ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಹೆಸರಿನಲ್ಲಿ ವ್ಯಕ್ತಿಯನ್ನು ಮೋಸಗೊಳಿಸಲು ಯತ್ನಿಸಿದ ಆರೋಪದ ಮೇಲೆ ಮೈಸೂರು ನಗರ ಪೊಲೀಸರು ನಕಲಿ ಬ್ಯಾಂಕ್ ಅಧಿಕಾರಿ, ಆರೋಪಿ ಅರುಣಕುಮಾರಿ ಎಂಬುವವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬ್ಯಾಂಕಿನಲ್ಲಿ 25 ಕೋಟಿ ರೂ.ಗಳ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ಹರ್ಷ್ ಮೆಲಾಂಟ ಎಂಬುವವರನ್ನು ಆರೋಪಿ ಅರುಣಕುಮಾರಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ತನ್ನನ್ನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ ಆಕೆ, ಮೆಲಂಟಾ ಅವರನ್ನು ಸಂಪರ್ಕಿಸಿ, ನಟ ದರ್ಶನ್‌ಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಒದಗಿಸಿದ್ದಿರ ಎಂದು ಆರೋಪಿಸಿ ಬ್ಲ್ಯಾಕ್ ಮೇಲ್ ಮಾಡಿದ್ದರು ಎನ್ನಲಾಗಿದೆ.
ವಿಷಯ ಹೊರಗೆ ಬಾರದಂತೆ ನೋಡಿಕೊಳ್ಳಲು ತನಗೆ 25 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಈ ಮಹಿಳೆ ನಕಲಿ ಎಂಬುದು ಹರ್ಷ ಅವರಿಗೆ ಗೊತ್ತಾಗಿ, ಅವರು ತಕ್ಷಣ ಜುಲೈ 3 ನೇ ತಾರೀಕು ಮೈಸೂರು ನಗರದ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ದೂರು ಆಧರಿಸಿ, ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ
ಇದೇ ಮಹಿಳೆ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಅವರಿಗೂ ಕರೆ ಮಾಡಿ, ಹರ್ಷ ಎಂಬುವರು ದರ್ಶನ್ ಅವರ ಆಸ್ತಿಯನ್ನು ಸಾಲಕ್ಕಾಗಿ ಬ್ಯಾಂಕಿಗೆ ಅಡ ಇಟ್ಟಿದ್ದಾರೆ ನಿಜವೇ ಎಂದು ಕೇಳಿದ್ದಾರೆ. ಇದರಿಂದ ಅನುಮಾನಗೊಂಡ ನಿರ್ಮಾಪಕ ಉಮಾಪತಿ ಅವರು ಕೂಡಲೇ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಜೂನ್ 17 ರಂದು ಅರುಣಕುಮಾರಿ ಅವರ ಮೇಲೆ ದೂರು ದಾಖಲಿಸಿದ್ದಾರೆ.
ಈ ನಿಟ್ಟಿನಲ್ಲಿ ನಟ ದರ್ಶನ್ ಅವರು ನರಸಿಂಹರಾಜ ಉಪವಿಭಾಗದ ಎಸಿಪಿ ಕಚೇರಿಗೆ ಭಾನುವಾರ ಭೇಟಿ ನೀಡಿದ್ದರು.
ಭಾನುವಾರ ನರಸಿಂಹರಾಜ ಉಪವಿಭಾಗದ ಎಸಿಪಿ ಕಚೇರಿಗೆ ಭೇಟಿ ನೀಡಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಯಾರೇ ನನ್ನ ಹೆಸರನ್ನು ದುರುಪಯೋಗ ಪಡಿಸಿಕೊಂಡರು ಅವರ ರೆಕ್ಕೆಯನ್ನಲ್ಲ, ತಲೆಯನ್ನೆ ತೆಗೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.
‘ನನಗೆ ಯಾರೂ ಬ್ಲಾಕ್ ಮೇಲ್ ಮಾಡಿಲ್ಲ, ಆದರೆ ನನ್ನ ಮೇಲೆ ಸುಮ್ಮನೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಅನಂತರ ಏನಾಗುತ್ತದೆ ಎಂಬುದನ್ನು ನಿಮಗೆ ಸಂಪೂರ್ಣ ವಿವರ ನೀಡುತ್ತೇನೆ’ ಎಂದು ದರ್ಶನ್ ಹೇಳಿದ್ದರು.
ಈ ಪ್ರಕರಣದ ರೂವಾರಿ ಆರೋಪಿ ಅರುಣಕುಮಾರಿ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲಿಗೆಳೆಯಬೇಕು. ಯಾಕೆ ಇಂತಹ ಕೆಲಸ ಮಾಡಿದ್ದಾರೆ ಎಂಬುದನ್ನು ಕಂಡು ಹಿಡಿಯಬೇಕು ಎಂದು ನಟ ದರ್ಶನ್ ಒತ್ತಾಯಿಸಿದ್ದಾರೆ.
ಇನ್ನು ಮೂಲಗಳ ಪ್ರಕಾರ ಮೈಸೂರು ಪೊಲೀಸರು ನಕಲಿ ಬ್ಯಾಂಕ್ ಅಧಿಕಾರಿ ಅರುಣಕುಮಾರಿ ಜೊತೆಗೆ, ಮಧುಕೇಶವ ಹಾಗೂ ನಂದೀಶ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಸಿನಿಮಾಟೋಗ್ರಾಫ್ ಕಾಯ್ದೆಯ ತಿದ್ದುಪಡಿ; ಸಿನಿಮಾ ತಯಾರಕರ ಮೇಲೆ ತೂಗಲಿರುವ ಹೊಸ ಕತ್ತಿ