Homeಅಂತರಾಷ್ಟ್ರೀಯಪಾಕ್ ಸೇರಿದಂತೆ ಎಲ್ಲಾ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ಹೊಂದುತ್ತೇವೆ: ವಿದೇಶಾಂಗ ಇಲಾಖೆ

ಪಾಕ್ ಸೇರಿದಂತೆ ಎಲ್ಲಾ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ಹೊಂದುತ್ತೇವೆ: ವಿದೇಶಾಂಗ ಇಲಾಖೆ

- Advertisement -
- Advertisement -

ಕಳೆದ ಕೆಲವು ದಶಕಗಳಿಂದ  ನೆರೆಯ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನ, ನೇಪಾಳಗಳ ಜೊತೆ ಭಾರತದ ಸಂಬಂಧ ಅಷ್ಟಕಷ್ಟೆ ಇದೆ ಎಂದು ಹೇಳಬಹುದು. ಸಿಯಾಚಿನ್, ಕಾಶ್ಮೀರ, ಕಾಲಾಪಾನಿ, ದೋಕ್ಲಾಂ ಸೇರಿದಂತೆ ವಿವಿಧ ಗಡಿ ಭಾಗಗಳಿಗೆ ಸಂಬಂಧಿಸಿದಂತೆ ನೆರೆಯ ರಾಷ್ಟ್ರಗಳ ಜೊತೆ ಭಾರತ ಸಾಕಷ್ಟು ವಿವಾದಗಳಲ್ಲಿ ತೊಡಗಿಕೊಂಡಿದೆ. ಬಾಂಗ್ಲಾದೇಶದ ಜೊತೆ ಭಾರತಕ್ಕೆ ಗಂಗಾ ನದಿ ನೀರಿನ ಹಂಚಿಕೆ ಕುರಿತು ಸಾಕಷ್ಟು ತಕರಾರುಗಳಿವೆ. ಅಕ್ರಮ ವಲಸೆ ಸೇರಿದಂತೆ ಭಾರತ ದಿನನಿತ್ಯ ಅಕ್ಕ ಪಕ್ಕದ ರಾಷ್ಟ್ರಗಳೊಂದಿಗೆ ಕಾದಾಡುತ್ತಲೇ ಇರುವ ಸಂದರ್ಭ ಕಳೆದ ಕೆಲವು ವರ್ಷಗಳಲ್ಲಿ ಸೃಷ್ಟಿಯಾಗಿದೆ. ಈಗ ಭಾರತ ತನ್ನ ವಿದೇಶಾಂಗ ನೀತಿಯನ್ನು ಬದಲಾಯಿಸಿಕೊಳ್ಳಲು ಮುಂದಾಗಿದ್ದು ನೆರೆಯ ರಾಷ್ಟ್ರಗಳ ಜೊತೆ ಸೌಹಾರ್ದ ಸಂಬಂಧವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುವುದಾಗಿ ನಿನ್ನೆ ವಿದೇಶಾಂಗ ಇಲಾಖೆ ತಿಳಿಸಿದೆ.

ಭಾರತ ನೆರೆಯ ರಾಷ್ಟ್ರಗಳ ಜೊತೆಗಿನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಲು ಬಯಸುತ್ತದೆ. ನೆರೆಯ ಪಾಕಿಸ್ತಾನದ ವಿಷಯದಲ್ಲೂ ಭಾರತ ಇದೇ ನಿಲುವನ್ನು ತಾಳಿದೆ. ಪಾಕಿಸ್ತಾನ ಕೂಡ ಇದೇ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ವಿದೇಶಿ ಸಂಬಂಧಗಳಿಗೆ ಅಗತ್ಯವಾದ ಪರಸ್ಪರ ವಿಶ್ವಾಸಾರ್ಹತೆಯನ್ನು ಮತ್ತು ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲು ಪಾಕಿಸ್ತಾನ ಬದ್ಧವಾಗಬೇಕು ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಅರಿಂದಾಮ್ ಬಗ್ಚಿ  ಗುರುವಾರ ಜೂನ್ 24 ರಂದು ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

“ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆ ವಿಚಾರದಲ್ಲಿನ ತನ್ನ ಮೃದುಧೋರಣೆಯನ್ನು ಬದಲಿಸಿಕೊಳ್ಳಬೇಕು. ಯಾವುದೇ ದೇಶದ ವಿರುದ್ಧದ ಸಂಚಿಗೆ ಮತ್ತು ಪಿತೂರಿಗೆ ತನ್ನ ನೆಲದಲ್ಲಿ ಅವಕಾಶವನ್ನು ನೀಡಬಾರದು” ಎಂದು ಅರಿಂದಾಮ್ ಬಗ್ಚಿ ಗುರುವಾರದ ತಮ್ಮ ಸುದ್ದಿ ಗೋಷ್ಠಿಯಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

2016ರ ಭಾರತದ ಪಠಾಣ್ ಕೋಟ್ ವಾಯುನೆಲೆಯ ಮೇಲಿನ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿದೇಶಾಂಗ ಸಂಬಂಧದಲ್ಲಿ ತೀವ್ರ ಬಿರುಕು ಉಂಟಾಗಿದೆ. ಪಠಾಣ್ ಕೋಟ್ ನಂತರದಲ್ಲಿ ಉರಿ ಮತ್ತು ಪುಲ್ವಾಮಾ ದಾಳಿಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಕ್ಕೆ ತೀವ್ರ ಧಕ್ಕೆಯನ್ನುಂಟುಮಾಡಿದ್ದವು.

ಜಮ್ಮು ಕಾಶ್ಮೀರದ ವಿಭಜನೆಯ ನಂತರವಂತೂ ಅಂತರಾಷ್ಟ್ರೀಯ ವೇದಿಕೆಯಾದ ವಿಶ್ವಸಂಸ್ಥೆಯಲ್ಲಿ ಕೂಡ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಆರೋಪ ಪ್ರತ್ಯಾರೊಪಗಳಲ್ಲಿ ತೊಡಗಿದ್ದವು.

ಕಳೆದ 4 ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆದಿಲ್ಲ. ಬಾಂಧವ್ಯ ಮತ್ತು ಭಯೋತ್ಪಾದನೆ ಒಟ್ಟೊಟ್ಟಿಗೆ ಸಾಗಲು ಸಾಧ್ಯವಿಲ್ಲವೆಂದು ಭಾರತ ಈ ಹಿಂದೆ ಪಾಕಿಸ್ತಾನದ ಜೊತೆ ಮಾತಕತೆಗೆ ಸಿದ್ಧವಾಗಿರಲಿಲ್ಲ. ಈಗ ಭಾರತದ ವಿದೇಶಾಂಗ ನೀತಿಯಲ್ಲಿ ಮಹತ್ವದ ಬದಲಾವಣೆಯ ಸುಳಿವು ದೊರೆತಿದೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ, ನೇಪಾಳಗಳೊಂದಿಗಿನ ಸಂಬಂಧವನ್ನು ಸುಧಾರಿಸುವ ಪ್ರಯತ್ನಕ್ಕೆ ಭಾರತ ವಿದೇಶಾಂಗ ಇಲಾಖೆ ಕೈ ಹಾಕಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.


ಇದನ್ನೂ ಓದಿ : ‘ಆರೆಸ್ಸೆಸ್ ಅಥವಾ ಸಂವಿಧಾನ’ – ಚಿರಾಗ್‌ ಪಾಸ್ವಾನ್‌ಗೆ ಆಯ್ಕೆ ಮುಂದಿಟ್ಟ ತೇಜಸ್ವಿ ಯಾದವ್‌‌!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಥುರಾ ಭೂ ವಿವಾದ: ಫೆಬ್ರವರಿ 29ರಂದು ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ

0
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರವರಿ 29ಕ್ಕೆ ನಿಗದಿಪಡಿಸಿದೆ. ಶಾಹಿ ಈದ್ಗಾ ಇಂತೇಜಾಮಿಯಾ ಸಮಿತಿಯು ಕತ್ರ...