ನಮ್ಮಲ್ಲಿ ಬಹುತೇಕರಿಗೆ ಸಾಕು ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಮನೆಯ ಮಕ್ಕಳಂತೆಯೇ ನಾಯಿಗಳನ್ನು ಅನೇಕರು ಪ್ರೀತಿಸುತ್ತಾರೆ ಮತ್ತು ಮುದ್ದಿಸುತ್ತಾರೆ. ಇನ್ನು ಅನೇಕರು ಬೀದಿ ನಾಯಿಗಳಿಗೆ ಊಟ ಹಾಕುವ ಮೂಲಕ ಮನುಷ್ಯನ ಅನಾದಿ ಕಾಲದ ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸುತ್ತಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಬೆಂಗಳೂರಿನ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಸಂಘಟನೆಗಳು ಬೀದಿನಾಯಿಗಳಿಗೆ ಊಟವನ್ನೂ ನೀಡಿವೆ. ಇದೆಲ್ಲಕ್ಕೆ ವಿರುದ್ಧವಾಗಿ ಪಂಜಾಬ್‌ನಲ್ಲೊಂದು ಅಮಾನುಷ ಘಟನೆ ನಡೆದಿದೆ. ಮಹಿಳೆಯೊಬ್ಬರು ನಾಯಿಯೊಂದನ್ನು ತಮ್ಮ ಸ್ಕೂಟಿಗೆ ಕಟ್ಟಿ ಎಳೆದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅನೇಕರು ಈ ಅಮಾನುಷ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಾಬ್‌ನ ಪಟಿಯಾಲ ನಗರದ ಸೆಂಚುರಿ ಎನ್‌ಕ್ಲೇವ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಹಿಳೆ ನಾಯಿಯೊಂದನ್ನು ತನ್ನ ದ್ವಿಚಕ್ರ ವಾಹನಕ್ಕೆ ಎಳೆದೊಯ್ಯುತ್ತಿರುವುದನ್ನು ಗಮನಿಸಿ ಮಕ್ಕಳು ಇದನ್ನು ತಡೆದಿದ್ದಾರೆ. ಮಕ್ಕಳ ಪ್ರತಿರೋಧಕ್ಕೆ ಹೆದರಿ ಗಾಯಗೊಂಡ ನಾಯಿಯನ್ನು ಅಲ್ಲಿಯೇ ಬಿಟ್ಟು ಮಹಿಳೆ ಆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಅಪರಿಚಿತ ಮಹಿಳೆ ವಿರುದ್ಧ ಪ್ರಿವೆನ್ಶನ್ ಆಫ್ ಆನಿಮಲ್ ಕ್ರುವೆಲಿಟಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿತ ಮಹಿಳೆಯ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಸೆಮಚುರಿ ಎನ್‌ಕ್ಲೇವ್ ಠಾಣಾಧಿಕಾರಿ ಗುರುಮಿತ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ : ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರಿಗೆ ಪ್ರತಿಷ್ಠಿತ ‘ಫುಕುವೋಕಾ ಗ್ರ್ಯಾಂಡ್ ಪ್ರಶಸ್ತಿ-2021’ ಘೋಷಣೆ


