ಕೇರಳ ಸರ್ಕಾರ ಕಾಸರಗೋಡು ಜಿಲ್ಲೆಯ ಕೆಲವು ಹಳ್ಳಿಗಳ ಕನ್ನಡದ ಹೆಸರನ್ನು ಬದಲಾಯಿಸಲು ಮುಂದಾಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೇರಳ ಸರ್ಕಾರಕ್ಕೆ ಪತ್ರವನ್ನು ಬರೆಯುವುದಾಗಿಯೂ ಹೇಳಿದ್ದರು. ಈಗ ಕನ್ನಡದ ಹೆಸರು ಬದಲಾವಣೆ ಇಲ್ಲವೆಂದು ಕೇರಳದ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸ್ಪಷ್ಟಪಡಿಸಿದ್ದಾರೆ.
ಕೇರಳ ಸರ್ಕಾರ ಗ್ರಾಮಗಳ ಕನ್ನಡದ ಹೆಸರನ್ನು ಬದಲಾಯಿಸುವ ಯಾವ ಆದೇಶಗಳನ್ನು, ಅಧಿಸೂಚನೆಗಳನ್ನು ಹೊರಡಿಸಿಲ್ಲ ಎಂದು ಅವರು ತಿಳಿಸಿದ್ದು, ಒಂದು ವೇಳೆ ಕೇರಳ ಸರ್ಕಾರ ಊರುಗಳ ಹೆಸರನ್ನು ಬದಲಾಯಿಸಲು ಮುಂದಾದರೆ ಹೋರಾಟವನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಟವನ್ನು ನಡೆಸುತ್ತಲೇ ಬಂದಿದ್ದೇನೆ. ಕೆಲವು ನಾಯಕರು ಭಾಷೆಯ ವಿಷಯದಲ್ಲಿ ಗೊಂದಲವನ್ನು ಹುಟ್ಟಿಸುವ ಹೇಳಿಕೆಯನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಿಗೆ ಕರೆ ಮಾಡಿ ಊರುಗಳ ಕನ್ನಡ ಹೆಸರನ್ನು ಬದಲಾಯಿಸುವ ಪ್ರಸ್ತಾಪದ ಕುರಿತು ವಿಚಾರಿಸಿದ್ದೇನೆ. ಕೇರಳ ಸರ್ಕಾರದ ಮುಂದೆ ಅಂತಹ ಪ್ರಸ್ತಾಪಗಳಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟಪಡಿಸಿದೆ. ಒಂದು ವೇಳೆ ಕಾಸರಗೋಡಿನಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುವ ಯಾವುದಾದರೂ ಘಟನೆ ನಡೆದರೆ ಅದರ ವಿರುದ್ಧ ಹೋರಾಟ ನಡೆಸುತ್ತೇನೆ. ಕನ್ನಡಿಗನಾಗಿ ಕನ್ನಡದ ಹಿತಾಸಕ್ತಿಗಳ ರಕ್ಷಣೆಗೆ ಬದ್ಧರಾಗಿರುವುದಾಗಿ ಅವರು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ
ಕಾಸರಗೋಡಿನ ಸ್ಥಳನಾಮ ಬದಲಾವಣೆ ವಿವಾದದ ವಾಸ್ತವತೆ. https://t.co/zMb2P17sxF pic.twitter.com/WUkQEloA1L— AKM Ashraf (@ashru_akm) June 28, 2021
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಕೇರಳ ಶಾಸಕ ಎ.ಕೆ.ಎಂ. ಅಶ್ರಫ್ ಅವರ ಕನ್ನಡ ಪ್ರೇಮಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದು, ಇಷ್ಟುಬೇಗ ಕೇರಳದಿಂದ ಪ್ರತಿಕ್ರಿಯೆ ಬಂದಿರುವುದು ಸಂತೊಷದ ವಿಷಯ ಎಂದು ತಿಳಿಸಿದ್ದಾರೆ. ಕಾಸರಗೋಡಿನ ಗ್ರಾಮಗಳ ಕನ್ನಡ ಹೆಸರಿನ ಮಲಯಾಳೀಕರಣ ವಿಚಾರ ಮುನ್ನೆಲೆಗೆ ಬರುವುದರ ಹಿಂದೆ ಯಾವ ತಂತ್ರವಿತ್ತೋ ತಿಳಿಯದು. ಆದರೆ, ‘ಕನ್ನಡ, ಕನ್ನಡಿಗ, ಕರ್ನಾಟಕ‘ಕ್ಕೆ ಏನೋ ಅಪಚಾರವಾಗುತ್ತಿದೆ ಎಂದು ಭಾವಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿರಿಗೆ ಪತ್ರ ಬರೆಯಲಾಯಿತು. ಆದರೆ, ಅಂಥ ಪ್ರಸ್ತಾವ ಇಲ್ಲ ಎಂಬ ಕೇರಳದ ಸ್ಪಷ್ಟನೆಯು ಸಮಾಧಾನ ಮೂಡಿಸಿದೆ ಎಂದು ಕುಮಾರಸ್ವಾಮಿಯವರು ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಕಾಸರಗೋಡಿನ ಗ್ರಾಮಗಳ ಕನ್ನಡ ಹೆಸರಿನ ಮಲಯಾಳೀಕರಣ ವಿಚಾರ ಮುನ್ನೆಲೆಗೆ ಬರುವುದರ ಹಿಂದೆ ಯಾವ ತಂತ್ರವಿತ್ತೋ ತಿಳಿಯದು. ಆದರೆ, ‘ಕನ್ನಡ, ಕನ್ನಡಿಗ, ಕರ್ನಾಟಕ‘ಕ್ಕೆ ಏನೋ ಅಪಚಾರವಾಗುತ್ತಿದೆ ಎಂದು ಭಾವಿಸಿ ಕೇರಳ ಸಿಎಂ @vijayanpinarayi ರಿಗೆ ಪತ್ರ ಬರೆಯಲಾಯಿತು. ಆದರೆ, ಅಂಥ ಪ್ರಸ್ತಾವ ಇಲ್ಲ ಎಂಬ ಕೇರಳದ ಸ್ಪಷ್ಟನೆಯು ಸಮಾಧಾನ ಮೂಡಿಸಿದೆ.
1/4— H D Kumaraswamy (@hd_kumaraswamy) June 29, 2021
ಕಾಸರಗೋಡಿನಲ್ಲಿ ಕನ್ನಡಕ್ಕೆ ದಕ್ಕೆಯಾದರೆ ಹೋರಾಟ ನಡೆಸುವುದಾಗಿಯೂ, ಅದರ ನೇತೃತ್ವ ತಾವೇ ವಹಿಸುವುದಾಗಿಯೂ ಮಂಜೇಶ್ವರ ಶಾಸಕ @ashru_akm ಹೇಳಿದ್ದಾರೆ. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಭಿಮಾನ ಮೆರೆದಿದ್ದ ಅಶ್ರಫ್ ಹೇಳಿಕೆಯು ಮತ್ತಷ್ಟು ಸಮಾಧಾನ ತಂದಿದೆ. ಕನ್ನಡಪರವಾದ ನಿಲುವು ಪ್ರಕಟಿಸಿರುವ ಅಶ್ರಫ್ ಅವರನ್ನು ಅಭಿನಂದಿಸುತ್ತೇನೆ.
2/4— H D Kumaraswamy (@hd_kumaraswamy) June 29, 2021
ಕೇರಳ ಸರ್ಕಾರ ಕಾಸರಗೋಡು ಜೆಲ್ಲೆಯ ಊರುಗಳ ಕನ್ನಡ ಹೆಸರನ್ನು ಮಲಾಯಳೀಕರಣಗೊಳಿಸುವ ತೀರ್ಮಾನವನ್ನು ಕೈಬಿಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಿನ್ನೆ ಕೇರಳ ಸರ್ಕಾರವನ್ನು ಒತ್ತಾಯಿಸಿದ್ದರು.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಒಳಗೊಂಡು ಬಹುತೇಕ ಪ್ರದೇಶಗಳ ಹೆಸರನ್ನು ಮಲಯಾಳೀಕರಣಗೊಳಿಸುವ ಕೇರಳ ಸರ್ಕಾರದ ನಿರ್ಧಾರದಿಂದ ಆ ಭಾಗದ ಜನರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಕೇರಳದ ಮುಖ್ಯಮಂತ್ರಿಗಳಾದ ಸನ್ಮಾನ್ಯ @vijayanpinarayi ಅವರ ಈ ತೀರ್ಮಾನವನ್ನು ಮರುಪರಿಶೀಲಿಸಬೇಕು ಮತ್ತು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸುತ್ತೇನೆ.
— Nalinkumar Kateel (@nalinkateel) June 28, 2021
ಕನ್ನಡದ ಊರುಗಳ ಹೆಸರನ್ನು ಮಲಯಾಳೀಕರಣಗೊಳಿಸುತ್ತಿರುವ ವಿಷಯದ ಕುರಿತಾಗಿ ಮಾಹಿತಿಯನ್ನು ಸಂಗ್ರಹಿಸಿ ಕೆಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಲಾಗುವದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಭಾಷೆಯಂತಹ ಸೂಕ್ಷ್ಮ ವಿಷಯದಲ್ಲಿ ನಿನ್ನೆ ಹುಟ್ಟಿಕೊಂಡಿದ್ದ ಚರ್ಚೆ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರ ಪ್ರಯತ್ನದ ಫಲವಾಗಿ ಯಾವುದೇ ವಿವಾದಗಳಿಲ್ಲದೇ ಬಗೆಹರಿದಿದೆ. ಅಶ್ರಫ್ ಅವರು ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಕೇರಳ ವಿಧಾನ ಸಭೆಯಲ್ಲಿ ಕನ್ನಡ ಭಾಷೆಯಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.


