ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ನಡೆಸಿ ಗೊತ್ತೆ ಹೊರತು, ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಲು ಗೊತ್ತಿಲ್ಲ. ಆದರೆ ಬಿಜೆಪಿ ಪಕ್ಷವು ಆಡಳಿತಕ್ಕಿಂತ ವಿರೋಧ ಪಕ್ಷದಲ್ಲಿದ್ದರೆ ಚೆನ್ನಾಗಿ ಕೆಲಸ ಮಾಡುತ್ತದೆ ಎಂಬ ಮಾತು ಹಲವಾರು ಬಾರಿ ಕೇಳಿಬಂದಿದೆ. ಒಂದು ಮಟ್ಟಿಗೆ ಇದು ನಿಜ ಕೂಡ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿರಲಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಇರಲಿ ಬಿಜೆಪಿ ಬೃಹತ್ ಹೋರಾಟಗಳನ್ನು ನಡೆಸಿದೆ. ಆಡಳಿತ ಪಕ್ಷದ ಹಲವಾರು ಹಗರಣಗಳನ್ನು ಬಯಲಿಗೆಳೆದಿದ್ದು, ಹಲವಾರು ಭ್ರಷ್ಟಾಚಾರ ಆರೋಪ ಹೊತ್ತ ರಾಜಕಾರಣಿಗಳು ಕೆಳಗಿಳಿಯುವಂತೆ ಮಾಡಿದೆ. ಅವರ ವಿರುದ್ಧ ತೀವ್ರತರದ ಟೀಕೆಗಳನ್ನು ಮಾಡಿದೆ. ಆದರೆ ವಿಪರ್ಯಾಸವೆಂದರೆ ಯಾರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿತ್ತೊ, ಯಾರನ್ನು ಭ್ರಷ್ಟರು ಎಂದು ಕರೆದಿತ್ತೊ ಅಂತವರನ್ನೆ ಕೆಲ ವರ್ಷದ ನಂತರ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದೆ. ಈ ವಿರೋಧಭಾಸಕ್ಕೆ ಸದ್ಯದ ಉದಾಹರಣೆ ಮೊನ್ನೆ ಮೋದಿ ಸಂಪುಟ ಸೇರಿದ ನಾರಾಯಣ ರಾಣೆಯವರಾಗಿದ್ದಾರೆ.
ಬಿಜೆಪಿ ಪಕ್ಷವನ್ನು ವಾಷಿಂಗ್ ಮೆಷಿನ್ ಪಕ್ಷ ಎಂದು ಯುವ ಹೋರಾಟಗಾರ ಕನ್ಹಯ್ಯ ಕುಮಾರ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಇತರ ಪಕ್ಷಗಳಲ್ಲಿರುವ ಭ್ರಷ್ಟಾಚಾರಿಗಳು, ಕ್ರಿಮಿನಲ್‌ಗಳನ್ನು ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸುತ್ತದೆ. ಆದರೆ ಅವರು ಬಿಜೆಪಿ ಸೇರಿದರೆ ಸ್ವಚ್ಛವಾಗಿಬಿಡುತ್ತಾರೆ. ಅಂದರೆ ಬಿಜೆಪಿ ವಾಷಿಂಗ್ ಮೆಷಿನ್ ಅಲ್ಲವೇ ಎಂದು ವ್ಯಂಗ್ಯವಾಗಿದ್ದರು. ಇದು ವ್ಯಂಗ್ಯ ಮಾತ್ರವೇ? ಬನ್ನಿ ನೋಡೋಣ.

ಭಾರತದಲ್ಲಿ ಪಕ್ಷಾಂತರ ಸಹಜವಾಗಿದೆ. ನೂರಾರು ರಾಜಕಾರಣಿಗಳು ಬೇರೆ ಪಕ್ಷಗಳಲ್ಲಿದ್ದು ಸಾಕಷ್ಟು ಆರೋಪಗಳನ್ನು ಎದುರಿಸಿದ್ದಾರೆ. ಆಗ ಅವರನ್ನು ಬಿಜೆಪಿ ತೀಕ್ಷ್ಣವಾಗಿ ಟೀಕಿಸಿದೆ. ಆದರೆ ಕೆಲ ಸಮಯದ ನಂತರ ಆ ಭ್ರಷ್ಟಾಚಾರಿಗಳು ಬಿಜೆಪಿ ಸೇರಿದ್ದಾರೆ. ಅದರಲ್ಲಿ ಕೆಲವರು ಬಿಜೆಪಿ ಪದಾಧಿಕಾರಿಗಳಾದರೆ ಇನ್ನು ಕೆಲವರು ಮಂತ್ರಿಗಳಾಗಿದ್ದಾರೆ, ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅಂತವರ ಪಟ್ಟಿ ಇಲ್ಲಿದೆ.
ನಾರಾಯಣ ರಾಣೆ
ಇವರು ಶಿವಸೇನೆಯಿಂದ ರಾಜಕೀಯ ಆರಂಭಿಸಿ ಕಾಂಗ್ರೆಸ್ ಪಕ್ಷದಿಂದ ಮಹಾರಾಷ್ಟ್ರದ ಸಿಎಂ ಆಗಿದ್ದವರು. ನೂರಾರು ಕೋಟಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧಿಕಾರಕ್ಕೆ ಬಂದರೆ ಅವರನ್ನು ಜೈಲಿಗೆ ಕಳಿಸುವುದಾಗಿ 2014 ರಲ್ಲಿ ಘೋಷಿಸಿದ್ದರು. ಬಿಜೆಪಿ ಸೇರಿದ ನಾರಾಯಣ ರಾಣೆಯವರಿಗೆ ಮೊನ್ನೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಂಎಸ್‌ಎಂಇ ಸಚಿವ ಸ್ಥಾನ ನೀಡಲಾಗಿದೆ!

ಬಿ.ಎಸ್ ಯಡಿಯೂರಪ್ಪ
ಬಿಜೆಪಿಯ ಉನ್ನತ ನಾಯಕರಾಗಿದ್ದ ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2011ರಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಸೇರಿದರು. ಕೆಲ ಆರೋಪಗಳಿಂದ ಹೊರಬಂದ ಅವರು ಬಿಜೆಪಿ ವಿರುದ್ಧ ಸಿಡಿದೆದ್ದು 2012ರಲ್ಲಿ ಕೆಜೆಪಿ ಎಂಬ ಪಕ್ಷ ಸ್ಥಾಪಿಸಿದರು. ಆಗ ಬಿಜೆಪಿ ಅವರ ವಿರುದ್ಧ ಭಾರೀ ಆರೋಪ ಮಾಡಿತ್ತು. ಆದರೆ 2014 ರಲ್ಲಿ ಅವರು ತಮ್ಮ ಪಕ್ಷವನ್ನು ಬಿಜೆಪಿಯೊಳಗೆ ವಿಲೀನಗೊಳಿಸಿದರು. ಸದ್ಯ ಬಿಜೆಪಿಯಿಂದ ಅವರು ಕರ್ನಾಟಕದ ಪ್ರಸ್ತುತ ಸಿಎಂ ಆಗಿದ್ದಾರೆ.
ಸುವೇಂಧು ಅಧಿಕಾರಿ
2016 ರಲ್ಲಿ ಪಶ್ಚಿಮ ಬಂಗಾಳದ ನಾರದ ನ್ಯೂಸ್‌ನ ಸಿಇಒ, ಪತ್ರಕರ್ತ ಮ್ಯಾಥ್ಯೂ ಸ್ಯಾಮುಯೆಲ್ಸ್ ನಡೆಸಿದ ಸ್ಟಿಂಗ್ ಕಾರ್ಯಾಚರಣೆಯ ವಿಡಿಯೋವನ್ನು ಬಿಜೆಪಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿತ್ತು. ಇದರಲ್ಲಿ, ಪತ್ರಕರ್ತ ಸ್ಯಾಮ್ಯುಯೆಲ್ಸ್ ತನ್ನನ್ನು ಉದ್ಯಮಿ ಎಂದು ಬಿಂಬಿಸಿಕೊಂಡು, 11 ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡರಿಗೆ ಹಣವನ್ನು ನೀಡುವುದನ್ನು ಸೆರೆ ಹಿಡಿಯಲಾಗಿತ್ತು. ಅದರಲ್ಲಿ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್ ಪ್ರಮುಖರು. ಇದು ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಆದರೆ 2017ರಲ್ಲಿ ಮುಕುಲ್ ರಾಯ್ ಬಿಜೆಪಿ ಸೇರಿದರೆ, 2020 ಸುವೇಂದು ಅಧಿಕಾರಿ ಬಿಜೆಪಿ ಸೇರಿದರು. ಸದ್ಯ ಸುವೆಂಧು ಅವರು ಬಂಗಾಳದ ವಿರೋಧ ಪಕ್ಷದ ನಾಯಕರಾಗಿದ್ದಾರೆ.

ಇದನ್ನೂ ಓದಿ: ಲಂಚ ಪಡೆದು ಸ್ಟಿಂಗ್ ಆಪರೇಷನ್‌ನಲ್ಲಿ ಸಿಕ್ಕಿಬಿದ್ದವರು ಬಿಜೆಪಿ ಸೇರ್ಪಡೆ: ಧೃವ್ ರಾಠೀ ಟ್ವೀಟ್ ವೈರಲ್
ಮುಕುಲ್ ರಾಯ್
ಶಾರದ ಚಿಟ್ ಫಂಡ್ ಹಗರಣದಲ್ಲಿ ಬಂಗಾಳದ ಟಿಎಂಸಿ ನಾಯಕ ಮುಕುಲ್ ರಾಯ್ ಹೆಸರು ಕೇಳಿಬಂದಿತ್ತು. ನಂತರ ಅವರು 2017ರಲ್ಲಿ ಬಿಜೆಪಿ ಸೇರಿ ಆರೋಪ ಮುಕ್ತರಾದರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರು ಆದರು. ಪಕ್ಷದಲ್ಲಿ ತಮಗೆ ಮಾನ್ಯತೆಯಿಲ್ಲ ಎಂದು ಆರೋಪಿಸಿ 2021ರಲ್ಲಿ ಅವರು ಮತ್ತೆ ಟಿಎಂಸಿಗೆ ಮರಳಿದ್ದಾರೆ.
ನರೇಶ್ ಅಗರ್‌ವಾಲ್
ನರೇಶ್ ಅಗರ್‌ವಾಲ್ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡರು. ಅದಕ್ಕೂ ಮುನ್ನ ಅವರು ಕಾಂಗ್ರೆಸ್ ಮತ್ತು ಬಿಎಸ್‌ಪಿಯಲ್ಲಿದ್ದವರು. ಇವರ ವಿರುದ್ಧ ಹಲವಾರು ಕ್ರಿಮಿನಲ್ ಆರೋಪಗಳಿದ್ದವು. ಮಹಿಳೆಯರು ಕುರಿತು ತುಚ್ಛವಾಗಿ ಮಾತನಾಡಿದ್ದರು. ಈ ಕಾರಣಕ್ಕೆ ಬಿಜೆಪಿ ಇವರನ್ನು ವಿರೋಧಿಸುತ್ತಿತ್ತು. ಆದರೆ 2018 ರಲ್ಲಿ ಸಮಾಜವಾದಿ ಪಕ್ಷ ರಾಜ್ಯಸಭೆಗೆ ಇವರಿಗೆ ಟಿಕೆಟ್ ನಿರಾಕರಿಸಿದ ತಕ್ಷಣ ಅವರು ಬಿಜೆಪಿ ಸೇರಿದರು.


ಮೊನಿರುಲ್ ಇಸ್ಲಾಂ
ಟಿಎಂಸಿಯ ಶಾಸಕ ಮೊನಿರುಲ್ ಇಸ್ಲಾಂ ಮೂರು ಕೊಲೆಯ ಆರೋಪಿ.. ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 2019 ಜೂನ್ 05 ರಂದು ಬಿಜೆಪಿ ಸೇರಿದರು.
ಗೌತಮ್ ಗಂಭೀರ್
ದೆಹಲಿಯ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿ ಶುರುವಾಗಬೇಕಿದ್ದ ರುದ್ರಾ ಬಿಲ್ಡ್‌ವೆಲ್ ಅಪಾರ್ಟ್ ಮೆಂಟ್ ನಲ್ಲಿ ಪ್ಲ್ಯಾಟ್ ಖರೀದಿಸಲು ಅನೇಕರು ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ ಕಟ್ಟಡ ನಿರ್ಮಾಣ ಕೆಲಸ ಇನ್ನೂ ಪ್ರಾರಂಭವಾಗಿಲ್ಲ ಎಂದು ಹೂಡಿಕೆದಾರರು 2016ರಲ್ಲಿ ದೂರು ಸಲ್ಲಿಸಿದ್ದರು. ಹೂಡಿಕೆದಾರರನ್ನು ವಂಚಿಸುವ ಸಲುವಾಗಿಯೇ ಈ ಪ್ರಾಜೆಕ್ಟನ್ನು ಆರಂಭಿಸಲಾಗಿತ್ತು ಎಂಬ ಆರೋಪವಿತ್ತು. ಮೋಸ ಮತ್ತು ಪಿತೂರಿ ಆರೋಪವನ್ನು ಕಂಪನಿಯ ನಿರ್ದೇಶಕ ಮತ್ತು ಬ್ರಾಂಡ್ ಅಂಬಾಸಿಡರ್ ಆಗಿದ್ದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮೇಲೆ ಹೊರಿಸಲಾಗಿತ್ತು. ಆಗ 2019ರಲ್ಲಿ ಅವರು ಬಿಜೆಪಿ ಸೇರಿ ಆರೋಪ ಮುಕ್ತರಾದರು. ಅದೇ ವರ್ಷ ಸಂಸದರೂ ಆದರು.

ಅನಿಲ್ ಶರ್ಮಾ
ಹಿಮಾಚಲ ಪ್ರದೇಶದ ಅನಿಲ್ ಶರ್ಮಾ ಕಾಂಗ್ರೆಸ್ ಮತ್ತು ಹಿಮಾಚಲ್ ವಿಕಾಸ್ ಕಾಂಗ್ರೆಸ್ ಪಕ್ಷದಲ್ಲಿದ್ದರು. ಟಿಲಿಕಾಂ ಹಗರಣದಲ್ಲಿ ಸಿಲುಕಿಕೊಂಡ ನಂತರ ಕಾಂಗ್ರೆಸ್ ಅವರನ್ನು ಉಚ್ಛಾಟಿಸಿತು. 2017ರಲ್ಲಿ ಬಿಜೆಪಿ ಸೇರಿ ಸಮಸ್ಯೆ ಬಗೆಹರಿಸಿಕೊಂಡರು ಮತ್ತು ಸಚಿವರು ಆಗಿದ್ದರು.
ಇಟಾಲಾ ರಾಜೇಂದರ್
ತೆಲಂಗಾಣದ ಟಿಆರ್‌ಎಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದು ಹಣಕಾಸು ಮತ್ತು ಆರೋಗ್ಯ ಇಲಾಖೆಯ ಸಚಿವರಾಗಿದ್ದರು. ಇವರ ವಿರುದ್ಧ ಭೂಕಬಳಿಕೆ ಆರೋಪ ಬಂದಾಗ ಟಿಆರ್‌ಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ.
ನಾಲ್ವರು ಟಿಡಿಪಿ ಸಂಸದರು ಬಿಜೆಪಿಗೆ
2018ರ ನವೆಂಬರ್‌ನಲ್ಲಿ ಬಿಜೆಪಿ ಸಂಸದ ಮತ್ತು ವಕ್ತಾರ ಜಿ.ವಿ.ಎಲ್ ನರಸಿಂಹ ರಾವ್ ಅವರು ಟಿಡಿಪಿ ರಾಜ್ಯಸಭಾ ಸಂಸದರಾದ ಸಿ ಎಂ ರಮೇಶ್ ಮತ್ತು ವೈ ಎಸ್ ಚೌದರಿ ಅವರನ್ನು “ಆಂಧ್ರ ಮಲ್ಯಾಸ್” ಎಂದು ಕರೆದು ರಾಜ್ಯಸಭಾ ನೈತಿಕ ಸಮಿತಿಗೆ ಪತ್ರ ಬರೆದು, ಅವರ ವಿರುದ್ಧ “ಸೂಕ್ತ ಕ್ರಮ” ವನ್ನು ಪ್ರಾರಂಭಿಸುವಂತೆ ಕೋರಿದ್ದರು. ಅವರು ವಿರುದ್ಧ ಸಿಬಿಐ, ಇಡಿ, ಐಟಿ ತನಿಖೆಗಳನ್ನು ಎದುರಿಸುತ್ತಿದ್ದರು. ಮರು ವರ್ಷ 2019 ರಲ್ಲಿ ಆ ಆಂಧ್ರ ಮಲ್ಯಗಳ ಜೊತೆ ಇನ್ನಿಬ್ಬರು ಸಂಸದರು ಸಹ ಬಿಜೆಪಿ ಸೇರಿದರು!.
ಕೃಪಶಂಕರ್ ಸಿಂಗ್
ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷದಿಂದ ಸಚಿವರಾಗಿದ್ದ ಕೃಪಶಂಕರ್ ಸಿಂಗ್ ಅವರನ್ನು ಹಲವಾರು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿ ಈ ಹಿಂದೆ ಗುರಿಯಾಗಿಸಿತ್ತು. ಅವರು ಬಿಜೆಪಿ ಸೇರಿ ಆರೋಪ ಮುಕ್ತರಾದರು.
ಹಿಮಂತ ಬಿಸ್ವಾ ಶರ್ಮಾ
ಅಸ್ಸಾಂನ ಹಾಲಿ ಮುಖ್ಯಮಂತ್ರಿಯಾಗಿರುವ ಇವರು 2014ರವರೆಗೂ ಕಾಂಗ್ರೆಸ್‌ನಲ್ಲಿದ್ದರು. ಆಗ ಬಿಜೆಪಿಯಿಂದ ಭಾರೀ ಟೀಕೆ ಎದುರಿಸಿದ್ದರು. ಸೂಕ್ತ ‘ಸ್ಥಾನಮಾನ’ ಸಿಗದ ಕಾರಣ ಬಿಜೆಪಿ ಸೇರಿದರು. ಈಗ ಸಿಎಂ ಆಗಿದ್ದಾರೆ.
ಮುನಿರತ್ನ ನಾಯ್ಡು
ಕರ್ನಾಟಕದ ರಾಜರಾಜೇಶ್ವರಿನಗರ ಕ್ಷೇತ್ರದಿಂದ ಇವರು ಕಾಂಗ್ರೆಸ್ ಶಾಸಕರಾಗಿದ್ದರು. 2018ರ ವಿಧಾನಸಭಾ ಚುನಾವಣೆಗೂ ಮುನ್ನ ಸಾವಿರಾರು ಜನರ ವೋಟರ್ ಐಡಿಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ ಎಂದು ಬಿಜೆಪಿ ಇವರ ವಿರುದ್ಧ ಭಾರೀ ಹೋರಾಟ ನಡೆಸಿತ್ತು. 2019 ರಲ್ಲಿ ಅವರು ಬಿಜೆಪಿ ಸೇರಿದರು. ನಂತರ ಶಾಸಕರಾಗಿದ್ದಾರೆ.

ಕರ್ನಾಟಕದ ಎಸ್.ಎಂ ಕೃಷ್ಣರವರು ಸಹ ತೆರಿಗೆ ವಂಚನೆಯ ಬಲೆಯಲ್ಲಿ ಬಂಧಿಯಾಗಿದ್ದ ತಮ್ಮ ಅಳಿಯ ಸಿದ್ಧಾರ್ಥ ಹೆಗ್ಡೆಯನ್ನು ಬಚಾವು ಮಾಡಿಕೊಳ್ಳುವುದಕ್ಕಾಗಿ ಇಳಿ ವಯಸ್ಸಿನಲ್ಲಿ ಬಿಜೆಪಿ ಸೇರಿ ಮೂಲೆಗುಂಪಾದರು ಎಂಬ ಮಾತುಗಳಿವೆ.
ಇಲ್ಲಿ ಹೆಸರಿಸಿರುವುದು ಕೆಲವರಷ್ಟೆ.. ಈ ರೀತಿ ನೂರಾರು ನಾಯಕರು ಬಿಜೆಪಿ ಸೇರಿ ಆರೋಪಮುಕ್ತರಾಗಿರುವ ಇತಿಹಾಸವಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹತ್ತಾರು ಶಾಸಕರು ಒಮ್ಮೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ನಂತರ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಲ್ಲದೆ ತಾವು ಸಚಿವರಾಗಿದ್ದಾರೆ.
ಈ ವಿಚಾರದಲ್ಲಿ ಬಿಜೆಪಿ ಎರಡು ರೀತಿಯಲ್ಲಿ ವ್ಯವಹರಿಸುತ್ತಾ ಬಂದಿದೆ. ಒಂದು, ಹಗರಣದಲ್ಲಿ ಸಿಕ್ಕಿಹಾಕಿಕೊಂಡವರಿಗೆ ತಮ್ಮ ಪಕ್ಷಕ್ಕೆ ಆಹ್ವಾನಿಸಿ ಅವರಿಗೆ ತಮ್ಮ ಪ್ರಭಾವ ಮತ್ತು ಅಧಿಕಾರ ಬಳಸಿ ಕ್ಲಿನ್ ಚಿಟ್ ನೀಡಲಾಗುತ್ತದೆ. ಒಂದುವೇಳೆ ಅವರು ಪಕ್ಷಕ್ಕೆ ಬರದಿದ್ದರೆ ಅಂಥವರ ಮೇಲೆ ಐ.ಟಿ ದಾಳಿ, ಇ.ಡಿ ದಾಳಿ ರೀತಿಯಲ್ಲಿ ಬೆದರಿಕೆ ಒಡ್ಡಿ, ಸಿಬಿಐ ತನಿಖೆಯ ಗುಮ್ಮ ತೋರಿಸಿ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಅಪ್ರಜಾತಾಂತ್ರಿಕ ನಡೆ ಅನುಸರಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಕೇವಲ ಭ್ರಷ್ಟಾಚಾರಿಗಳನ್ನು ಮಾತ್ರವಲ್ಲ ಕ್ರಿಮಿನಲ್‌ಗಳು, ಅತ್ಯಾಚಾರ ಆರೋಪ ಹೊತ್ತವರು ಸಹ ಬಿಜೆಪಿ ಸೇರಿ ಪಾವನರಾಗುತ್ತಿದ್ದಾರೆ. ಕಪಿಲ್ ಗುರ್ಜರ್ ಎಂಬಾತ ಸಿಎಎ ಹೋರಾಟಗಾರರ ಮೇಲೆ ಗುಂಡು ಹಾರಿಸಿದಾತ. 30 ಡಿಸೆಂಬರ್ 2020ರಂದು ಬಿಜೆಪಿ ಸೇರಿದ.. ಕಪಿಲ್ ಮಿಶ್ರಾ ಆಪ್‌ನಲ್ಲಿದ್ದಾಗ ನರೇಂದ್ರ ಮೋದಿಯವರನ್ನು ಫೇಕು ಎಂದು ಕರೆದಿದ್ದ. ಈಗ ಆತ ಬಿಜೆಪಿ ವಕ್ತಾರ!
ಬಿಜೆಪಿ ವಾಷಿಂಗ್ ಮೆಷಿನ್ ಆಗಿದೆಯೇ ಎಂಬ ಪ್ರಶ್ನೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ “ನಮ್ಮಲ್ಲಿಗೆ ಬರುವವರು ಹಲವು ಗುಣ ದೋಷಗಳನ್ನು ಹೊಂದಿರುತ್ತಾರೆ. ನಮ್ಮಲ್ಲಿ ಬಂದ ತಕ್ಷಣ ಅವು ಕಡಿಮೆಯಾಗುತ್ತವೆ. ಏಕೆಂದರೆ ನಮ್ಮ ಸಂಘಟನಾ ಪದ್ದತಿ ಹಾಗಿದೆ” ಎಂದು ಉತ್ತರಿಸಿದ್ದರು. ಅದಕ್ಕೆ “ಆಗಿದ್ದರೆ ಜೈಲು ವ್ಯವಸ್ಥೆ ಏಕೆ ಬೇಕು? ಎಲ್ಲಾ ಆರೋಪಿಗಳನ್ನು ಬಿಜೆಪಿಗೆ ಕಳಿಸಿಬಿಡಬಹುದಲ್ಲ” ಎಂದು ಎನ್‌ಡಿಟಿವಿಯ ಹಿರಿಯ ಪತ್ರಕರ್ತ ರವೀಶ್ ಕುಮಾರ್ ವ್ಯಂಗ್ಯವಾಡಿದ್ದರು.
- ಮುತ್ತುರಾಜು
ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು



ಕಾಂಗ್ರೆಸ್ಸಿಗರಲ್ಲಿ ಯಾರೂ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡ ವರು ಇಲ್ಲವಾ? ಥೂ ನಿಮ್ಮ.. ಬರೆಯುವುದಿದ್ದರೆ ನಿಸ್ಪಕ್ಶವಾಗಿ ಎಲ್ಲಾ ನಾಲಾಯಕರದ್ದೂ ಬರೆಯಿರಿ. ಅದು ಬಿಟ್ಟು ಮತ್ತೊಂದು ಪಕ್ಷವನ್ನು ಟೀಕಿಸುವ ಜೊತೆಗೆ ನಿಮ್ಮವರ ಬಂಡವಾಳ ನು ಬರೆಯಿರಿ.
Politics has become a gang of Looters and gangsters in India.