ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟ ಪುನರ್ರಚನೆಗೆ ಇನ್ನೇನು ಕೆಲವೇ ಗಂಟೆಗಳಿದ್ದು ಇದಕ್ಕೂ ಮುನ್ನವೇ 4 ಜನ ಪ್ರಮುಖ ಮಂತ್ರಿಗಳು ತಮ್ಮ ಖಾತೆಗೆ ರಾಜೀನಾಮೆ ನೀಡಿದ್ದಾರೆ. ರಾಸಾಯನಿಕ ಮತ್ತು ರಸಗೊಬ್ಬರ ಸಚಿವ D.V. ಸದಾನಂದ ಗೌಡ, ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಮತ್ತು ಇತರ ಒಂಬತ್ತು ಮಂತ್ರಿಗಳು ಇಂದು ಮಧ್ಯಾಹ್ನ ಸಂಪುಟ ತ್ಯಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್, ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಕೇಂದ್ರ ಸಚಿವ ಸಂಪುಟದಿಂದ ಹೊರಬಂದಿದ್ದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ, ದೇಬಶ್ರೀ ಚೌಧುರಿ, ಸಂಜಯ್ ಧೋತ್ರೆ ಮತ್ತು ರತನ್ ಲಾಲ್ ಕಟಾರಿಯಾ ಕೂಡ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಜೊತೆಗೆ ಆರೋಗ್ಯ ಇಲಾಖೆ ರಾಜ್ಯ ಮಂತ್ರಿ ಸಚಿವ ಅಶ್ವಿನಿ ಚೌಬೆ ಇಂದು ಕೇಂದ್ರ ಸರ್ಕಾರದ ಕ್ಯಾಬಿನೇಟ್ ತ್ಯಜಿಸಿದ್ದಾರೆ.
ಕೊರೋನಾ 2 ನೇ ಅಲೆಯ ನಿಯಂತ್ರಣದಲ್ಲಿ ವಿಫಲರಾಗಿದ್ದ ಡಾ. ಹರ್ಷ ವರ್ಧನ್ ಇಂದು ಮಧ್ಯಾಹ್ನ ರಾಜೀನಾಮೆ ನೀಡಿರುವುದು ಎಲ್ಲರನ್ನೂ ಆಶ್ಚರ್ಯಕ್ಕೆ ಒಳಗಾಗುವಂತೆ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿಗಳ ರಾಜೀನಾಮೆ ಎಂದರೆ ಕೊರೋನಾ ಎರಡನೆ ಅಲೆಯ ನಿರ್ವಹಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂಬ ಅಂಶವನ್ನು ಸರ್ಕಾರ ನೇರವಾಗಿ ಒಪ್ಪಿಕೊಂಡಿದೆ. ಹರ್ಷವರ್ಧನ್ ಜೊತೆಗೆ ಆರೋಗ್ಯ ಇಲಾಖೆಯ ರಾಜ್ಯ ಸಚಿವರಾಗಿದ್ದ ಅಶ್ವಿನ್ ಚೌಬೆ ಕೂಡ ರಾಜೀನಾಮೆಯನ್ನು ನೀಡಿದ್ದಾರೆ. ಆರೋಗ್ಯ ಮಂತ್ರಿಗಳ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸಮರ್ಥರು ಯಾರು ? ಕೊರೊನಾ 3 ನೇ ಅಲೆಯನ್ನು ಎದುರಿಸಲು ಹೊಸ ಸಚಿವರಿಂದ ಸಾಧ್ಯವೇ ಎಂಬ ಪ್ರಶ್ನೆಗಳು ಕಾಡುತ್ತಿದ್ದು ಸಂಜೆ 6 ಗಂಟೆಯ ನಂತರ ಇದಕ್ಕೆಲ್ಲ ಉತ್ತರ ಸಿಗಲಿದೆ.
ರಸಗೊಬ್ಬರದ ಬೆಲೆ ಏರಿಕೆ, ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್, ಲಸಿಕೆ, ರೆಮೆಡಿಸಿವರ್ ಸೇರಿದಂತೆ ಔಷಧ ಪೂರೈಕೆಯ ವ್ಯತ್ಯಯ ಕಂಡುಬಂದಿತ್ತು. ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಸಾವಿರಾರು ಜನರು ಮೃತಪಟ್ಟಿದ್ದರು. ಇದೆಲ್ಲವನ್ನೂ ಪರಿಗಣಿಸಿ D.V ಸದಾನಂದ ಗೌಡರನ್ನು ಕ್ಯಾಬಿನೇಟ್‌ನಿಂದ ಕೈಬಿಡಲಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014 ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಸದಾನಂದ ಗೌಡರು ಕ್ಯಾಬಿನೇಟ್‌ನ ಖಾಯಂ ಸದಸ್ಯರಾಗಿದ್ದರು. ಹಿಂದೆ ರೈಲ್ವೆಯಂತಹ ಮಹತ್ವದ ಇಲಾಖೆಯ ಜವಾಬ್ದಾರಿಯನ್ನು ಸದಾನಂದ ಗೌಡರ ಹೆಗಲಿಗೇರಿಸಲಾಗಿತ್ತು.
ಇದನ್ನೂ ಓದಿ: ಇಂದು ಸಂಜೆ ಕೆಂದ್ರ ಸಚಿವ ಸಂಪುಟ ವಿಸ್ತರಣೆ ಖಚಿತ


