Homeಮುಖಪುಟಬ್ರಾಹ್ಮಣ್ಯದ ಉಗಮ ಮತ್ತು ಹೂರಣ: ಅಂದು-ಇಂದು - ಜಿ ಎನ್ ನಾಗರಾಜ್

ಬ್ರಾಹ್ಮಣ್ಯದ ಉಗಮ ಮತ್ತು ಹೂರಣ: ಅಂದು-ಇಂದು – ಜಿ ಎನ್ ನಾಗರಾಜ್

- Advertisement -
- Advertisement -

ಬ್ರಾಹ್ಮಣಗಳೆಂಬ ಗ್ರಂಥಗಳೇ ಬ್ರಾಹ್ಮಣ್ಯದ ಉಗಮ ಬಿಂದು. ನಟ ಚೇತನ್‌ರವರ ಮೇಲೆ ಕೇಸು ಹಾಕಿದ ಬ್ರಾಹ್ಮಣೋತ್ತಮರುಗಳು ಇವುಗಳನ್ನು ಓದಿದ್ದಾರಾ?

ವೇದಗಳ ಬೆನ್ನಲ್ಲೇ, ಅವುಗಳನ್ನು ಅನುಸರಿಸಿ ಹುಟ್ಟಿದವು ಬ್ರಾಹ್ಮಣಗಳೆಂಬ ಗ್ರಂಥಗಳು. ಈ ಗ್ರಂಥಗಳಿಂದಲೇ ಬ್ರಾಹ್ಮಣ್ಯ ಹುಟ್ಟಿದ್ದು ಮತ್ತು ಅದರ ಜೊತೆಗೇ ಅಸ್ಪೃಶ್ಯತೆಯ ಆರಂಭವಾಗಿದ್ದು. ಇವುಗಳ ಪ್ರಕಾರ ಶೂದ್ರರೇ ಮೊದಲ ಅಸ್ಪೃಶ್ಯರು. ಒಬ್ಬ ಋತ್ವಿಜನು ಶೂದ್ರರನ್ನು ಮುಟ್ಟಿಸಿಕೊಳ್ಳುವುದಿರಲಿ ನೋಡಲೂಬಾರದು. ಹೆಂಗಸರ ಬಗ್ಗೆಯೂ ಇಂತಹ ಅನೇಕ ನಿರ್ಬಂಧಗಳು ಇವೆ.

ಶೂದ್ರನು ಅನ್ಯಾಸ್ಯ ಪ್ರೇಕ್ಷ್ಯ (ಯಾವಾಗಲೂ ಸೇವಕನಾಗಿರಬೇಕು), ಕಾಮೋತ್ಥಾಪ್ಯ (ಯಜಮಾನನ ಮನಸೋ ಇಚ್ಛೆಯಂತೆ ಕೆಲಸದಿಂದ ಹೊರಹಾಕಲ್ಪಡುವವನು), ಯಥಾ ಕಾಮವಧ್ಯ (ಯಜಮಾನನ ಇಚ್ಛೆಯಂತೆ ಕೊಲ್ಲಿಸಬಹುದಾದವನು) – ಇದು ’ಐತರೇಯ ಬ್ರಾಹ್ಮಣ’ ಗ್ರಂಥದ ಉವಾಚ.

ಅದೇ ಬ್ರಾಹ್ಮಣ ಗ್ರಂಥದ ಪ್ರಕಾರ ಬ್ರಾಹ್ಮಣರು ಆದಾಯಿಗಳು, ಆಪಾಯಿಗಳು (ದಕ್ಷಿಣೆಯನ್ನು ಪಡೆಯುವ, ಆರಾಧನೆಯ ವಸ್ತುಗಳನ್ನು ಪಡೆಯುವ ಹಕ್ಕುಳ್ಳವರು). ಅವರಿಗೆ ಭೂರಿ ದಕ್ಷಿಣೆಗಳನ್ನು ನೀಡಬೇಕು. ಧನ, ಧಾನ್ಯ, ಗೋವುಗಳ ದೊಡ್ಡ ಹಿಂಡು ನೀಡಬೇಕು. ಬ್ರಾಹ್ಮಣಗಳಲ್ಲಿ ಉಲ್ಲೇಖಿತವಾದ ದಕ್ಷಿಣೆಗಳ ಪ್ರಮಾಣ ಎಷ್ಟಿದೆಯೆಂದರೆ ಅದು ಇಂದೂ ಕೂಡ ಯಾರನ್ನಾದರೂ ಬೆಚ್ಚಿಬೀಳಿಸುತ್ತದೆ!

ಶೂದ್ರನೊಬ್ಬ ಹಲವು ಗೋವುಗಳ ಒಡೆಯರಾದರೂ ಅವನ ಸೇವಕ ಸ್ಥಾನ ಹೋಗುವುದಿಲ್ಲ. (ಪಂಚವಿಂಶತಿ ಬ್ರಾಹ್ಮಣ). ಶೂದ್ರ ತಪಸ್ಸು ಮಾಡಿದವನಾದರೂ ಅವನ ಶೂದ್ರತ್ವ ಹೋಗುವುದಿಲ್ಲ. (ವಾಜಸೇನಯಿ ಸಂಹಿತೆ). ಬ್ರಾಹ್ಮಣ್ಯದ ಜನನ ಎಲ್ಲಿ ಆಯಿತು ಎಂಬುದನ್ನು ಸಂಶಯಕ್ಕೆಡೆಯಿಲ್ಲದಂತೆ ಸಾಬೀತು ಮಾಡುತ್ತವೆ ಈ ಮಾತುಗಳು.

ಹೀಗೆ ಬ್ರಾಹ್ಮಣಗಳಲ್ಲಿ ಬ್ರಾಹ್ಮಣ್ಯದ ಉಗಮದ ಜೊತೆಗೇ ಮಡಿ, ಮೈಲಿಗೆಯ ಕಲ್ಪನೆಯೂ ಹುಟ್ಟಿದೆ. ಅದರೊಂದಿಗೇ ಒಂದು ಕಡೆ ಅಸ್ಪೃಶ್ಯತೆ, ಮತ್ತೊಂದೆಡೆ ಮಹಿಳೆಯರನ್ನು ಕೀಳ್ಗಳೆಯುವ ಪದ್ಧತಿಗಳೆರಡೂ ಒಟ್ಟಿಗೇ ಹುಟ್ಟಿವೆ. ಬ್ರಾಹ್ಮಣರ ಭೂರಿ ದಕ್ಷಿಣೆಗಳು ಶೂದ್ರರ ಅಸ್ಪೃಶ್ಯತೆ, ಗುಲಾಮತನದ ಮೇಲೆ ಆಧಾರಪಟ್ಟಿದ್ದವು. ಅವರಿಗೂ ಮಹಿಳೆಯರಿಗೂ ಶಿಕ್ಷಣದ ಅವಕಾಶ, ದೇವತೆಗಳ ಆರಾಧನೆಯ ಧಾರ್ಮಿಕ ಅವಕಾಶ, ಆಸ್ತಿ, ಸಂಪತ್ತಿನ ಒಡೆತನದ ಅವಕಾಶಗಳನ್ನು ನಿರಾಕರಿಸಲಾಯಿತು.

ಭೂರಿ ದಕ್ಷಿಣೆಗಳನ್ನು ನೀಡುತ್ತಿದ್ದ ರಾಜ ಮಹಾರಾಜರುಗಳಿಗೆ, ಅವರ ಸಾಮಂತರು, ಗಾವುಂಡರಿಗೆ ಬೇಕಾದ್ದು ಕೂಡ ಈ ಗುಲಾಮತನ, ಅಸಂಖ್ಯಾತ ಸೇವಕರೇ. ಜೊತೆಗೆ ಮಹಿಳೆಯರಿಗೆ ರಾಜಪಟ್ಟ ಮೊದಲಾದ ಅಧಿಕಾರ ವಂಚನೆ ಮಾಡುವ, ಅವರನ್ನು ಕೇವಲ ಭೋಗ ವಸ್ತುಗಳನ್ನಾಗಿಸುವ ರಾಜರಿಗೆ ಇಂತಹ ನೂರಾರು ಕಾರಣಗಳಿದ್ದವು. ಹಲವಾರು ಪತ್ನಿಯರು ಮತ್ತು ಉಪಪತ್ನಿಯರ ಅಂತಃಪುರ – ಹೀಗೆ ರಾಜಪ್ರಭುತ್ವದ ಹಾಗೂ ಪುರೋಹಿತಶಾಹಿಯ ಅವಶ್ಯಕತೆಯಾಗಿ ಬ್ರಾಹ್ಮಣ್ಯ ಉದಯಿಸಿತು.

ಬ್ರಾಹ್ಮಣಗಳು ಬ್ರಾಹ್ಮಣ್ಯಕ್ಕೆ ಅಡಿಪಾಯ ಹಾಕಿದರೆ ಪೌರಾಣಿಕ ಹಿಂದೂ ಧರ್ಮ ಅದರ ಮೇಲೆ ಜಾತಿವ್ಯವಸ್ಥೆಯ ದುರ್ಗಮ ಕಟ್ಟಡವನ್ನು ನಿರ್ಮಿಸಿತು. ಆರ್ಯಾವರ್ತವೆನಿಸಿದ ಗಂಗಾ ನದೀ ಬಯಲಿನಿಂದ ಇಡೀ ಭಾರತಕ್ಕೆ ಅದನ್ನು ಹಬ್ಬಿಸಲಾಯಿತು. ಅದರ ಘಟಕಗಳು ಸರಿಸುಮಾರು ಒಂದೇ ಕಾಲಘಟ್ಟದಲ್ಲಿ ರೂಪುಗೊಂಡ ದೇವಾಲಯಗಳು. ಈ ಹಾರ್ಡ್‌ವೇರ್‌ಗಳಿಗೆ ಆಧಾರವಾದ ಸಾಫ್ಟ್‌ವೇರ್‌ಗಳಾಗಿ ಪುರಾಣಗಳು, ರಾಮಾಯಣ, ಮಹಾಭಾರತ ಮಹಾಕಾವ್ಯಗಳು, ಮನುಸ್ಮೃತಿ ಮೊದಲಾದ ಸ್ಮೃತಿಗಳು, ಧರ್ಮ ಶಾಸ್ತ್ರ ಗ್ರಂಥಗಳು ರಚನೆಗೊಂಡವು.

ಇವುಗಳಲ್ಲಿ ಮನುಸ್ಮೃತಿ ಅತ್ಯಂತ ಹೆಚ್ಚು ಪ್ರಚಲಿತವಾದ ಗ್ರಂಥ. ಇದರ ಹಲವು ಭಾಗಗಳನ್ನು ಪುರಾಣಗಳಲ್ಲಿ ಎತ್ತಿ ಹಾಕಿಕೊಳ್ಳಲಾಗಿದೆ. ರಾಮಾಯಣ, ಮಹಾಭಾರತಗಳಿಗೆ ಹಲವು ಭಾಗಗಳನ್ನು ಸೇರಿಸಲಾಗಿದೆ. ಹೊಸದಾಗಿ ಸೇರಿಸಲ್ಪಟ್ಟ ಭಾಗಗಳು ಹೆಚ್ಚಾಗಿ ಬ್ರಾಹ್ಮಣ, ಪುರೋಹಿತ, ಋಷಿಮುನಿಗಳ ಮೇಲ್ಲೈಯನ್ನು ಸಾರುವ, ರಾಜರುಗಳೂ ಸೇರಿದಂತೆ ಇತರೆಲ್ಲರೂ ಅವರುಗಳ ನಿರ್ದೇಶನಗಳಿಗೆ ಅನುಸಾರವಾಗಿ ನಡೆಯದಿದ್ದರೆ ಉಂಟಾಗುವ ಪರಿಣಾಮಗಳ ಬಗ್ಗೆ ಭಯವನ್ನು ಸೃಷ್ಟಿಸುವಂತಹವು ಎಂಬುದು ಗಮನಿಸಬೇಕಾದ ವಿಷಯ.

PC : Prajavani

ಮನುಸ್ಮೃತಿಯಂತೂ ಬ್ರಾಹ್ಮಣ್ಯದ ವಿವಿಧ ಕಟ್ಟಲೆಗಳನ್ನು ರೂಪಿಸಿ ಅದಕ್ಕೆ ಒಂದು ಆಕಾರವನ್ನು ನೀಡಿದ ಗ್ರಂಥ. ಅದರ ಎರಡನೇ ಶ್ಲೋಕದಲ್ಲಿಯೇ ಹೇಳಿದಂತೆ ವರ್ಣಗಳ, ಮಿಶ್ರ ವರ್ಣಗಳ ಕರ್ತವ್ಯ, ಅಕರ್ತವ್ಯಗಳ ಧರ್ಮವನ್ನು ಹೇಳಲೆಂದೇ ರಚಿಸಿದ ಗ್ರಂಥವದು. ಅದರಲ್ಲಿ ವರ್ಣ ವ್ಯವಸ್ಥೆಯ ಜೊತೆಗೆ ವರ್ಣ ವ್ಯವಸ್ಥೆಯ ಮೇಲು ಕೀಳುಗಳಿಗೆ ಅನುಗುಣವಾಗಿ ನಿತ್ಯ ಬದುಕಿನಲ್ಲಿ, ಜೀವನದ ವಿವಿಧ ಘಟ್ಟಗಳಲ್ಲಿ ಅನುಸರಿಸಬೇಕಾದ ನಿಯಮ, ಕಟ್ಟಲೆಗಳನ್ನು ವಿಸ್ತಾರವಾಗಿ ನಿರೂಪಿಸಲಾಗಿದೆ.

ಸ್ವತಃ ಬ್ರಹ್ಮನೇ ವರ್ಣಗಳನ್ನು ತನ್ನ ದೇಹದ ವಿವಿಧ ಭಾಗಗಳಿಂದ ಸೃಷ್ಟಿಸಿ ಅವುಗಳ ಕರ್ತವ್ಯಗಳನ್ನು ವಿಧಿಸಿದ್ದಾನೆ ಎಂದು ಅದು ಹೇಳುತ್ತದೆ, ಎಂದ ಮೇಲೆ ಮಾನವಮಾತ್ರರಿಗೆ ಅದನ್ನು ಉಲ್ಲಂಘಿಸಲು, ಬದಲಾಯಿಸಲು ಸಾಧ್ಯವಿಲ್ಲವಲ್ಲ!

ಏಕಮೇವ ತು ಶೂದ್ರಸ್ಯ ಪ್ರಭುಃ ಕರ್ಮ ಸಮಾದಿಶತ್|
ಏತೇಷಾಮಿವ ವರ್ಣಾನಾಂ ಶುಶ್ರೂಷಾಮನಸೂಯಯಾ||

ಆ ಪ್ರಭುವಾದ (ಬ್ರಹ್ಮನು) ಮೇಲೆ ಹೇಳಿದ ಮೂರು ವರ್ಣಗಳ ಸೇವೆಯನ್ನು ಯಾವುದೇ ಅಸೂಯೆಯಿಲ್ಲದೆ ಮಾಡಿಕೊಂಡಿರುವುದೇ ಶೂದ್ರನ ಕರ್ತವ್ಯವೆಂದು ಆದೇಶಿಸಿದ್ದಾನೆ.

ಹಾಗೆಯೇ ನ ಶೂದ್ರಸ್ಯ ಮತಿರ್ದದಾತಿ, ವೇದೋಚ್ಚಾರಣೋ ಜಿಹ್ವಾಚ್ಛೇಧೋ, ವೇದ ಧಾರಣೋ ದೇಹಚ್ಛೇದೋ ಎಂಬೆಲ್ಲ ಅಮಾನುಷ, ಅಮಾನವೀಯ ನಿಷೇಧಗಳು. ಮಾಂಸಾಹಾರ ನಿಷೇಧ, ಶೂದ್ರರಿಗೆ ಜಿಗುಪ್ಸೆ ತರುವ ಹೆಸರುಗಳನ್ನಿಡಬೇಕು, ಬ್ರಾಹ್ಮಣ ಬಾಲಕರಿಗೂ ಕೂಡಾ ಶೂದ್ರ ವೃದ್ಧರೂ ಬಾಗಿ ನಮಸ್ಕರಿಸಬೇಕು, ಕುಟುಂಬದ ಹೆಂಗಸರ ಮತ್ತು ಸೇವಕರ ದುಡಿಮೆಯೆಲ್ಲಾ ಯಜಮಾನನಿಗೆ ಸೇರಬೇಕು, ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ, ಬಾಲ್ಯದಿಂದ ವೃದ್ಧಾಪ್ಯದವರೆಗೂ ತಂದೆ, ಗಂಡ, ಮಗ ಇವರ ಅಧೀನದಲ್ಲಿಯೇ ಇರಬೇಕು, ಅವರು ಚಂಚಲರು, ವಿವಾಹದಲ್ಲಿ ಕನ್ಯಾದಾನ ಮಾಡುವುದರ ಅರ್ಥ ಪತಿಗೆ ಅವಳ ಮೇಲೆ ಒಡೆತನ ನೀಡಿದಂತೆ, ಪತಿಯ ಪಾದಸೇವೆಯೇ ಅವರ ಯಜ್ಞ-ವ್ರತ, ಅದೊಂದೇ ಅವರಿಗೆ ಮೋಕ್ಷದಾಯಕ, ಮೇಲ್ವರ್ಣಗಳ ಪುರುಷರು ಕೆಳವರ್ಣಗಳ ಹೆಂಗಸರನ್ನು ಮದುವೆಯಾಗಬಹುದು, ಆದರೆ ಹಕ್ಕುದಾರರು ತನ್ನದೇ ವರ್ಣದವಳ ಹೊಟ್ಟೆಯಲ್ಲಿ ಹುಟ್ಟಿದವರು ಮಾತ್ರ, ಬೀಜವೇ ಕ್ಷೇತ್ರಕ್ಕಿಂತ ಶ್ರೇಷ್ಠ, ಆದ್ದರಿಂದ ಮಕ್ಕಳ ಮೇಲೆ ತಂದೆಗೇ ಹಕ್ಕುದಾರಿಕೆ, ಮನೆಯ ಅಡಿಗೆ, ಕಸ ಮುಸುರೆಯನ್ನು ಮಹಿಳೆಯರು ಸಂತೋಷಚಿತ್ತದಿಂದ ಮಾಡಬೇಕು, ಹೀಗೆ ಮಹಿಳೆಯರ ಪುರುಷಾಧಿನತೆಯನ್ನು ವಿಧಿಸುವ ಹಲ ಹಲವು ಕಟ್ಟಲೆಗಳನ್ನೂ ವಿಧಿಸಲಾಗಿದೆ.

ಬ್ರಾಹ್ಮಣರೂ ಕೂಡಾ ಬ್ರಾಹ್ಮಣ್ಯಕ್ಕೆ ಅನುಗುಣವಾಗಿ ಅನುಸರಿಸಬೇಕಾದ ಕಟ್ಟಲೆಗಳನ್ನೂ ರೂಪಿಸಿದೆ. ಈ ಎಲ್ಲ ಕಟ್ಟಲೆ, ನಿಯಮಗಳನ್ನು ಬಯಲಾಟ, ಯಕ್ಷಗಾನ, ಜಾನಪದ ಕಾವ್ಯಗಳ ಒಳಹೊಕ್ಕಿಸಿ ಪಸರಿಸಲಾಯಿತು.

ದೇವಾಲಯಗಳು ಯಾರಿಗೆ ಎಲ್ಲಿಯವರೆಗೆ ಪ್ರವೇಶ ನೀಡಬೇಕು ಎಂಬ ನಿರ್ಬಂಧಗಳಿಂದ ಮೇಲುಕೀಳುಗಳ ಬಹಿರಂಗ ಘೋಷಣಾ ಪತ್ರವಾಗಿ ಕೆಲಸ ಮಾಡುವುದಲ್ಲದೇ ಪುರಾಣ, ಹರಿಕಥೆಗಳ ಮೂಲಕ ಬ್ರಾಹ್ಮಣ್ಯವನ್ನು ಹಳ್ಳಿಗಳಲ್ಲಿ, ನಗರದ ವಿವಿಧ ಭಾಗಗಳಲ್ಲಿ ವಿವಿಧ ಜಾತಿ ಸಮುದಾಯಗಳಿಗೆ ಹರಡುವ ಕೆಲಸ ಮಾಡಲಾಯಿತು.

ರಾಜಪ್ರಭುತ್ವಗಳ ಕಾಲದಲ್ಲಿ, ರಾಜ್ಯ ಮಟ್ಟದಿಂದ ಹಳ್ಳಿಗಳ ಮಟ್ಟದವರೆಗೂ ವಿವಿಧ ಹಂತಗಳಲ್ಲಿ ಮನುಸ್ಮೃತಿ ಮೊದಲಾದ ಗ್ರಂಥಗಳು ನಿರೂಪಿಸಿದ ಕಟ್ಟಲೆಗಳನ್ನು ಪಸರಿಸುವ ಮೂಲಕ ಮತ್ತು ರಾಜಪುರೋಹಿತ, ಮಂತ್ರಿಗಳಿಂದ ಆರಂಭಿಸಿ ಹಳ್ಳಿಗಳ ಸೇನಬೋವರು, ಪೂಜಾರಿಗಳವರೆಗೂ ಬ್ರಾಹ್ಮಣರೇ, ಆಯಾ ಹಂತದ ಆಳ್ವಿಕೆಗಾರರ ಮೂಲಕ ಅವುಗಳ ಕಟ್ಟುನಿಟ್ಟಿನ ಜಾರಿಯ ನಿರ್ದೇಶನ ಹೊಣೆಯನ್ನು ಹೊತ್ತದ್ದರಿಂದ ಕೂಡಾ ಇದಕ್ಕೆ ಬ್ರಾಹ್ಮಣ್ಯವೆಂದು ಹೆಸರಾಯಿತು.

ಬ್ರಾಹ್ಮಣ್ಯ ಬ್ರಾಹ್ಮಣೇತರರನ್ನು ಮಾತ್ರವಲ್ಲದೆ ಬ್ರಾಹ್ಮಣರನ್ನೂ ಉಪಜಾತಿ, ಅದರ ಮೇಲುಕೀಳುಗಳ ಮೂಲಕ, ಉಲ್ಲಂಘಿಸಲಾಗದ ಕಟ್ಟಲೆಗಳ ಮೂಲಕ ಕಾಡಿದೆ. ಭಾರತದಲ್ಲಿ ಆಧುನಿಕ ಆಡಳಿತ ವ್ಯವಸ್ಥೆ, ಶಿಕ್ಷಣ, ಉದ್ಯೋಗ, ಕೈಗಾರಿಕೆಗಳು, ರೈಲ್ವೆ, ಬಸ್‌ಗಳಂತಹ ಸಾಮೂಹಿಕ ಸಂಚಾರ ವ್ಯವಸ್ಥೆಗಳು ಬಂದ ನಂತರ ಬ್ರಾಹ್ಮಣರು ತಮಗೆ ಅನ್ವಯಿಸುವ ಬ್ರಾಹ್ಮಣ್ಯದ ಹಲವು ಕಟ್ಟಲೆಗಳನ್ನು ಕೈಬಿಟ್ಟ ನಂತರವೇ ಅವರೂ ಮುಂದುವರೆಯಲು ಸಾಧ್ಯವಾದದ್ದು.

ಮನುಸ್ಮೃತಿ,Manusmriti

ಸಂಪ್ರದಾಯನಿಷ್ಠರಾಗಿ, ಬ್ರಾಹ್ಮಣ್ಯದ ಆಚರಣೆ, ಕಟ್ಟಲೆಗಳನ್ನು ಆಚರಿಸುತ್ತಿರುವವರು ಇಂದು ಕೆಲವೇ ಜನ. ಅವರು ಬ್ರಾಹ್ಮಣರಲ್ಲಿಯೇ ಅತ್ಯಂತ ಹಿಂದುಳಿದವರಾಗಿದ್ದಾರೆ. ಹೀಗೆ ಇಂದಿನ ಬ್ರಾಹ್ಮಣ ಎಂಬ ಜಾತಿ ತಮಗೆ ಅನ್ವಯಿಸುವ ಅನೇಕ ಕಟ್ಟಲೆಗಳನ್ನು ಬಿಟ್ಟವರಾಗಿದ್ದಾರೆ ಆದರೆ ಅದೇ ಸಮಯದಲ್ಲಿ ಸಮಾಜದ ಭಾಗವಾಗಿ ಇತರರೆಲ್ಲ ಜಾತಿಗಳಿಗೆ ಸಂಬಂಧಿಸಿದಂತೆ ಬ್ರಾಹ್ಮಣ್ಯ ಮನಸ್ಥಿತಿ, ಕಟ್ಟು ಕಟ್ಟಲೆಗಳನ್ನು ಅನುಸರಿಸುವವರಾಗಿದ್ದಾರೆ. ಅಪರೂಪಕ್ಕೆ ಗೋಪಾಲ ಸ್ವಾಮಿ ಅಯ್ಯರ್, ಕದ್ಮುಲ್ ರಂಗರಾವ್‌ರಂತಹ ಕೆಲವರು ಮಾತ್ರ ತಾವು ಬ್ರಾಹ್ಮಣ್ಯವನ್ನು ತೊರೆದುದಲ್ಲದೆ ಸಮಾಜದಲ್ಲೂ ಬ್ರಾಹ್ಮಣ್ಯವನ್ನು ತೊಡೆಯಬೇಕೆಂದು ಶ್ರಮಿಸಿದವರು. ಇಂದೂ ಕೂಡಾ ಮೆರೆಯುತ್ತಿರುವ ಈ ಬ್ರಾಹ್ಮಣ್ಯವೆಂಬ ವ್ಯವಸ್ಥೆಯ ಫಲವಾಗಿ ರಾಜಪ್ರಭುತ್ವಗಳ ಆಡಳಿತ ವ್ಯವಸ್ಥೆಯನ್ನು ಬ್ರಾಹ್ಮಣರು ವ್ಯಾಪಿಸಿದಂತೆ ದೇಶದ ಹಲವು ರಂಗಗಳನ್ನು ಆಕ್ರಮಿಸಿರುವುದು, ಇತರರನ್ನು ಈ ರಂಗಗಳಿಂದ ದೂರ ಇಡುವ ನೀತಿ, ಧೋರಣೆಗಳನ್ನು, ನಿಯಮಗಳನ್ನು ರೂಪಿಸುತ್ತಿರುವುದು ಕಾಣುತ್ತದೆ.

ಈ ಕೆಳಗಿನ ಕೆಲವು ಉದಾಹರಣೆಗಳನ್ನು ಗಮನಿಸಬಹುದು: ಕಾರ್ಪೊರೇಟ್ ಆಡಳಿತ ಮಂಡಳಿಗಳ ಜಾತಿ ಸಂರಚನೆ ಬಹುತೇಕ ಬ್ರಾಹ್ಮಣ ಮತ್ತು ವೈಶ್ಯರಿಂದಲೇ ಕೂಡಿದೆ ಎನ್ನುತ್ತದೆ ಅಂಕಿಅಂಶಗಳು. ಭಾರತದ ಖಾಸಗಿ ವಲಯದ ಶೇ.99ರಷ್ಟು ಕಾಯಂ ಉದ್ಯೋಗಗಳನ್ನು ನೀಡುವ, ಭಾರತದ ಶೇರು ಮಾರುಕಟ್ಟೆಯಲ್ಲಿ ಶೇ.80 ರಷ್ಟು ಮೌಲ್ಯ ಹೊಂದಿದ ಅತಿ ದೊಡ್ಡ ಒಂದು ಸಾವಿರ ಕಂಪನಿಗಳ ಆಡಳಿತ ಮಂಡಳಿಗಳ ಅಧ್ಯಯನದ ಅಂಕಿಅಂಶಗಳಿವು.

ಐ.ಟಿ ರಂಗದಲ್ಲಿ ಶೇ.70 ಬ್ರಾಹ್ಮಣ, ರಜಪೂತ, ವೈಶ್ಯ ಜಾತಿ ಉದ್ಯೋಗಿಗಳು ಎಂದು ಒಂದು ಅಧ್ಯಯನ ಹೇಳಿದರೆ, ಶೇ.48 ಬ್ರಾಹ್ಮಣರು, ಶೇ.21 ಭೂ ಒಡೆತನ ಪಡೆದ ಶೂದ್ರರು. ದಲಿತರು ಶೇ.1, ಒಬಿಸಿ ಶೇ.3, ಮುಸ್ಲಿಮರು ಶೇ.2 ಎನ್ನುತ್ತದೆ ಮತ್ತೊಂದು ಅಧ್ಯಯನದ ವರದಿ.

ಐಐಎಂ, ಐಐಟಿಗಳಂತೂ ಆಧುನಿಕ ಅಗ್ರಹಾರಗಳಾಗಿಬಿಟ್ಟಿವೆ ಎಂದು ಅಧ್ಯಯನಗಳು ತಿಳಿಸುತ್ತವೆ. ಅಸ್ಪೃಶ್ಯರಲ್ಲೂ ಕೆಳಕ್ಕೆ ತಳ್ಳಲ್ಪಟ್ಟಿದ್ದ ಚಮ್ಮಾರರಿಗೇ ಮೀಸಲಾಗಿದ್ದ ಚರ್ಮೋದ್ಯೋಗದ ಲೆದರ್ ಟೆಕ್ನಾಲಜಿ ಸಂಸ್ಥೆಯಲ್ಲಿಯೂ ಬ್ರಾಹ್ಮಣರದೇ ಆಡಳಿತ. ಈ ಸಂಸ್ಥೆಗಳಲ್ಲಿ ಮೆರಿಟ್‌ಗೆ ಮಾತ್ರ ಅವಕಾಶವಿರಬೇಕೆಂದು 1973ರವರೆಗೆ ದಲಿತರಿಗೆ ಮೀಸಲಾತಿ ಇರಲಿಲ್ಲ. ೨೦೦೬ರವರೆಗೆ ಹಿಂದುಳಿದ ಜಾತಿಗಳಿಗೆ ಪ್ರವೇಶ ಇರಲಿಲ್ಲ.

ಐಐಎಂ, ಐಐಟಿ ಸಂಸ್ಥೆಗಳೇ ಖಾಸಗಿ ಬೃಹತ್ ಉದ್ಯಮಗಳ ಉನ್ನತ ಆಡಳಿತಾಧಿಕಾರಿ ವರ್ಗವನ್ನು ಸರಬರಾಜು ಮಾಡುತ್ತವೆ. ಆ ಉದ್ಯಮಗಳ ಆಡಳಿತ ಸಿಬ್ಬಂದಿಯನ್ನು ಐಐಎಂ ಪದವೀಧರರು ಆರಿಸಿದರೆ, ಅದರ ಉತ್ಪಾದನ ಸಿಬ್ಬಂದಿಯನ್ನು ಐಐಟಿ ಪದವೀಧರರು ಆರಿಸುತ್ತಾರೆ.

ಹೀಗೆ ದೇಶದ ಉದ್ಯೋಗಗಳ ನೇಮಕಾತಿ ಬಹಳಷ್ಟು ಭಾಗ ಈ ಸಂಸ್ಥೆಗಳ ಪದವೀಧರರ ಉಸ್ತುವಾರಿಯಲ್ಲಿರುತ್ತದೆ. ಇಂತಹ ಸಂಸ್ಥೆಗಳಲ್ಲಿ ತಂತ್ರಜ್ಞಾನದ ಅಪಾರ ಕೌಶಲ್ಯ ಹೊಂದಿರುವ ಗಾಡಿ ರಿಪೇರಿ ವರ್ಕ್‌ಶಾಪುಗಳ ಪರಿಣತರಿಗೆ, ಕಟ್ಟಡ ಮೇಸ್ತ್ರಿಗಳಿಗೆ, ಒಳಚರಂಡಿ ಸ್ವಚ್ಛ ಮಾಡುವವರಿಗೆ, ಕಮ್ಮಾರ, ಬಡಗಿ, ಕುಂಬಾರ, ಚಮ್ಮಾರರಿಗೆ, ದರ್ಜಿಗಳಿಗೆ ಅವಕಾಶವಿದೆಯೇ?

ಇಂದಿನ ಆಡಳಿತ ವ್ಯವಸ್ಥೆಯಲ್ಲಿ ಆಯಾ ರಂಗಗಳಲ್ಲಿ ಪರಿಣತಿ ಹೊಂದಿದ ಇವರನ್ನು ಆಯಾ ರಂಗದ ಉನ್ನತ ಸಂಸ್ಥೆಗಳಲ್ಲಿ ಶಿಕ್ಷಣ, ಉದ್ಯೋಗ ಎರಡರಿಂದಲೂ ದೂರ ಇಡುವ ನೀತಿ, ಧೋರಣೆ, ನಿಯಮಗಳು ರೂಪಿತವಾಗಿರುವುದಕ್ಕೆ ಸ್ಪಷ್ಟ ಪುರಾವೆಯಲ್ಲವೇ? ಮೆರಿಟ್ ಎಂಬುದು ಬ್ರಾಹ್ಮಣ್ಯದ ಇಂದಿನ ಸಾಧನವಾಗಿದೆ.

ಇನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್, ಮಾಧ್ಯಮ-ಪತ್ರಿಕಾ ರಂಗ, ಸಾಂಸ್ಕೃತಿಕ ರಂಗ ಮುಂತಾವುಗಳನ್ನು ಕೇಳಲೇಬೇಕಿಲ್ಲ. ಸ್ವಾತಂತ್ರ್ಯಾನಂತರದ ಎಪ್ಪತ್ತ ನಾಲ್ಕು ವರ್ಷಗಳಿಂದಲೂ ಬ್ರಾಹ್ಮಣ್ಯದ ಮೇಲುಗೈ ಕಾಣುತ್ತಿದ್ದರೂ ಖಾಸಗೀಕರಣ ನೀತಿಗಳ ನಂತರ, ಕೋಮುವಾದಿ ಶಕ್ತಿಗಳು ಆಡಳಿತದ ಚುಕ್ಕಾಣಿ ಹಿಡಿದ ನಂತರ ಅದು ಮತ್ತಷ್ಟು ಪ್ರಬಲವಾಗಿವೆ.

ಸ್ವಾತಂತ್ರ್ಯಾನಂತರ ಒಂದೆರಡು ದಶಕಗಳ ಕಾಲದಲ್ಲಿ ಬ್ರಾಹ್ಮಣ್ಯದ ಹಾಗೂ ಜಾತಿ ವ್ಯವಸ್ಥೆಯ ನಿರಾಕರಣೆ, ಸಮಾನತೆಯ ಮೌಲ್ಯದ ಮಾತುಗಳು ಮೇಲ್ತೋರಿಕೆಗಾದರೂ ಕಾಣುತ್ತಿದ್ದುದು ಇಂದು ಅವುಗಳೂ ಮಾಯವಾಗಿದೆ. ಬ್ರಾಹ್ಮಣ್ಯವನ್ನು ಪ್ರತಿಪಾದಿಸುವ ವಾದಗಳು ಮೇಲೇಳುತ್ತಿವೆ.

ಇಡೀ ದೇಶದ ಪ್ರಗತಿಗೆ ಅಪಾಯ ಒಡ್ಡುವ ಪರಿಸ್ಥಿತಿ ಇದು ಎಂಬುದನ್ನು ಬ್ರಾಹ್ಮಣರೂ ಸೇರಿದಂತೆ ಎಲ್ಲರೂ ಅರಿಯಬೇಕು. ಸಮೀಪ ದೃಷ್ಟಿದೋಷದಿಂದ ಮುಕ್ತರಾಗಬೇಕು.

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80 ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ; ಬ್ರಾಹ್ಮಣ್ಯ ಎಂದರೆ ಜಾತಿ ಆಧಾರಿತ ತಾರತಮ್ಯಗಳನ್ನು ಜೀವಂತವಾಗಿಡುವುದು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ ಜನರ ಮನಸ್ಸಿನಲ್ಲಿ ಅಪನಂಬಿಕೆ ಸೃಷ್ಟಿಸಿದೆ: ಅಖಿಲೇಶ್ ಯಾದವ್

0
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ ಬಳಕೆಗೆ ಆಗ್ರಹಿಸಿದ್ದು, ಇವಿಎಂಗಳನ್ನು ನೇರವಾಗಿ ಉಲ್ಲೇಖಿಸದೆ ಈ ಯಂತ್ರಗಳು ಮತ್ತು ಮತದಾನದ ಫಲಿತಾಂಶಗಳು ಜನರ ಮನಸ್ಸಿನಲ್ಲಿ ಅಪನಂಬಿಕೆಯ ಭಾವನೆಯನ್ನು ಮೂಡಿಸಿವೆ...