ನಮ್ಮ ದೇಶದ ಮಟ್ಟಿಗೆ ಕೊರೊನಾ ಕೇವಲ ರೋಗಾಣು ತಂದೊಡ್ಡುವ ಸಾಂಕ್ರಾಮಿಕ ರೋಗವಷ್ಟೇ ಆಗದೇ ದೊಡ್ಡ ಸಾಮಾಜಿಕ ಪಿಡುಗಾಗಿಯೂ ಪರಿಣಮಿಸಿರುವುದು ಆತಂಕದ ಸಂಗತಿ. ಒಂದೊಮ್ಮೆ ರೋಗಕಾರಕ ವೈರಸ್ಸು ನಾಶಪಡಿಸುವ ಔಷಧಿ ಕಂಡುಹುಡುಕಿದರೂ ಇದರಿಂದಾದ ಸಾಮಾಜಿಕ ಪರಿಣಾಮಗಳು ದೀರ್ಘಕಾಲ ನಮ್ಮನ್ನು ಬಿಡದೇ ಕಾಡುವಂತಹವು. ಆಡುವ, ಓದುವ ವಯಸ್ಸಿನ ಮಕ್ಕಳ ಓದು ಕುಂಠಿತಗೊಂಡಿತು, ಕುಟುಂಬದ ಸದಸ್ಯರು ಕೆಲಸ ಕಳೆದುಕೊಂಡದ್ದು ಸಂಬಳ ಕಡಿತಗೊಂಡದ್ದು ಕಾರಣವಾಗಿ ಇವರಲ್ಲಿ ಹಲವರು ಸಣ್ಣಪುಟ್ಟ ಕೆಲಸಗಳಿಗೆ ಸೇರಿ ಓದಿಗೆ ಅಂತ್ಯ ಹಾಡುವಂತಾಯಿತು. ಇನ್ನೊಂದು ಕಡೆ ರೋಗ ಹರಡುವ ಭೀತಿ ಹೊಸ ಬಗೆಯ ಹೊರಗಿಡುವಿಕೆ, ತಾರತಮ್ಯದ ಮೂಲಕ ಈಗಾಗಲೇ ಇರುವ ಭೇದಭಾವವನ್ನು ಬಲಪಡಿಸಿತು. ಈಗಾಗಲೇ ಇದ್ದ ಪೂರ್ವಾಗ್ರಹಗಳಿಗೆ ಬಲಕೊಡುವ ಬಗೆಯಲ್ಲಿ ಇದು ಬಡವರು, ಕಾರ್ಮಿಕರು, ಮಕ್ಕಳು, ಮಹಿಳೆಯರ ಬದುಕುಗಳನ್ನು ಛಿದ್ರಗೊಳಿಸಿತು. ಜೊತೆಗೆ, ಎಲ್ಲರೂ ಮನೆಯೊಳಗೇ ಇರುವಂತಾದಾಗ ಮನೆಯ ಸದಸ್ಯರು ವಿಚಿತ್ರ ಮಾನಸಿಕ ಒತ್ತಡಕ್ಕೊಳಗಾಗುವ ಸಂದರ್ಭ ಸೃಷ್ಟಿಯಾಯಿತು. ಬಹುಪಾಲು ಈ ಒತ್ತಡಕ್ಕೆ ಒಳಗಾಗಿರುವವರು ಹೆಣ್ಣುಮಕ್ಕಳು.
ಹೆಣ್ಣುಮಕ್ಕಳ ಕಾಲೇಜಿನಲ್ಲಿ ಕೆಲಸ ಮಾಡುವ ನನಗೆ ಕಳೆದ ಬಾರಿ ಲಾಕ್‌ಡೌನ್ ಮುಗಿದು ತರಗತಿ ಆರಂಭವಾದ ಬಳಿಕ ತರಗತಿ ಭಣಭಣ. ಕೆಲವರು ಮನೆಯಿಂದಲೇ ಆನ್‌ಲೈನ್ ತರಗತಿ ಕೇಳುವ ಆಯ್ಕೆ ಮಾಡಿಕೊಂಡಿದ್ದರೆ ಇನ್ನುಳಿದವರು ಎಲ್ಲಿ ಎಂದಾಗ ಅವರ “ಅವಳ ಮದುವೆ ಆಯ್ತು ಮೇಡಂ” ಎಂಬ ಮಾತು ತೀರಾ ಸಾಮಾನ್ಯ. ಕೆಲವರಿಗೆ ಮದುವೆಯಾಗಿದ್ದರೆ, ಇನ್ನು ಕೆಲವರು ನಿಶ್ಚಿತಾರ್ಥದ ಉಂಗುರ ಧರಿಸಿದ್ದರು. ಓದುವುದಕ್ಕೆ ಪೂರಕವಾದ ವಾತಾವರಣ ಇರದ ಕಾರಣಕ್ಕೆ ಕೆಲವು ಹೆಣ್ಣುಮಕ್ಕಳಿಗೆ ಇದು ತಕ್ಷಣಕ್ಕೆ ಒಂದು ಬಗೆಯ ರಮ್ಯಭಾವ ಮೂಡಿಸಿದ್ದೂ ಹೌದು. ಆದರೆ ಅವರ ಮುಂದಿನ ಬದುಕು ಅಂಥ ಆಶಾದಾಯಕವಾಗೇನೂ ಇಲ್ಲ ಎಂಬುದು ಯಾರಿಗಾದರೂ ಗೋಚರಿಸುವ ಸತ್ಯ. ಇನ್ನು ಕೆಲವರಿಗೆ ಅಸಹಾಯಕತೆ ಓದುವ ಹಂಬಲವನ್ನು ಸೋಲಿಸಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಕಾಣುವ ಈ ವ್ಯತ್ಯಾಸ ಸಾಮಾಜಿಕವಾದ ದೊಡ್ಡ ಸಮಸ್ಯೆಯತ್ತ ಬೆರಳು ಮಾಡುತ್ತದೆ.
ಕಳೆದ ದಶಕಕ್ಕೆ ಹೋಲಿಸಿದರೆ ಈ ದಶಕದಲ್ಲಿ ಬಾಲ್ಯವಿವಾಹ ಪ್ರಮಾಣ 10 ಮಿಲಿಯನ್ ಹೆಚ್ಚಾಗಬಹುದು ಎಂದು ಯುನಿಸೆಫ್ ಅಂದಾಜಿಸಿದೆ. ಜಗತ್ತಿನಲ್ಲಿ ನಡೆಯುವ ಬಾಲ್ಯವಿವಾಹಗಳಲ್ಲಿ ಮೂರನೇ ಒಂದರಷ್ಟು ಭಾರತದಲ್ಲಿ ನಡೆಯುತ್ತಿವೆ ಎಂಬುದು ಆತಂಕಕಾರಿ ಅಂಶವಾಗಿದೆ. ಚೈಲ್ಡ್ ಲೈನ್‌ಗೆ ಬರುವ ಕರೆಗಳಲ್ಲಿ ಮದುವೆಗೆ ಸಂಬಂಧಿಸಿ ಶೇಕಡಾ 17ರಷ್ಟು ಏರಿಕೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಜಗತ್ತಿನಾದ್ಯಂತ ಮತ್ತು ಭಾರತದಲ್ಲೂ ಬಾಲ್ಯವಿವಾಹವನ್ನು ಹೋಗಲಾಡಿಸುವ ಯತ್ನ ಭರದಿಂದ ಸಾಗಿತ್ತು. 2030ರ ಹೊತ್ತಿಗೆ ಬಾಲ್ಯವಿವಾಹ ನಿರ್ಮೂಲನೆ ಮಾಡುವ ಗುರಿಯೂ ಕಣ್ಣಮುಂದಿತ್ತು. ಆದರೆ ಕೋವಿಡ್‌ನಿಂದಾಗಿ ಇದುವರೆಗೆ ಲಿಂಗ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ನಡೆದ ಕೆಲಸಗಳಿಗೆ ದೊಡ್ಡ ಹಿನ್ನಡೆ ಉಂಟಾಗಿದೆ.
ಇದ್ದ ಕೆಲಸವೂ ಹೋಯ್ತು, ಮಗಳಿಗೆ ವರ ಬಂದಾಗ ಈಗ ಬಿಟ್ಟುಕೊಂಡರೆ ಮುಂದೆ ಹೇಗೋ ಎನುವ ಆತಂಕ ಒಂದೆಡೆ, ಕಾಲೇಜಿಗೆ ಕಳಿಸುವ ಸ್ಥಿತಿಯಲ್ಲಿಲ್ಲ, ಮದುವೆಯಾದರೂ ಮಾಡಿ ಜವಾಬ್ದಾರಿ ಕಳೆದುಕೊಳ್ಳೋಣ ಎಂಬ ಯೋಚನೆ ಇನ್ನೊಂದೆಡೆ. ಈಗಿರುವ ಆರ್ಥಿಕ ಸ್ಥಿತಿಯಲ್ಲಿ ಮದುವೆ ಕಡಿಮೆ ಖರ್ಚಿನಲ್ಲಿ ಮುಗಿಯುತ್ತದಲ್ಲ ಎಂಬ ಲೆಕ್ಕಾಚಾರ ಬೇರೆ. ಜೊತೆಗೆ, ಶಾಲೆಯಿಂದ ಡ್ರಾಪ್‌ಔಟ್ ಆದವರಲ್ಲಿ ಹೆಣ್ಣುಮಕ್ಕಳೇ ಹೆಚ್ಚು. ಆನ್‌ಲೈನ್ ಶಿಕ್ಷಣಕ್ಕೆ ಮೊಬೈಲ್ ಬೇಕು, ಇದು ಖರ್ಚಿನ ಬಾಬ್ತು. ಇಂಥವುಗಳಿಗೆ ಖರ್ಚು ಮಾಡುವುದರ ಜೊತೆಗೆ ಮದುವೆಗೆ ಬೇರೆ ಖರ್ಚು ಮಾಡಬೇಕಲ್ಲ ಎಂಬ ಚಿಂತೆಯಲ್ಲಿ, ಜೊತೆಗೆ ಮೊಬೈಲ್‌ನಿಂದ ಇವರು ಎಲ್ಲಿ ದಾರಿಬಿಟ್ಟು ಹೋಗುತ್ತಾರೋ ಎಂಬ ಭಯದಲ್ಲಿ ಮದುವೆ ಮಾಡಿ ಕೈತೊಳೆದುಕೊಂಡು ಬಿಡೋಣ ಎಂದೆಣಿಸಿ ಪೋಷಕರು ಲಾಕ್‌ಡೌನ್ ಅವಧಿಯಲ್ಲೇ ಧಾವಂತದಲ್ಲಿ ಮದುವೆ ಮಾಡಿಬಿಟ್ಟರು.

ಹಾಗೆಯೇ ಒಬ್ಬಳಿಗೆ ಮದುವೆ ಆದರೆ ಅಥವಾ ಒಬ್ಬಳು ತಾನು ಮೆಚ್ಚಿದವನ ಜೊತೆ ಹೋದರೆ ಸಾಕು, ಆ ಊರಿನ ಉಳಿದ ಹೆಣ್ಣುಮಕ್ಕಳನ್ನು ಆತುರದಿಂದ ವಿವಾಹಬಂಧನಕ್ಕೆ ತಳ್ಳುವುದೂ ಸಾಮಾನ್ಯ ವಿಚಾರ. ಸದ್ಯದ ಪರಿಸ್ಥಿತಿಯಿಂದ ಮನೆಯೊಳಗೆ ಉಂಟಾದ ಸಂಘರ್ಷಮಯ ವಾತಾವರಣ, ಹೇಗಾದರೂ ಇದರಿಂದ ಪಾರಾದರೆ ಸಾಕು ಎಂಬ ಭಾವವನ್ನು ಹೆಣ್ಣುಮಕ್ಕಳಲ್ಲಿ ಮೂಡಿಸುವುದು ಸಹಜ. ಈ ಕಾರಣದಿಂದ ಇದರಿಂದ ಬಚಾವಾಗಲು ಅವರು ಕ್ಷಣದ ಆಕರ್ಷಣೆಗೆ ಬಲಿಯಾಗಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿರುವ ಸಂದರ್ಭಗಳೂ ಇವೆ. ಇವರಲ್ಲಿ ಬಹುಪಾಲು ಹೆಣ್ಣುಮಕ್ಕಳ ವಯೋಮಾನ 18ಕ್ಕಿಂತ ಕಡಿಮೆ. ಒಂದು ವೇಳೆ 18 ಕಳೆದಿದ್ದರೂ ಅವರದು ಪ್ರಬುದ್ಧತೆ ಪಡೆದ ವಯಸ್ಸಂತೂ ಅಲ್ಲ, ಶಿಕ್ಷಣವೂ ಅರ್ಧದಲ್ಲೇ ಮೊಟಕುಗೊಂಡದ್ದೂ ನಿಜ. ಇದು ಎದ್ದು ಕಾಣುವ ಮಾನವ ಹಕ್ಕಿನ ಉಲ್ಲಂಘನೆ.
ಕಳೆದ ಮುಂಗಾರು ಲೋಕಸಭೆ ಅಧಿವೇಶನದಲ್ಲಿ ರಾಜ್ಯ ಸಭೆಯ ಸಂಸದ ಅಮನ್ ಪಟ್ನಾಯಕ್ ಅವರು ಕೋವಿಡ್ ಸಂದರ್ಭದಲ್ಲಿ ಬಾಲ್ಯವಿವಾಹ ಹೆಚ್ಚುತ್ತಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಮ್ಮ ಬಳಿ ಅಂಕಿಅಂಶಗಳಿಲ್ಲ ಎಂಬ ಉತ್ತರ ನೀಡಿತ್ತು. ಅದೇ ಪ್ರಶ್ನೆಯನ್ನು ಮಾಹಿತಿ ಹಕ್ಕಿನಡಿ ಕೇಳಿದಾಗ, 2019ನೇ ವರ್ಷಕ್ಕೆ ಹೋಲಿಸಿದರೆ ಲಾಕ್‌ಡೌನ್ ಅವಧಿಯಲ್ಲಿ ಬಾಲ್ಯವಿವಾಹದ ಪ್ರಮಾಣ ಶೇ.33ಕ್ಕಿಂತಲೂ ಹೆಚ್ಚಾಗಿರುವ ಅಂಶ ತಿಳಿದುಬಂತು. ಕೇವಲ ಆಗಸ್ಟ್ ತಿಂಗಳೊಂದರಲ್ಲೇ ಇದು ಶೇ.88ರಷ್ಟು ಹೆಚ್ಚಳ ಕಂಡಿದೆ. ಇದು ಸನ್ನಿವೇಶದ ಘೋರಚಿತ್ರಣವನ್ನು ನೀಡುತ್ತದೆ.
ಲಾಕ್‌ಡೌನ್ ಅವಧಿ ಈಗಾಗಲೇ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ತೀವ್ರತೆ ಹೆಚ್ಚಿಸುವ ಬಗೆಯಲ್ಲಿದೆ. ತಮಗೆ ಬೇಕಾದಂತೆ ತವರು ಮನೆಗೆ, ಬಂಧುಗಳು ಗೆಳತಿಯರ ಮನೆಗೆ ಹೋಗಲು ಅವಕಾಶವಿರದೇ ಹೊಸದಾಗಿ ಸೇರಿದ ಪತಿಯ ಮನೆಯೊಳಗೇ ಇರುವುದು ಅವರ ಮಾನಸಿಕ ಒತ್ತಡ ಹೆಚ್ಚಿಸುತ್ತದೆ. ಹಲವರು ಮದುವೆಯಾದ ಕೆಲವು ದಿನಗಳು, ತಿಂಗಳುಗಳೊಳಗೇ ಸಂಗಾತಿಗಳನ್ನು ಕಳೆದುಕೊಂಡು ಒಂಟಿಯಾಗಿ, ಅವರ ಭವಿಷ್ಯ ಕತ್ತಲಾಗಿಬಿಟ್ಟಿದೆ. ಸರಿಯಾದ ಶಿಕ್ಷಣವಿಲ್ಲದಿರುವುದು, ಬಡತನ ಇವು ಮುಂದಿನ ಹಲವು ಪೀಳಿಗೆಗಳ ಮೇಲೆ ಪರಿಣಾಮ ಬೀರುವಂತಹುದು. ಶಿಕ್ಷಣ, ಸ್ವಾಯತ್ತತೆ, ಆರೋಗ್ಯ, ಅಪೌಷ್ಟಿಕತೆ, ಸಂತಾನೋತ್ಪತ್ತಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು, ಕೌಟುಂಬಿಕ ದೌರ್ಜನ್ಯ ಮುಂತಾದವುಗಳಿಗೆ ಈ ಹೆಣ್ಣುಮಕ್ಕಳು ತುತ್ತಾಗುವಂತಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಿವೆ. ರಾಷ್ಟ್ರೀಯ ಮಹಿಳಾ ಆಯೋಗ, ಮಾರ್ಚ್15 ಮತ್ತು ಮೇ31ರ ನಡುವಣ ಅವಧಿಯಲ್ಲಿ 1,477 ದೂರುಗಳು ದಾಖಲಾಗಿರುವುದನ್ನು ತಿಳಿಸುತ್ತಾ ಏಪ್ರಿಲ್ ಒಂದು ತಿಂಗಳಲ್ಲೇ ಪ್ರಕರಣಗಳು ಎರಡೂವರೆ ಪಟ್ಟು ಹೆಚ್ಚಿವೆ ಎಂಬ ಆಘಾತಕಾರಿ ಸಂಗತಿಯನ್ನು ಹೊರಹಾಕಿದೆ. ಮಹಿಳೆಯರು ಕೆಲಸ ಮಾಡುವ ಅವಧಿ ಹೆಚ್ಚಿದೆ. ಹೊರಗಿನ ಸನ್ನಿವೇಶದಿಂದ ಉಂಟಾದ ಒತ್ತಡಕ್ಕೆ ಮಹಿಳೆಯರು ಬಲಿಪಶುಗಳಾಗಿದ್ದಾರೆ. ಅವರು ಅದನ್ನು ಹೊರಹಾಕುವ ಅವಕಾಶಗಳೂ ಇಲ್ಲದೆ ಉಸಿರುಗಟ್ಟುವ ವಾತಾವರಣದಲ್ಲಿ ಇವರು ಸಿಲುಕಿಕೊಂಡಿದ್ದಾರೆ. ಲೈಂಗಿಕ ಶೋಷಣೆ ಹೆಚ್ಚಾಗಿದೆ. ಸೂಕ್ತ ಸಂತಾನ ನಿಯಂತ್ರಣ ಕ್ರಮಗಳಿಗೆ ಅವಕಾಶ ದೊರೆಯದೇ ಗರ್ಭ ಧರಿಸುವ ಪ್ರಮಾಣ ಹೆಚ್ಚಾಗಿದೆ. ಇದಕ್ಕನುಗುಣವಾದ ಆಹಾರ, ವೈದ್ಯಕೀಯ ಸೌಲಭ್ಯಗಳ ಲಭ್ಯತೆ ಇಲ್ಲದೆ ಮಹಿಳೆಯರು, ಹುಟ್ಟುವ ಮಕ್ಕಳು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಸದ್ಯದ ಸಮಸ್ಯೆಗಳಿಗೆ ಕ್ಷಣಿಕ ಪರಿಹಾರವೆಂಬಂತೆ ಭಾಸವಾಗುವ ಇವು ಸಮಾಜದ ಮೇಲೆ ಬೀರುವ ಪರಿಣಾಮ ದೀರ್ಘಕಾಲ ಉಳಿಯುವಂಥದ್ದು. ಮಹಿಳಾ ಸಮಾನತೆ ಅಭಿವೃದ್ಧಿಯ ಸೂಚ್ಯಂಕದಲ್ಲಿ ಒಂದಾಗಿದ್ದು ಈ ದಿಕ್ಕಿನಲ್ಲಿ ನಮ್ಮ ನಿರ್ಲಕ್ಷ್ಯ ದೇಶದ ಒಟ್ಟು ಬೆಳವಣಿಗೆಯ ದೃಷ್ಟಿಯಿಂದ ಕೆಟ್ಟ ಪರಿಣಾಮ ಬೀರುತ್ತದೆ. ಮಹಿಳೆಯರನ್ನು ಗೌರವದಿಂದ, ಪೂಜ್ಯಭಾವನೆಯಿಂದ ನೋಡುತ್ತೇವೆ ಎಂಬ ಬಾಯಿಮಾತಿನ ಮಾತು ಎಷ್ಟೇ ಇದ್ದರೂ ಅವರ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಯತ್ತ ಗಮನ ಹರಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಏನೇನೂ ಸಾಲದು. ಕೊರೊನಾ ಕೇವಲ ಒಂದು ವೈರಾಣು, ಅದನ್ನು ದಮನಿಸುವ ಮಾರ್ಗಗಳನ್ನು ನಾವು ಕಂಡುಕೊಂಡೆವು. ಆದರೆ ಈ ಪೂರ್ವಾಗ್ರಹಗಳನ್ನು ದಾಟುವ ಹಾದಿ ಬಹಳ ಕಠಿಣವೆಂದೇ ತೋರುತ್ತದೆ.

ಡಾ. ಭಾರತೀದೇವಿ.ಪಿ
ಭಾರತೀದೇವಿ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿದ್ದು ಈ ಸದ್ಯ ಹಾಸನದಲ್ಲಿ ನೆಲೆಸಿದ್ದಾರೆ.


