ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ದ ಪ್ರತಿಭಟಿಸುತ್ತಿರುವ ರೈತರನ್ನು ಉಲ್ಲೇಖಿಸಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ‘ನಾವು ತಾಳ್ಮೆಯಿಂದಿದ್ದೇವೆ, ಆದರೆ ಮಿತಿ ಮೀರದಿರಿ’ ಎಂದು ಬುಧವಾರ ಎಚ್ಚರಿಕೆ ನೀಡಿದ್ದಾರೆ. ಖಟ್ಟರ್ ಅವರು ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿರೋಧವನ್ನು ತೀವ್ರವಾಗಿ ಎದುರಿಸುತ್ತಿದ್ದಾರೆ.
ಉತ್ತರ ಪ್ರದೇಶ-ದೆಹಲಿ ಗಡಿಯಾದ ಘಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರ ನಡುವೆ ಇಂದು ಘರ್ಷಣೆ ನಡೆದ ನಂತರ ಮುಖ್ಯಮಂತ್ರಿ ಈ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಭಯೋತ್ಪಾದನೆ ಆರೋಪ ಹೊತ್ತು 12 ವರ್ಷ ಜೈಲಲ್ಲಿ ಕಳೆದ ನಿರಪರಾಧಿ!
“ಕಿಸಾನ್ (ರೈತ) ಎಂಬ ಪದವು ಪವಿತ್ರವಾಗಿದೆ, ಅದನ್ನು ಎಲ್ಲರೂ ಗೌರವದಿಂದ ಕಾಣುತ್ತಾರೆ. ಕೆಲವು ದುರದೃಷ್ಟಕರ ಘಟನೆಗಳಿಂದಾಗಿ ಈ ಪದವು ಕಳಂಕಿತವಾಗಿದೆ. ಸಹೋದರಿಯರು ಮತ್ತು ಹೆಣ್ಣುಮಕ್ಕಳ ಘನತೆಯನ್ನು ಕಸಿದುಕೊಳ್ಳಲಾಗಿದೆ, ಕೊಲೆಗಳು ನಡೆಯುತ್ತಿವೆ, ರಸ್ತೆಗಳು ನಿರ್ಬಂಧಿಸಲ್ಪಟ್ಟಿವೆ. ಇದು ಪ್ರಜಾಪ್ರಭುತ್ವ ವಿರೋಧಿ ಘಟನೆಗಳಾಗಿದ್ದು, ನಾನು ಇದನ್ನು ಖಂಡಿಸುತ್ತೇನೆ” ಖಟ್ಟರ್ ಹೇಳಿದ್ದಾರೆ.
“ನಾವು ತಾಳ್ಮೆಯನ್ನು ಕಾಪಾಡಿಕೊಂಡಿದ್ದೇವೆ ಆದರೆ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹಳ್ಳಿಗಳನ್ನು ಭೇಟಿ ಮಾಡಬಾರದು ಎಂದು ಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರ ನಡೆಸುತ್ತಿರುವವರಿಗೆ ಜನರನ್ನು ಭೇಟಿ ಮಾಡುವ ಜವಾಬ್ದಾರಿ ಇದೆ. ನಮ್ಮನ್ನು ಎಷ್ಟೇ ಪ್ರಚೋದಿಸಿದರೂ ಅವರು ಹರಿಯಾಣದ ನಮ್ಮದೆ ಸ್ವಂತ ಜನರಾಗಿದ್ದರಿಂದ ನಾವು ತಾಳ್ಮೆಯನ್ನು ಕಾಪಾಡಿಕೊಂಡಿದ್ದೇವೆ. ಆದರೆ ಅವರು ತಮ್ಮ ಮಿತಿಯನ್ನು ಮೀರುವುದು ಒಳ್ಳೆಯದಲ್ಲ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೂ ಓದಿ: ಅನ್ನದಾತರ ವಿರುದ್ದ ಕತ್ತಿ ಎತ್ತಿ, ರೈತ ವಿರೋಧಿ ಘೋಷಣೆ ಕೂಗಿದ BJP ಕಾರ್ಯಕರ್ತರು
ರೈತ ಹೋರಾಟದ ಸ್ಥಳಗಳಲ್ಲಿ ಒಂದಾದ ಘಾಜಿಪುರ ಗಡಿಯಲ್ಲಿ ಬುಧವಾರ ರೈತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ಉಂಟಾಗಿದೆ. ಇಂದು ಬೆಳಗ್ಗೆ ಉತ್ತರ ಪ್ರದೇಶ ಗೇಟ್ ಬಳಿಯ ರೈತರ ಪ್ರತಿಭಟನಾ ಸ್ಥಳದ ಬಳಿ ಬಿಜೆಪಿ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ದಾಂಧಲೆ ನಡೆಸಿದ್ದಾರೆಂದು ಭಾರತೀಯ ಕಿಸಾನ್ ಯೂನಿಯನ್ ಆರೋಪಿಸಿದೆ.
ಘಟನೆಯಲ್ಲಿ ಹೋರಾಟ ನಿರತ ರೈತರಿಗೆ ಗಾಯಗಳಾಗಿದ್ದು, ಕೆಲ ವಾಹನಗಳು ಜಖಂಗೊಂಡಿವೆ. ಇದೇ ವೇಳೆ ಬಿಜೆಪಿಯ ಕಾರ್ಯಕರ್ತನೊಬ್ಬ ರೈತರ ಮೇಲೆ ಕತ್ತಿ ಎತ್ತಿಕೊಂಡು ಹಲ್ಲೆಗೆ ಮುಂದಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಉತ್ತರ ಪ್ರದೇಶದ ನೂತನ ಸಚಿವರಾಗಿ ಆಯ್ಕೆಯಾಗಿರುವ ಅಮಿತ್ ವಾಲ್ಮಿಕಿ ಅವರನ್ನು ಸ್ವಾಗತಿಸಿಸುವ ನೆಪದಲ್ಲಿ ದೆಹಲಿ – ಮೀರತ್ ಎಕ್ಸ್‌ಪ್ರೆಸ್ ವೇನಲ್ಲಿರುವ ಪ್ರತಿಭಟನಾ ಸ್ಥಳದ ಬಳಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು, ಡೋಲು ಬಾರಿಸುತ್ತ ರೈತ ವಿರೋಧಿ ಘೋಷಣೆಗಳನ್ನು ಕೂಗುವ ಮೂಲಕ ರೈತರನ್ನು ಪ್ರಚೋದಿಸಿದ್ದಾರೆ ಎನ್ನಲಾಗಿದೆ.
ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರು ಕಳೆದ ಏಳು ತಿಂಗಳಿನಿಂದ ದೆಹಲಿಯ ಮೂರು ಗಡಿಗಳಾದ ಸಿಂಗು, ಟಿಕ್ರಿ ಮತ್ತು ಗಾಜಿಪುರದಲ್ಲಿ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ.
ಇದನ್ನೂ ಓದಿ: ಯುಪಿ: ಅತ್ಯಾಚಾರ ಆರೋಪಿಗಳ ಕಪಾಳಕ್ಕೆ ಹೊಡೆದು ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಒತ್ತಾಯ!


