ಟಿವಿ ಕಾರ್ಯಕ್ರಮವೊಂದರ ಚರ್ಚೆಯಲ್ಲಿ ಲಕ್ಷದ್ವೀಪ ಮೂಲದ ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ನೀಡಿದ ಹೇಳಿಕೆಯ ಆಧಾರದ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಆದರೆ ಬಿಜೆಪಿಯು ನನಗೆ ಪಾಕಿಸ್ತಾನದ ಸಂಪರ್ಕವಿದೆ ಎಂದು ಪ್ರಕರಣವನ್ನು ಮತ್ತಷ್ಟು ಜಟಿಲಗೊಳಿಸುತ್ತಿದೆ ಎಂದು ಆಯಿಷಾ ಸುಲ್ತಾನ ಆರೋಪಿಸಿದ್ದಾರೆ. ಅವರನ್ನು ಮೂರನೆ ಬಾರಿಗೆ ವಿಚಾರಣೆ ನಡೆಸಲಾಗಿದೆ ಎಂದು TNIE ವರದಿ ಮಾಡಿದೆ.
“ವಿವಾದಾತ್ಮಕ ಹೇಳಿಕೆಗೆ ಕಾರಣಕ್ಕೆ ಪೊಲೀಸರು ನನ್ನನ್ನು ವಿಚಾರಣೆ ನಡೆಸಿದ್ದರು. ಆದರೆ ಬಿಜೆಪಿಯ ಸಾಮಾಜಿಕ ಜಾಲತಾಣದ ಅಭಿಯಾನವು ಪ್ರಕರಣವನ್ನು ಮತ್ತಷ್ಟು ಜಟಿಲಗೊಳಿಸಿದೆ. ಪೊಲೀಸರು ನನ್ನ ಫೋನ್ ವಿವರಗಳು, ವಾಟ್ಸಾಪ್ ಕರೆಗಳು ಮತ್ತು ಬ್ಯಾಂಕ್ ವಿವರಗಳನ್ನು ಪರಿಶೀಲಿಸಿದ್ದು, ನನಗೆ ಯಾವುದೇ ವಿದೇಶಿ ಸಂಪರ್ಕವಿದೆಯೇ ಎಂದು ವಿಚಾರಣೆ ನಡೆಸಿದ್ದಾರೆ. ನನ್ನ ಹೇಳಿಕೆಗಳನ್ನು ಪಾಕಿಸ್ತಾನದಲ್ಲಿ ಸಂಭ್ರಮಿಸಲಾಗುತ್ತಿದೆ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರಿಂದ ಈ ವಿಚಾರಣೆ ಮಾಡುವುದು ಅಗತ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ” ಎಂದು ಆಯಿಷಾ ಸುಲ್ತಾನಾ ಹೇಳಿದ್ದಾರೆ.
ಇದನ್ನೂ ಓದಿ: 14 ವರ್ಷ ವನವಾಸದಿಂದ ಮರಳಿ ಬಂದಳೇ ಸೀತೆ?: ಕರೀನಾ, ಆಯಿಷಾ, ಭವ್ಯ ವಿರುದ್ಧ ನಿಂತ ಶಕ್ತಿಗಳು ಯಾವುವು?
ಈ ನಡುವೆ, ಲಕ್ಷದ್ವೀಪ ಪೊಲೀಸರು ಆಯಿಷಾ ಅವರನ್ನು ಗುರುವಾರ ಮೂರನೇ ಸುತ್ತಿನ ವಿಚಾರಣೆ ನಡೆಸಿದ್ದು ನಂತರ ಅವರನ್ನು ದ್ವೀಪದಿಂದ ಹೊರಗೆ ಹೊಗಲು ಅನುಮತಿ ನೀಡಿದ್ದಾರೆ. ತನ್ನ ಏಳು ದಿನಗಳ ಕಡ್ಡಾಯ ಕ್ವಾರಂಟೈನ್ ಅನ್ನು ಶುಕ್ರವಾರ ಕೊನೆಗೊಳಿಸಿ, ಶನಿವಾರ ಕೊಚ್ಚಿಗೆ ತೆರಳಲಿದ್ದೇನೆ ಎಂದು ಆಯಿಷಾ ಹೇಳಿದ್ದಾರೆ. ಈ ಮೊದಲು ಜೂನ್ 20 ಮತ್ತು 23 ರಂದು ಪೊಲೀಸರು ಆಯಿಷಾ ಅವರನ್ನು ವಿಚಾರಣೆ ನಡೆಸಿದ್ದರು.
“ಪ್ರಕರಣವು ತನಿಖೆಯ ಹಂತದಲ್ಲಿದೆ. ನಾವು ಆಯಿಷಾ ಅವರ ಹೇಳಿಕೆಯನ್ನು ದಾಖಲಿಸಿದ್ದೇವೆ. ದೂರಿನ ಆಧಾರದಲ್ಲಿ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆ. ಈ ಸಂಬಂಧಿತ ನಾವು ವಿಷಯಗಳ ಬಗ್ಗೆ ತನಿಖೆ ನಡೆಸಬೇಕಾಗಿದ್ದು, ಸಾಕ್ಷಿಗಳನ್ನು ಪರೀಶೀಲಿಸಬೇಕಾಗುತ್ತದೆ. ತನಿಖೆ ಪ್ರಗತಿಯಲ್ಲಿರುವುದರಿಂದ ಅದರ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಲಕ್ಷದ್ವೀಪ ಎಸ್ಪಿ ಶರತ್ ಕುಮಾರ್ ಸಿನ್ಹಾ ಹೇಳಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ: ಆಯಿಷಾ ಸುಲ್ತಾನಾ
ಮಲಯಾಳಂ ಟಿವಿ ಚಾನೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದ ಆಯಿಷಾ ಸುಲ್ತಾನ, “ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ಒಕ್ಕೂಟ ಸರ್ಕಾರವು ‘ಜೈವಿಕ ಅಸ್ತ್ರ’ ರೂಪದಲ್ಲಿ ಪ್ರಯೋಗಿಸಿದೆ” ಎಂದು ಹೇಳಿದ್ದರು. ಇದರ ವಿರುದ್ದ ಲಕ್ಷದ್ವೀಪ ಬಿಜೆಪಿ ಅಧ್ಯಕ್ಷ ಸಿ. ಅಬ್ದುಲ್ ಖಾದರ್ ಹಾಜಿ ನೀಡಿದ ದೂರಿನ ಮೇರೆಗೆ ಜೂನ್ 10 ರಂದು ದ್ವೀಪದ ಪೊಲೀಸರು ಆಯಿಷಾ ಸುಲ್ತಾನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಆಯಿಷಾ ಸುಲ್ತಾನ ಅವರು ಟಿವಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಶೂನ್ಯ ಕೊರೊನಾವಿದ್ದ ಪ್ರದೇಶದಲ್ಲಿ ದಿನಕ್ಕೆ ನೂರು ಪ್ರಕರಣಗಳು ವರದಿಯಾಗುತ್ತಿವೆ. ಒಕ್ಕೂಟ ಸರ್ಕಾರ ಹೊಸದಾಗಿ ನೇಮಕಮಾಡಿದ್ದ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು ಪ್ರಯೋಗಿಸಿದ್ದು ‘ಜೈವಿಕ ಅಸ್ತ್ರ’ ರೀತಿಯಲ್ಲಾಗಿದೆ. ನನಗೆ ಸ್ಪಷ್ಟವಾಗಿ ಹೇಳಲು ಸಾಧ್ಯ, ಒಕ್ಕೂಟ ಸರ್ಕಾರವು ಕೊರೊನಾವನ್ನು ಜೈವಿಕ ಅಸ್ತ್ರವಾಗಿ ಪ್ರಯೋಗಿಸಿದೆ” ಎಂದು ಹೇಳಿದ್ದರು. ಇದನ್ನು ಬಿಜೆಪಿ ವಿವಾದವನ್ನಾಗಿ ಮಾಡಿತ್ತು.
ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಪರಿಚಯಿಸಿದ ಹೊಸ ನಿಯಮಗಳ ವಿರುದ್ದ, ಹಲವು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ದ್ವೀಪವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ನೀತಿಗಳು ದ್ವೀಪವಾಸಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪ: ನಿರ್ಮಾಪಕಿ ಆಯಿಷಾ ಸುಲ್ತಾನಗೆ ಬಂಧನದಿಂದ ರಕ್ಷಣೆ ನೀಡಿದ ಕೇರಳ ಹೈಕೋರ್ಟ್


