ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರು ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಆರು ತಿಂಗಳೊಳಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇಂದು ಸಂಜೆ ಅವರು ರಾಜ್ಯದ ರಾಜ್ಯಪಾಲರ ಭೇಟಿಗೆ ಸಮಯ ಕೋರಿದ್ದಾರೆ.
ತಿರಥ್ ರಾವತ್ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿದ್ದು, ಬಿಜೆಪಿ ನಾಯಕರೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಇಂದು ಮಧ್ಯಾಹ್ನ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಭೇಟಿಯ ನಂತರ ಅವರು ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರೊಂದಿಗೆ ಭೇಟಿಗೆ ಸಮಯ ಕೇಳಿದ್ದಾರೆ.
ಈ ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಅವರ ತೀವ್ರ ಭಿನ್ನಾಭಿಪ್ರಾಯದ ನಡುವೆಯೆ ತಿರಥ್ ಸಿಂಗ್ ರಾವತ್ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಹೆಚ್ಚು ಪಡಿತರಕ್ಕಾಗಿ 20 ಮಕ್ಕಳನ್ನು ಹೆರಬಾರದೆ..? ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ತಿರತ್ ಸಿಂಗ್ ರಾವತ್
ಪ್ರಸ್ತುತ ಲೋಕಸಭಾ ಸದಸ್ಯರಾಗಿರುವ ತಿರಥ್ ಅವರು ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ, ಸೆಪ್ಟೆಂಬರ್ 10 ರೊಳಗೆ ವಿಧಾನಸಭಾ ಸ್ಥಾನವನ್ನು ಗೆದ್ದು ಉತ್ತರಾಖಂಡದ ಶಾಸಕರಾಗಬೇಕಿದೆ.
ಎರಡನೆ ಅಲೆಯ ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಐದು ರಾಜ್ಯಗಳ ಚುನಾವಣೆ ನಡೆಸಿದ್ದ ಚುನಾವಣಾ ಆಯೋಗದ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆದ್ದರಿಂದ, ಇದೀಗ ಉಪ ಚುನಾವಣೆಗಳನ್ನು ಘೋಷಿಸಲು ಚುನಾವಣಾ ಆಯೋಗವು ನಿರಾಸಕ್ತಿ ತೋರುತ್ತಿದೆ ಎನ್ನಲಾಗಿದೆ.
ಚುನಾವಣಾ ಆಯೋಗವು ಚುನಾವಣೆಯ ಕುರಿತು ವಿವಿಧ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಚುನಾವಣಾ ಆಯೋಗದ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. “ಕೊರೊನಾ ಪರಿಸ್ಥಿತಿಯು ಒಂದು ಪ್ರಮುಖವಾದ ಪರಿಗಣನೆಯಾಗಿದ್ದು, ಅನೇಕ ಉಪಚುನಾವಣೆಗಳು ಬಾಕಿ ಉಳಿದಿವೆ” ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಾಜ್ಯ ಬಿಜೆಪಿ ಘಟಕದ ಬಿರುಕು, ಮುಂದಿನ ಚುನಾವಣೆಯಿಂದ ಉತ್ತರಾಖಂಡ ಸಿಎಂ ಸ್ಥಾನಕ್ಕೆ ಕುತ್ತು ಸಾಧ್ಯತೆ
ತಿರಥ್ ರಾವತ್ ಅವರ ಪತ್ರಿಕಾ ಹೇಳಿಕೆಗಳು ಸದಾ ವಿವಾದಗಳಿಂದ ಕೂಡಿದ್ದು, ಬಿಜೆಪಿಯ ಉತ್ತರಾಖಂಡದ ನಾಯಕರು ದೆಹಲಿ ನಾಯಕತ್ವಕ್ಕೆ ಅವರ ಕೆಲವು ಹೇಳಿಕೆಗಳ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಬಗ್ಗೆ ದೂರು ನೀಡಿದ್ದರು.
ಅವರು ತಮ್ಮದೆ ಪಕ್ಷದ ಆಡಳಿತವು ತೆಗೆದುಕೊಂಡಿದ್ದ ನೀತಿ ನಿರ್ಧಾರಗಳನ್ನು ಟೀಕಿಸುವ ಮೂಲಕ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದ್ದರು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ, ತಿರಥ್ ಸೀಳಿರುವ ಜೀನ್ಸ್ ಧರಿಸಿದ ಮಹಿಳೆಯರ ಬಗ್ಗೆ ಅವಮಾನಕರವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದರು. ಜೊತೆಗೆ 200 ವರ್ಷಗಳ ಕಾಲ ಭಾರತವನ್ನು ಆಳಿದ್ದು ಬ್ರಿಟನ್ ಅಲ್ಲ, ಅಮೆರಿಕ ಎಂದೂ ಹೇಳಿಕೆ ನೀಡಿದ್ದರು.
ಕೊರೊನಾ ಬಿಕ್ಕಟ್ಟು ಉತ್ತುಂಗದಲ್ಲಿದ್ದಾಗ ಕುಂಭಮೇಳವನ್ನು ಅವರು ನಿಭಾಯಿಸಿದ್ದು ಮತ್ತು ಕೊರೊನಾಗೆ ಯಾವುದೇ ಆರ್‌ಟಿ-ಪಿಸಿಆರ್ ಪರೀಕ್ಷೆಯ ಅಗತ್ಯವಿಲ್ಲ ಎಂಬ ಅವರ ಅಭಿಪ್ರಾಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ತಬ್ಲಿಗಿ ಮರ್ಕಜ್ ಮತ್ತು ಕುಂಭಮೇಳಕ್ಕೂ ಹೋಲಿಕೆ ಸರಿಯಲ್ಲ: ಉತ್ತರಖಂಡ ಸಿಎಂ
ಇದನ್ನೂ ಓದಿ: 1.84 ಲಕ್ಷ ಕೋವಿಡ್ ಪ್ರಕರಣಗಳು ವರದಿ: ಕುಂಭಮೇಳದಲ್ಲಿ ಮೂರನೇ ಅತಿದೊಡ್ಡ ಶಾಹಿ ಸ್ನಾನ!


