ಲಯೇ ಕೋವಿಡ್ ಮೂರನೇ ಅಲೆ ಅಪ್ಪಳಿಸಲಿದ್ದು ಡೆಲ್ಟಾ ಪ್ಲಸ್ ಎಂಬ ಭಿನ್ನರೂಪದ ವೈರಸ್ ಹೆಚ್ಚಿನ ಪ್ರಕರಣಗಳನ್ನು ಹರಡುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಸರ್ಕಾರ ರಚಿಸಿದ ಟಾಸ್ಕ್ ಫೋರ್ಸ್ ಅಭಿಪ್ರಾಯಪಟ್ಟಿದೆ.
ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡಿರುವ ಸಿಎಂ ಉದ್ಧವ್ ಠಾಕ್ರೆ ರಾಜ್ಯದ ಗ್ರಾಮೀಣ ಮತ್ತು ನಗರ ಭಾಗಗಳೆರಡರಲ್ಲೂ ಅಗತ್ಯ ಔಷಧಿಗಳು ಮತ್ತು ಆರೋಗ್ಯ ಸಲಕರಣೆಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಹಿರಿಯ ವೈದ್ಯರಿಗೆ ನಿರ್ದೇಶನ ನೀಡಿದ್ದಾರೆ.
ಡೆಲ್ಟಾ ವೇರಿಯೆಂಟ್‌ನಿಂದಾಗಿ ಕೋವಿಡ್ ಎರಡನೇ ಅಲೆಯು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಕಂಡಬಂದಿದ್ದವು. ಹಾಗಾಗಿ ಈಗ ಮೂರನೇ ಅಲೆಯ ‘ಡೆಲ್ಟಾ ಪ್ಲಸ್ ವೇರಿಯೆಂಟ್’ ಇನ್ನು ಹೆಚ್ಚಿನ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಯಿದೆಯೆಂದು ರಾಜ್ಯ ಆರೋಗ್ಯ ಇಲಾಖೆ ಅಂದಾಜಿಸಿದೆ. ಆಗಸ್ಟ್ ಸೆಪ್ಟಂಬರ್ ವೇಳೆಗೆ ಮೂರನೇ ಅಲೆ ಸಾಧ್ಯತೆಯನ್ನು ಊಹಿಸಲಾಗಿತ್ತು. ಆದರೆ ಅದಕ್ಕೂ 2- 4 ವಾರಗಳ ಮುಂಚೆಯೇ ಅದು ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಎರಡನೆ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆಯಿದೆ. ರಾಜ್ಯ 8 ಲಕ್ಷ ಸಕ್ರಿಯ ಪ್ರಕರಣಗಳನ್ನು ಎದುರಿಸಬೇಕಾಗಬಹುದು ಮತ್ತು ಅದರಲ್ಲಿ ಶೇ.10 ರಷ್ಟು ಮಕ್ಕಳು ಸೇರಿರುತ್ತಾರೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮಹರಾಷ್ಟ್ರವು ಕೋವಿಡ್ ಮೊದಲ ಅಲೆಯಲ್ಲಿ 19 ಲಕ್ಷ ಪ್ರಕರಣಗಳನ್ನು ದಾಖಲಿಸಿದ್ದರೆ ಎರಡನೇ ಅಲೆಯಲ್ಲಿ 40 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿತ್ತು.
ಕೋವಿಡ್ ಮೂರನೇ ಅಲೆ ಎದುರಿಸಲು ಆರೋಗ್ಯ ಇಲಾಖೆ ಮತ್ತು ಮುಖ್ಯಮಂತ್ರಿಗಳು ಸಭೆ ನಡೆಸಿದ್ದಾರೆ. ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸುವುದು, ಆರ್‌ಪಿಸಿಆರ್ ಟೆಸ್ಟ್‌ಗಳನ್ನು ಮಾಡಿಸಿಕೊಳ್ಳುವುದನ್ನು ಜನರು ಪಾಲಿಸಬೇಕು. ಆಗಸ್ಟ್ ಸೆಪ್ಟಂಬರ್ ವೇಳೆಗೆ ರಾಜ್ಯಕ್ಕೆ ಹೆಚ್ಚಿನ ಲಸಿಕೆಗಳು ಲಭ್ಯವಾಗಲಿದ್ದು ಸಾಧ್ಯವಾದಷ್ಟು ಜನರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ.
ಕರ್ನಾಟಕದ ಪರಿಸ್ಥಿತಿ
ಕೋವಿಡ್ ಎರಡನೇ ಅಲೆ ಮಹಾರಾಷ್ಟ್ರಕ್ಕೆ ಅಪ್ಪಳಿಸಿದ ಕೆಲ ದಿನಗಳ ನಂತರವಷ್ಟೇ ಕರ್ನಾಟಕವನ್ನು ಆಕ್ರಮಿಸಿತ್ತು. ಈ ಬಾರಿ ಆಗಸ್ಟ್ – ಸೆಪ್ಟಂಬರ್ ತಿಂಗಳಿನಲ್ಲಿ ರಾಜ್ಯಕ್ಕೆ ಮೂರನೇ ಅಲೆಯನ್ನು ನಿರೀಕ್ಷಿಸಲಾಗಿದ್ದು, ಅಕ್ಟೋಬರ್ – ನವೆಂಬರ್ ವೇಳೆಗೆ ಅದು ಇಳಿಮುಖವಾಗಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರ ನೇಮಿಸಿರುವ ಕಾರ್ಯಪಡೆಯ ಸದಸ್ಯರು ತಿಳಿಸಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಟಾಸ್ಕ್ ಫೋರ್ಸ್‌ನ ಸದಸ್ಯರಾದ ಡಾ. ಪ್ರದೀಪ್‌ರವರು “ರಾಜ್ಯದಲ್ಲಿ ಡೆಲ್ಟಾ ವೇರಿಯೆಂಟ್ ಕುರಿತು ಕಣ್ಗಾವಲು ಇಡಲು ಆರು ಕಡೆ ಕಾರ್ಯನಿರತರಾಗಿದ್ದೇವೆ. ಆಗಸ್ಟ್-ಸೆಪ್ಟಂಬರ್ ವೇಳೆಗೆ ಮೂರನೇ ಅಲೆ ಅಪ್ಪಳಿಸಬಹುದು ಎಂದು ಅಂದಾಜಿಸಿದ್ದೇವೆ. ಆದರೆ ಡೆಲ್ಟಾ ವೇರಿಯೆಂಟ್ ಬರುತ್ತಾ ಅಥವಾ ಬೇರೆಯದು ಬರುತ್ತಾ ಗೊತ್ತಿಲ್ಲ. ಹಳೆ ಸ್ಟ್ರೈನ್ ಅಂತೂ ಬರುವ ಸಾಧ್ಯತೆಯಿದೆ. ನಮ್ಮಲ್ಲಿ ಬೇರೆ ವೇರಿಯೆಂಟ್‌ಗಳು ಇರುವುದರಿಂದ ಎಲ್ಲದರ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ” ಎಂದರು.
ಮೂರನೇ ಅಲೆ ಬರುವುದು ಖಚಿತ. ಅದಕ್ಕಾಗಿ ಈಗಿನಿಂದಲೇ ಸಿದ್ದತೆ ನಡೆಸಬೇಕಿದೆ. ಎರಡನೇ ಅಲೆಯಲ್ಲಿ ಮಾಡಿದ ತಪ್ಪುಗಳಿಂದ ಎಲ್ಲಾ ರಾಜ್ಯಗಳು ಮತ್ತು ಸರ್ಕಾರಗಳು ಪಾಠ ಕಲಿಯಬೇಕಿದೆ. ಬೆಡ್‌ಗಳು, ಆಮ್ಲಜನಕ ಮತ್ತು ಔಷಧಿಗಳಿಗಾಗಿ ಜನ ಪರದಾಡದೇ ವೈಜ್ಞಾನಿಕವಾಗಿ ಮೂರನೇ ಅಲೆಯನ್ನು ಹೆಚ್ಚಿನ ಸಾವು-ನೋವುಗಳಿಲ್ಲದೆ ಎದುರಿಸಬೇಕಾದ ಅನಿವಾರ್ಯತೆ ಇದೆ.
ಇದನ್ನೂ ಓದಿ: ಕೊರೊನಾ 3ನೇ ಅಲೆ ಎದುರಿಸಲು ದೆಹಲಿ ಸಿದ್ಧತೆ: 5,000 ಯುವಜನರಿಗೆ ವೈದ್ಯಕೀಯ ತರಬೇತಿ


