ಪಶ್ಚಿಮ ಬಂಗಾಳದಲ್ಲಿ ಮತದಾನದ ನಂತರ ನಡೆದಿದೆ ಎನ್ನಲಾಗಿರುವ ಹಿಂಸಾಚಾರದ ಕಾರಣಗಳ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯ ಮೇರೆಗೆ ಒಕ್ಕೂಟ ಸರ್ಕಾರ, ಪಶ್ಚಿಮ ಬಂಗಾಳ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಗುರುವಾರ ನೋಟಿಸ್ ನೀಡಿದೆ. ಮತದಾನದ ನಂತರದ ಹಿಂಸಾಚಾರದ ಬಗ್ಗೆ ಎಸ್‌ಐಟಿ ತನಿಖೆ ನಡೆಸುವಂತೆ ನಿರ್ದೇಶನ ಕೋರಿದ್ದ ವಕೀಲ ಹರಿಶಂಕರ್ ಜೈನ್ ಅವರ ಮನವಿಯನ್ನು ನ್ಯಾಯಮೂರ್ತಿ ವಿನೀತ್ ಸರನ್ ನೇತೃತ್ವದ ನ್ಯಾಯಪೀಠವು ಆಲಿಸಿತ್ತು.
ಈ ಮಧ್ಯೆ, ಹಿಂಸಾಚಾರದಿಂದಾಗಿ ಜನರನ್ನು ಸ್ಥಳಾಂತರಿಸುವ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಕಲ್ಕತ್ತಾ ಹೈಕೋರ್ಟ್‌ಗೆ ಸಂಕ್ಷಿಪ್ತ ವರದಿಯನ್ನು ಸಲ್ಲಿಸಿದೆ. ಈ ವರದಿಯ ಪರಿಶೀಲನೆಯನ್ನು ನ್ಯಾಯಾಲಯವು ಜುಲೈ 2 ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಸಂಚಾರಿ ವಿಜಯ್ ನಿಧನಕ್ಕೆ ಕನ್ನಡದಲ್ಲಿ ಸಂತಾಪ ಸೂಚಿಸಿದ ಅಮೆರಿಕಾ!
ಕಳೆದ ವಾರ, ಪಶ್ಚಿಮ ಬಂಗಾಳ ಸರ್ಕಾರವು ಜೂನ್ 18 ರ ಆದೇಶವನ್ನು ಮರುಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್‌ನ ಐದು ನ್ಯಾಯಾಧೀಶರ ಪೀಠವು ನೀಡಿದ್ದ ಆ ಆದೇಶದಲ್ಲಿ, ಮತದಾನದ ನಂತರ ನಡೆದಿದೆ ಎನ್ನಲಾದ ಹಿಂಸಾಚಾರದ ಸಂದರ್ಭದಲ್ಲಿ, ಮಾನವ ಹಕ್ಕುಗಳ ಉಲ್ಲಂಘನೆಯ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ಎನ್‌ಎಚ್‌ಆರ್‌ಸಿ ಅಧ್ಯಕ್ಷರಿಗೆ ನಿರ್ದೇಶನ ನೀಡಿತ್ತು.
ನ್ಯಾಯಾಲಯದ ಆದೇಶಗಳನ್ನು ಅನುಸರಿಸಿ, ಜೂನ್ 21 ರಂದು, ಎನ್ಎಚ್ಆರ್‌ಸಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಮಾಜಿ ಗುಪ್ತಚರ ಬ್ಯೂರೋ ಮುಖ್ಯಸ್ಥ ರಾಜೀವ್ ಜೈನ್ ನೇತೃತ್ವದ ಸಮಿತಿಯನ್ನು ರಚಿಸಿದ್ದರು. ಆದರೆ, ಎನ್‌ಎಚ್‌ಆರ್‌ಸಿ ತಂಡವು ಮಂಗಳವಾರ ಮಧ್ಯಾಹ್ನ ಜಾದವ್‌ಪುರದಲ್ಲಿ ನಿಂದನೆ ಮತ್ತು ಹಿಂಸಾಚಾರದ ಬೆದರಿಕೆಗಳನ್ನು ಎದುರಿಸಿದೆ ಎಂದು ವರದಿಯಾಗಿದೆ.
ತಂಡದಲ್ಲಿದ್ದ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಅತೀಫ್ ರಶೀದ್, “ತಂಡದ ಮೇಲೆ ಜನಸಮೂಹವೊಂದು ಹಲ್ಲೆಗೆ ಪ್ರಯತ್ನಿಸಿ, ಬೆನ್ನಟ್ಟಿಕೊಂಡು ಬಂದಿದ್ದು, ಜೊತೆಗೆ ಇದ್ದ ಪೊಲೀಸರು ಯಾವುದೆ ಸಹಾಯ ಮಾಡಿಲ್ಲ” ಎಂದು ಹೇಳಿದ್ದಾರೆ ಎಂದು TNIE ವರದಿ ಮಾಡಿದೆ.
ಇದನ್ನೂ ಓದಿ: ಲಕ್ಷದ್ವೀಪ: ಕೇಂದ್ರದಿಂದ ಜೈವಿಕ ಅಸ್ತ್ರ ಬಳಕೆ ಆರೋಪ, ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ


