ನಿನ್ನೆ ಬೆಳ್ಳಂಬೆಳಗ್ಗೆ ಇಡೀ ಬೆಂಗಳೂರನ್ನು ಬೆಚ್ಚಿ ಬೀಳಿಸುವ ಘಟನೆ ನಡೆದಿತ್ತು. ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಫ್ಲವರ್ ಗಾರ್ಡನ್ ಏರಿಯಾದ ತಮ್ಮ ಕಚೇರಿಯ ಮುಂದೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನು ಕೆಲ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆಗೈದಿದ್ದರು.
ಹಾಡುಹಗಲು ನಡೆದ ರೇಖಾ ಕದಿರೇಶ್ ಹತ್ಯೆಯ ನಂತರ ಆರೋಪಿಗಳ ಬಂಧನಕ್ಕೆ ತೀವ್ರ ಒತ್ತಡ ಕೇಳಿಬಂದಿತ್ತು. ರೇಖಾ ಕದಿರೇಶ್ ಬಿಜೆಪಿ ನಾಯಕಿಯಾಗಿದ್ದು, ಸರ್ಕಾರ ತನ್ನ ಪಕ್ಷದ ಮುಖಂಡರನ್ನೇ ರಕ್ಷಿಸಲು ಸಾಧ್ಯವಾಗದಿದ್ದರೆ ಸಾಮಾನ್ಯ ಜನರನ್ನು ಎಲ್ಲಿ ರಕ್ಷಿಸುತ್ತದೆ ಎಂದು ಕೆಲವು ಬಿಜೆಪಿ ಮುಖಂಡರುಗಳೇ ಗೃಹ ಇಲಾಖೆಯ ಕಾರ್ಯವೈಖರಿ ಕುರಿತು ಪ್ರಶ್ನಿಸಿದ್ದರು. ಪಕ್ಷದ ಮುಖಂಡರಿಂದ ಮತ್ತು ಮಾಧ್ಯಮಗಳಿಂದ ವ್ಯಾಪಕ ಒತ್ತಡ ಬರುತ್ತಿದ್ದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ರೇಖಾ ಕದಿರೇಶ್ ಹಂತಕರನ್ನು 24 ಗಂಟೆಯ ಒಳಗೆ ಬಂಧಿಸುವ ಆಶ್ವಾಸನೆ ನೀಡಿದ್ದರು. ಅದರಂತೆಯೇ ಬೆಂಗಳೂರು ಪೊಲೀಸರು 24 ಗಂಟೆಯ ಕಾಲಾವಧಿಯಲ್ಲಿ ರೇಖಾ ಕದಿರೇಶ್ ಹತ್ಯೆಯ ಆರೋಪಿಗಳನ್ನು ಬಂಧಿಸಿದ್ದಾರೆ.
ಇಂದು ಬೆಳೆಗ್ಗೆ ಮಾಗಡಿ ರಸ್ತೆಯ ಕಾಮಾಕ್ಷಿಪಾಳ್ಯದ ಸುಮ್ಮನಹಳ್ಳಿಯ ಶನಿ ಮಹಾತ್ಮ ದೇವಸ್ಥಾನದ ಬಳಿ ರೇಖಾ ಕದಿರೇಶ್ ಹತ್ಯೆಯ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಮ್ಮನಹಳ್ಳಿ ಪ್ರದೇಶದಲ್ಲಿ ಆರೋಪಿಗಳು ಅಡಗಿರುವ ಖಚಿತ ಮಾಹಿತಿಯನ್ನು ಪಡೆದ ಪೊಲೀಸರು ಇಂದು ಮುಂಜಾನೆ ದಾಳಿ ನಡೆಸಿದರು. ಆರಂಭದಲ್ಲಿ ಪೊಲೀಸರು ಅರೋಪಿಗಳಿ ಶರಣಾಗುವಂತೆ ಸೂಚಿಸಿದ್ದಾರೆ. ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದ ಪರಿಣಾಮ ಇನ್ಸ್ ಪೆಕ್ಟರ್ ಗಳಾದ ಶಿವಾನಂದ್ ಮತ್ತು ಚಿದಾನಂದ್ ರವರು ಆರೋಪಿಗಳ ಖಾಲಿಗೆ ಗುಂಡು ಹಾರಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪೀಟರ್ ಮತ್ತು ಸೂರ್ಯ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಹತ್ಯೆಗೆ ಸಹಕರಿಸಿದ ಆರೋಪದಲ್ಲಿ ಇನ್ನೂ 4 ಜನರನ್ನು ಬಂಧಿಸಲಾಗಿದೆ. ಹತ್ಯೆಗೆ ಸಂಬಂಧಿಸಿದಂತೆ 50 ಜನರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹತ್ಯೆಯ ಹಿಂದಿನ ಕಾರಣಗಳು ಇದುವರೆಗೆ ತಿಳಿದು ಬಂದಿಲ್ಲ. ಹಂತಕರು ದೀರ್ಘಕಾಲದಿಂದ ಹತ್ಯೆಯಾದ ರೇಖಾ ಕದಿರೇಶ್ ಅವರ ಜೊತೆಯಿದ್ದರು. ಹೆಚ್ಚಿನ ವಿಚಾರಣೆಯ ನಂತರವಷ್ಟೇ ಹತ್ಯೆಯ ಕಾರಣಗಳು ತಿಳಿಯಲಿದೆ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.
ಇದನ್ನು ಓದಿ : ಪಾಕ್ ಸೇರಿದಂತೆ ಎಲ್ಲಾ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ಹೊಂದುತ್ತೇವೆ: ವಿದೇಶಾಂಗ ಇಲಾಖೆ