ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ತಮಿಳುನಾಡು ಬಿಜೆಪಿ ಅಧ್ಯಕ್ಷನಾಗಿ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ಗುರುವಾರ ನೇಮಿಸಿದ್ದಾರೆ. ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇಮಕಾತಿ ಪತ್ರವನ್ನು ತಮಿಳುನಾಡು ಬಿಜೆಪಿಗೆ ರವಾನಿಸಿದ್ದಾರೆ.
2024 ರ ಲೋಕಸಭಾ ಚುನಾವಣೆಗೆ ಮುನ್ನ ತಮಿಳುನಾಡಿನಲ್ಲಿ ಪಕ್ಷವನ್ನು ಬಲಪಡಿಸಲು ಬಿಜೆಪಿ ಬುಧವಾರ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದ ಎಲ್. ಮುರುಗನ್ ಅವರನ್ನು ಕೇಂದ್ರ ಸಚಿವಾಲಯದ ರಾಜ್ಯ ಸಚಿವರನ್ನಾಗಿ ನೇಮಿಸಿತ್ತು. ಅವರಿಗೆ ಮಾಹಿತಿ ಮತ್ತು ಪ್ರಸಾರ, ಮತ್ತು ಮೀನುಗಾರಿಕೆ, ಪಶುಸಂಗೋಪನಾ ಸಚಿವಾಲಯವನ್ನು ನೀಡಲಾಗಿದೆ.
ಇದನ್ನೂ ಓದಿ: ಪೆರಿಯಾರ್ ನೆಲದಲ್ಲಿ ನಡೆಯದ ಬಿಜೆಪಿ ಪ್ರಯೋಗ; ಮಾಜಿ ಐಎಎಸ್ ಸಸಿಕಾಂತ್ ಸೆಂಥಿಲ್ ಸಂದರ್ಶನ
ಎಲ್. ಮುರುಗನ್ ಅವರ ಸ್ಥಾನಕ್ಕೆ ಹಾಲಿ ಶಾಸಕ ನೈನಾರ್ ನಾಗೇಂದ್ರನ್ ಅಥವಾ ಅಣ್ಣಾಮಲೈ ಅವರನ್ನು ನೇಮಿಸುವ ಬಗ್ಗೆ ಈ ಹಿಂದೆ ವರದಿಯಾಗಿತ್ತು. ಇದೀಗ ಕುತೂಹಲಕ್ಕೆ ತೆರೆಬಿದ್ದಿದ್ದು ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಅಣ್ಣಾ ಮಲೈ ಅವರು 2020 ರ ಆಗಸ್ಟ್ ತಿಂಗಳಲ್ಲಿ ಬಿಜೆಪಿ ಸೇರಿದ್ದರು. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರು ಕರೂರ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಸೋಲನುಭವಿಸಿದ್ದರು. ಅವರ ವಿರುದ್ದ ಸ್ಪರ್ಧಿಸಿದ್ದ ಡಿಎಂಕೆಯ ಮೊಂಜನೂರು ಎಲಂಗೋ ಅವರು 24,816 ಓಟುಗಳ ಅಂತರದಲ್ಲಿ ಜಯಗಳಿಸಿದ್ದರು.
ಇದನ್ನೂ ಓದಿ: ಅಣ್ಣಾ ಮಲೈ ಮಧುಕರ ಶೆಟ್ಟಿಯಲ್ಲಾ! – ಪ್ರಜ್ಞಾವಂತ ಪ್ರಜೆಯೊಬ್ಬರ ಅಭಿಪ್ರಾಯ


