ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಣ್ಣ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಸಮಾಜವಾದಿ ಪಕ್ಷವು ಘೋಷಿಸಿದೆ. ಇದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಕ್ಷದ ಈ ಘೋಷಣೆಯು ಅವರ ‘‘ಅಸಾಹಯಕತೆ”ಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು 2022 ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪ್ರಮುಖ ರಾಜಕೀಯ ಪಕ್ಷಗಳೊಂದಿಗಿನ ಮೈತ್ರಿಯನ್ನು ತಳ್ಳಿಹಾಕಿ, ತಮ್ಮ ಪಕ್ಷವು ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಬಹಿರಂಗವಾಗಿ ಹೇಳಿದ್ದರು.
ಇದನ್ನೂ ಒದಿ: ರಾಜ್ಯ ಬಿಜೆಪಿ ಘಟಕದ ಬಿರುಕು, ಮುಂದಿನ ಚುನಾವಣೆಯಿಂದ ಉತ್ತರಾಖಂಡ ಸಿಎಂ ಸ್ಥಾನಕ್ಕೆ ಕುತ್ತು ಸಾಧ್ಯತೆ
ಅವರ ಈ ಹೇಳಿಕೆಗೆ ಟ್ವಿಟರ್‌ನಲ್ಲಿ ದಾಳಿ ಮಾಡಿದ ಮಾಯಾವತಿ, “ಸಮಾಜವಾದಿ ಪಕ್ಷದ ಸ್ವಾರ್ಥ, ಸಂಕುಚಿತ ಮತ್ತು ವಿಶೇಷವಾಗಿ ದಲಿತ ವಿರೋಧಿ ಚಿಂತನೆ ಹಾಗೂ ಕಾರ್ಯಶೈಲಿಯ ಕೆಟ್ಟ ಅನುಭವಗಳಿಂದಾಗಿ, ದೇಶದ ಹೆಚ್ಚಿನ ದೊಡ್ಡ ಮತ್ತು ಪ್ರಮುಖ ಪಕ್ಷಗಳು ಚುನಾವಣೆಯಲ್ಲಿ ಅವರನ್ನು ದೂರವಿಡುವುದು ಉತ್ತಮವೆಂದು ಭಾವಿಸುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ” ಎಂದು ಹೇಳಿದ್ದಾರೆ.
2. इसीलिए आगामी यूपी विधानसभा आमचुनाव अब यह पार्टी किसी भी बड़ी पार्टी के साथ नहीं बल्कि छोटी पार्टियों के गठबंधन के सहारे ही लड़ेगी। ऐसा कहना व करना सपा की महालाचारी नहीं है तो और क्या है? 2/2
— Mayawati (@Mayawati) July 2, 2021
“ಅದಕ್ಕಾಗಿಯೇ ಮುಂಬರುವ ಯುಪಿ ವಿಧಾನಸಭಾ ಚುನಾವಣೆಯಲ್ಲಿ, ಈ ಪಕ್ಷವು ಯಾವುದೇ ದೊಡ್ಡ ಪಕ್ಷದೊಂದಿಗೆ ಜೊತೆಗೂಡುತ್ತಿಲ್ಲ, ಅವರಿಗೆ ಸಣ್ಣ ಪಕ್ಷಗಳ ಮೈತ್ರಿ ಮಾಡಲು ಮಾತ್ರ ಸಾಧ್ಯವಿದೆ. ಇದು ಅಸಹಾಯಕತೆಯಲ್ಲದೆ ಮತ್ತೇನು” ಎಂದು ಅವರು ಕೇಳಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಮೈತ್ರಿ ಮಾಡಿಕೊಂಡು ಸ್ಪರ್ಧೆ ನಡೆಸಿದ್ದವು.
2022 ರ ಫೆಬ್ರವರಿಯಿಂದ ಮಾರ್ಚ್ ಒಳಗೆ ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 2017 ರಲ್ಲಿ ಚುನಾಯಿತರಾದ ಪ್ರಸ್ತುತ ವಿಧಾನಸಭೆಯ ಅವಧಿ 14 ಮಾರ್ಚ್ 2022 ಕ್ಕೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಒದಿ: ವಿಜಯೇಂದ್ರ, ಸಚಿವರ ಹೆಸರಿನಲ್ಲಿ ವಂಚನೆ: ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಬಂಧನ


