2005 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ನ್ಯಾಯಲಯ ಪ್ರಕರಣದ ಆರೋಪಿ ಮೊಹಮ್ಮದ್ ಹಬೀಬ್ ಅವರನ್ನು ಇಂದು ದೋಷಮುಕ್ತಗೊಳಿಸಿದೆ. ಮೊಹಮ್ಮದ್ ಹಬೀಬ್ ಅವರು UAPA ಕಾಯ್ದೆಯಡಿ ಕಳೆದ 4 ವರ್ಷಗಳಿಂದ ಜೈಲಿನಲ್ಲಿ ಬಂಧಿಯಾಗಿದ್ದರು.
2005 ರ ಡಿಸೆಂಬರ್‌ನಲ್ಲಿ ಬೆಂಗಳೂರಿನ IISC ಕ್ಯಾಂಪಸ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ವ್ಯಕ್ತಿ ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ 7 ನೇ ಆರೋಪಿಯಾಗಿ ಹಬೀಬ್ ಅವರನ್ನು 2017 ರಲ್ಲಿ ಬಂಧಿಸಲಾಗಿತ್ತು.
ಎನ್‌ಐಎ ವಿಶೇಷ ನ್ಯಾಯಾಧೀಶ ಕಾಸನಪ್ಪ ನಾಯ್ಕ್ ಮೊಹಮ್ಮದ್ ಹಬೀಬ್ ಅವರನ್ನು ಬಿಡುಗಡೆಗೊಳಿಸಿ ಆದೇಶ ನೀಡಿದ್ದಾರೆ. ಎನ್‌ಐಎ ಆರೋಪಿತರ ವಿರುದ್ಧದ ಆರೊಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ. NIA ಬಂಧಿತ ಆರೋಪಿ ಮೊಹಮ್ಮದ್ ಹಬೀಬ್ ಅವರ ವಿರುದ್ಧ ಯಾವುದೇ ಪ್ರಬಲ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಪ್ರಕರಣದ 7 ನೇ ಆರೋಪಿಯಾಗಿರುವ ಹಬೀಬ್ ವಿರುದ್ಧ IPC ಸೆಕ್ಷನ್ 121-A, 122, 123, 307, 302 ಇಂಡಿಯನ್ ಆರ್ಮ್ಸ್ ಆಕ್ಟ್‌ನ ಸೆಕ್ಷನ್ 25, 27 ಸೇರಿದಂತೆ ಬೇರೆ ಬೇರೆ ಕಾನೂನುಗಳಡಿ NIA ಪ್ರಕರಣವನ್ನು ದಾಖಲಿಸಿತ್ತು.
ಆರೋಪಿಯು ತಾನು ಯಾವ ಕಾರಣಕ್ಕೆ ಬಂಧಿತನಾಗಿದ್ದೇನೆ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ನ್ಯಾಯಾಧೀಶರಾದ ಕಾಸನಪ್ಪ ನಾಯ್ಕ್ ಪ್ರಕರಣದ ವಿಚಾರಣೆ ವೇಳೆ ತಿಳಿಸಿದ್ದಾರೆ.
ಮೊಹಮ್ಮದ್ ಹಬೀಬ್ ಅವರನ್ನು ಎನ್‌ಐಎ ಪೊಲೀಸರು 2017 ರಲ್ಲಿ ತ್ರಿಪುರಾ ರಾಜ್ಯದ ಅಗರ್ತಲಾದಲ್ಲಿ ಬಂಧಿಸಿದ್ದರು.
ಆರೋಪಿತ ಹಬೀಬ್ ಅವರ ಪರವಾಗಿ ವಾದಿಸಿದ ನ್ಯಾಯವಾದಿ ಮೊಹಮ್ಮದ್ ತಾಹೀರ್ ಪೊಲೀಸರು ಆರೋಪಿಯ ವಿರುದ್ಧ ಚಾರ್ಜ್‌ಶೀಟ್‌ನಲ್ಲಿ ಯಾವುದೇ ಆರೋಪಗಳನ್ನು ಮಾಡಿಲ್ಲ. ಜೊತೆಗೆ ಪ್ರಕರಣದಲ್ಲಿ ಮೊಹಮ್ಮದ್ ಹಬೀಬ್ ಅವರ ಪಾತ್ರವನ್ನು ಸಾಬೀತುಪಡಿಸುವ ಯಾವೊಂದು ಸಾಕ್ಷಿಗಳನ್ನು ಇದುವರೆಗೆ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.
ಪ್ರಕರಣದ ಮುಖ್ಯ ಆರೊಪಿ ಸಬಾಹುದ್ದೀನ್ 29.03.2008 ರಲ್ಲಿ ನೀಡಿದ್ದ ಹೇಳಿಕೆಯಲ್ಲಿ ತಾನು ಮೇ 2005 ರಲ್ಲಿ ಹಬೀಬ್ ಅವರನ್ನು ತ್ರಿಪುರಾದಲ್ಲಿ ಭೇಟಿಯಾಗಿದ್ದೆ. ಹಬೀಬ್ ಸಹಾಯದಿಂದ ಭಾರತದ ಗಡಿಯನ್ನು ದಾಟಿ ಬಾಂಗ್ಲಾದೇಶಕ್ಕೆ ಹೋಗಿ ಬಂದಿದ್ದೆ. ಎಲ್ಲೂ ನನ್ನ ಉದ್ಧೇಶವನ್ನು ಹಬೀಬ್‌ಗೆ ಹೇಳಿರಲಿಲ್ಲ ಎಂದು 35 ಪುಟಗಳ ಸ್ವಯಂ ಪ್ರೇರಿತ ಹೇಳಿಕೆ ನೀಡಿದ್ದರು. ಸಬಾಹುದ್ದಿನ್ ಹೇಳಿಕೆಯ ಆಧಾರದ ಮೇಲೆ ಎನ್‌ಐಎ ಪೊಲೀಸರು ಹಬೀಬ್ ಅವರನ್ನು ಬಂಧಿಸಿದ್ದರು.
ಪ್ರಕರಣದ ಮುಖ್ಯ ಆರೊಪಿ ಸಬಾಹುದ್ದಿನ್ ತನ್ನ ಹೇಳಿಕೆಯಲ್ಲಿ ಅನೇಕರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಆಶ್ರಯ ನೀಡಿದವರು, ದಾಳಿಗೆ ಸಹಾಯ ಮಾಡಿದವರು, ಹೀಗೆ ಅನೆಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರೆ ಎನ್‌ಐಎ ಪೊಲೀಸರು ಇವರೆಲ್ಲರ ಕುರಿತು ಸ್ಪಷ್ಟ ಮಾಹಿತಿಯಿದ್ದರೂ ಅವರನ್ನೆಲ್ಲ ಪ್ರಕರಣದ ಆರೊಪಿಗಳನ್ನಾಗಿ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಿಲ್ಲ. ಸಾಕ್ಷಿಗಳನ್ನಾಗಿಯೂ ಮಾಡಿಲ್ಲ. ಅದರೆ ಹಬೀಬ್ ಅವರನ್ನು ಪ್ರಕರಣದಲ್ಲಿ ಹೆಸರಿಸಲಾಗಿದೆ. ಹಾಗೇ 2017 ರ ಮಾರ್ಚ್ 23 ರಂದು ಹಬೀಬ್ ಅವರನ್ನು ಬಂಧಿಸಿದ ಎನ್‌ಐಎ ಅವರಿಂದ ಬಲವಂತವಾಗಿ ಹೇಳಿಕೆಯನ್ನು ಪಡೆದುಕೊಂಡಿದೆ. ಅದರೆ ಆ ಹೇಳಿಕೆಗೆ ಕಾನೂನಾತ್ಮಕವಾದ ಯಾವ ಮಾನ್ಯತೆಯೂ ಇಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.
ಎನ್‌ಐಎ ನ್ಯಾಯಾಲಯವು ಸುದೀರ್ಘವಾಗಿ ಪ್ರಕರಣದ ವಿಚಾರಣೆಯನ್ನು ನಡೆಸಿ ಮುಖ್ಯ ಆರೋಪಿ ಸಬಾಹುದ್ದಿನ್ ತನ್ನ ಉದ್ಧೇಶಗಳನ್ನು ಮೊಹಮ್ಮದ್ ಹಬೀಬ್ ಅವರಿಗೆ ತಿಳಿಸಿರಲಿಲ್ಲ. ಜೊತೆಗೆ ಮೊಹಮ್ಮದ್ ಹಬೀಬ್ ಅವರಿಗೆ ಐಐಎಸ್‌ಸಿ ಬೆಂಗಳೂರಿನಲ್ಲಿ ದಾಳಿ ನಡೆಯುವ ಯಾವ ಮಾಹಿತಿಯೂ ಇರಲಿಲ್ಲ. ಸಬಾಹುದ್ದಿನ್‌ಗೆ ಲಷ್ಕರ್ ಏ ತೊಯ್ಬಾ ಉಗ್ರ ಸಂಘಟನೆಯ ನಂಟು ಇರುವುದು ಮೊಹಮ್ಮದ್ ಹಬೀಬ್ ಅವರಿಗೆ ಮಾಹಿತಿಯಿರಲಿಲ್ಲ. ಪ್ರಕರಣದಲ್ಲಿ ಮೊಹಮ್ಮದ್ ಹಬೀಬ್ ಅವರ ವಯಕ್ತಿಕ ಪಾತ್ರ ಸಾಬೀತಾಗಿಲ್ಲ. ಹಾಗಾಗಿ ಬೆಂಗಳೂರು IISc ದಾಳಿ ಪ್ರಕರಣದ ಆರೊಪದಿಂದ ಮೊಹಮ್ಮದ್ ಹಬೀಬ್ ಅವರನ್ನು ದೋಷಮುಕ್ತಗೊಳಿಸಲಾಗಿದೆ ಎಂದು NIA ಕೋರ್ಟ್ ಹೇಳಿದೆ.
ಇದನ್ನೂ ಓದಿ : ಮುಂದಿನ ಭಾರೀ ಕಾಂಗ್ರೆಸ್ ಮುಖ್ಯಮಂತ್ರಿ ಚರ್ಚೆ!: ಮಹಾರಾಷ್ಟ್ರ ಮೈತ್ರಿ ಗಟ್ಟಿಯೆಂದ ಶಿವಸೇನೆ


