Homeಮುಖಪುಟಆರೆಸ್ಸೆಸ್, ಬಿಜೆಪಿ ಎಮರ್ಜೆನ್ಸಿ ಬಗ್ಗೆ ಮಾತನಾಡುವುದು ಸೋಗಲಾಡಿತನದ ಪರಮಾವಧಿ

ಆರೆಸ್ಸೆಸ್, ಬಿಜೆಪಿ ಎಮರ್ಜೆನ್ಸಿ ಬಗ್ಗೆ ಮಾತನಾಡುವುದು ಸೋಗಲಾಡಿತನದ ಪರಮಾವಧಿ

ಅಂದು ಮಾಧ್ಯಮಗಳು ಪ್ರಭುತ್ವದ ವಿರುದ್ಧ ನಿಂತು ದಮನವನ್ನು ಬಯಲಿಗೆಳೆಯುತ್ತಿದ್ದವು. ಈಗ ಮಾಧ್ಯಮಗಳು ಪ್ರಭುತ್ವದ ಜೊತೆ ಸೇರಿ ದಮನವನ್ನು ಸಮರ್ಥಿಸುತ್ತಾ ಪ್ರತಿರೋಧವನ್ನು ಅಮಾನ್ಯಗಳಿಸಲು ಸಹಕರಿಸುತ್ತಿವೆ.

- Advertisement -
- Advertisement -

ಇಂದು ಜೂನ್ 25. ಇಂದಿಗೆ 46 ವರ್ಷಗಳ ಹಿಂದೆ ಇಂದಿರಾ ಗಾಂಧಿಯವರು ದೇಶದ ಮೇಲೆ ಎಮೆರ್ಜೆನ್ಸಿ ಹೇರಿ ಭಾರತದ ಪ್ರಜಾತಂತ್ರದ ಮೇಲೆ ದಾಳಿ ನಡೆಸಿದ್ದರು. ಯಾವ ಭಾರತೀಯರು ಅದನ್ನು ಮರೆಯಬಾರದು. ಆದರೆ ಆರೆಸ್ಸೆಸ್ ಮತ್ತು ಬಿಜೆಪಿ ಅದರ ಬಗ್ಗೆ ಮಾತನಾಡುವುದು ಸೋಗಲಾಡಿತನದ ಪರಮಾವಧಿ.

ಏಕೆಂದರೆ ಆರೆಸ್ಸೆಸ್ ನಾಯಕರು ಎಮರ್ಜೆನ್ಸಿಯಲ್ಲಿ ಬಂಧನಕ್ಕೊಳಗಾದ ಕೆಲ ದಿನಗಳಲ್ಲೇ ತಮ್ಮ ಎಂದಿನ ಹೇಡಿ ಧೋರಣೆಯಲ್ಲಿ ತಮ್ಮನ್ನು ಬಿಡುಗಡೆ ಮಾಡಬೇಕೆಂದೂ, ಇಂದಿರಾಗಾಂಧಿಯವರ ಅಸಲು ಉದ್ದೇಶವನ್ನು ಅರಿಯದೆ ತಪ್ಪು ಮಾಡಿದವೆಂದು ಗೋಗೆರೆದಿದ್ದರು. ಅಷ್ಟು ಮಾತ್ರವಲ್ಲದೆ, ಎರಡನೇ ಬಾರಿ ಇಂದಿರಾಗಾಂಧಿ ಅಧಿಕಾರಕ್ಕೆ ಬಂದಾಗ ಅವರಿಗೆ ಪರೋಕ್ಷ ಬೆಂಬಲವನ್ನು ಕೊಟ್ಟು ಋಣ ತೀರಿಸಿಕೊಂಡಿದ್ದರು.

ಅವೆಲ್ಲಕ್ಕಿಂತ ಹೆಚ್ಚಾಗಿ ಇಂದು ಮೋದಿ ಸರ್ಕಾರ ಕಳೆದ ಏಳು ವರ್ಷಗಳಿಂದ ಭಾರತದ ಮೇಲೆ ಹೇರಿರುವ ಅಘೋಷಿತ ಹಾಗು ಇನ್ನು ಕ್ರೂರವಾದ ಸರ್ವಾಧಿಕಾರ ಪ್ಯಾಸಿಸ್ಟ್ ಸ್ವರೂಪದ್ದಾಗಿದೆ. ಭಾರತದ ಪ್ರಜಾತಂತ್ರಕ್ಕೆ ಇನ್ನೂ ಅಪಾಯಕಾರಿಯಾಗಿದೆ.

ಹೀಗಾಗಿ ಇಂದು ಭಾರತದ ಪ್ರಜಾತಂತ್ರದ ಬಗ್ಗೆ ಕಾಳಜಿ ಇರುವವರು ಇಂದಿರಾ ಅವರ ಎಮರ್ಜೆನ್ಸಿಯನ್ನು ನೆನಪಿಸಿಕೊಳ್ಳುತ್ತಲೇ, ಹಾಲಿ ಭಾರತದ ಫ್ಯಾಸೀಕರಣದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.

ಇಂದಿರಾ ಎಮರ್ಜೆನ್ಸಿ ಮತ್ತು ಮೋದಿ ಫ್ಯಾಸಿಸಂ

ಇದೇ ಜೂನ್ 25 ರಂದು ದೇಶಾದ್ಯಂತ ಎಮರ್ಜೆನ್ಸಿಯ ಕಾಲದ ಕರಾಳ ದಿನಗಳನ್ನು ನೆನಪಿಸಿಕೊಳ್ಳಲಾಯಿತು. ವಿಶೇಷವಾಗಿ ಬಿಜೆಪಿ ಪಕ್ಷವು ಈ ಸಂದರ್ಭವನ್ನು ಮತ್ತೊಮ್ಮೆ ಕಾಂಗ್ರೆಸ್ಸನ್ನು ಹೀಯಾಳಿಸಲು ಬಳಸಿಕೊಂಡಿತು. ಕಾಂಗ್ರೆಸ್ ಮೂಲಭೂತವಾಗಿಯೇ ಪ್ರಜಾತಂತ್ರ ವಿರೋಧಿಯೆಂದು ಹಾಗೂ ತಮ್ಮ ಪಕ್ಷವು ಆಗಲೂ ಈಗಲೂ ಭಾರತದ ಪ್ರಜಾತಂತ್ರದ ರಕ್ಷಣೆಯನ್ನು ಮಾಡುತ್ತಿದೆಯೆಂದು ಎಂದು ಪ್ರಧಾನಿ ಮೋದಿ ಎಗ್ಗುಸಿಗ್ಗಿಲ್ಲದೆ ಭಾಷಣ ಮಾಡಿದರು.

ಭಾರತದ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಎಮರ್ಜೆನ್ಸಿಯು ಅತ್ಯಂತ ಕರಾಳ ಕಾಲಘಟ್ಟ. ಭಾರತದ ಪ್ರಜಾತಂತ್ರಕ್ಕೆ ಬಿದ್ದ ದೊಡ್ಡ ಪೆಟ್ಟು.. ಮತ್ತೊಮ್ಮೆ ಭಾರತದ ಪ್ರಜಾತಂತ್ರವು ಹೀಗೆ ಅಮಾನತ್ತಿಗೆ ಒಳಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಈ ದೇಶದ ಜನರ ಮೇಲಿದೆ. ಅದಕ್ಕಾಗಿ ಎಮರ್ಜೆನ್ಸಿಯನ್ನು ಪದೇಪದೇ ನೆನಪಿಸಿಕೊಳ್ಳಲೇಬೇಕು ಮತ್ತು ಅದಕ್ಕೆ ಕಾರಣವಾದ ಸಂಗತಿಗಳನ್ನು ಮತ್ತು ಕಾರಣಕರ್ತರನ್ನು ಎಂದಿಗೂ ಮರೆಯಬಾರದು.

ಆದರೆ ಮೋದಿಯವರ ಬಿಜೆಪಿಗೆ (ಮತ್ತು ಅದರ ಪೂರ್ವಾಶ್ರಮವಾದ ಭಾರತೀಯ ಜನಸಂಘಕ್ಕೆ ಮತ್ತು ಇವರ ಮಾತೃ ಸಂಘಟನೆಯಾದ ಆರೆಸ್ಸೆಸ್ಸಿಗೆ) ಎಮೆರ್ಜೆನ್ಸಿಯನ್ನು ವಿರೋಧಿಸಿದ ಇತಿಹಾಸವಿದೆಯೇ? ಅಥವಾ ಭವಿಷ್ಯದಲ್ಲಿ ಈ ದೇಶದಲ್ಲಿ ಪ್ರಜಾತಂತ್ರವನ್ನು ಕಾದುಕೊಳ್ಳುವ ಇರಾದೆಯಿದೆಯೇ? ಅಸಲು ಇವರಿಗೂ ಪ್ರಜಾತಂತ್ರದ ಮೌಲ್ಯಗಳಿಗೂ ಏನಾದರೂ ಸಂಬಂಧವಿದೆಯೇ? ಕಳೆದ 100 ವರ್ಷಗಳ ಆರೆಸ್ಸೆಸ್ ಇತಿಹಾಸ, ಸಿದ್ಧಾಂತ ಹಾಗೂ ಕಳೆದ 15 ವರ್ಷಗಳ ಗುಜರಾತ್ ಮತ್ತು ಕಳೆದ ಏಳು ವರ್ಷಗಳ ಮೋದಿ ಆಡಳಿತವನ್ನು ಅನುಭವಿಸಿದ ನಂತರವೂ ಎಮರ್ಜೆನ್ಸಿ ವಿರುದ್ಧ ಮೋದಿ ಆಡುತ್ತಿರುವ ಮಾತುಗಳನ್ನು ನಂಬಬಹುದೇ?

ಎಮರ್ಜೆನ್ಸಿಯಲ್ಲಿ ಆರೆಸ್ಸೆಸ್ ಪಾತ್ರವೇನಿತ್ತು?

ಅದನ್ನು ಅರ್ಥಮಾಡಿಕೊಳ್ಳಬೇಕೆಂದರೆ ಆ ಕಾಲಘಟ್ಟದಲ್ಲಿ ಆರೆಸ್ಸೆಸ್ಸಿನ ಸರಸಂಘಚಾಲಕಾರಗಿದ್ದ ಬಾಳಾಸಾಹೇಬ್ ದೇವರಸ್ ಅವರು 1975ರ ಆಗಸ್ಟ್ 22ರಂದು ಮತ್ತು ನವಂಬರ್ 10ರಂದು ಇಂದಿರಾ ಗಾಂಧಿಗೆ ಬರೆದ ಪತ್ರಗಳನ್ನು ಓದಬೇಕು!

ಆ ಪತ್ರಗಳಿಗೆ ಉತ್ತರ ಬರದಿದ್ದಾಗ ಕಂಗಾಲಾಗಿ, ಇಂದಿರಾ ಗಾಂಧಿಯವರ ಮತ್ತು ಎಮರ್ಜೆನ್ಸಿಯ ಕಟ್ಟಾ ಬೆಂಬಲಿಗರಾಗಿದ್ದ ವಿನೋಬಾ ಭಾವೆಯವರಿಗೆ ತಮ್ಮ ಪರವಾಗಿ ಮಧ್ಯಪ್ರವೇಶ ಮಾಡಲು ಕೋರಿ ಆರೆಸ್ಸೆಸ್ ಬರೆದ ಪತ್ರಗಳನ್ನು ಅಧ್ಯಯನ ಮಾಡಬೇಕು!!

ಅಸಲು ಸಂಗತಿಯೇನೆಂದರೆ ಆರೆಸ್ಸೆಸ್ಸಿನ ಈ ಸರಸಂಘಚಾಲಕ 1975ರ ಪತ್ರಗಳಲ್ಲಿ ಎಮರ್ಜೆನ್ಸಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದರು. ಮತ್ತು ಆ ಕಾರಣದಿಂದ ತಮ್ಮನ್ನು ಹಾಗೂ ಆರೆಸ್ಸೆಸ್ಸನ್ನು ಬಂಧಮುಕ್ತಗೊಳಿಸಬೇಕೆಂದು ಇಂದಿರಾ ಗಾಂಧಿಯವರನ್ನು ಬೇಡಿಕೊಂಡಿದ್ದರು.

ಅಷ್ಟು ಮಾತ್ರವಲ್ಲ, ಎಮರ್ಜೆನ್ಸಿಯನ್ನು ವಿರೋಧಿಸಿ ಲಕ್ಷಾಂತರ ಪ್ರಜಾತಂತ್ರವಾದಿ ಕಾರ್ಯಕರ್ತರು, ಕಮ್ಯುನಿಸ್ಟರು ನಕ್ಸಲೈಟರು ಜೈಲಿನಲ್ಲಿ ಕೊಳೆಯುತ್ತಾ, ಕೊಲೆಯಾಗುತ್ತಿದ್ದಾಗ ಸಾವಿರಾರು ಆರೆಸ್ಸೆಸ್ ಕಾರ್ಯಕರ್ತರು ಮಾಫಿನಾಮಾ (ತಪ್ಪೊಪ್ಪಿಗೆ ಪತ್ರ)ಗಳನ್ನು ಬರೆದುಕೊಟ್ಟು ಬಿಡುಗಡೆಯಾಗತೊಡಗಿದರು!

ಅಷ್ಟಾದರೂ ಎಮರ್ಜೆನ್ಸಿ ವಿರೋಧಿ ಹೋರಾಟದ ನಾಯಕ ಜಯಪ್ರಕಾಶ ನಾರಾಯಣ್ (ಜೆಪಿ) ಅವರು ಆರೆಸ್ಸೆಸ್ಸನ್ನು ಒಂದು ಬಲವಾದ ಕಾಂಗ್ರೆಸ್ ವಿರೋಧಿ ಮತ್ತು ಬ್ರಷ್ಟಾಚಾರ ವಿರೋಧಿ ಶಕ್ತಿಯೆಂದೇ ಪರಿಗಣಿಸಿದ್ದರು ಮಾತ್ರವಲ್ಲ, ಆರೆಸ್ಸೆಸ್ಸನ್ನು ಫ್ಯಾಸಿಸ್ಟ್ ಎಂದು ಕರೆಯುವುದಾದರೆ ತನ್ನನ್ನೂ ಸಹ ಫ್ಯಾಸಿಸ್ಟೆಂದೇ ಪರಿಗಣಿಸಬೇಕೆಂದು ಘೋಷಿಸುತ್ತಾ ಅವರನ್ನು ಬೇಶರತ್ ಸಮರ್ಥಿಸಿಕೊಂಡಿದ್ದರು.

ಇಂಥಾ ಉದಾರವಾದಿ ಪ್ರಜಾತಂತ್ರವಾದಿಗಳಲ್ಲಿ ಕಾಂಗ್ರೆಸ್ ವಿರೋಧಕ್ಕಿಂತ ಹೆಚ್ಚು ಕಾಂಗ್ರೆಸ್ ದ್ವೇಷವೇ (ಇದಕ್ಕೆ ಲೋಹಿಯಾ ಅವರೂ ಹೊರತಲ್ಲ) ಮನೆಮಾಡಿತ್ತು. ಈ ದ್ವೇಷವು ಆರೆಸ್ಸೆಸಿಗರ ಪ್ರಜಾತಂತ್ರ ದ್ವೇಷೀ ಹಿಂದೂರಾಷ್ಟ್ರ ಅಜೆಂಡಾದ ಬಗ್ಗೆ ಅವರನ್ನು ಕುರುಡಾಗಿಸಿತು.

ಹಾಗೆ ನೋಡಿದರೆ ಗಾಂಧಿ ಹತ್ಯೆಯ ನಂತರ ಭಾರತದ ರಾಜಕಾರಣದಿಂದ ಹೊರದೂಡಲ್ಪಟ್ಟಿದ್ದ ಪ್ರಜಾತಂತ್ರ ದ್ವೇಷಿ ಆರೆಸ್ಸೆಸ್ಸಿಗರಿಗೆ ಪ್ರಧಾನಧಾರೆ ರಾಜಕಾರಣದಲ್ಲಿ ಮರುಜನ್ಮ ನೀಡಿದ್ದೇ ಎಮರ್ಜೆನ್ಸಿ ವಿರೋಧಿ ಪ್ರಜಾತಾಂತ್ರಿಕ ಚಳವಳಿ ಎಂಬುದು ಈ ದೇಶದ ದುರಂತ ರಾಜಕೀಯ ವಿಪರ್ಯಾಸಗಳಲ್ಲಿ ಒಂದು.

ಇದೇ ರೀತಿ ವಾಜಪೇಯಿಯವರೂ ಸಹ ಬ್ರಿಟಿಷರ ವಿರುದ್ಧ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬಂಧನಕ್ಕೊಳಗಾದಾಗ ಮಾಫಿನಾಮವನ್ನು ಬರೆದುಕೊಟ್ಟು, ಜೊತೆಗಾರರನ್ನು ಸಹ ಹಿಡಿದುಕೊಟ್ಟು ಹೊರಬಂದದ್ದನ್ನು ವಿದ್ವಾಂಸ ಎ.ಜಿ. ನೂರಾನಿಯವರು ಇಪ್ಪತ್ತು ವರ್ಷದ ಕೆಳಗೆ ದಾಖಲೆ ಸಮೇತ ಬಯಲಿಗೆಳೆದಿದ್ದಾರೆ.

ಹಾಗೆಯೇ ಇವರ ಪೂರ್ವಜರಾದ ಸಮರವೀರ ಸಾವರ್ಕರ್ ಬ್ರಿಟಿಷ್ ಬಂಧನದಲ್ಲಿದ್ದಾಗ ಬ್ರಿಟಿಷರ ಎಲ್ಲಾ ಶರತ್ತುಗಳನ್ನು ಚಾಚೂ ತಪ್ಪದೆ ಒಪ್ಪಿಕೊಂಡು ಹೊರಬಂದದ್ದನ್ನು ಮತ್ತು ಆ ಷರತ್ತಿನಂತೆ ಮುಂದೆ ಎಂದಿಗೂ ಬ್ರಿಟಿಷರ ವಿರುದ್ಧ ಧ್ವನಿ ಎತ್ತಲಿಲ್ಲವೆಂಬ ಸಂಗತಿಯನ್ನು ಬಿಜೆಪಿಯವರೂ ಸಹ ನಿರಾಕರಿಸಲಾಗದ ಮಟ್ಟಿಗೆ ಇತಿಹಾಸದಲ್ಲಿ ದಾಖಲಾಗಿದೆ.

ಅಷ್ಟು ಮಾತ್ರವಲ್ಲ. 1984ರ ಸಿಖ್ ಹತ್ಯಕಾಂಡಕ್ಕೆ ಪ್ರಧಾನ ಕಾರಣ ಕಾಂಗ್ರೆಸ್ ಪಕ್ಷ. ಅದಕ್ಕೆ ಕಾರಣಕರ್ತರಾದ ಎಲ್ಲಾ ಕಾಂಗ್ರೆಸ್ ನಾಯಕರಿಗೂ ಇನ್ನೂ ಶಿಕ್ಷೆಯಾಗಿಲ್ಲ. ಅಂತವರಲ್ಲಿ ಒಬ್ಬರಾದ ಕಮಲನಾಥ್ ಶಿಕ್ಷೆ ಅನುಭವಿಸುವ ಬದಲು ಅಧಿಕಾರ ಅನುಭವಿಸುದ್ದಾರೆ. ಇವೆಲ್ಲವೂ ನಿಜ.

ಆದರೆ ಸಿಖ್ ಹತ್ಯಾಕಾಂಡಕ್ಕೆ ಕಾಂಗ್ರೆಸ್ಸನ್ನು ದೂಷಿಸುವ ಬಿಜೆಪಿ ಮತ್ತು ಆರೆಸ್ಸೆಸ್‌ಗಳು ಸಿಖ್ ಹತ್ಯಾಕಾಂಡದಲ್ಲಿ ವಹಿಸಿದ ಪಾತ್ರವೇನು? ಇದರ ಬಗ್ಗೆ ಆಗ ಸಮಾಜವಾದಿ ಬಣದಲ್ಲಿದ್ದು ನಂತರದಲ್ಲಿ ಎನ್‌ಡಿಎ ನಾಯಕರಲ್ಲಿ ಒಬ್ಬರಾದ ಜಾರ್ಜ್ ಫರ್ನಾಂಡೀಸರೇ ಹೇಗೆ ಆರೆಸ್ಸೆಸ್ ಕಾರ್ಯಕರ್ತರು ತಮ್ಮ ನಾಯಕರ ಅಣತಿಯ ಮೇರೆಗೆ ಬೀದಿಬೀದಿಗಳಲ್ಲಿ ಕಾಂಗ್ರೆಸ್ ಗೂಂಡಾಗಳ ಜೊತೆ ಸೇರಿ ಸಿಖ್ಖರ ಬೇಟೆಯಾಡಿದರು ಎಂಬುದನ್ನು ಪ್ರತೀಕ್ಷಾ ಎಂಬ ತಮ್ಮ ಪತ್ರಿಕೆಯಲ್ಲಿ ದಾಖಲಿಸಿದ್ದಾರೆ. ಇದರ ಬಗ್ಗೆ ಇನ್ನಷ್ಟು ವಿವರಗಳನ್ನು ಇತಿಹಾಸಕಾರ ಪ್ರೊ. ಶಂಸುಲ್ ಇಸ್ಲಾಂ ಅವರನ್ನು ಒಳಗೊಂಡಂತೆ ಹಲವರು ಬಯಲು ಮಾಡಿದ್ದಾರೆ.

ಆದರೆ ಅಧಿಕಾರವು ಎಲ್ಲಾ ರಕ್ತಚರಿತೆಗೂ ಬಿಳಿಬಣ್ಣ ಬಳಿದು ಮರೆಸುತ್ತದೆ. ವಾಸ್ತವೇನೆಂದರೆರೆ ಇಂದಿರಾ ಗಾಂಧಿ ಜಾರಿಗೆ ತಂದದ್ದು ತಾತ್ಕಾಲಿಕವಾದ ಘೋಷಿತ ಎಮರ್ಜೆನ್ಸಿಯಾದರೆ ಬಿಜೆಪಿ ಸರ್ಕಾರದಲ್ಲಿ ನಿರಂತರವಾದ ಮತ್ತು ಅಘೋಷಿತ ಹಾಗೂ ಬಹು ಆಯಾಮದ ಎಮರ್ಜೆನ್ಸಿ ಜಾರಿಯಲ್ಲಿದೆ. ವಾಸ್ತವವಾಗಿ ಮೋದಿಯವರು ಜಾರಿಯಲ್ಲಿಟ್ಟಿರುವ ಎಮರ್ಜೆನ್ಸಿ ಭಾರತದ ಪ್ರಜಾತಂತ್ರಕ್ಕೆ ಇಂದಿರಾ ಎಮೆರ್ಜೆನ್ಸಿಗಿಂತ ದೊಡ್ಡ ಕಂಟಕವಾಗಿದೆ.

ಇದರ ಬಗ್ಗೆ ಅಧ್ಯಯನ ಮಾಡಿರುವ ಪ್ರೊ. ಪ್ರಭಾತ್ ಪಟ್ನಾಯಕ್ ಅವರು ತಮ್ಮ ಇತ್ತೀಚಿನ Shadow of Fascism (ಫ್ಯಾಸಿಸಂನ ನೆರಳು) ಎಂಬ ಲೇಖನದಲ್ಲಿ ಇಂದಿರಾ ಎಮರ್ಜೆನ್ಸಿಗೂ ಮೋದಿ ಫ್ಯಾಸಿಸಂಗೂ ಇರುವ ಕೆಲವು ಮೂಲಭೂತ ಮತ್ತು ಗಂಭೀರವಾದ ವ್ಯತ್ಯಾಸಗಳನ್ನು ಪಟ್ಟಿ ಮಾಡಿದ್ದಾರೆ:

ಇಂದಿರಾ ಎಮರ್ಜೆನ್ಸಿಗೂ ಮೋದಿ ಫ್ಯಾಸಿಸಂಗೂ ಇರುವ ವ್ಯತ್ಯಾಸಗಳು:

1. ಮೊದಲನೆಯದಾಗಿ ಆಗ ದಮನ ಮಾಡುತ್ತಿದ್ದದ್ದು ಕೇವಲ ಪ್ರಭುತ್ವದ ಯಂತ್ರಾಂಗಗಳಾದ ಪೊಲೀಸ್, ಸೇನೆ ಇತ್ಯಾದಿಗಳು. ಆದರೆ ಈಗ ಅದರ ಜೊತೆಗೆ ಗುಂಪುದಾಳಿ ಮಾಡುವ ಪುಂಡುಪಡೆಗಳು ಸೇರಿಕೊಂಡು ಬೀದಿಬೀದಿಯಲ್ಲಿ ಪ್ರಭುತ್ವದ ಪರವಾಗಿ ದೇಶದ ಹೆಸರಲ್ಲಿ ಮತ್ತು ಹಿಂದೂತ್ವದ ಹೆಸರಲ್ಲಿ ದಾಳಿ ನಡೆಸುತ್ತಿದ್ದಾರೆ.

2. ತುರ್ತುಸ್ಥಿತಿ ಕಾಲಕ್ಕಿಂತ ಭಿನ್ನವಾಗಿ ಈಗಿನ ದಮನವನ್ನು ರಾಷ್ಟ್ರವಾದದ ಹೆಸರಿನಲ್ಲಿ ನಡೆಸಲಾಗುತ್ತಿದೆ. ಹೀಗಾಗಿ ದಾಳಿಗೆ ಗುರಿಯಾಗುವವರು ದೇಶದ್ರೋಹಿಗಳು ಮತ್ತು ದಾಳಿ ಮಾಡುವವರು ದೇಶಪ್ರೇಮಿಗಳೂ ಆಗಿಬಿಡುತ್ತಿದ್ದಾರೆ. ಆದ್ದರಿಂದ ಇಂದಿರಾಗಾಂಧಿಯವರ ಕಾಲದಲ್ಲಿ ದಮನಕ್ಕೊಳಗಾದರೂ ಪ್ರತಿರೋಧಕ್ಕೆ ಮಾನ್ಯತೆ ಇರುತ್ತಿತ್ತು. ಈಗ ಪ್ರತಿರೋಧಕ್ಕೆ ಮಾನ್ಯತೆ ಹೋಗಿ ದಮನಕ್ಕೆ ಮಾನ್ಯತೆ ದಕ್ಕುವಂತಾಗಿದೆ.

3. ಮೂರನೆಯದಾಗಿ ಮಾಧ್ಯಮಗಳು ಆಗ ಪ್ರಭುತ್ವದ ವಿರುದ್ಧ ನಿಂತು ದಮನವನ್ನು ಬಯಲಿಗೆಳೆಯುತ್ತಿದ್ದವು. ಈಗ ಮಾಧ್ಯಮಗಳು ಪ್ರಭುತ್ವದ ಜೊತೆ ಸೇರಿ ದಮನವನ್ನು ಸಮರ್ಥಿಸುತ್ತಾ ಪ್ರತಿರೋಧವನ್ನು ಅಮಾನ್ಯಗಳಿಸಲು ಸಹಕರಿಸುತ್ತಿವೆ.

4. ನಾಲ್ಕನೆಯದಾಗಿ ಆಗ ಏನಿಲ್ಲವೆಂದರೂ ತೋರಿಕೆಗಾಗಿಯಾದರೂ ಪ್ರಭುತ್ವಗಳು ಕಾರ್ಪೊರೇಟುಗಳಿಂದ ಬಹಿರಂಗವಾದ ಅಂತರವನ್ನು ಕಾಯ್ದುಕೊಳ್ಳುತ್ತಿದ್ದವು. ಈಗ ಬಹಿರಂಗವಾಗಿಯೇ ಪ್ರಭುತ್ವಗಳು ತಾವು ಕಾರ್ಪೊರೇಟುಗಳ ನಿಕಟವರ್ತಿಗಳೆಂದು ತೋರಿಸಿಕೊಳ್ಳುತ್ತವೆ.

5. ಆಗ ಇಂದಿರಾಗಾಂಧಿಯವರ ದಮನ ಯಾವುದೇ ಧರ್ಮ ಅಥವಾ ಜಾತಿಯ ವಿರುದ್ಧವಾಗಿರಲಿಲ್ಲ. ತನ್ನ ವಿರುದ್ಧ ಇದ್ದ ಎಲ್ಲರ ಮೇಲೂ ಅವರ ದಮನ ನಡೆಯುತ್ತಿತ್ತು. ಆದರೆ ಈಗ ಅಲ್ಪಸಂಖ್ಯಾತರ ಮೇಲೆ ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಮೇಲೆ ಈ ದಮನ ಕೇಂದ್ರೀಕೃತವಾಗಿದೆ. ಮತ್ತು ಅದನ್ನು ಸಮರ್ಥಿಸಿಕೊಳ್ಳಲು ಪಠ್ಯಪುಸ್ತಕವನ್ನು ಬದಲಾಯಿಸುವುದನ್ನೂ ಒಳಗೊಂಡಂತೆ ಎಲ್ಲಾ ವಿಧಾನಗಳನ್ನು ಪ್ರಭುತ್ವ ಬಳಸುತ್ತಿದೆ.

6. ಆರನೆಯದಾಗಿ, ಈಗ ಪ್ರಭುತ್ವವು ವೈಚಾರಿಕತೆ ಮತ್ತು ತಾರ್ಕಿಕತೆಯನ್ನು ನಾಶ ಮಾಡಿ ಅಂಧವಿಶ್ವಾಸ ಮತ್ತು ಸಾಕ್ಷಿ-ಪುರಾವೆಗಳ ತರ್ಕದ ಬಗ್ಗೆ ಅಸಹನೆಗಳನ್ನು ಹುಟ್ಟುಹಾಕುತ್ತಿದೆ.

7. ಈಗ ಪ್ರಭುತ್ವವು ಎಲ್ಲಾ ಸ್ವತಂತ್ರ ಮತ್ತು ಸ್ವಾಯತ್ತ ಸಾರ್ವಜನಿಕ ಸಂಸ್ಥೆಗಳನ್ನು ನಾಶಮಾಡಲು ಹೊರಟಿದೆ ಇಲ್ಲವೇ ತಾನು ಹೇಳಿದಂತೆ ಕೇಳುವ ಹೌದಪ್ಪಗಳನ್ನಾಗಿಸುತ್ತಿದೆ.

ಈ ಎರಡೂ ಬಗೆಯ ದಮನಗಳ ನಡುವಿನ ವ್ಯತ್ಯಾಸಗಳನ್ನು ಸಾರಾಂಶದಲ್ಲಿ ಹೇಳುವುದಾದರೆ ಇಂದಿರಾಗಾಂಧಿಯವರ ಕಾಲದಲ್ಲೂ ಅಧಿಕಾರ ಕೇಂದ್ರೀಕರಣಗೊಂಡಿತ್ತು, ಸ್ವಾತಂತ್ರ್ಯ ಹರಣಗೊಂಡಿತ್ತು ಮತ್ತು ಅದು ಬಂಡವಾಳಶಾಹಿ ಅಭಿವೃದ್ಧಿ ಮತ್ತು ಪ್ರಜಾತಾಂತ್ರಿಕ ರಾಜಕಾರಣಗಳ ನಡುವಿನ ವೈರುಧ್ಯಗಳಿಂದಲೇ ಉದ್ಭವಿಸಿತ್ತು.

ಆದರೆ ಮೋದಿ ಕಾಲದಲ್ಲಿ ಆಗುತ್ತಿರುವುದು ಕೇವಲ ಸ್ವಾತಂತ್ರ್ಯ ಹರಣ ಮತ್ತು ಅಧಿಕಾರ ಕೇಂದ್ರೀಕರಣ ಮಾತ್ರವಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ತುರ್ತಿಸ್ಥಿತಿಗೂ ಈಗಿನ ಸ್ಥಿತಿಗೂ ಇರುವ ವ್ಯತ್ಯಾಸವನ್ನು ಸರ್ವಾಧಿಕಾರಕ್ಕೂ ಫ್ಯಾಸಿಸಂಗೂ ಇರುವ ವ್ಯತ್ಯಾಸವೆಂದು ಹೇಳಬೇಕು.

ಮೇಲೆ ವಿವರಿಸಲಾದ ಪ್ರತಿಯೊಂದು ವ್ಯತ್ಯಾಸಗಳೂ ಸಹ ಕಾರ್ಪೊರೇಟ್ ಆಳ್ವಿಕೆ ಅಧಿಕಾರ ಮತ್ತು ಪ್ರಭುತ್ವದ ಅಧಿಕಾರ ಒಂದಾಗಿ ಮೇಳೈಸಿರುವ ಒಂದು ಫ್ಯಾಸಿಸ್ಟ್ ಆಳ್ವಿಕೆಯ ವಿವರಣೆಯೇ ಆಗಿದೆ.

ಹೀಗಾಗಿ ಇಂದು ಭಾರತದ ಜನತೆ ವರ್ತಮಾನದಲ್ಲಿ ಎಮರ್ಜೆನ್ಸಿ ಹೇರಿದ ಇಂದಿರಾ ಗಾಂಧಿಗಿಂತ ದೊಡ್ಡ ಆಪತ್ತನ್ನು ಎದುರಿಸಬೇಕಾಗಿದೆ.

ಎಮರ್ಜೆನ್ಸಿಯಂತೆ ಇದು ತಾತ್ಕಾಲಿಕ ಶತ್ರುವಲ್ಲ. ಹಾಗೂ ಕಣ್ಣೆದುರಿಗಿರುವ ಶತ್ರುವಲ್ಲ. ಇದು ದೀರ್ಘಕಾಲಿಕ ಶತ್ರು. ಹಾಗು ಎದುರಿಗೂ, ಜೊತೆಗೂ ಮತ್ತು ಒಳಗೂ ಇರುವ ಶತ್ರು.

ಆದ್ದರಿಂದ ಫ್ಯಾಸಿಸ್ಟ್ ವಿರೋಧಿ ಹೋರಾಟ ಇನ್ನೂ ಹೆಚ್ಚಿನ ಸ್ಪಷ್ಟತೆ, ದಿಟ್ಟತೆ, ದೀರ್ಘಕಾಲೀನ ಸಿದ್ಧತೆ, ಒಂದು ಶತ್ರುವಿನ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಶತ್ರುವಿನ ಬಗ್ಗೆ ಮರುಳಾಗುವ “ಜೆಪಿ ಕುರುಡು” ಗಳಿಂದ ಮುಕ್ತವಾದ ಎಚ್ಚರಗಳ ಅಗತ್ಯವಿದೆ.

ಶಿವಸುಂದರ್


ಇದನ್ನೂ ಓದಿ: ತುರ್ತು ಪರಿಸ್ಥಿತಿ ಸಮಯದಲ್ಲೂ ’ಸುಪ್ರೀಂ’ ಘನತೆ ಇಷ್ಟು ಕೆಳಗಿಳಿದಿರಲಿಲ್ಲ: ಪ್ರಶಾಂತ್‌ ಭೂಷಣ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...