ಉತ್ತರ ಕನ್ನಡ ಬಿಜೆಪಿಯ ಆಯಕಟ್ಟಿನ ಸ್ಥಾನದಲ್ಲೆಲ್ಲ ಮೇಲ್ವರ್ಗದ ಮಹಾಮಹಿಮರೇ ತುಂಬಿಕೊಂಡು ಅಧಿಕಾರ ಸುಖ ಅನುಭವಿಸುತ್ತಿದ್ದಾರೆ. ಶೂದ್ರರನ್ನ ಬಿಜೆಪಿ ಸೂತ್ರಧಾರರು ಕೇವಲ ಕಾಲಾಳುಗಳಂತೆ ದುಡಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಹಿಂದುಳಿದ ಸಮುದಾಯದ ಮಾಜಿ ಶಾಸಕ ಸತೀಶ್ ಸೈಲ್ ಅವರಿಗೆ ಡಿಸಿಸಿ (ಜಿಲ್ಲಾ ಕಾಂಗ್ರೆಸ್ ಕಮಿಟಿ) ಅಧ್ಯಕ್ಷ ಪಟ್ಟಕಟ್ಟಲು ಪ್ರಯತ್ನ ತುಂಬಾ ನಾಜೂಕಾಗಿ ನಡೆಯುತ್ತಿದೆ. ಕಾಂಗ್ರೆಸ್ ಒಳರಾಜಕಾರಣದ ಸದ್ದಿನ ಹಿಂದಿನ ಈ ಸುದ್ದಿ ಜಿಲ್ಲೆಯಲ್ಲಿ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ತಮಾಷೆಯೆಂದರೆ ಬಿಜೆಪಿ ಸೇರಲು ಕಳೆದೆರಡು ವರ್ಷದಿಂದ ರಹಸ್ಯ ಕಾರ್ಯಾಚರಣೆ ನಡೆಸುತ್ತಲೇ ಬಂದ ಸೈಲ್‌ಗೆ ಸಲೀಸಾಗಿ ಜಿಲ್ಲಾ ಕಾಂಗ್ರೆಸ್‌ನ ಅತ್ಯುಚ್ ಪೀಠ ಪ್ರಾಪ್ತಿಯಾಗುತ್ತಿದೆ.
ಸರಿಸುಮಾರು ಹನ್ನೆರಡು ವರ್ಷದಿಂದ ಜಿಲ್ಲಾ ಕಾಂಗ್ರೆಸ್ ಕುರ್ಚಿಯಲ್ಲಿ ಭದ್ರವಾಗಿ ಕೂತಿದ್ದ ಉದ್ಯಮಿ ಭೀಮಣ್ಣನಾಯ್ಕ್ ಅವರಿಂದ ಪಾರ್ಟಿಗೇನೂ ಪ್ರಯೋಜನವಾಗಿಲ್ಲ ಎಂಬ ಕೂಗು ಬಹಳ ದಿನದಿಂದ ಕೇಳಿಬರುತ್ತಲೇ ಇತ್ತು. ಮಾಜಿ ಸಿಎಂ ದಿವಂಗತ ಬಂಗಾರಪ್ಪನವರ ಭಾಮೈದರಾದ ಭೀಮಣ್ಣ ತಮ್ಮ ವ್ಯವಹಾರ ಲಾಭದಿಂದ ಪಕ್ಷಕ್ಕಾಗಿ ಹಣ ಹರಿಸುತ್ತಿದ್ದರೇ ಹೊರತು ಸಂಘಟನೆ ಮಾಡುವ ಚಾಕಚಕ್ಯತೆ ಹೊಂದಿರಲಿಲ್ಲ ಎಂಬುದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಅಂಬೋಣ. ಜಿಲ್ಲೆಯ ಬಹುಸಂಖ್ಯಾತ ದೀವರ ಸಮುದಾಯದ ಭೀಮಣ್ಣ ರಾಜಕೀಯ ಅಸ್ತಿತ್ವವಿರುವುದೇ ಭಾವ ಬಂಗಾರಪ್ಪನವರ ನಾಮಬಲದಲ್ಲಿ.
ಹಲವು ಬಾರಿ ಜಿಲ್ಲೆಯಿಂದ ಎಂಪಿಗಿರಿಗೆ ಸ್ಪರ್ಧಿಸಿ ಒಮ್ಮೆ ಮಾತ್ರ ಗೆದ್ದಿದ್ದ ವಲಸೆಗಾರ್ತಿ ಮಾರ್ಗರೆಟ್ ಆಳ್ವ ವಿರೋಧಿ, ಜಿಲ್ಲೆಯ ಪುರಾತನ ರಾಜಕಾರಣಿ ಆರ್.ವಿ ದೇಶಪಾಂಡೆ ಬಣದಲ್ಲಿ ಗುರುತಿಸಿಕೊಂಡಿದ್ದ ಭೀಮಣ್ಣ ದೊಡ್ಡವರ ಕೃಪಾಶಿರ್ವಾದದಿಂದಲೇ ನಿರಂತರ ಒಂದೂ ಕಾಲು ದಶಕ ಡಿಸಿಸಿ ಅಧ್ಯಕ್ಷತೆ ಹಿಡಿದಿಟ್ಟುಕೊಂಡಿದ್ದರು. ಬಂಗಾರಪ್ಪ ಮತ್ತು ಮಾರ್ಗರೆಟ್ ಆಳ್ವ ನಡುವಿನ ವೈಮನಸ್ಸು ನಾಜೂಕಾಗಿ ಬಳಸಿಕೊಂಡ ದೇಶಪಾಂಡೆಯವರು, ಜಿಲ್ಲೆಯಲ್ಲಿ ಭೀಮಣ್ಣನವರನ್ನು ಮುಂದಿಟ್ಟುಕೊಂಡೇ ಎದುರಾಳಿಗಳ ಹೆಡೆಮುರಿ ಕಟ್ಟುತ್ತ ಸಾಗಿದ್ದರು. ಜನಸಾಮಾನ್ಯರೊಂದಿಗೆ ಅಷ್ಟೇ ಏಕೆ ಸ್ವಜಾತಿ ದೀವರ ನಡುವೆಯೂ ಸರಳವಾಗಿ ಬೆರೆಯಲಾಗದ ಭೀಮಣ್ಣ ಹಲವು ಬಾರಿ ಎಂಪಿ, ಎಮ್ಮೆಲ್ಲೆಗಿರಿಗೆ ಸ್ಪರ್ಧಿಸಿದರೂ ಗೆಲ್ಲಲಾಗಲಿಲ್ಲ. ಈ ದೌರ್ಬಲ್ಯದಿಂದಾಗಿ ಭೀಮಣ್ಣ ನಾಯಕನಾಗಲೇ ಇಲ್ಲವೆಂಬುದು ಅವರ ಹತ್ತಿರದವರ ಬೇಸರ.
ಮಾಜಿ ಸಂಸದೆ ಮಾರ್ಗರೆಟ್ ಆಳ್ವ ಭೀಮಣ್ಣನವರನ್ನು ಡಿಸಿಸಿ ಅಧ್ಯಕ್ಷತೆಯಿಂದ ಇಳಿಸಲೇಬೇಕೆಂದು ಒಂದಲ್ಲ ಒಂದು ತಂತ್ರ ಮಾಡುತ್ತಲೇ ಇದ್ದರು. ಆದರೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದ ಅವರ ಹಿಡಿತದಿಂದ ಡಿಸಿಸಿ ಕುರ್ಚಿ ಕಸಿಯಲು ಆಳ್ವರಿಗೆ ಆಗಲಿಲ್ಲ. ಆಳ್ವರವರು ಹಲವು ಸಲ ಭೀಮಣ್ಣನವರ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಅವರು ಅಸಮರ್ಥನೆಂದು ಬಿಂಬಿಸಿದ್ದರು. ಆಗೆಲ್ಲ ದೇಶಪಾಂಡೆ ಕತ್ತಿ ಝಳಪಿಸಿ ಶಿಷ್ಯನನ್ನು ಸಂರಕ್ಷಿಸಿದ್ದರು. ಆದರೆ ಈಗ ಅದ್ಯಾಕೋ ಭೀಮಣ್ಣನವರ ಪರ ವಹಿಸಲು ದೇಶಪಾಂಡೆಯವರಿಗೆ ಸಾಧ್ಯವಾಗುತ್ತಿಲ್ಲ. ಭೀಮಣ್ಣನವರ 12 ವರ್ಷದ ರಿಪೋರ್ಟ್ ಕಾರ್ಡ್ ಮುಂದಿಟ್ಟುಕೊಂಡು ಮಾತಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎದುರು ತನ್ನ ಹಿಂಬಾಲಕನ ತಾರೀಫು ಮಾಡಲಾಗುತ್ತಿಲ್ಲ ದೇಶಪಾಂಡೆ ಸಾಹೇಬರಿಗೆ!
ಡಿಸಿಸಿ ಅಧ್ಯಕ್ಷರ ಬದಲಾವಣೆ ಪಕ್ಕ ಎಂಬ ಸಂದೇಶ ಬರುತ್ತಿದ್ದಂತೆಯೇ ಮಾರ್ಗರೆಟ್ ಆಳ್ವ ಮತ್ತು ದೇಶಪಾಂಡೆ ತಮ್ಮ ಅನುಯಾಯಿಗಳಿಗೆ ಪೀಠ ಕೊಡಿಸಲು ಕರಾಮತ್ತು ಶುರು ಹಚ್ಚಿಕೊಂಡುಬಿಟ್ಟಿದ್ದರು. ಮಾಜಿ ಡಿವೈಸಿಸಿ ಅಧ್ಯಕ್ಷ ರವೀಂದ್ರನಾಥ ನಾಯ್ಕ್, ಮಾಜಿ ಶಾಸಕ ಹಾಲಕ್ಕಿ ಬುಡಕಟ್ಟಿನ ಕೆ.ಎಚ್.ಗೌಡ, ಆಳ್ವ ಅವರ ಮಗ ನಿವೇದಿತ್ ಆಳ್ವ ಹೀಗೆ ಹಲವು ಹೆಸರುಗಳು ತೇಲಾಡಿದವು. ಆದರೆ ಇದ್ದಕ್ಕಿದಂತೆ ಬಿಜೆಪಿಯತ್ತ ತೇಲುಗಣ್ಣು ಬಿಡುತ್ತಿದ್ದ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಹೆಸರು ಮುನ್ನಲೆಗೆ ಬಂದುಬಿಟ್ಟಿತು. ಅದಿರೋದ್ಯಮಿಯಾಗಿರುವ ಸೈಲ್ ಬಿಜೆಪಿಯಲ್ಲಿ ಪ್ರಭಾವಿಗಳಾಗಿರುವ ತನ್ನ ಉದ್ಯಮ ಮಿತ್ರರ ಸಹಕಾರದಿಂದ ಬಿಜೆಪಿ ಸೇರಲು ಸರ್ಕಸ್ ಮಾಡುತ್ತಿದ್ದರು. ಆದರೆ ಸಿಎಂ ಯಡಿಯೂರಪ್ಪರಿಗೆ ಆಪ್ತರಾಗಿರುವ ಕಾರವಾರದ ಶಾಸಕಿ ರೂಪಾಲಿ ನಾಯ್ಕ್ ಅಡಿಗಡಿಗೆ ಸೈಲ್‌ಗೆ ಅಡ್ಡಿಪಡಿಸಿ ಯಶಸ್ವಿಯೂ ಆಗಿದ್ದರು.
ಕಾರವಾರದ ಲೋಕಲ್ ರಾಜಕೀಯ ಮತ್ತು ಹಣ ಖರ್ಚು ಮಾಡುವ ಸೈಲ್ ಅವರ ತಾಕತ್ತು ಡಿಸಿಸಿ ಹೊಸ ಅಧ್ಯಕ್ಷರ ನೇಮಕಾತಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ಮೊಟ್ಟಮೊದಲ ಆಪರೇಷನ್ ಕಮಲದ ಸ್ಯಾಂಪಲ್ ಎಂದೇ ಹೆಸರಾಗಿರುವ ಮಾಜಿ ಸಚಿವ ಆನಂದ ಅಸ್ನೋಟಿಕರ್ ಬಿಜೆಪಿಯಲ್ಲಿ ಮೂಲೆಗುಂಪಾಗಿ ಸೇರಿದರೂ ಭರ್ಕತ್ ಆಗದೇ ಅತಂತ್ರವಾಗಿ ತೊಳಲಾಡುತ್ತಿದ್ದಾರೆ. ಈಗ ಆನಂದ ಕಾಂಗ್ರೆಸ್ ಸೇರಲು ಶತಾಯಗತಾಯ ಹಾರಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಆಳ್ವ ಮತ್ತು ದೇಶಪಾಂಡೆ ಇಬ್ಬರನ್ನೂ ಎದುರು ಹಾಕಿಕೊಂಡಿರುವ ಅಸ್ನೋಟಿಕರ್ ಅವರಿಗೆ ಕಾಂಗ್ರೆಸ್ ಕದ ತೆರೆಯುತ್ತಲೇ ಇಲ್ಲ. ಈಗ ಮತ್ತೊಂದು ಸುತ್ತಿನ ಪ್ರಯತ್ನ ಶುರುಮಾಡಿರುವ ಅಸ್ನೋಟಿಕರ್ ಇತ್ತೀಚೆಗಷ್ಟೇ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವ ಮಧು ಬಂಗಾರಪ್ಪರ ಬೆನ್ನಿಗೆ ಬಿದ್ದು ಕಾಂಗ್ರೆಸ್ ಸೇರಿಸುವಂತೆ ಗೋಳಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಆನಂದ್ ಅಸ್ನೋಟಿಕರ್ ಅವರ ಅಂಥದೊಂದು ಪ್ರಯತ್ನ ಕ್ಲಿಕ್ ಆಗಿಬಿಟ್ಟರೆ ತಾನು ಕಾಂಗ್ರೆಸ್‌ನಲ್ಲಿ ನೆಲೆ-ಬೆಲೆ ಕಳೆದುಕೊಳ್ಳಬೇಕಾಗುತ್ತದೆಂದು ಲೆಕ್ಕಾಹಾಕಿದ ಸತೀಶ್ ಸೈಲ್ ಡಿಸಿಸಿ ಅಧ್ಯಕ್ಷತೆ ಬೇಡಿಕೆ ಇಟ್ಟುಬಿಟ್ಟರು. ಬಿಜೆಪಿ ಸೇರುವುದು ಸಾಧ್ಯವಾಗದೆಂಬುದು ಖಾತ್ರಿಯಾಗುತ್ತಿದ್ದಂತೆ ಕಾಂಗ್ರೆಸಲ್ಲೇ ಬೇರು ವಿಸ್ತರಿಸುವ ತಂತ್ರವನ್ನು ಸೈಲ್ ಹಾಕಿಕೊಂಡಿದ್ದರು. ಇದಕ್ಕವರಿಗೆ ಸುಪ್ರೀಮ್ ಕೋರ್ಟ್ ನ್ಯಾಯವಾದಿಯಾಗಿರುವ ಮತ್ತು ರಾಹುಲ್ ಗಾಂಧಿ ಜತೆ ಒಡನಾಟವೂ ಹೊಂದಿರುವ ಕಾರವಾರ ಮೂಲದ ದೇವದತ್ ಕಾಮತ್ ಅವರ ಸಹಕಾರವು ಸಿಕ್ಕಿದೆ. ಹಲವು ವರ್ಷದಿಂದ ಉತ್ತರ ಕನ್ನಡದ ಕಾಂಗ್ರೆಸ್ ಸಂಸದನಾಗುವ ಕನಸು ಕಾಣುತ್ತಿರುವ ಈ ವಕೀಲ ದಿಲ್ಲಿಯಲ್ಲಿ ಸೈಲ್ ಪರ ಲಾಬಿ ನಡೆಸಿದ್ದರು ಎನ್ನಲಾಗಿದೆ. ನೇರ ಹೈಕಮಾಂಡ್‌ನಿಂದಲೇ ಸೈಲ್ ಹೆಸರು ಶಿಫಾರಸ್ಸಾಗಿರುವುದರಿಂದ ಡಿಕೆಶಿ ಜಿಲ್ಲಾ ಕಾಂಗ್ರೆಸ್‌ನ ಎರಡೂ ಬಣಗಳಿಗೆ ಆತ ಸಖ್ಯವಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದುರ್ಬಲವಾಗಿರುವ ಜಿಲ್ಲಾ ಕಾಂಗ್ರೆಸ್ ಕಟ್ಟಲು ಬೇಕಾದ ಹಣಕಾಸು ಬಲ ಸೈಲ್ ಅವರಿಗೆ ಇರುವುದರಿಂದ ಎಲ್ಲರೂ ದುಸರಾ ಮಾತಾಡದೆ ಒಪ್ಪಿಕೊಂಡಿದ್ದಾರೆ!
ಸೈಲ್‌ರಿಂದ ಉತ್ತರಕನ್ನಡದಲ್ಲಿ ಕಾಂಗ್ರೆಸ್‌ಗೆ ಮರುಹುಟ್ಟು ಕೊಡಲು ಸಾಧ್ಯವೋ? ಇಲ್ಲವೋ? ಎಂಬುದು ದೇಶಪಾಂಡೆ, ಆಳ್ವಾ ಮತ್ತು ಸ್ವತಃ ಸೈಲ್ ಅವರಿಗೂ ಗೊತ್ತಿಲ್ಲ. ಆದರೆ ಸೈಲ್ ಅಧ್ಯಕ್ಷತೆ ವಹಿಸಿಕೊಂಡರೆ ಇವರೆಲ್ಲರ ವೈಯಕ್ತಿಕ ಅಜೆಂಡಾ ಈಡೇರಿಕೆಗೆ ಒಂದಿಷ್ಟು ಸಹಾಯವಾಗುತ್ತದೆ. ಮಗನನ್ನು ಶಿರಸಿಯಿಂದ ಶಾಸಕನಾಗಿಸುವ ಆಸೆ ಆಳ್ವಾ ಅವರದ್ದಾದರೆ, ಮುಂಬರುವ ಪಾರ್ಲಿಮೆಂಟ್ ಇಲೆಕ್ಷನ್‌ನಲ್ಲಿ ತಮ್ಮ ಮಗನನ್ನು ಸಂಸದನಾಗಿ ಮಾಡಬೇಕೆಂಬ ಯೋಜನೆಯಲ್ಲಿ ದೇಶಪಾಂಡೆಯಿದ್ದಾರೆ. ತಾನು ಡಿಸಿಸಿ ಅಧ್ಯಕ್ಷನಾದರೆ ಕಾರವಾರದಲ್ಲಿ ತನಗೆ ಎದುರಾಳಿಯಾಗಿರುವ ಅಸ್ನೋಟಿಕರ್ ಕಾಂಗ್ರೆಸ್ ಒಳಬರದಂತೆ ಶಾಶ್ವತವಾಗಿ ಕದ ಹಾಕಬಹುದೆಂಬ ಲೆಕ್ಕಾಚಾರ ಸೈಲ್‌ರದು. ಈ ಮೇಲಾಟದ ಮಧ್ಯದಲ್ಲಿ ನಿಂತ ನೀರಾಗಿರುವ ಜಿಲ್ಲಾ ಕಾಂಗ್ರೆಸ್ ರಾಜಕಾರಣ ಭೀಮಣ್ಣನಾಯ್ಕ್ ನಿರ್ಗಮನದಿಂದ ಹರಿಯಲು ಶುರುವಾಗಬಹುದೆಂಬ ಭಾವನೆ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರದಾಗಿದೆ.


