ಅಂತಾರಾಷ್ಟ್ರೀಯ ಖ್ಯಾತಿಯ ಬಾಕ್ಸರ್ ಸುಶೀಲ್ ಕುಮಾರ್ ಜೊತೆಗೆ ದೆಹಲಿ ಪೊಲೀಸರು ಫೋಟೋ-ಸೆಲ್ಫಿ ಸೆಷನ್ ನಡೆಸಿದ ಫೋಟೊಗಳು ವೈರಲ್ ಆದ ಬಳಿಕ ವಿಚಾರಣೆಗೆ ಆದೇಶ ನೀಡಲಾಗಿದೆ ಎಂದು ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ.
ಸುಶೀಲ್ ಕುಮಾರ್ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ಆತನ ಜೊತೆಗೆ ಕರ್ತ್ಯವಲ್ಲಿದ್ದ ಪೊಲೀಸರು ಸೆಲ್ಫಿ ತೆಗೆದುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಸೆಲೆಬ್ರಿಟಿ ಬಾಕ್ಸರ್ ಜೊತೆ ಫೋಟೊ-ಸೆಲ್ಫಿ ಹುಚ್ಚಿಗೆ ಬಿದ್ದ ಕರ್ತವ್ಯದಲ್ಲಿದ್ದ ಪೊಲೀಸರು, ತೆಗೆದುಕೊಂಡ ಫೋಟೊಗಳನ್ನು ತಮ್ಮ ವ್ಯಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದರು. ಇದು ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತು. ‘ಸುಶೀಲ್ ಅವರನ್ನು ಗಣ್ಯ ಅತಿಥಿ ಎಂಬಂತೆ’ ಹೈಲೈಟ್ ಮಾಡಿದ ಈ ಘಟನೆಯನ್ನು ನೂರಾರು ಜನರು ಟೀಕಿಸಿದ ನಂತರ, ಈಗ ಪೊಲೀಸ್ ಮುಖ್ಯಸ್ಥರು ವಿಚಾರಣೆಗೆ ಆದೇಶಿಸಿದ್ದಾರೆ.
ದೆಹಲಿ ಪೊಲೀಸರ ವಿಶೇಷ ಘಟಕ ಮತ್ತು 3ನೇ ಬೆಟಾಲಿಯನ್‍ನ ಪೊಲೀಸರು ಸುಶೀಲ್ ಕುಮಾರ್ ಅವರನ್ನು ಶುಕ್ರವಾರ ಬೆಳಿಗ್ಗೆ ಮಂಡೋಲಿ ಜೈಲಿನಿಂದ ತಿಹಾರ್ ಜೈಲಿಗೆ ಕರೆದೊಯ್ಯುತ್ತಿದ್ದಾಗ ಅವರೊಂದಿಗೆ ಫೋಟೊಗಳನ್ನು ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಸೆಲ್ಫಿ ಸೆಷನ್ ನಡೆಸಿದ್ದಾರೆ. ನ್ಯಾಯಾಲಯವು ಸುಶೀಲ್ ನ್ಯಾಯಾಂಗ ಬಂಧನವನ್ನು ಜುಲೈ 9 ರವರೆಗೆ ವಿಸ್ತರಿಸಿದೆ.
ಚಂತ್ರಾಸಾಲ್ ಕ್ರೀಡಾಂಗಣದೊಳಗೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಕುಸ್ತಿಪಟು ಸಾಗರ್ ಧನಕರ್ ಕೊಲೆಗೆ ಸಂಬಂಧಿಸಿದಂತೆ ಸುಶೀಲ್ ಅವರನ್ನು ಬಂಧಿಸಲಾಗಿದೆ.
ಡಿಜಿ (ತಿಹಾರ್ ಜೈಲ್) ಸಂದೀಪ್ ಗೋಯೆಲ್, “ಸುಶೀಲ್ ಅವರನ್ನು ಮಂಡೋಲಿ ಜೈಲಿನಿಂದ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ. ಸುಶೀಲ್‌ಗೆ ಸಂಭವನೀಯ ಭದ್ರತಾ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, 3ನೇ ಬೆಟಾಲಿಯನ್‌ನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು” ಎಂದಿದ್ದಾರೆ.
ಮಂಡೋಲಿ ಜೈಲಿಗೆ ತಲುಪಿದ ನಂತರ ಪೊಲೀಸರು ಆರೋಪಿಗಳ ಜೊತೆ ಚಿತ್ರಗಳನ್ನು ಕ್ಲಿಕ್ ಮಾಡಲು ಪ್ರಾರಂಭಿಸಿದರು. 3ನೇ ಬೆಟಾಲಿಯನ್‌ನ ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಅಪಾಯವಿರುವ ಕೈದಿಗಳ ಚಿತ್ರಗಳನ್ನು ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲು ತಿಳಿಸಲಾಗಿತ್ತು. ಆದರೆ, ಶುಕ್ರವಾರ, ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಫೋಟೋಗಳನ್ನು ಹಂಚಿಕೊಂಡರು.. ಜೊತೆಗೆ ತಮ್ಮ ಅಧಿಕೃತ ವಾಟ್ಸಾಪ್ ಗುಂಪುಗಳಲ್ಲಿ ಮತ್ತು ಅವರ ಸಂಬಂಧಿಕರೊಂದಿಗೆ ಚಿತ್ರಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಬಂಧನ


