Homeಮುಖಪುಟಸಿನಿಮಾಟೋಗ್ರಾಫ್ ಕಾಯ್ದೆಯ ತಿದ್ದುಪಡಿ; ಸಿನಿಮಾ ತಯಾರಕರ ಮೇಲೆ ತೂಗಲಿರುವ ಹೊಸ ಕತ್ತಿ

ಸಿನಿಮಾಟೋಗ್ರಾಫ್ ಕಾಯ್ದೆಯ ತಿದ್ದುಪಡಿ; ಸಿನಿಮಾ ತಯಾರಕರ ಮೇಲೆ ತೂಗಲಿರುವ ಹೊಸ ಕತ್ತಿ

- Advertisement -
- Advertisement -

“ಹಾಗಾದರೆ ನಾನೀಗ ದುಡ್ಡು ಹೂಡಿ ಬಿಡುಗಡೆ ಮಾಡುವ ಸಿನಿಮಾವು ಪ್ರದರ್ಶನ ಮಂದಿರದಲ್ಲಿ ಉಳಿಯುತ್ತದೆ ಎಂಬುದಕ್ಕೆ ಖಾತ್ರಿ ಕೊಡುವವರು ಯಾರು” ಎಂದು ಪ್ರಶ್ನೆ ಕೇಳಿದವರು ಮಹೇಶ್ ಮೆಹತಾ. ಮಹೇಶ್ ತಮಿಳು-ಮಲೆಯಾಳಿ ಚಿತ್ರಗಳ ನಿರ್ಮಾಪಕ ಹಾಗೂ ವಿತರಕರು. ಈ ಪ್ರಶ್ನೆ ಅವರು ಕೇಳಿದ್ದು ಸಿಐಐನ (ಸೆಂಟ್ರಲ್ ಕಾನ್ಫಿಡೆರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್) ಮಾಧ್ಯಮ ವಲಯದ ಸಭೆಯಲ್ಲಿ. ಈ ಪ್ರಶ್ನೆ ಬರುವವರೆಗೆ ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಸಿನಿಮಾಟೋಗ್ರಾಫ್ ಆಕ್ಟ್‌ಗೆ ಸಂಬಂಧಿಸಿದ ತಿದ್ದುಪಡಿ ಕುರಿತು ಮಾತಾಡುತ್ತಿದ್ದ ಎಲ್ಲರೂ ಕೆಲವು ನಿಮಿಷಗಳ ಕಾಲ ಮೌನವಾದರು. ಇಂತಹ ಪ್ರಶ್ನೆ ಎದುರಾಗಲು ಕಾರಣವಾಗಿರುವುದು, 1952ರ ಸಿನಿಮಾಟೋಗ್ರಾಫ್ ಕಾಯ್ದೆಯ ತಿದ್ದುಪಡಿಗಳನ್ನು ಮಾಡಿ, ಜನರ ಅಭಿಪ್ರಾಯ/ಭಿನ್ನಾಭಿಪ್ರಾಯ ಮಂಡಿಸಲು ಜುಲೈ 5ನೇಯ ತಾರೀಖನ್ನು ಗೊತ್ತುಪಡಿಸಿದ ಒಕ್ಕೂಟ ಸರ್ಕಾರದ ಆದೇಶ.

ಭಾರತದಲ್ಲಿ ಚಲಿಸುವ ಚಿತ್ರಗಳನ್ನು ನಿರ್ವಹಿಸಲು/ನಿಯಂತ್ರಿಸಲು 1952ರಲ್ಲಿಯೇ ಸಿನಿಮಾಟೋಗ್ರಾಫ್ ಆಕ್ಟ್ ಜಾರಿಗೆ ಬಂದಿತ್ತು. ಆ ಕಾಯಿದೆಯೂ, ವಸಾಹತುಶಾಹಿ ಸರ್ಕಾರ ಮಾಡಿದ್ದ ಕಾಯಿದೆಗಳಿಗೆ ಸಣ್ಣಪುಟ್ಟ ತಿದ್ದುಪಡಿ ಮಾಡಿ ಹೊಸ ಹೆಸರಲ್ಲಿ ಜಾರಿಗೆ ಬಂದಿದ್ದು. ಅದಾಗಿ ಅರವತ್ತು ವರ್ಷಗಳ ನಂತರ ಅಂದರೆ 2013ರಲ್ಲಿ ಮುಕುಂದ್ ಮುದ್ಗಲ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಸದರಿ ಕಾಯಿದೆಯನ್ನು ಕಾಲೋಚಿತಗೊಳಿಸಲು ಸಲಹೆಗಳನ್ನು ನೀಡಲು ಸೂಚಿಸಲಾಯಿತು. ನಂತರ 2016ರಲ್ಲಿ ಶ್ಯಾಮ್ ಬೆನಗಲ್ ಅವರ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಿ ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಸದರಿ ಸಮಿತಿಗಳು 2018ರಲ್ಲಿ ವರದಿಗಳನ್ನು ನೀಡಿದ್ದವಾದರೂ ಆ ವರದಿಯ ಬಗ್ಗೆ ಗಮನ ಹರಿಸದೆ ಸರ್ಕಾರಗಳು ಸುಮ್ಮನಿದ್ದವು. ಈಗ 2021ರಲ್ಲಿ ದಿಢೀರನೆ ಆ ವರದಿಯಲ್ಲಿನ ಕೆಲವು ಸಲಹೆಗಳನ್ನು ಸ್ವೀಕರಿಸಿ, ಮತ್ತಷ್ಟು ಹೊಸ ವಿಚಾರಗಳನ್ನು ಸೇರಿಸಿ ’ಸಿನಿಮಾಟೋಗ್ರಾಫ್ ಆಕ್ಟ್ 2021’ ಎಂಬ ತಿದ್ದುಪಡಿಯನ್ನು ಸಾರ್ವಜನಿಕರ ಮತ್ತು ಫಲಾನುಭವಿಗಳ ಸಲಹೆಗೆ ಎಂದು ಹೊರಡಿಸಲಾಗಿದೆ. ಅದಾಗಲೇ ಗೊತ್ತಾಗಿರುವಂತೆ ಮುಂಬರಲಿರುವ ಸಂಸತ್ತಿನ ಅಧಿವೇಶನದಲ್ಲಿ ಈ ಕಾಯಿದೆ ಜಾರಿಗೆ ಬರಲಿದೆ.

ಕಾಯಿದೆಯಲ್ಲಿ ಏನಿದೆ?

ಈ ತಿದ್ದುಪಡಿಯನ್ನು ಕುರಿತಂತೆ ಅದಾಗಲೇ ದೇಶಾದ್ಯಂತ ಎದ್ದಿರುವ ವಾದ, ವಿವಾದಗಳು ತಿಳಿದಿರುತ್ತೇವೆಯಾದರೂ, ಸ್ಥೂಲವಾಗಿ ತಿದ್ದುಪಡಿಗಳಲ್ಲಿನ ಕೆಲವು ಅಂಶಗಳನ್ನು ನೋಡೋಣ.

1. ಸಿನಿಮಾಟೋಗ್ರಾಫ್ ಕಾಯಿದೆ ಸೆಕ್ಷನ್ (6)ರ ಸೆಕ್ಷನ್ ಒಂದನ್ನು ಸಂಪೂರ್ಣವಾಗಿ ತೆಗೆದುಹಾಕುವುದು.

2. ಸೆಕ್ಷನ್ (6)ರ ಉಪವಿಭಾಗಕ್ಕೆ ಹೊಸ ವಿವರ ಸೇರಿಸಿ, ಕಾಯಿದೆಯ ಸೆಕ್ಷನ್ 58 (1)ರ ಉಲ್ಲಂಘನೆಯನ್ನು ತಡೆಯಲು ಸಿಬಿಎಫ್‌ಸಿಯು ನೀಡಿದ ಪ್ರಮಾಣಪತ್ರವನ್ನು ಹಿಂಪಡೆಯುವ ಅಧಿಕಾರವು ಸರ್ಕಾರಕ್ಕೆ ಇರುವಂತೆ ಮಾಡುವುದು ಅಥವಾ ಸಿಬಿಎಫ್‌ಸಿ ಅಧ್ಯಕ್ಷರ ಮೂಲಕ ಸದರಿ ಪ್ರಮಾಣೀಕರಣವನ್ನು ಮರುಪರಿಶೀಲಿಸಲು ಸೂಚಿಸುವುದು.

3. ಪೈರಸಿ ತಡೆಗಟ್ಟಲು ಕಾನೂನುಬಾಹಿರವಾಗಿ ಯಾವುದೇ ಚಿತ್ರದ ನಕಲು ಮಾಡುವುದನ್ನು ಅಪರಾಧ ಎಂದು ಗುರುತಿಸುವುದು ಮತ್ತು ಆ ಬಗೆಯ ನಕಲುಗಳನ್ನು ಹಂಚುವ, ಪ್ರಸಾರ ಮಾಡುವವರಿಗೆ ದಂಡ ವಿಧಿಸುವುದು.
ಮೇಲ್ನೋಟಕ್ಕೆ ಈ ತಿದ್ದುಪಡಿಗಳು ಅಡ್ಡಿ ಇಲ್ಲ ಎನಿಸಿದರೂ ಇದರೊಳಗಡೆ ಯಾವುದೇ ಬಿಡುಗಡೆ ಆದ ಸಿನಿಮಾದ ಬಗ್ಗೆ ಯಾವುದೇ ವ್ಯಕ್ತಿ/ಸಂಸ್ಥೆಯಿಂದ ದೂರು ಬಂದಲ್ಲಿ, ಅಂತಹ ಸಿನಿಮಾದ ಸಿಬಿಎಫ್‌ಸಿ ಪ್ರಮಾಣಪತ್ರವನ್ನು ಹಿಂಪಡೆವ ಅಥವಾ ಮರುಪರಿಶೀಲಿಸುವ ಅಧಿಕಾರವನ್ನು ಒಕ್ಕೂಟ ಸರ್ಕಾರ ಪಡೆಯಲಿದೆ. ಇದು ಅಪಾಯ. ಮೊದಲಿಗೆ ಸರ್ಕಾರವೇ ನೇಮಿಸಿರುವ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಎಂಬ ಸ್ವಾಯತ್ತ ಸಂಸ್ಥೆಯ ನೆತ್ತಿಯ ಮೇಲೆ ಸ್ವತಃ ಸರ್ಕಾರವೇ ಕೂರುವುದು ಒಂದು ವಿಷಯವಾದರೆ, ಸಿನಿಮಾ ಒಂದರ ಬಗ್ಗೆ ಯಾರದ್ದೇ ಕ್ಲುಲಕ ಭಿನ್ನಾಭಿಪ್ರಾಯ ಇದ್ದರೂ ಸರ್ಕಾರ ಆ ಸಿನಿಮಾಕ್ಕೆ ನೀಡಿದ ಸಾರ್ವಜನಿಕ ಪ್ರದರ್ಶನ ಪ್ರಮಾಣಪತ್ರವನ್ನು ಹಿಂಪಡೆಯುವ ಅಥವಾ ಮರುಪರಿಶೀಲಿಸುವ ಅಧಿಕಾರ ಪಡೆಯುತ್ತಿದೆ ಎಂಬುದು ನೇರವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒದಗಿದ ಹೊಸ ಆತಂಕವೇ ಆಗಿದೆ.

ಈ ಹಿಂದೆ ’ಪದ್ಮಾವತ್’ ತರಹದ ಚಿತ್ರಗಳನ್ನು ಕುರಿತು ಬಂದಂತಹ ಒಂದು ಗುಂಪಿನ ವಿರೋಧವನ್ನೇ ಗಮನಿಸಿ. ಆ ಸಿನಿಮಾವನ್ನು ಸ್ವತಃ ನೋಡದೆ ಸಿನಿಮಾ ಬಿಡುಗಡೆಗೆ ಅಡ್ಡಿ ಉಂಟುಮಾಡಲಾಗಿತ್ತು. ಆದರೆ ಆ ಸಿನಿಮಾದಲ್ಲಿ ಸದರಿ ವಿರೋಧಿಗಳು ತಿಳಿಸಿದ್ದ ಯಾವ ವಿವರಗಳೂ ಇರಲಿಲ್ಲ. ಇದರಿಂದಾಗಿ ಆ ಸಿನಿಮಾದ ವ್ಯಾಪಾರದಲ್ಲಿ ಅದೆಷ್ಟು ದೊಡ್ಡ ನಷ್ಟವಾಯಿತು ಎಂಬುದರ ಬಗ್ಗೆ ಈಗ ಸಾಕಷ್ಟು ವರದಿಯಾಗಿದೆ. ಇಲ್ಲಿ ಪ್ರದರ್ಶನ ಪ್ರಮಾಣ ಪಡೆದು ಸಿನಿಮಾ ಬಿಡುಗಡೆ ಮಾಡಲಾಗಿದೆ ಎಂಬ ರಕ್ಷಣೆಯಾದರೂ ಆ ಸಿನಿಮಾ ತಯಾರಕರಿಗೆ ಇತ್ತು. ಈಗ ಆ ರಕ್ಷಣೆಯ ನೆತ್ತಿಯ ಮೇಲೆ ಸ್ವತಃ ಸರ್ಕಾರವೇ ಬಂದು ಕೂರಲು ಹೊರಟಿದೆ. ಪ್ರಮಾಣಪತ್ರ ಹೊಂದಿರುವ ಸಿನಿಮಾ ಪ್ರದರ್ಶನ ಕಾಣುತ್ತಿರುವಾಗಲೇ ಸರ್ಕಾರ ಆ ಸಿನಿಮಾವನ್ನು ಹಿಂಪಡೆಯಬಹುದು ಎಂದಾದರೆ ಆಗ ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಷ್ಟೇ ಅಲ್ಲ ಜೊತೆಗೆ ಸಿನಿಮಾ ತಯಾರಕನಿಗೆ ಹೂಡಿದ ಹಣಕ್ಕೆ ಸಿಗುವ ರಕ್ಷಣೆಯಾದರೂ ಏನು ಎಂಬ ಪ್ರಶ್ನೆ ಬರುತ್ತದೆ.

ಕೋಟ್ಯಂತರ ರೂಪಾಯಿ ಹಣ ಹೂಡಿ, ಸಿನಿಮಾ ತಯಾರಿಸಿ, ವಿತರಕರು/ಪ್ರದರ್ಶಕರಿಂದ ಮುಂಗಡ ಹಣ ಪಡೆದು ಸಿನಿಮಾ ಬಿಡುಗಡೆ ಮಾಡುವ ತಯಾರಕನು ಈಗ ಸಿಬಿಎಫ್‌ಸಿಯ ಪ್ರಮಾಣಪತ್ರ ಸಿಕ್ಕಿದೊಡನೆ ಬಿಡುಗಡೆ ಮಾಡಬೇಕೋ ಅಥವಾ ಸಾರ್ವಜನಿಕರು ಯಾರೂ ದೂರು ಸಲ್ಲಿಸದಿರಲಿ ಎಂದು ಪ್ರಾರ್ಥನೆ ಮಾಡುತ್ತಾ ಕೂರಬೇಕೋ? ಇನ್ನೂ ಸೂಕ್ಷ್ಮವಾಗಿ ಗಮನಿಸಿ; ಕಳೆದ ಏಳು ವರ್ಷಗಳಲ್ಲಿ ಇಡೀ ದೇಶವೇ ಹಲವು ಬಣಗಳಾಗಿ ಒಡೆದಿದೆ. ಹೀಗಾಗಿ ಒಂದು ಬಣದವರು ತಯಾರಿಸಿದ ಸಿನಿಮಾ ಕುರಿತು ಮತ್ತೊಂದು ಬಣದವರು ವಿರೋಧ ಮಾಡುತ್ತಲೇ ಇರುತ್ತಾರೆ. ಇದರ ಜೊತೆಗೆ ಅಂತಹ ಭಿನ್ನಾಭಿಪ್ರಾಯ ಆಧರಿಸಿ ಸರ್ಕಾರವೂ ಸಹ ಬಿಡುಗಡೆ ಆದ ಸಿನಿಮಾ ಹಿಂಪಡೆಯುವ ಅಧಿಕಾರ ಪಡೆದರೆ ಏನಾಗಬಹುದು ಎಂದು ಊಹಿಸಲು ಭಾರಿ ಸೃಜನಶೀಲ ಕಲ್ಪನೆಯೇನೂ ಬೇಕಾಗಿಲ್ಲ. ಈ ಹಿಂದೆ ’ವಿಶ್ವರೂಪಂ’ ಸಿನಿಮಾಕ್ಕೆ ಬಂದ ವಿರೋಧಗಳು, ಈಚೆಗೆ ’ಪೊಗರು’ ಎಂಬ ಕೆಎಫ್‌ಐ ಸಿನಿಮಾಕ್ಕೆ ಒಂದು ಜಾತಿಯ ಜನ ವ್ಯಕ್ತಪಡಿಸಿದ ವಿರೋಧಗಳಿಂದ ಆಯಾ ಸಿನಿಮಾಗಳ ವ್ಯಾಪಾರಕ್ಕೆ ಆದ ಹಾನಿ ದೊಡ್ಡದು. ಪೊಗರು ಸಿನಿಮಾದವರಂತೂ ತಮ್ಮ ಸಿನಿಮಾವನ್ನು ಮರುಸಂಕಲಿಸಿ ಬಿಡುಗಡೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ನಿಲುವು ಮೂಲತಃ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹೊಡೆತವಾದರೂ ಅದಕ್ಕಿಂತ ದೊಡ್ಡ ಆಘಾತವಾಗುವುದು ಮೀಡಿಯಾ ಮತ್ತು ಮನರಂಜನೆಯ ಮಾಧ್ಯಮಗಳಿಗೆ. ಇಲ್ಲಿ ತಾರೆಯರನ್ನು ಹಾಕಿಕೊಂಡು ಕೋಟ್ಯಂತರ ಹಣ ಹೂಡಿ ಸಿನಿಮಾ ಅಥವಾ ಯಾವುದಾದರೂ ರಿಯಾಲಿಟಿ ಷೋ ತಯಾರಿಸಿದವರಿಗೆ, ಅದು ಪ್ರದರ್ಶನವಾಗತೊಡಗಿದ ಮೇಲೆ ಹೂಡಿದ ಹಣ ಸಂಪೂರ್ಣ ಬರುವುದೇ ಎಂಬ ಖಾತ್ರಿ ಇಲ್ಲ. ಇನ್ನು ಸರ್ಕಾರವು ಅದನ್ನು ಹಿಂಪಡೆಯುವಂತಾದರೆ ಆಗುವ ನಷ್ಟ ಎಂತಹದು ಎಂದು ಯೋಚಿಸಿ. ಕನ್ನಡದ ಒಬ್ಬ ಸ್ಟಾರ್ ನಟ ನಟಿಸಿರುವ ಸಿನಿಮಾ ಎಂದರೆ ಅದು ಬಿಡುಗಡೆಗೆ ಕೆಲವು ದಿನ ಮುಂಚಿತವಾಗಿಯಷ್ಟೇ ವ್ಯಾಪಾರಗಳು ನಿಕ್ಕಿಯಾಗಿ, ನಾನೂರರಿಂದ ಆರುನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತದೆ. ನಂತರ ಡಿಜಿಟಲ್ ವೇದಿಕೆ ಹಾಗೂ ಸ್ಯಾಟಲೈಟ್ ಟಿವಿ ವಾಹಿನಿಗಳ ಜೊತೆಗೆ ಒಪ್ಪಂದವಾಗಿ ಬಿಡುಗಡೆ ಆಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಸಿನಿಮಾ ಬಿಡುಗಡೆಯ ಒಂದೆರಡು ದಿನ ಮುಂಚಿತವಾಗಿ ಆಗುವಂತಹವು. ಈ ಕಾಯಿದೆ ಜಾರಿಯಾಗಿ, ಸರ್ಕಾರವೊಂದಕ್ಕೆ ಸಿನಿಮಾ ಪ್ರಮಾಣಪತ್ರ ವಾಪಸ್ ಪಡೆಯುವ ಅಧಿಕಾರ ಸಿಕ್ಕರೆ ಇಂತಹ ವ್ಯಾಪಾರಕ್ಕೆ ಆಗಬಹುದಾದ ಸಂಕಟ ಯೋಚಿಸಿ.

ಪ್ರಸಕ್ತ ಒಪ್ಪಂದ ಮಾಡಿಕೊಳ್ಳುವಾಗ ಶೇಕಡ ಐವತ್ತರಷ್ಟು ಹಣ ನೀಡುವ ವ್ಯಾಪಾರಿಗಳು, ಆಗ ಶೇಕಡ ಹತ್ತು ಹದಿನೈದರಷ್ಟು ಮಾತ್ರ ಮುಂಗಡ ನೀಡಬಹುದು. ಉಳಿದ ಹಣ ಅದೇ ವ್ಯಾಪಾರಿಗಳಿಂದ ಸಿನಿಮಾ ಬಿಡುಗಡೆಯ ನಂತರ ಪಡೆಯುವುದು ದೊಡ್ಡ ಸರ್ಕಸ್ಸು ಆಗಿಬಿಡಬಹುದು. ಕರಾರುಗಳಲ್ಲಿ ಈ ’ಹಿಂತೆಗೆತ’ ದ ವಿವರವನ್ನು ಸಹ ಸೇರಿಸಿಕೊಂಡು, ಅದಕ್ಕೆ ಸಿನಿಮಾ ನಿರ್ಮಾಪಕನೇ ಜವಾಬ್ದಾರಿ ಎಂದು ಷರಾ ಬರೆಯಬೇಕಾಗಬಹುದು. ಆಕಸ್ಮಿಕವಾಗಿ ಯಾವುದಾದರೂ ಸಿನಿಮಾ ತಯಾರಕ ಬಿಡುಗಡೆಗೆ ಮುನ್ನ ಶೇಕಡ ನೂರು ಹಣ ಪಡೆದಿದ್ದು, ಅಂತಹ ಸಿನಿಮಾಕ್ಕೆ ಈ ‘ಹಿಂತೆಗೆತ’ದ ಹೊಡೆತ ಬಿದ್ದರೆ ಆ ನಿರ್ಮಾಪಕನ ಮೇಲೆ ಬೀಳುವ ಹೊರೆ ಎಂತಹದು ಯೋಚಿಸಿ. ಇಂತಹ ಸ್ಥಿತಿ ಬಂದರೆ ಯಾವುದೇ ನಿರ್ಮಾಪಕನಾದರೂ ಸಿನಿಮಾ ಅಥವಾ ಇನ್ಯಾವುದೇ ಷೋ ಮಾಡಲು ಹಣ ಹೂಡಲು ಹಿಂಜರಿಯುವುದು ಸಹಜ. ಹಾಗಾಗಿ ಈ ಲೇಖನದ ಆರಂಭದಲ್ಲಿ ನಾನು ತಿಳಿಸಿದ ಮೆಹತಾ ಅವರ ಹೇಳಿಕೆ ಬಹುಮುಖ್ಯವಾದುದು.

ಪೈರಸಿ ಕಾಯಿದೆ ಅಗತ್ಯವಾಗಿದ್ದ ಆದರೆ ಹಲ್ಲುಗಳಿಲ್ಲದ ಕಾಯಿದೆ

ಇನ್ನು ಇದೇ ಕಾಯಿದೆಯಲ್ಲಿ ಇರುವ ಪೈರಸಿಯ ವಿಷಯ ಗಮನಿಸಿ. ಅಲ್ಲಿ ಪೈರಸಿ ಮಾಡುವವರಿಗೆ ಶಿಕ್ಷೆ, ದಂಡ ವಿಧಿಸಲಾಗಿದೆ. ಆದರೆ ಈಗ ಸಿನಿಮಾಗಳು ಅಥವಾ ಟಿವಿ ಸೀರೀಸ್‌ಗಳು ಯಾವುದೋ ಸಿನಿಮಾ ಮಂದಿರದಲ್ಲಿ ನಕಲಾಗುತ್ತಿಲ್ಲ. ಅದು ಯಾವುದೋ ಮನೆಯಲ್ಲಿ, ಯಾವುದೋ ಕಂಪ್ಯೂಟರಿನಲ್ಲಿ ಹಾಕಲಾಗುತ್ತವೆ. ಕ್ಲೌಡ್ ತಂತ್ರಜ್ಞಾನ ಬಳಸಿ ಸಿನಿಮಾಗಳನ್ನು ಪ್ರಸಾರ ಮಾಡುವ ವ್ಯವಸ್ಥೆ ಬಂದಿರುವಾಗ ಆ ಕ್ಲೌಡ್ ಎಂಬ ಮಾಹಿತಿಗಳ ಕಣಜಕ್ಕೆ ಖನ್ನ ಹಾಕುವವರು ಅತಿದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಟೆಲಿಗ್ರಾಮ್ ತರಹದ ಆಪ್‌ಗಳಲ್ಲಿ ಬಹುತೇಕ ಸಿನಿಮಾಗಳು ಮತ್ತು ಟಿವಿ ಸೀರೀಸ್‌ಗಳು ಬಿಡುಗಡೆಯಾದ ಮರುಕ್ಷಣವೇ ದೊರೆಯುತ್ತದೆ. ಇವುಗಳನ್ನು ತಡೆಯುವ ವಿವರ ಈ ಪೈರಸಿ ಕಾಯಿದೆಯಲ್ಲಿ ಸೇರಿಲ್ಲ. ಅದು ಸೇರದೆ ಈಗಿರುವಂತೆ ಕಾಯಿದೆ ಜಾರಿಗೆ ಬಂದರೆ ನಿಜವಾಗಿ ಕಳ್ಳತನ ಮಾಡಿದವನು ಯಾವುದೋ ದೇಶದಲ್ಲಿ ಆರಾಮಾಗಿ ಇರುತ್ತಾನೆ. ಅದನ್ನು ಹಂಚುವ ಪ್ರಯತ್ನ ಮಾಡಿದ ನಮ್ಮೂರಿನ ಹುಂಬ ಹುಡುಗರು ಜೈಲು ಸೇರುತ್ತಾರೆ. ’ಹಣ್ಣು ತಿಂದವ ತಪ್ಪಿಸಿಕೊಂಡ, ಸಿಪ್ಪೆ ತಿಂದವ ಸಿಕ್ಕಿಬಿದ್ದ’ ಎಂಬ ಗಾದೆ ಮಾತಿನಂತಾಗುತ್ತದೆ.

ಮತ್ತೆರಡು ಹೊಸ ಕಾಯಿದೆ, ಕಟ್ಟಳೆಗಳು

ಇದಲ್ಲದೆ ಈಗಿನ ಒಕ್ಕೂಟ ಸರ್ಕಾರವು ಅದಾಗಲೇ ’ಡಿಜಿಟಲ್ ಮೀಡಿಯಾ ನಿಯಂತ್ರಣ ಕಾಯಿದೆ’ ಎಂಬುದನ್ನು ಜಾರಿಗೆ ತಂದಿದೆ. ಜೊತೆಗೆ ಮೂಲದಲ್ಲಿ ತೆರಿಗೆ ಕಡಿತ ಮಾಡುವ (ಟಿಡಿಎಸ್) ಕಾನೂನಿಗೆ ಶೇಕಡ 2ರಷ್ಟು ಇದ್ದ ಮಿತಿಯನ್ನು ಶೇಕಡ 10ಕ್ಕೆ ಏರಿಸಿದೆ. ಅದರಿಂದಾಗುವ ಸಮಸ್ಯೆಗಳೇನು ಎಂಬುದನ್ನು ಸಹ ಈ ಲೇಖನದಲ್ಲಿ ಚರ್ಚಿಸಲು ಪ್ರಯತ್ನಿಸುವೆ.

ಡಿಜಿಟಲ್ ಮೀಡಿಯಾ ಎಂಬುದು ಕಳೆದ ಒಂದು ದಶಕದಿಂದ ಪರಿಚಿತವಾಗಿ ಈಗ ಹೆಚ್ಚು ಪ್ರಖರವಾಗಿ ಬಳಕೆಯಾಗುತ್ತಿರುವ ಮಾಧ್ಯಮ. ಬಹುತೇಕ ಇತರ ಪಾರಂಪರಿಕ ಮಾಧ್ಯಮಗಳು ಸರ್ಕಾರಿ ಕೃಪಾಪೋಷಿತ ಎಂಬಂತೆ ಕಾಣುತ್ತಿರುವ ಹೊತ್ತಲ್ಲಿ ಯಾವುದೇ ಸುದ್ದಿಯ ನಿಖರ ಮಾಹಿತಿ ಮತ್ತು ವಿಶ್ಲೇಷಣೆ ದೊರೆಯುತ್ತಾ ಇರುವುದು ಡಿಜಿಟಲ್ ಮಾಧ್ಯಮದಲ್ಲಿ ಮಾತ್ರ. ಆದರೆ ಈ ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸಲು ಒಕ್ಕೂಟ ಸರ್ಕಾರ ಹೊಸ ಕಾಯಿದೆ ತಂದಿದೆ. ದೇಶದ ಘನತೆಗೆ ಮತ್ತು ಏಕತೆಗೆ ಧಕ್ಕೆ ಬರುವ ಯಾವುದೇ ವಿವರ ಪ್ರಕಟಿಸುವ ಮಾಧ್ಯಮದವರನ್ನು ತಡೆಯುವ ಪರಮಾಧಿಕಾರ ಸರ್ಕಾರಕ್ಕೆ ದೊರಕಿದೆ. ಸಂಸತ್ತಿನಲ್ಲಿ ಆಗಲಿ, ಸಾರ್ವಾಜನಿಕ ವೇದಿಕೆಗಳಲ್ಲಿ ಆಗಲಿ ಚರ್ಚಿಸದೆ ಜಾರಿಗೆ ಬರುವ ಇಂತಹ ಕಾಯಿದೆಗಳು ಜನರಿಗೆ ಅಧಿಕೃತ ಮಾಹಿತಿ ಪಡೆಯಲು ಇರುವ ಎಲ್ಲಾ ಮಾರ್ಗಗಳನ್ನು ಮುಚ್ಚುವ ಪ್ರಯತ್ನವಾಗಿಯೇ ಕಾಣುತ್ತಿದೆ. ಇದೇ ಡಿಜಿಟಲ್ ಮೀಡಿಯಾ ನಿಯಂತ್ರಣ ಕಾಯಿದೆ ಬಳಸಿ ಒಟಿಟಿಗಳಲ್ಲಿ ಬರುವ ಸರಣಿಗಳನ್ನು, ಸಿನಿಮಾಗಳನ್ನು ಸಹ ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಪ್ರಯತ್ನ ಆಗುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಪ್ರಹಾರವಷ್ಟೇ ಅಲ್ಲ ಸಾರ್ವಜನಿಕರ ಮಾಹಿತಿ ಮತ್ತು ಮನರಂಜನಾ ಹಕ್ಕಿನ ಮೇಲೂ ನಿಯಂತ್ರಣ ಸಾಧಿಸುವ ಯತ್ನವಾಗಿದೆ.

ಇನ್ನೂ ಟಿಡಿಎಸ್ ಸಂಗ್ರಹ ಕುರಿತ ನಿಯಮಗಳಲ್ಲಿ ಆಗಿರುವ ಬದಲಾವಣೆ ಗಮನಿಸಿ. ಈವರೆಗೆ ಇದ್ದ ನಿಯಮದಂತೆ ಒಪ್ಪಂದ (ಕಾಂಟ್ರಾಕ್ಚುಯಲ್ ಆಬ್ಲಿಗೇಷನ್) ಕರಾರಿನ ಪ್ರಕಾರ ನಡೆಯುವ ಕೆಲಸಗಳಿಗೆ ಯಾವುದೇ ವ್ಯಕ್ತಿ/ಕಂಪೆನಿಯು ಶೇಕಡ 2ರಂತೆ ಟಿಡಿಎಸ್ ಮುರಿದುಕೊಳ್ಳುವ ವ್ಯವಸ್ಥೆ ಇತ್ತು. ಈಗ ಆ ಮಿತಿಯನ್ನು ಶೇಕಡ 10ಕ್ಕೆ ಏರಿಸಲಾಗಿದೆ. ಜೊತೆಗೆ ಮತ್ತೊಂದು ಕರಾರು ಸೇರಿಸಲಾಗಿದೆ, ಹಣ ಸ್ವೀಕರಿಸವ ವ್ಯಕ್ತಿಯು ಹಿಂದಿನ ಲೆಕ್ಕ ವರ್ಷದ ಆದಾಯ ತೆರಿಗೆ ಸಲ್ಲಿಕೆ ವಿವರ ನೀಡದೆ ಇದ್ದಲ್ಲಿ ಶೇಕಡ 20ರಂತೆ ಟಿಡಿಎಸ್ ಮುರಿದುಕೊಳ್ಳಲು ಸೂಚಿಸಲಾಗಿದೆ. ಇದರಿಂದ ಸಿನಿಮಾ ಮತ್ತು ಟೆಲಿವಿಷನ್ ವ್ಯಾಪಾರದಲ್ಲಿ ಆಗುವ ತೊಂದರೆಗಳು ಅಪಾರ. ಸಿನಿಮಾ ತಯಾರಿಕೆಯಲ್ಲಿ ಈವರೆಗೆ ಕ್ಯಾಮೆರಾ, ಇನ್ನಿತರ ಸಲಕರಣೆ/ಸಾಮಗ್ರಿಗಳನ್ನು ಒದಗಿಸುತ್ತಾ ಇದ್ದವರಿಗೆ ಸಿನಿಮಾ ತಯಾರಕ ಶೇಕಡ 2ರ ಮಿತಿಯಲ್ಲಿ ಟಿಡಿಎಸ್ ಮುರಿಯುವ ಬದಲಿಗೆ ಶೇಕಡ 10ರಲ್ಲಿ ಮುರಿದುಕೊಳ್ಳುವುದು ಮತ್ತು ಸಾಮಗ್ರಿ ನೀಡುವಾಗ ಹಿಂದಿನ ಲೆಕ್ಕ ವರ್ಷದ ಆದಾಯ ತೆರಿಗೆ ಸಲ್ಲಿಕೆ ವಿವರ ನೀಡದೆ ಇದ್ದಲ್ಲಿ ಶೇಕಡ 20ರಷ್ಟು ಟಿಡಿಎಸ್ ಮುರಿದುಕೊಳ್ಳುವುದು ಆರಂಭವಾಗುತ್ತದೆ.

ಇದು ಸಿನಿಮಾ ತಯಾರಿಕೆ ಮಾಡಲು ಹೊರಟ ನಿರ್ಮಾಪಕನಿಗೆ ಹೊಸ ತಲೆನೋವೇ ಸರಿ. ಆತ ಹಣ ಕೊಡುವ ಪ್ರತಿಯೊಬ್ಬರ ಬಳಿ ಹಿಂದಿನ ಲೆಕ್ಕ ವರ್ಷದ ಆದಾಯ ತೆರಿಗೆ ಸಲ್ಲಿಕೆ ವಿವರ ಕೊಡಿ ಎನ್ನಬೇಕು. ಅದನ್ನವರು ಕೊಟ್ಟರೆ ಸರಿ. ಇಲ್ಲವಾದರೆ ಶೇಕಡ 20ರ ತೆರಿಗೆ ಮುರಿದುಕೊಂಡದ್ದಕ್ಕೆ ಆ ಹಣ ಪಡೆಯುವವರ ಜೊತೆಗೆ ಆಗುವ ವಾಗ್ವಾದಕ್ಕೆ ಸಿದ್ಧವಾಗಬೇಕು. ಇನ್ನು ಕ್ಯಾಮೆರಾ, ಮುಂತಾದ ಸಿನಿಮಾ ತಯಾರಿಕೆಗೆ ಬೇಕಾದ ಯಂತ್ರಗಳನ್ನು ಕೊಂಡು ಬಾಡಿಗೆಗೆ ನೀಡುವವನಿಗೆ, ಹಾಕಿದ ಬಂಡವಾಳ ಹಿಂದಿರುಗುವುದು ಎಷ್ಟೋ ವರ್ಷಗಳಾದೀತು. ಈಗ ಆ ಹಣ ಸಂಗ್ರಹಕ್ಕೆ ಈ ಟಿಡಿಎಸ್ ಎಂಬುದು ಶೇಕಡ 10 ಅಥವಾ 20ರಂತೆ ಕಡಿತವಾದರೆ ಆ ವ್ಯಾಪಾರಿಯು ಹೂಡಿದ ಹಣ ಹಿಂಪಡೆಯುವುದಕ್ಕೆ ಮತ್ತಷ್ಟು ವರ್ಷಗಳು ಹೆಚ್ಚಾಗುತ್ತವೆ ಅಷ್ಟೇ. ಇನ್ನು ಟೆಲಿವಿಷನ್ ಲೋಕದಲ್ಲಿ ಸಹ ಕಲಾವಿದರಿಗೆ ಟಿಡಿಎಸ್ ಕಡಿತ ಹೆಚ್ಚಿನ ಸಮಸ್ಯೆಯನ್ನು ಒಡ್ಡಲಿದೆ. ಇನ್ನು ಟೆಲಿವಿಷನ್ ವಾಹಿನಿಯವರು ಧಾರಾವಾಹಿಗಳ ನಿರ್ಮಾಪಕರಿಗೆ (ರಾಯಲ್ಟಿ ಕಾರ್ಯಕ್ರಮ ಮಾಡುವವರಿಗೆ) ಈಗ ಟಿಡಿಎಸ್ ಎಂದು ಶೇಕಡ 2ರಷ್ಟು ಹಣ ಕಡಿತಗೊಳಿಸಿ ಕೊಡುತ್ತಾ ಇದ್ದಾರೆ. ಅದೂ ಸಹ ಶೇಕಡ 10ಕ್ಕೆ ಏರುತ್ತದೆ. ಇವೆಲ್ಲದರಿಂದ ವರ್ಕಿಂಗ್ ಕ್ಯಾಪಿಟಲ್ ಹೆಚ್ಚಾಗುತ್ತಾ ಸಾಗುತ್ತದೆ. ಅಂತಿಮವಾಗಿ ಆ ಟೆಲಿವಿಷನ್ ಕಾರ್ಯಕ್ರಮ ಮಾಡುವ ವ್ಯಕ್ತಿ/ಕಂಪೆನಿಯ ಹೂಡಿಕೆ ಮತ್ತು ಆದಾಯಗಳ ಅಂತರ ಹೆಚ್ಚಾದಂತೆ ಮುಳುಗುವ ಹಡಗಾಗುತ್ತದೆ.

ಒಟ್ಟಾರೆಯಾಗಿ ಹೀಗೆನ್ನಬಹುದು. ಆಡಳಿತದ ಚುಕ್ಕಾಣಿ ಹಿಡಿಯುವಾಗ ’ಲೆಸ್ ಗವರ್ನಮೆಂಟ್, ಮೋರ್ ಗವರ್ನೆನ್ಸ್’ ಎಂದ ಘೋಷಣೆ ಮಾಡಿದ ಸರ್ಕಾರವು ಅತಿ ಹೆಚ್ಚು ಕಾಯಿದೆಗಳನ್ನು ತಂದೊಡ್ಡುತ್ತಾ ಅತಿಹೆಚ್ಚು ಸರ್ಕಾರಿ ನಿಯಂತ್ರಣವನ್ನು ಹೇರುತ್ತಿದೆ. ಇದರಿಂದಾಗಿ ಈ ದೇಶದ ಬಹುಮುಖ್ಯ ಉದ್ಯಮಗಳಲ್ಲಿ ಒಂದಾದ ಮಾಧ್ಯಮ ಮತ್ತು ಮನರಂಜನಾ ಉದ್ಯಮಗಳು ದೊಡ್ಡ ಸಂಕಟಕ್ಕೆ ಒಳಗಾಗಲಿವೆ ಅಥವಾ ಕಳೆದೆರಡು ದಶಕದಿಂದ ಕಡಿಮೆ ಆಗಿದ್ದ ಮನರಂಜನಾ ಮಾಧ್ಯಮದಲ್ಲಿನ ಕಾಳಧನ ವ್ಯವಹಾರ ದುಪ್ಪಟ್ಟು ಅಥವಾ ಮುಪ್ಪಟ್ಟು ಹೆಚ್ಚಾಗಲಿದೆ. ಇದರ ಜೊತೆಗೆ ಸಿನಿಮಾ ತಯಾರಕರ ಮೇಲೆ ’ಸರ್ಕಾರದ ಹಿಂತೆಗೆತ’ ಎಂಬ ತೂಗುಕತ್ತಿಯು ಸದಾ ತೂಗಲಿದೆ.

ಬಿ. ಸುರೇಶ
ಸುರೇಶ ಸಾರ್ವಜನಿಕ ಉದ್ದಿಮೆಯ ನೌಕರಿ ಬಿಟ್ಟು ಚಿತ್ರರಂಗ ಆರಿಸಿಕೊಂಡಿದ್ದು ಆಕಸ್ಮಿಕವಲ್ಲ. ಅವರ ಹೃದಯ, ಮನಸ್ಸು ಚಿಕ್ಕಂದಿನಿಂದಲೂ ರಂಗಭೂಮಿ ಮತ್ತು ಸಿನೆಮಾದ ಮೇಲೆಯೇ ನೆಟ್ಟಿತ್ತು. ನಟ, ನಿರ್ದೇಶಕ, ನಿರ್ಮಾಪಕರಾಗಿ ಬಹುಪಾತ್ರಗಳನ್ನು ನಿರ್ವಹಿಸುತ್ತಲೇ, ಪ್ರತಿನಿತ್ಯ ಸಮಾಜದ ಬದಲಾವಣೆಯ ಜೀವಪರವಾದ ನೂರೆಂಟು ಸಂಗತಿಗಳಲ್ಲಿ ತನ್ನ ಪಾತ್ರವನ್ನೂ ಹುಡುಕಿಕೊಳ್ಳುತ್ತಿರುತ್ತಾರೆ.


ಇದನ್ನೂ ಓದಿ: ಸಿನಿಮಾಟೋಗ್ರಾಫ್ ಆಕ್ಟ್‌ಗೆ ಸ್ಟಾಲಿನ್ ವಿರೋಧ: ನಿರ್ಧಾರ ಹಿಂಪಡೆಯುವಂತೆ ಒಕ್ಕೂಟ ಸಚಿವರಿಗೆ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮಾನ್ಯ ಬಿ.ಸುರೇಶ ಅವರೇ,
    ನಿಮ್ಮ ಬಗ್ಗೆ ನನಗೆ ಅಪಾರ ಗೌರವವಿದೆ.
    ಆದರೆ, ಪೊಗರು ಚಿತ್ರದ ಮೂಲ ಆವೃತ್ತಿ ಯನ್ನು ನೋಡಿದ್ದೀರಾ?
    ಸಿನಿಮಾ ಕೇವಲ ಹೂಡಿಕೆಯ ಮಾಧ್ಯಮವೇ? ಇಲ್ಲ, ನಮ್ಮ ಸಂಸ್ಕೃತಿಯ ದ್ಯೋತಕವೇ? ವಿಚಾರ ಮಾಡಿ.

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...