ಪ್ರಸ್ತುತ ನಮ್ಮ ರಾಜ್ಯ ಮತ್ತು ದೇಶವು ಕೆಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೆಯದಾಗಿ ತೈಲ ಬೆಲೆ ಏರಿಕೆ ಮತ್ತು ಅದರಿಂದ ಜನ ಸಾಮಾನ್ಯರ ಅಗತ್ಯ ವಸ್ತುಗಳ ಮೇಲೆ ಉಂಟಾದ ಬೆಲೆ ಏರಿಕೆ..
ಎರಡನೆಯದಾಗಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ಮುಂದೆ ಭಾರತದ ಕೃಷಿ ಮತ್ತು ರೈತರ ಮೇಲೆ ಉಂಟಾಗುವ ದುಷ್ಪರಿಣಾಮಗಳು..
ಮೂರನೆಯದಾಗಿ ಕರೋನಾ ಸಂದರ್ಭದ ವೈಫಲ್ಯ ಹಾಗೂ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆ, ನಾಲ್ಕನೆಯದಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಮನುವಾದ ಮತ್ತು ಕೇಸರೀಕರಣವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಲು ಹೊರಟಿರುವ ಕೋಮುವಾದಿಗಳ ಹುನ್ನಾರ..
ಕೊನೆಯದಾಗಿ ಶ್ರೇಷ್ಠತೆಯ ಪ್ರಜ್ಞೆಯಿಂದ ಕೆಳ ವರ್ಗಗಳ ಮೇಲೆ ಏನನ್ನಾದರೂ ಮಾಡಬಹುದೆಂಬ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸುವ ಮೂಲಕ ಈ ದೇಶಕ್ಕೆ ಬಾಬಾ ಸಾಹೇಬರು ನೀಡಿದ ಸಂವಿಧಾನ ಮತ್ತು ಸಂವಿಧಾನದ ಆಶಯಗಳನ್ನು ಕಾಪಾಡುವುದು ಈ ಹೊತ್ತಿನ ನಮ್ಮ ಹೋರಾಟದ ವಿಷಯವಾಗಿದೆ.
ಆದರೆ ಪಕ್ಷಾತೀತವಾಗಿ ಎಲ್ಲೆಡೆಯೂ ಸಹ ಜನ ಸಾಮಾನ್ಯರಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿರುವ ಫ್ಯೂಡಲ್‌ಗಳು ಮತ್ತು ಅಕ್ಷರಶಃ ಜನಪರ ಆಡಳಿತದ ಸಂವೇದನೆಯನ್ನು ಕಳೆದುಕೊಂಡಿರುವ ಜಾತಿ ಶ್ರೇಷ್ಠತಾವ್ಯಾಧಿಗಳು ಈ ದಿನ ಜನಪರ ಆಡಳಿತಕ್ಕೆ ಇರಬೇಕಾದ ದೂರದೃಷ್ಟಿಯನ್ನು ಪಕ್ಕಕ್ಕೆ ಇಟ್ಟು “ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು?” ಎಂಬ ಅಸಂಬದ್ಧವಾದ ಚರ್ಚೆಯನ್ನು ಹುಟ್ಟು ಹಾಕಲು ತಮ್ಮ ನಾಯಕತ್ವವನ್ನು ಬಳಸಿಕೊಳ್ಳುತ್ತಾರೆ ಎಂದರೆ ಇವರಿಗೆ ಸಮಾಜಪರವಾದಂತಹ ಯಾವುದೇ ಕಾಳಜಿಯಾಗಲೀ ಜವಾಬ್ದಾರಿಯಾಗಲೀ ಇಲ್ಲವೆಂಬುದನ್ನು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಬಿಜೆಪಿಗರ ಕಳಪೆ ಆಡಳಿತದಿಂದ ಬೇಸತ್ತು ಕಣ್ಣೀರು ಹಾಕುತ್ತಿರುವ ಜನ ಸಾಮಾನ್ಯರ ಬದುಕಿಗೆ ವಿಶ್ವಾಸದ ಶಕ್ತಿಯಾಗಿ, ಉತ್ತಮ ಭವಿಷ್ಯದ ನಂಬಿಕೆಯಾಗಿ ಮೂಡಿ ಬರಬೇಕಿರುವ ನಮ್ಮ ಕಾಂಗ್ರೆಸ್ ಪಕ್ಷದ ಕೆಲ ನಾಯಕರು, ತಮಗೆ ತಾವೇ ಕಚ್ಚಾಡಿಕೊಳ್ಳುವ ಮೂಲಕ ಕೋಮುವಾದಿಗಳ ಎದುರು ದುರ್ಬಲರಾಗಿಯೂ ಜನ ಸಾಮಾನ್ಯರ ಎದುರು ಮತ್ತಷ್ಟು ದುರ್ಬಲರಾಗಿಯೂ ಗೋಚರಿಸುವಂತಹ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಜನಪರ ನಾಯಕತ್ವ ಎಂದರೆ ಜನರು ತೊಂದರೆ ಅನುಭವಿಸುವಾಗ ಅವರ ಪರವಾಗಿ ದೃಢವಾಗಿ ನಿಲ್ಲುವುದೇ ಹೊರತು, ದುರ್ಬಲರ ಆಡಳಿತದಲ್ಲಿ, ನಾಯಕತ್ವಕ್ಕಾಗಿ ಕಿತ್ತಾಡುವುದಲ್ಲ.
ಕೊನೆಯದಾಗಿ ಕಲಹಗಳ ಮೂಲಕ ಇಂತಹ ತಪ್ಪು ಸಂದೇಶವನ್ನು ರವಾನಿಸುವುದು ಜನಪರ ಆಡಳಿತವನ್ನು ನೀಡಲು ಎಲ್ಲ ರೀತಿಯಿಂದಲೂ ಶಕ್ತವಾಗಿರುವ ಮತ್ತು ಈಗಾಗಲೇ ಅದನ್ನು ಸಾಧಿಸಿ ತೋರಿಸಿರುವ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ಒಳ್ಳೆಯದಲ್ಲ!
ಮೊದಲು ಜನಪರವಾಗಿ ಹೋರಾಡೋಣ, ಅಧಿಕಾರ ಕೊಡುವುದು ಬಿಡುವುದನ್ನು ಜನರ ಆಯ್ಕೆ ಮತ್ತು ವಿವೇಚನೆಗೇ ಬಿಡೋಣ!
ಇನ್ನು who is who, what is what ಎಂಬ ಸಂಗತಿಯು ಹೈಕಮಾಂಡ್ ನವರಿಗೇ ಚೆನ್ನಾಗಿ ಗೊತ್ತಿರುವುದರಿಂದ ಸರ್ಕಾರದ ನಾಯಕತ್ವದ ಬಗ್ಗೆ ಅವರೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ
ಅಲ್ಲಿಯವರೆಗೂ ಮುಖ್ಯಮಂತ್ರಿ ಯಾರಾಗಬೇಕೆಂಬ ಚರ್ಚೆಯು ಎಷ್ಟು ಅಪ್ರಸ್ತುತವೋ ಅಷ್ಟೇ ಅಪಾಯಕಾರಿ ಕೂಡಾ!
- ಡಾ.ಹೆಚ್.ಸಿ ಮಹದೇವಪ್ಪ
(ಡಾ.ಹೆಚ್.ಸಿ ಮಹದೇವಪ್ಪನವರು ಮಾಜಿ ಸಚಿವರು. ಕಾಂಗ್ರೆಸ್ ಮುಖಂಡರು. ಲೇಖನದಲ್ಲಿನ ಅಭಿಪ್ರಾಯಗಳು ವಯಕ್ತಿಕವಾದವು)
ಇದನ್ನೂ ಓದಿ: ಮೊದಲು ಚುನಾವಣೆ ಗೆಲ್ಲುವ ಕಡೆ ಗಮನ ಕೊಡಿ, ಮುಖ್ಯಮಂತ್ರಿ ಅಭ್ಯರ್ಥಿ ವಿಚಾರ ನಂತರದ್ದು: ರಣದೀಪ್ ಸಿಂಗ್ ಸುರ್ಜೆವಾಲಾ


