ಕರೊನಾ ಸಾಂಕ್ರಾಮಿಕ ಜಗತ್ತಿಗೆ ಕಾಲಿಟ್ಟ ಕಳೆದ ಒಂದುವರೆ ವರ್ಷದಲ್ಲಿ ಲಾಕ್‌ಡೌನ್, ಕ್ವಾರಂಟೈನ್, ಏಕಾಂತವಾಸಗಳು ಅತ್ಯಂತ ಸಾಮಾನ್ಯವಾಗಿ ಬಿಟ್ಟಿವೆ. ಜನ ಸಂಪರ್ಕಕ್ಕೆ ಬಾರದೇ ಮನೆಯಲ್ಲಿಯೇ ಉಳಿಯುವುದೂ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಜಪಾನಿನ ವ್ಯಕ್ತಿಯೊಬ್ಬ ಕರೊನಾ ಜಗತ್ತಿಗೆ ಕಾಲಿಡುವ ಹಲವು ವರ್ಷ ಮೊದಲೇ ಏಕಾಂತವಾಸದಲ್ಲಿ ಇದ್ದಾರೆ. ಅದು ಕೂಡ ಬರೋಬ್ಬರಿ 10 ವರ್ಷಗಳ ಕಾಲ. ಜೈಲುವಾಸ ಅಥವಾ ಯಾವುದೋ ಖಾಯಿಲೆಯ ಕಾರಣಕ್ಕಾಗಿ ಸೆಲ್ಪ್ ಐಸೋಲೇಶನ್ ಅಲ್ಲ. ವಿಶ್ವ ಪ್ರಸಿದ್ಧ ಬರಹಗಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನೂರು ವರ್ಷಗಳ ಏಕಾಂತ ಎಂಬ ಕೃತಿ ಬರೆದಿದ್ದರು. ಆದರೆ ಇದು ಕತೆಯಲ್ಲ. ನಿಜಜೀವನದಲ್ಲಿ 10 ವರ್ಷಗಳಿಂದ ಏಕಾಂತದಲ್ಲಿರುವ ವ್ಯಕ್ತಿಯ ಜೀವನ. ನಂಬಲಿಕ್ಕೆ ಆಶ್ಚರ್ಯವಾದರೂ ಸತ್ಯ.
ಜಪಾನಿನಲ್ಲಿ ಜಾಗತಿಕ ಕರೊನಾ ಬಿಕ್ಕಟ್ಟು ಕಾಣಿಸಿಕೊಳ್ಳುವ ಮೊದಲೇ ಏಕಾಂತವಾಸದ ಸಂಸ್ಕೃತಿ ಇದೆ. ಸುಮಾರು 10 ಲಕ್ಷ ಜನ ಈ ರೀತಿ ಏಕಾಂತವಾಸದಲ್ಲಿ ಇದ್ದಾರೆ ಎಂದು ಜಪಾನಿನ ಆರೋಗ್ಯ ಇಲಾಖೆ ಹೇಳಿದೆ. ಹೀಗೆ ಏಕಾಂತವಾಸದಲ್ಲಿ ಇರುವ ಪದ್ಧತಿಗಳನ್ನು ಹಿಕಿಕೊಮೋರಿ ಎಂದು ಕರೆಯಲಾಗುತ್ತದೆ. ಕೆಲವರು ವರ್ಷ ತಿಂಗಳು ಐಸೋಲೇಶನ್‌ನಲ್ಲಿ ಇರುತ್ತಾರೆ. ನಿಟೋ ಸೌಜಿ ಎನ್ನುವ ಕಲಾವಿದ ಬರೋಬ್ಬರಿ 10 ವರ್ಷದಿಂದ ಏಕಾಂತವಾಸವನ್ನು ಅನುಭವಿಸುತ್ತಿದ್ದಾರೆ. ವೃತ್ತಿಯಿಂದ ಗೇಮ್ ಡೆವಲಪರ್ ಆಗಿರುವ ನಿಟೋ ಸೌಜಿ ಮೂಲತಃ ಸಂಗೀತ ಕಲಾವಿದ. ಎರಡು ತಿಂಗಳಿಗೊಮ್ಮೆ ಕ್ಷೌರಕ್ಕಾಗಿ ಮಾತ್ರ ನಿಟೋ ಮನೆ ಬಿಟ್ಟು ಹೊರಬಂದು ಜಗತ್ತನ್ನು ನೋಡುತ್ತಾರೆ.
ನಿಟೋ ಸೌಜಿ ಟೋಕಿಯೋ ವಿಶ್ವ ವಿದ್ಯಾಲಯದ ಪದವೀಧರನಾಗಿ ಹೊರ ಬಂದಾಗ ನಿರುದ್ಯೋಗ ಸಮಸ್ಯೆ ಎದುರಾಯಿತು. ಚಿತ್ರಕಲೆಯನ್ನು ಅಭ್ಯಾಸಿಸುವ ಸಲುವಾಗಿ ನಿಟೋ 3 ವರ್ಷಗಳ ಕಾಲ ಮನೆಯಿಂದ ಆಚೆಗೇ ಬರಲಿಲ್ಲ. ನಂತರ ಅದು ಅವರ ಜೀವನ ಶೈಲಿಯಾಯಿತು. ಆರ್ಥಿಕವಾಗಿ ಸ್ವಾವಲಂಬಿಯಾಗಬೇಕೆಂಬ ಪ್ರಯತ್ನದಲ್ಲಿ ಆತ ತಮ್ಮ ಮನೆಯಲ್ಲಿ ಸತತವಾಗಿ ಕಲೆಯ ಅಭ್ಯಾಸ ನಡೆಸಿದ್ದಾರೆ. ಇವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಮನೆಗೆ ತಲುಪುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಸದ್ಯ ತಮ್ಮ ಚಿಕ್ಕಮ್ಮನ ಅಪಾರ್ಟಮೆಂಟ್‌ನಲ್ಲಿ ವಾಸವಿದ್ದು ತಮ್ಮ ಏಕಾಂತವಾಸದ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Pull Stay #Kickstarter is launched NOW! ヽ(≧∀≦)ノ
This game reflects my last 10 years as a shut-in aka Hikikomori?
?Back the game and make the world weirder!?https://t.co/PRzdoNWb6HAll of your love, Likes, Retweets are super appreciated!?#indiegame #gamedev #UE4 pic.twitter.com/JXUDjdnOrF
— Nito Souji (@EternalStew) October 20, 2020
ನಿಟೋ ಬೆಳಿಗ್ಗೆ 11 ಗಂಟೆಗೆ ತಮ್ಮ ದಿನವನ್ನು ಆರಂಭಿಸಿದರೆ ತಿಂಡಿ ತಿಂದು ಇಮೇಲ್‌ಗಳನ್ನು ಚೆಕ್ ಮಾಡಿ, ಸುದ್ದಿಗಳನ್ನು ನೋಡಿ, ಕೆಲಸಕ್ಕೆ ಸಂಬಂಧಿಸಿದ ಸಂದೇಶಗಳಿಗೆ ಪ್ರತಿಕ್ರಿಯಿಸಿ ಮತ್ತೆ ತಮ್ಮ ಕೆಲಸವನ್ನು ಆರಂಭಿಸಿದರೆ ಬಿಡುವಾಗುವುದು ಸಂಜೆ. ಒಂದಷ್ಟು ಕಾಲ ದೈಹಿಕ ವ್ಯಾಯಾಮ, ರಾತ್ರಿಯ ಊಟ ಮತ್ತೆ ಗೇಮ್ ಡೆವಲಪ್‌ಮೆಂಟ್ ಕೆಲಸ. ನಡುವೆ ಹೊರ ಜಗತ್ತಿನೊಂದಿಗೆ ನೇರ ಸಂಪರ್ಕವಿಲ್ಲ. ಹೊರಗಡೆ ಸುತ್ತಾಟವಿಲ್ಲ. ಮತ್ತೆ ರಾತ್ರಿ ತಮ್ಮ ಕಲೆಯ ಅಭ್ಯಾಸಕ್ಕೆ ತೊಡಗಿದರೆ ಬೆಳಗಿನ ಜಾವ 4 ಗಂಟೆಗೆ ನಿದ್ರೆಗೆ ಜಾರುತ್ತಾರೆ.
ಎರಡು ಸಾವಿರದ ಹದಿನೈದರಿಂದ ನಿಟೋ ಸೌಜಿ ಇಂಗ್ಲೀಷ್ ಭಾಷೆಯ ಕಲಿಕೆಯಲ್ಲಿ ತೊಡಗಿದ್ದಾರೆ. ಕಂಪ್ಯೂಟರ್ ಮತ್ತು ಮೊಬೈಲ್ ಗೇಮ್‌ಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಂತ ಜೀವನದ ಪ್ರೇರಣೆಯಿಂದ ಅವರು ಪುಲ್ ಸ್ಟೇ ಎಂಬ ಡಿಜಿಟಲ್ ಗೇಮ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಗೇಮ್ 2020 ಅಕ್ಟೋಬರ್‌ನಲ್ಲಿ ಅಂತರ್ಜಾಲದಲ್ಲಿ ಲಭ್ಯವಿದೆ. ಗೇಮ್ ಮೂಲಕ ನಿಟೋ ತಮ್ಮ ಜೀವನದ ಅನುಭವಗಳನ್ನು ಹಿಡಿದಿಟ್ಟಿದ್ದಾರೆ.
ನಿಟೋ ಸೌಜಿ ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಿದ್ದು ಸುಮಾರು 2 ಲಕ್ಷ ಜನರು ಅವರ ಅನುಭವಗಳನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸುತ್ತಾರೆ. ಅವರಿಂದ ಕಲೆ, ತಂತ್ರಜ್ಞಾನದ ಮಾಹಿತಿಯನ್ನು ಪಡೆಯುತ್ತಾರೆ.
ನಿಟೋ ಸೌಜಿ ಈಗ ಸಂಪೂರ್ಣ ಜೀವನವನ್ನು ತಮ್ಮ ಪ್ರಾಜೆಕ್ಟ್ಗಾಗಿ ಮೀಸಲಿಟ್ಟಿದ್ದಾರೆ. ದೀರ್ಘಾವಧಿಯಲ್ಲೊ ಕೆಲಸಮಾಡುವುದು ಇದರಿಂದ ಕಷ್ಟವಾಗಿದೆ ಎನ್ನುತ್ತಾರೆ.
ಇದನ್ನೂ ಓದಿ : ಬಂಗಾಳ ರಾಜ್ಯಪಾಲರನ್ನು ಕಿತ್ತು ಹಾಕಲು ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದ ಮಮತಾ ಬ್ಯಾನರ್ಜಿ


