ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಹೆಸರು ಹೇಳಿಕೊಂಡು, ಸಚಿವರ ಹೆಸರು ಹೇಳಿಕೊಂಡು ಜನರನ್ನು ವಂಚಿಸಿದ ಆರೋಪದಡಿ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ಪಿ.ಎ.ರಾಜಣ್ಣ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ 35 ವರ್ಷದ ರಾಜು ಅಲಿಯಾಸ್ ರಾಜಣ್ಣ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಎಸಗಿರುವ ಬಗ್ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಸಿಬಿಗೆ ದೂರು ನೀಡಿದ್ದರು.

ಬಿ.ವೈ.ವಿಜಯೇಂದ್ರ ಅವರ ದೂರ ಆಧರಿಸಿ ಸಾಕ್ಷಿಗಳನ್ನು ಕಲೆ ಹಾಕಿ ಸಿಸಿಬಿ ಪೊಲೀಸರು ಗುರುವಾರ ಆರೋಪಿಯನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರು ಪಡಿಸಿ ಕಸ್ಟಡಿಗೆ ತೆಗೆದುಕೊಳ್ಳುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಆಘಾತ: ಆಸ್ತಿ ತೆರಿಗೆ ಎರಡು ಪಟ್ಟು ಏರಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ!

ಬಿ ವೈ ವಿಜಯೇಂದ್ರ, ಸಿಟಿ ಸೈಬರ್ ಕ್ರೈಂ ಪೊಲೀಸ್ ಇಲಾಖೆಯಲ್ಲಿ ರಾಜಣ್ಣ ವಿರುದ್ಧ ವಂಚನೆ ದೂರನ್ನು ದಾಖಲಿಸಿದ್ದರು. ಜನರಿಗೆ ಸರ್ಕಾರಿ ಕೆಲಸ ಕೊಡಿಸುವ, ವರ್ಗಾವಣೆ ಮಾಡಿಸುವ ಆಮಿಷವೊಡ್ಡಿ ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ದೂರು ನೀಡಿದ್ದರು.

ಪ್ರಮುಖ ಆರೋಪಿ ರಾಜಣ್ಣ ಮತ್ತು ಇತರ ಕೆಲವು ಮಂದಿ ವಿರುದ್ಧ ವಂಚನೆ ಹಾಗೂ ಐಟಿ ಕಾಯ್ದೆಯಡಿ ಸಿಸಿಬಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ದೂರಿನ ಆಧಾರದಲ್ಲಿ ಸಾಕ್ಷಿ ಕಲೆ ಹಾಕಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

’ರಾಜು ನನ್ನ ಬಳಿ ಬಳ್ಳಾರಿಯಲ್ಲಿರುವಾಗಿನಿಂದ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆತ ಅಧಿಕೃತವಾಗಿ ನನ್ನ ಕಚೇರಿಯ ಸಿಬ್ಬಂದಿಯಲ್ಲ. ನನಗೆ ಗೊತ್ತಿರುವ ಹುಡುಗ ಅಷ್ಟೇ. ಸಿಎಂ ಪುತ್ರ ವಿಜಯೇಂದ್ರ ಜೊತೆಗೆ ಚರ್ಚೆ ಮಾಡುತ್ತೇನೆ. ಕೇಸು ದಾಖಲಿಸಿದ್ದ ಕಾರಣ ಅದರ ವಿವರ ಪಡೆಯಬೇಕಾಗಿದೆ. ಅವರ ಮೇಲೆ ಕೇಸ್ ದಾಖಲಾಗಿದೆ. ದೊಡ್ಡವರಾದ್ರೂ, ಸಣ್ಣವರಾದರೂ ಕಾನೂನು ಎಲ್ಲರಿಗೂ ಒಂದೆ. ರಾಜು ವಂಚಿಸಿದ್ದರೇ, ಕಾನೂನು ಪ್ರಕಾರ ಆತನ ವಿರುದ್ಧ ಕ್ರಮ ಕೈಗೊಳ್ಳಲಿ” ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ, ’ಸಾರ್ವಜನಿಕ ಕ್ಷೇತ್ರದಲ್ಲಿರುವಾಗ ನೆರವು ಕೇಳುವವರನ್ನು ಅನುಮಾನಿಸಿ ನೋಡಲಾಗದು. ಹಾಗೆಂದು ಎಚ್ಚರ ತಪ್ಪಲಾಗದು. ಹೆಸರು ದುರುಪಯೋಗಪಡಿಸಿಕೊಂಡು ಕಳಂಕ ಹಚ್ಚುವ ವಂಚಕರಿಂದ ತೊಂದರೆ ತುಸು ಹೆಚ್ಚಾಗಿಯೇ ಬಾಧಿಸುತ್ತಿದೆ. ಇದು ವಿರೋಧಿಗಳಿಗೆ ಅಪಪ್ರಚಾರದ ಸರಕಾಗಿಯೂ ಬಳಕೆಯಾಗುತ್ತಿದೆ. ಸಾರ್ವಜನಿಕರು ಮೋಸ ಹೋಗಬಾರದೆಂಬ ಹಿತದೃಷ್ಟಿಯಿಂದ ಹಾಗೂ ನನ್ನ ವ್ಯಕ್ತಿತ್ವ ರಕ್ಷಣೆಗಾಗಿ, ಅನಿವಾರ್ಯವಾಗಿ ನೀಡಿದ ದೂರಿನ ಮೇಲೆ ಪೋಲಿಸರು ಕ್ರಮ ತೆಗೆದುಕೊಂಡಿದ್ದಾರೆ. ನನ್ನನೂ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ, ವಂಚಿಸುವವರ ಬಗ್ಗೆ ಸಮಾಜ ಎಚ್ಚರದಿಂದರಬೇಕೆಂದು ವಿನಂತಿಸುವೆ’ ಎಂದಿದ್ದಾರೆ.


ಇದನ್ನೂ ಓದಿ: ಮಠಾಧೀಶರನ್ನು ಖರೀದಿಸಿ ಅಧಿಕಾರ ಹಿಡಿದವರು ಹೆಚ್ಚು ದಿನ ಇರಲ್ಲ: ಬಿಎಸ್‌ವೈ ವಿರುದ್ಧ ಯತ್ನಾಳ್ ಆರೋಪ

LEAVE A REPLY

Please enter your comment!
Please enter your name here