Homeಮುಖಪುಟಬ್ರಾಹ್ಮಣ ಮತ್ತು ಬ್ರಾಹ್ಮಣ್ಯ; ಬ್ರಾಹ್ಮಣ್ಯ ಎಂದರೆ ಜಾತಿ ಆಧಾರಿತ ತಾರತಮ್ಯಗಳನ್ನು ಜೀವಂತವಾಗಿಡುವುದು..

ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ; ಬ್ರಾಹ್ಮಣ್ಯ ಎಂದರೆ ಜಾತಿ ಆಧಾರಿತ ತಾರತಮ್ಯಗಳನ್ನು ಜೀವಂತವಾಗಿಡುವುದು..

- Advertisement -
- Advertisement -

ಈಗ ಬ್ರಾಹ್ಮಣ, ಬ್ರಾಹ್ಮಣ್ಯ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಚಿತ್ರ ನಟ ಚೇತನ್ ಅಹಿಂಸಾ ಅವರು ಹರಿಯಬಿಟ್ಟ ಒಂದು ವಿಡಿಯೋ ಕಾರಣವಾಗಿದೆ. ಅದು ಬ್ರಾಹ್ಮಣರನ್ನು ಅವಹೇಳನ ಮಾಡುತ್ತದೆ ಎಂದು ಒಂದು ವರ್ಗ ಪೊಲೀಸರಿಗೆ ದೂರು ನೀಡಿದ್ದು ವಿಚಾರಣೆಯೂ ನಡೆಯುತ್ತಿದೆ. ಅದರಲ್ಲಿ ಚೇತನ್ ಇದು ಬ್ರಾಹ್ಮಣರ ವಿರುದ್ದ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಕೆಲವರು ತಕರಾರು ತೆಗೆದಿದ್ದಾರೆ. ಅನೇಕರಿಗೆ ಈ ಪದಬಳಕೆಯಲ್ಲಿ ಗೊಂದಲವಿರುವುದರಿಂದಲೇ ಪ್ರಜಾವಾಣಿ ಎಫ್‌ಬಿ ಲೈವ್ ವೇದಿಕೆಯಲ್ಲಿ ಈ ವಿಷಯವನ್ನು ಚರ್ಚೆಗೆತ್ತುಕೊಂಡಿತು.

ನನ್ನ ಪ್ರಕಾರ, ಈ ಶ್ರೇಣೀಕೃತ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಅಸಮಾನತೆ, ತತ್ಪರಿಣಾಮವಾಗಿ ಉಂಟಾಗುವ ಅವಮಾನಗಳು, ಎಲ್ಲ ಬಗೆಯ ತಾರತಮ್ಯಗಳು, ಎಲ್ಲ ಬಗೆಯ ಮೌಢ್ಯಗಳನ್ನು “ಬ್ರಾಹ್ಮಣ್ಯ”ದ ವ್ಯಾಪ್ತಿಯೊಳಗೆ ವ್ಯಾಖ್ಯಾನಿಸಬಹುದು. ಮೂಲಕ್ಕೆ ಅದು ಧಾರ್ಮಿಕ ಶೋಷಣೆಯಾಗಿತ್ತು. ಬರುಬರುತ್ತಾ ಅದು ಅದರಾಚೆಗೂ ತನ್ನ ಕಬಂಧ ಬಾಹುಗಳನ್ನು ಚಾಚಿ ವೈರಸ್‌ನಂತೆ ಆವರಿಸಿಕೊಂಡಿತು. ಅಂದರೆ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳನ್ನೂ ಆವರಿಸಿಕೊಂಡಿತು. ನಾನು ಅದನ್ನು ಒಂದು ರೋಗಾಣು ಅಥವಾ
ವೈರಸ್ ಎಂದು ಕರೆಯಲು ಇಷ್ಟಪಡುತ್ತೇನೆ.

ಬ್ರಾಹ್ಮಣ್ಯವೆಂದರೆ ಒಂದು ಮನಸ್ಥಿತಿ, ಶ್ರೇಷ್ಠತೆಯ ವ್ಯಸನ. ಅದು ಬ್ರಾಹ್ಮಣರಿಗಷ್ಟೆ ಸೀಮಿತವಾಗಿಲ್ಲ. ಇತರೆ ಜಾತಿಗಳಿಗೂ ಹಬ್ಬಿಕೊಂಡಿದೆ. ಬ್ರಾಹ್ಮಣ್ಯವನ್ನು ಆಚರಿಸಲು ತನಗಿಂತ ಕೆಳಜಾತಿಯವನೊಬ್ಬನಿರಬೇಕು ಅಷ್ಟೆ. ಆದ್ದರಿಂದ ಬಹುತೇಕರು ಅಯಾಚಿತವಾಗಿ ಸಿಗುವ ಮೇಲರಿಮೆಯಿಂದ ಖುಷಿಪಡುತ್ತಾರೆ ಅಥವಾ ಸಮಾಧಾನಪಟ್ಟುಕೊಳ್ಳುತ್ತಾರೆ. ಆದ್ದರಿಂದ ಬ್ರಾಹ್ಮಣ ಒಂದು ಜಾತಿಯಾಗಿ ಬೇರೆಯಾಗಿ ನಿಲ್ಲುತ್ತದೆ. ಅದು ಜಾತಿಯಲ್ಲ ವರ್ಣ ಎಂದು ವಾದಿಸುವವರಿದ್ದಾರೆ. ಅದು ಜಾತಿಗಳಾಗಿ ಪರಿವರ್ತನೆಗೊಂಡು ಬಹಳ ಕಾಲವಾಗಿದೆ. ಬ್ರಾಹ್ಮಣರಲ್ಲೂ 101 ಜಾತಿಗಳಿವೆ ಎಂಬುದನ್ನು ಮರೆಯಬಾರದು. ಅದು ಅಸ್ಪೃಶ್ಯರನ್ನೂ ಬಿಡದೆ ಕಾಡುತ್ತಿದೆ. ಅಸ್ಪೃಶ್ಯರಲ್ಲಿ ನೂರೊಂದು ಜಾತಿಗಳಿರುವುದು ತಿಳಿದೇ ಇದೆ. ಮಾದಿಗರಲ್ಲಿ ದಕ್ಕಲಿಗರು ಎಂಬ ಉಪಪಂಗಡವೊಂದಿದೆ. ಅವರು ಮಾದಿಗರನ್ನು ಗೌಡರೆ ಎಂದು ಸಂಬೋಧಿಸುತ್ತಾರೆ ಯಾಕೆಂದರೆ ತಾವು ಮಾದಿಗರಿಗಿಂತ ಕೀಳು ಎಂದು ತಿಳಿದಿದ್ದಾರೆ. ಜಾತಿಗಳ ನಡುವೆ ಇಂಥ ವಿಲಕ್ಷಣ ಸ್ಥಿತಿಯನ್ನು ಕಾಣಬಹುದಾಗಿದೆ.

ಬ್ರಾಹ್ಮಣ್ಯ ಒಂದು ಮನಸ್ಥಿತಿ, ಶ್ರೇಷ್ಠತೆಯ ವ್ಯಸನ ಎನ್ನುವುದಕ್ಕೆ ಒಂದು ಇತ್ತೀಚಿನ ಘಟನೆಯನ್ನು ನೆನಪಿಸಲಿಚ್ಛಿಸುತ್ತೇನೆ. ದಿ. 18-06-2021ರಂದು ಪಿರಿಯಾಪಟ್ಟಣದಲ್ಲಿ ಹತ್ತೊಂಭತ್ತು ವರ್ಷದ ಹೆಣ್ಣುಮಗಳು ತನ್ನ ತಂದೆಯ ಬಳಿ ನಾನು ಬೇರೆ ಜಾತಿಯ ಹುಡುಗನನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾಳೆ. ಅಷ್ಟೇ ಸಾಕಾಗಿತ್ತು ಆ ಅಪ್ಪನಿಗೆ. ರೊಚ್ಚು ನೆತ್ತಿಗೇರಿತು, ಕೈಗೆ ಸಿಕ್ಕಿದ ಮಚ್ಚಿನಿಂದ ಹೆತ್ತ ಮಗಳನ್ನು ಒಂದೇ ಏಟಿಗೆ ಕೊಚ್ಚಿಬಿಟ್ಟಿದ್ದಾನೆ. ಜಾತಿಯ ಕ್ರೌರ್ಯವನ್ನು ತಿಳಿಯಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲವೆನಿಸುತ್ತದೆ. ಹತ್ತೊಂಭತ್ತು ವರ್ಷ ಎತ್ತಿ ಮುದ್ದಾಡಿದ, ತುತ್ತಿಟ್ಟು ಸಾಕಿದ ಕೈಗಳು ಜಾತಿ ಲಕ್ಷ್ಮಣರೇಖೆಯನ್ನು ಮೀರಿದ ಒಂದೇ ಕಾರಣಕ್ಕೆ ಕೊಲ್ಲುತ್ತವೆ. ಇಲ್ಲಿ ಬ್ರಾಹ್ಮಣರ ಅಥವಾ ಬೇರೆ ಜಾತಿಯವರ ಉಪಸ್ಥಿತಿಯಿಲ್ಲ, ಹಸ್ತಕ್ಷೇಪವಿಲ್ಲ. ಕೇವಲ ತಂದೆ ಮಗಳ ನಡುವೆ ನಡೆದ ಈ ಘಟನೆ ಜಾತಿಯ ಕರಾಳಮುಖವನ್ನು ದರ್ಶನ ಮಾಡಿಸುತ್ತದೆ. ಕಳೆದ ವಾರ ರಾಜಾಸ್ಥಾನದ ಒಂದು ಹಳ್ಳಿಯಲ್ಲಿ ಒಬ್ಬ ದಲಿತ ಯುವಕನ ಕೊಲೆಯಾಯಿತು. ಮಾಡಿದವರು ಮೂವರು ಹಿಂದುಳಿದ ಜಾತಿಗೆ ಸೇರಿದ ಯುವಕರು. ಕಾರಣವಿಷ್ಟೆ, ದಲಿತ ತನ್ನ ಮನೆಯ ಮುಂದೆ ಅಂಬೇಡ್ಕರ್ ಪೋಸ್ಟರ್ ಅಂಟಿಸಿಕೊಂಡಿದ್ದ. ಇಂತಹ ಕ್ಷುಲ್ಲಕ ಕಾರಣಗಳಿಗೆ ಕೊಲೆಗಳೇ ನಡೆದು ಹೋಗುವುದು ದುರಂತ. ಜಾತಿಗೆ ಸಕಾರಾತ್ಮಕ ಗುಣವೇ ಇಲ್ಲ.

ಬ್ರಾಹ್ಮಣ್ಯ ಎಂದರೆ ಜಾತಿ ಆಧಾರಿತ ತಾರತಮ್ಯಗಳನ್ನು ಜೀವಂತವಾಗಿಡುವುದು ಮತ್ತು ಯಥಾಸ್ಥಿತಿವಾದವನ್ನು ಮುಂದುವರೆಸುವುದು. ಕೆಲವು ತಿಂಗಳುಗಳ ಹಿಂದೆ ರಾಷ್ಟ್ರಪತಿ ಗೌರವಾನ್ವಿತ ರಾಮನಾಥ್ ಕೋವಿಂದ್ ದಂಪತಿ, ಒಡಿಸ್ಸಾದ ಪುರಿಯ ಜಗನ್ನಾಥ ದೇವಸ್ಥಾನಕ್ಕೆ ಹೋಗಿದ್ದರು. ರಾಷ್ಟ್ರಪತಿ ದೇಶದ ಮೊದಲ ಪ್ರಜೆ. ಅಂಥವರನ್ನು ಅಲ್ಲಿನ ಪುರೋಹಿತರು ದೇವಸ್ಥಾನದ ಒಳಗೆ ಬಿಟ್ಟುಕೊಳ್ಳಲಿಲ್ಲ. ಈ ವಿಷಯ ಮುಖ್ಯವಾಹಿನಿಯಲ್ಲಿ ಚರ್ಚೆಗೆ ಬರಲೇ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಲ್ಲಲ್ಲಿ ಖಂಡನೆಗೊಳಗಾಗಿ ಹಾಗೇ ಮರೆಯಾಯಿತು. ಜಾತಿ ಆಧಾರಿತ ಅವಮಾನ ದೇಶದ ಮೊದಲ ಪ್ರಜೆಯನ್ನೂ ಬಿಡಲಿಲ್ಲ ಎಂದಮೇಲೆ ಹೇಳುವುದೇನಿದೆ? ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ಇಲ್ಲಿ ಬ್ರಾಹ್ಮಣ್ಯವನ್ನು ಯಾರು ಕಾಪಾಡುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಹಿಂದೂ ಸಮಾಜದಲ್ಲಿ ಅವಕಾಶಗಳ ಲಭ್ಯತೆ ಮತ್ತು ನಿರಾಕರಣೆ ಎರಡನ್ನೂ ವ್ಯಕ್ತಿಯ ಜಾತಿ
ನಿರ್ಧರಿಸುತ್ತದೆ. ಇದನ್ನು ಅಮೆರಿಕನ್ ಲೇಖಕಿ ಇಸಾಬೆಲ್ ವಿಲ್ಕರ್‌ಸನ್ ತಮ್ಮ Caste: the origins of discontents ಅನ್ನುವ ಪುಸ್ತಕದಲ್ಲಿ ವಿವರಿಸುತ್ತಾರೆ. ಒಂದೆರಡು ಉದಾಹರಣೆಗಳೊಂದಿಗೆ ಇದನ್ನು ಮನದಟಟ್ಟು ಮಾಡಬಹುದು. 1. ರಂಗಭೂಮಿಯ ಭೀಷ್ಮ ಬಿ. ವಿ. ಕಾರಂತರು ಬಾಲಕನಾಗಿದ್ದಾಗಲೇ ಗುಬ್ಬಿ ವೀರಣ್ಣನವರ ಕಂಪನಿಗೆ ಸೇರಿಕೊಳ್ಳುತ್ತಾರೆ. ಈ ಹುಡುಗ ಬ್ರಾಹ್ಮಣ ಅಂತ ಗೊತ್ತಾದಮೇಲೆ ವೀರಣ್ಣನವರು ಅವನಿಗೆ ಪೂಜೆ ಮಾಡುವ ಕೆಲಸವನ್ನು ವಹಿಸುತ್ತಾರೆ. ಪೂಜೆಯಿಂದ ಸಿಗುವ ತಟ್ಟೆಕಾಸಿನಲ್ಲಿ ಅವರು ಪುಸ್ತಕಗಳನ್ನು ಕೊಂಡು ಓದುತ್ತಿದ್ದರಂತೆ. 2. ಶಿವರಾಮಕಾರಂತರು ದಕ್ಷಿಣ ಭಾರತದಲ್ಲಿ ಎಲ್ಲಿಯೇ ಹೋಗಲಿ ಉಡುಪಿ ಬ್ರಾಹ್ಮಣರ ಹೋಟೆಲಿನಲ್ಲಿ ತಂಗುತ್ತಿದ್ದರಂತೆ. ಹೆಸರು ಕೇಳುತ್ತಿದ್ದಂತೆಯೆ ಹೋಟೆಲಿನ ಯಜಮಾನ ನೀವು ಉಡುಪಿಯವರಲ್ಲವೋ ಎಂದು ಹೇಳಿ ವಿಶೇಷ ಆತಿಥ್ಯ ನೀಡಿ, ವಾಸ್ತವ್ಯಕ್ಕೆ ಹಣ ತೆಗೆದುಕೊಳ್ಳದೆ ಕಳಿಸುತ್ತಿದ್ದರಂತೆ. 3. ಇತ್ತೀಚಿಗೆ, ಒಬ್ಬ ಕನ್ನಡದ ಗಾಯಕ ಮುಂಬೈಗೆ ಸಂಗೀತ ನಿರ್ದೇಶಕನನ್ನು ನೋಡಲು ಹೋಗುತ್ತಾರೆ. ಉಳಿದುಕೊಳ್ಳಲು ಆಶ್ರಯವಿಲ್ಲದೆ ಎಲ್ಲೊ ಮಲಗಿ ರಾತ್ರಿ ಕಳೆದು ನಿರ್ದೇಶಕರನ್ನು ನೋಡುತ್ತಾರೆ. ಅವರು ಜಾತಿ ವಿವರವನ್ನು ತಿಳಿದು ಗಾಯಕರಿಗೆ ಒಂದು ದೇವಸ್ಥಾನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಾರೆ. ಇಂತಹ ಅವಕಾಶಗಳು ದಲಿತ ಮತ್ತು ಅತಿಶೂದ್ರರು ನಿರೀಕ್ಷಿಸಲು ಸಾಧ್ಯವೆ?

ಇಂದಿನ ಡಿಜಿಟಲ್ ಯುಗದಲ್ಲಿಯೂ ಜಾತಿವ್ಯವಸ್ಥೆ ಮತ್ತಷ್ಟು ಗಟ್ಟಿಗೊಳ್ಳುತ್ತಿರುವುದು ಕಾಣುತ್ತಿದೆ. ಅದಕ್ಕೆ ಮೇಲ್ಜಾತಿಗಳ ಶ್ರೇಷ್ಠತೆಯ ವ್ಯಸನವೇ ಕಾರಣ. ಮತ್ತೆ ಈಗ ಬ್ರಾಹ್ಮಿನ್ ಕೆಫೆಗಳು ತಲೆಯೆತ್ತುತ್ತಿವೆ. ಐಯಾಂಗಾರ್ ಬೇಕರಿ ಬ್ರಾಂಡ್ ನೇಮ್ ಆಗಿ ಬಹಳ ಕಾಲವಾಗಿದೆ. ಒಂದು ಕಾಲದಲ್ಲಿ ಜಾತಿ ಹೇಳಿಕೊಳ್ಳಲು ಸಂಕೋಚಿಸುತ್ತಿದ್ದ ಒಕ್ಕಲಿಗರು ಇಂದು ಕಾರಿನ ಹಿಂಬದಿಯಲ್ಲಿ ಗೌಡಾಸ್ ಎಂದು ಬರೆದುಕೊಳ್ಳಲು ಹೆಮ್ಮೆಪಡುತ್ತಾರೆ. ಮಾಂಸಾಹಾರಕ್ಕೆ ಗೌಡರ ಮಿಲಿಟರಿ ಹೊಟೇಲುಗಳಾಗಿವೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ವೀರಶೈವರ ಖಾನಾವಳಿಗಳಿವೆ. ಯಾರಾದರೂ ಹೊಲೆಯರ ಕೆಫೆ, ಮಾದಿಗರ ಮಿಲಿಟರಿ ಹೊಟೇಲ್ ಎಂದು ಹೆಸರಿಟ್ಟು ನಡೆಸಿದರೆ ಅತ್ತ ಸುಳಿವವರುಂಟೆ. ಬ್ರಾಹ್ಮಣ್ಯವು ಸಾಮಾಜಿಕ ಹಕ್ಕುಗಳಾದ ಅಂದರೆ ಅಂತರ್‌ಜಾತಿ ಮದುವೆ ಮತ್ತು ಅಂತರ್‌ಜಾತಿ ಭೋಜನ ಇವುಗಳಿಗೆ ಮಾತ್ರ ನಿಷೇಧ ಹೇರಿದ್ದರೆ ಅಷ್ಟೇನು ತೊಂದರೆಯಿರುತ್ತಿರಲಿಲ್ಲ. ಆದರೆ ನಾಗರಿಕ ಹಕ್ಕುಗಳಾದ ಸಾರ್ವಜನಿಕ ಬಾವಿಯ ಉಪಯೋಗ, ದೇವಸ್ಥಾನದ ಪ್ರವೇಶ, ಕ್ಷೌರ ನಿರಾಕರಣೆ ಇಂಥವುಗಳಿಗೂ ಮಡಿ ಮೈಲಿಗೆಯ ಹೆಸರಿನಲ್ಲಿ ನಿಷೇಧ ಹೇರಿರುವುದರಿಂದ ಸಾಮಾಜಿಕ ಸಹಬಾಳ್ವೆ ಗ್ರಾಮೀಣ ಭಾರತದಲ್ಲಿ ಸದಾ ಪ್ರಕ್ಷುಬ್ಧ ಸ್ಥಿತಿಯಲ್ಲಿರುತ್ತದೆ. ಇಂಥಲ್ಲಿ ಜಾತ್ಯತೀತತೆಯನ್ನು ನಿರೀಕ್ಷಿಸುವುದು ಎಷ್ಟು ಸರಿ, ಸಾಮಾಜಿಕ ಸ್ವಾತಂತ್ರ್ಯಕ್ಕೆ ಜಾಗವೆಲ್ಲಿದೆ?

ಅವಕಾಶ ವಂಚನೆಯನ್ನು ಮತ್ತು ಅದರಿಂದಾಗುವ ಅವಮಾನಗಳನ್ನು ಕುರಿತು ಹೆಚ್ಚು ತಿಳಿಯಬೇಕಾದರೆ ದಲಿತ ಆತ್ಮಕಥೆಗಳನ್ನು ಓದಬೇಕು. ’ಮೈ ಫಾದರ್ ನೇಮ್ ಈಸ್ ಬಾಲಯ್ಯ’ ಎಂಬ ಲೇಖಕ ಸತ್ಯನಾರಾಯಣ ಅವರ ತೆಲುಗು ಆತ್ಮಕಥೆಯೊಂದಿದೆ. ಅವರ ತಾತ ಒಳ್ಳೆಯ ಮೋಚಿ. ಉತ್ತಮ ಪಾದರಕ್ಷೆಗಳನ್ನು ಮಾಡುವುದರಲ್ಲಿ ನಿಷ್ಣಾತ. ಒಮ್ಮೆ ಹೈದರಾಬಾದಿನ ನಿಜಾಮ ಅವರ ಹಳ್ಳಿಯನ್ನು ಹಾದುಹೋಗುವ ಸುದ್ದಿ ತಿಳಿಯುತ್ತದೆ. ಈ ತಾತನಿಗೆ ನಿಜಾಮನಿಗೆ ಒಂದು ಜೊತೆ ಒಳ್ಳೆಯ ಚಪ್ಪಲಿ ಮಾಡಿಕೊಡಬೇಕೆಂದು ಆಸೆಯುಂಟಾಗುತ್ತದೆ. ಅತ್ಯುತ್ತಮವಾದ ಚಪ್ಪಲಿಗಳನ್ನು ತಯಾರಿಸಿಕೊಂಡು ಆ ದಿನ ನಿಜಾಮನಿಗಾಗಿ ಕಾಯುತ್ತಾನೆ. ಊರ ಮುಖಂಡನ ಜೊತೆಗೆ ಹೋಗಿ ನಿಜಾಮನಿಗೆ ವಂದಿಸಿ ಪಾದರಕ್ಷೆಗಳನ್ನು ತೊಡಿಸುತ್ತಾನೆ. ಅಳತೆಗೆ ಸರಿಯಾಗಿ ಹೊಂದಿಕೊಂಡ ಜೋಡು ಮೆದುವಾಗಿ ಕಾಲುಗಳನ್ನು ಸ್ಪರ್ಶಿಸಿದಾಗ ನಿಜಾಮನಿಗೆ ಅಪಾರ ಸಂತೋಷವಾಗುತ್ತದೆ. ಆ ತಾತನಿಗೆ ಸ್ಥಳದಲ್ಲಿಯೆ 50 ಎಕರೆ ಜಮೀನನ್ನು ಮಂಜೂರು ಮಾಡುತ್ತಾನೆ. ಎರಡು ದಿನಗಳು ಕಳೆದನಂತರ ಊರಿನ ಮುಖಂಡ ಅವನನ್ನು ಕರೆಸಿ ’50 ಎಕರೆ ತಗೊಂಡು ನೀನೇನ್ ಮಾಡ್ತೀಯಾ, ಎರಡು ಎಕರೆ ಇಟ್ಕೋ, ಮಿಕ್ಕದ್ದನ್ನು ನನ್ನ ಹೆಸರಿಗೆ ಬರಿ’ ಎಂದು ಬರೆಸಿಕೊಳ್ಳುತ್ತಾನೆ. ಆಸ್ತಿ ಮೇಲ್ಜಾತಿಗಳಲ್ಲಿ ಮಾತ್ರ ಯಾಕಿದೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ. ಆಸ್ತಿಯ ಹಕ್ಕು, ವಿದ್ಯೆಯ ಹಕ್ಕು ಮತ್ತು ಆಯುಧಗಳನ್ನು ಹೊಂದುವ ಹಕ್ಕನ್ನು ಕಸಿದುಕೊಂಡು ಬಹುಸಂಖ್ಯಾತ ಶೂದ್ರ ಜನಾಂಗವನ್ನು ನಿರ್ವೀರ್ಯರನ್ನಾಗಿ ಮಾಡಿರುವ ಬ್ರಾಹ್ಮಣ್ಯವನ್ನು ವಿಕೃತ ವ್ಯವಸ್ಥೆಯೆನ್ನಬೇಕೆ ಹೊರತು ಒಂದು ಸಿದ್ಧಾಂತವೆನ್ನಲಾಗದು. ಅದೊಂದು ಅನೈತಿಕ ಸಾಮಾಜಿಕ ವ್ಯವಸ್ಥೆ ಎನ್ನಬೇಕಷ್ಟೆ.

ನಾಸಿಕ್‌ನಲ್ಲಿ ಜರುಗಿದ ಜಿ.ಐ.ಪಿ. ರೈಲ್ವೇ ನಿಮ್ನವರ್ಗದ ಕಾರ್ಮಿಕರ ಸಮ್ಮೇಳನದಲ್ಲಿ ಮಾಡಿದ ಭಾಷಣದಲ್ಲಿ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರು ಬ್ರಾಹ್ಮಣ್ಯದ ವ್ಯಾಖ್ಯಾನವನ್ನು ಹೀಗೆ ಮಾಡುತ್ತಾರೆ. “ಬ್ರಾಹ್ಮಣ್ಯ ನಾವು ಎದುರಿಸಬೇಕಾದ ಶತ್ರು ಎಂದು ಹೇಳಿದರೆ ಯಾರು ತಪ್ಪು ತಿಳಿಯಬಾರದು. ಬ್ರಾಹ್ಮಣರು ಒಂದು ಸಮುದಾಯವಾಗಿ ಅವರು ಪಡೆದುಕೊಂಡಿರುವ ಅಧಿಕಾರ, ಅನುಕೂಲಗಳು ಮತ್ತು ಆಸಕ್ತಿಗಳನ್ನು ಕುರಿತು ನಾನು ಹೇಳುತ್ತಿಲ್ಲ. ಬ್ರಾಹ್ಮಣ್ಯವೆಂದರೆ, ನಾನು ಹೇಳುತ್ತಿರುವುದು; ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ನಿರಾಕರಣೆ ಎಂದು”. ಎಷ್ಟು ಸೊಗಸಾದ ನಿರ್ವಚನ ಇದು! ಒಂದು ಸ್ವಸ್ಥ ಸಮಾಜಕ್ಕೆ
ಇರಬೇಕಾದ ಮೂಲಭೂತ ಅವಶ್ಯಕತೆಗಳನ್ನೆ ಬ್ರಾಹ್ಮಣ್ಯ ಕಿತ್ತುಕೊಳ್ಳುತ್ತದೆ. ಈ ಮೂರೂ ಗುಣಾತ್ಮಕ ಅಂಶಗಳನ್ನು ದೂರಮಾಡಿದ ಸಮಾಜ ಹೇಗಿರಬಹುದು? ಹಾಗಿದೆ ನಮ್ಮ ಭಾರತ. ಸಂವಿಧಾನದ ಆಧಾರ ಸ್ತಂಭಗಳಂತಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಯಾರು ಬದ್ಧರಾಗಿರುತ್ತಾರೋ ಅವರೇ ನಿಜವಾದ ದೇಶಭಕ್ತರು ಮತ್ತು ಅವರು ಅವಶ್ಯಕವಾಗಿ ಬ್ರಾಹ್ಮಣ್ಯದ ವಿರೋಧಿಗಳೇ ಆಗಿರುತ್ತಾರೆ.

ಹಿಂದೂಗಳು ವಿದೇಶಕ್ಕೆ ಹೋದರೂ ಅವರು ತಮ್ಮ ಜಾತಿಯನ್ನು ಜೊತೆಗೆ ಕೊಂಡೊಯ್ಯುತ್ತಾರೆ ಎಂದು ಅಂಬೇಡ್ಕರ್ ಹೇಳಿದರು. ಅದರ ಪರಿಣಾಮ ಈಗ ಗೋಚರವಾಗುತ್ತಿದೆ.
ಅಮೆರಿಕದ ಮಾನವ ಹಕ್ಕುಗಳ ಸಮಿತಿಯು ಸಿಲಿಕಾನ್ ವ್ಯಾಲಿಯ ಸಿಸ್ಕೊ ಕಂಪೆನಿಯ ಮೇಲೆ ತಾರತಮ್ಯ ನೀತಿಯ ಪ್ರಕರಣ ದಾಖಲಿಸಿದೆ. ಕಾರಣ, ಅಲ್ಲಿನ ಭಾರತೀಯ ಸಂಜಾತ ಮೇಲ್ಜಾತಿ ಅಧಿಕಾರಿಗಳು ತಮ್ಮ ಕೆಳಗಿನ ಇಬ್ಬರು ಭಾರತೀಯ ಕೆಳಜಾತಿಯ ಸಿಬ್ಬಂದಿಯ ಮೇಲೆ ತಾರತಮ್ಯದ ದೌರ್ಜನ್ಯ ಎಸಗಿದ್ದಾರೆ ಎಂದು. ಇದು ಪ್ರಾರಂಭವಷ್ಟೆ! ಅಲ್ಲಿನ ಹಿಂದೂ ಫೌಂಡೇಷನ್, ಇದು ಭಾರತವನ್ನು ಅವಮಾನಿಸುವ ಹುನ್ನಾರ ಎಂದು ಕೂಗೆಬ್ಬಿಸಿದೆ. ಮತ್ತು ಹಿಂದೂ ಧರ್ಮದಲ್ಲಿ ಜಾತಿಗಳೇ ಇಲ್ಲ, ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲಾಗಿದೆ ಎಂಬ ಹಸಿ ಸುಳ್ಳುಗಳನ್ನು ತೇಲಿಬಿಡುತ್ತಿದೆ. ಕೇಳಿಸಿಕೊಳ್ಳುವವರು ಯಾರೂ ಇಲ್ಲ.

ಸ್ವಾತಂತ್ರ್ಯ ಬಂದ ನಂತರ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಅಸಮಾಧಾನದಿಂದಿದ್ದರು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆಗಸ್ಟ್, 15ರಂದು ಜವಾಹರ್‌ಲಾಲ್ ನೆಹರು ದೆಹಲಿಯಲ್ಲಿ ಸ್ವಾತಂತ್ರ್ಯದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಗಾಂಧಿ ದೂರದ ಬಂಗಾಲದಲ್ಲಿ ಸಂತ್ರಸ್ತರನ್ನು ಸಂತೈಸುತ್ತಿದ್ದರು. ಯಾರೋ ಕೇಳಿದರಂತೆ. ಸ್ವಾತಂತ್ರ್ಯ ದೊರೆತ ಈ ಅಮೂಲ್ಯ ಕ್ಷಣವನ್ನು ಸಂಭ್ರಮಿಸುತ್ತಿಲ್ಲವೆ? ಎಂದು. ಅದಕ್ಕೆ ಅವರ ಉತ್ತರ ’ಹೌದು ಸ್ವಾತಂತ್ರ್ಯ ಸಿಕ್ಕಿತು. ಬ್ರಿಟಿಷರ ಸಂಕೋಲೆಗಳಿಂದ ಬಿಡುಗಡೆ ದೊರಕಿದೆ. ಆದರೆ ಹಸಿವು, ಬಡತನ, ಅಸ್ಪೃಶ್ಯತೆ ಹೋಗಲಾಡಿಸದಿದ್ದರೆ ನಮಗೆ ನಿಜವಾದ ಸ್ವಾತಂತ್ರ್ಯ ದೊರಕಿದಂತಾಗುವುದಿಲ್ಲ ಎಂಬುದಾಗಿತ್ತು. ಅಂಬೇಡ್ಕರ್ ಅವರು ಸಹ ಸಂವಿಧಾನಸಭೆಯ ತಮ್ಮ ಕೊನೆಯ ಭಾಷಣದಲ್ಲಿ ’ನಾವು ಈಗ ವೈರುಧ್ಯಗಳ ಬದುಕನ್ನು ಪ್ರವೇಶಿಸುತ್ತಿದ್ದೇವೆ. ನಮಗೆ ರಾಜಕೀಯ ಸ್ವಾತಂತ್ರ್ಯ ಲಭಿಸಿದೆ, ಆದರೆ ಸಾಮಾಜಿಕ ಸ್ವಾತಂತ್ರ್ಯ ಇನ್ನೂ ಮರೀಚಿಕೆಯಾಗಿದೆ. ಸಾಮಾಜಿಕ ಸ್ವಾತಂತ್ರ್ಯವಿಲ್ಲದೆ ಪೂರ್ಣ ಸ್ವಾತಂತ್ರ್ಯ ದಕ್ಕಿದಂತಾಗುವುದಿಲ್ಲ ಎಂದು ಹೇಳಿದರು. ಇಂದಿಗೂ ಸಾಮಾಜಿಕ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಅಡ್ಡಿಯಾಗಿರುವುದು ಬ್ರಾಹ್ಮಣ್ಯವೆಂದರೆ ಉತ್ಪ್ರೇಕ್ಷೆಯಾಗುವುದಿಲ್ಲ.

ಒಟ್ಟಿನಲ್ಲಿ ಪ್ರತ್ಯೇಕೀಕರಣವೇ ಬ್ರಾಹ್ಮಣ್ಯ. ಉಣ್ಣುವುದು, ಉಡುವುದು ಅಷ್ಟೇ ಅಲ್ಲ; ಭಾವನಾತ್ಮಕವಾಗಿ ಒಳಗೊಳ್ಳುವಿಕೆ ಇಲ್ಲದ ಸಮಾಜವನ್ನು ನಾಗರಿಕ ಸಮಾಜವೆಂದು ಕರೆಯಲು ಸಾಧ್ಯವಿಲ್ಲ. ?

ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಕನ್ನಡದ ಖ್ಯಾತ ಕವಿ. ದಲಿತ, ಬಂಡಾಯ ಮತ್ತು ಬೌದ್ಧ ಚಿಂತನೆಗಳನ್ನು ಸಾಹಿತ್ಯದ ಮೂಲಕ ಪ್ರಚುರಪಡಿಸಿದ ಪ್ರಮುಖರಲ್ಲಿ ಒಬ್ಬರು. ‘ಕೊಂಡಿಗಳು ಮತ್ತು ಮುಳ್ಳುಬೇಲಿಗಳು’, ‘ಚಪ್ಪಲಿ ಮತ್ತು ನಾನು’ ಮೂಡ್ನಾಕೂಡು ಅವರ ಕೆಲವು ಕವನಸಂಕಲನಗಳು. ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಅವರ ಆತ್ಮಕತೆ.


ಇದನ್ನೂ ಓದಿ: ಸಂಪಾದಕೀಯ; ಮೈಮನಸ್ಸುಗಳಲ್ಲಿ ನಾಟಿರುವ ಜಾತಿಯೆಂಬ ಅಪಾಯಕಾರಿ ಸುಳಿಯಲ್ಲಿ ಬ್ರಾಹ್ಮಣ್ಯದ ಪಾಳೆಗಾರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಬ್ರಾಹ್ಮಣ್ಯ ಎಂದರೆ ಏನು ಎಂಬುದನ್ನು ಮೂಡ್ನಾಕೂಡು ಚಿನ್ನಸ್ವಾಮಿಯವರು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಪ್ರಜ್ಞಾವಂತರೆಲ್ಲರೂ ಬ್ರಾಹ್ಮಣ್ಯದ ವಿರುದ್ಧ ಹೋರಾಟ ಮಾಡಬೇಕು.

  2. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಬ್ರಾಹ್ಮಣ್ಯ ಕುರಿತು ಇರುವ ಲೇಖನ ತುಂಬಾ ಅದ್ಭುತವಾಗಿದೆ ಧನ್ಯವಾದಗಳು ಸರ್

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...