PC:[email protected]

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ಇಂದು (ಬುಧವಾರ) ರಾಜ್ಯಾದ್ಯಂತ ಸೈಕಲ್ ಜಾಥಾ ಹಮ್ಮಿಕೊಂಡಿತ್ತು. ಕೊರೊನಾ ಕಾರಣದಿಂದ ಜಾಥಾ ನಡೆಸಲು ಅನುಮತಿ ಇಲ್ಲದ ಕಾರಣ ಮತ್ತು ಪೊಲೀಸರ ಅನುಮತಿ ಪಡೆಯದ ಕಾರಣಕ್ಕೆ ರ್‍ಯಾಲಿ ನಡೆಸಿದ ಹಲವು ನಾಯಕರನ್ನು ಬಂಧಿಸಲಾಯಿತು.

ವಿಶ್ವದಲ್ಲಿಯೇ ಅಧಿಕ ತೆರಿಗೆ ವಿಧಿಸುವ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾರಣವಾದ ಕೇಂದ್ರ ಸರ್ಕಾರದ ಮೌನ ದೇಶದ ಜನರ ಬದುಕನ್ನು ಮುಗಿಸುವ ಸಂಚಿನಂತೆ ಭಾಸವಾಗುತ್ತದೆ. ಜನಸಾಮಾನ್ಯರ ಬದುಕಿಗೆ, ಕುಸಿದ ಆರ್ಥಿಕತೆಯ ಚೇತರಿಕೆಗೆ ಈ ಬೆಲೆ ಏರಿಕೆಯು ಬೀರುವ ದುಷ್ಪರಿಣಾಮದ ಬಗ್ಗೆ ಸಣ್ಣ ಆಲೋಚನೆಯನ್ನೂ ಮಾಡದೆ ಧೂರ್ತತನ ಸರ್ಕಾರ ತೋರಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಾಲಿಂಗರೆಡ್ಡಿ ಮತ್ತು ಸಲೀಂ ಅಹ್ಮದ್ ಮತ್ತು ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ಖಂಡಿಸಿ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿ, ಘೋಷಣೆಗಳನ್ನು ಕೂಗಿ ಸೈಕಲ್ ಜಾಥಾ ನಡೆಸಲಾಯಿತು.

ಇದನ್ನೂ ಓದಿ: ಕೊರೊನಾ ಎಂದರೆ ಬಿಜೆಪಿಗೆ ಹಬ್ಬ: ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಇತ್ತ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೈಕಲ್ ಜಾಥಾ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ’ಕಾಂಗ್ರೆಸ್ ಎಂದರೆ ಒಂದು ಚಳವಳಿ. ಸಾರ್ವಜನಿಕ ಹಿತಾಸಕ್ತಿಯ ಪರ ಮತ್ತು ಅನ್ಯಾಯದ ವಿರುದ್ಧ ಹೋರಾಟ ನಡೆಸುವ, ಸಂಕಷ್ಟದಲ್ಲಿರುವ ದೇಶದ ಜನರ ಧ್ವನಿಯಂತೆ ಕೆಲಸ ಮಾಡುವ ಪಕ್ಷ ನಮ್ಮದು. ಈ ಹೋರಾಟ ನಿರಂತರ’ ಎಂದರು.

’ಕೊರೊನಾ ಮೂರನೇ ಅಲೆ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಬರುವ ಮಾಹಿತಿ ಇದೆ. ಮೊದಲ‌ ಮತ್ತು ಎರಡನೇ ಅಲೆಯಲ್ಲಿ ಸೋಂಕು ತಗುಲಿಲ್ಲ ಎಂದು ಮೂರನೇ ಅಲೆಯನ್ನು ನಿರ್ಲಕ್ಷ್ಯ ಮಾಡದೆ, ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಕೊರೊನಾದ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಸರ್ಕಾರ ಹೇಳುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಂದಾಜಿನ ಪ್ರಕಾರ ಮೂರೂವರೆ ಲಕ್ಷ ಮಂದಿ ಸತ್ತಿರಬಹುದು. ಹಾಗಾಗಿ ಸರ್ಕಾರ ಕೊರೊನಾ ಸಾವಿನ ಗಣತಿ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

’ಕಳೆದ ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ವಸೂಲಿ‌ ಮಾಡಿರುವ ತೆರಿಗೆ ರೂ.1.20 ಲಕ್ಷ ಕೋಟಿ. ಜನರ ಕಷ್ಟ ಅರ್ಥಮಾಡಿಕೊಂಡು ಈಗಲಾದರೂ ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಗದಗದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್‌.ಪಾಟೀಲ್ ನೇತೃತ್ವದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೈಕಲ್ ಜಾಥಾ ನಡೆಸಲಾಗಿದೆ.


ಇದನ್ನೂ ಓದಿ: ಮುಖ್ಯಮಂತ್ರಿ ಕೊರಳಿಗೆ ಉರುಳಾದ ಅಕ್ರಮ ಡಿನೋಟಿಫಿಕೇಷನ್ ಹಗರಣ : ಪ್ರಕರಣದ ಮರು ತನಿಖೆಗೆ ನ್ಯಾಯಾಲಯ ಆದೇಶ

LEAVE A REPLY

Please enter your comment!
Please enter your name here