ಅಫ್ಘಾನಿಸ್ತಾದಿಂದ ತನ್ನ ಭದ್ರತಾ ಪಡೆಯನ್ನು ಆಗಸ್ಟ್ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಿದ್ದೇವೆ ಎಂದು ಅಮೆರಿಕಾ ಘೋಷಿಸಿದ ಬೆನ್ನಲ್ಲೆ, ಅಫ್ಘಾನಿಸ್ತಾನ ಸರಣಿ ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂದಹಾರ್‌ನ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಸುಮಾರು 50 ರಾಜತಾಂತ್ರಿಕರು ಮತ್ತು ಇತರ ಸಿಬ್ಬಂದಿಯನ್ನು ಭಾರತಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
“ಕಂದಹಾರ್ ನಗರದ ಸಮೀಪ ತೀವ್ರ ಹೋರಾಟ ನಡೆಯುತ್ತಿದ್ದು, ರಾಯಭಾರಿ ಕಚೇರಿಯ ಸಿಬ್ಬಂದಿಯನ್ನು ವಾಯುಪಡೆಯ ವಿಮಾನಗಳ ಮೂಲಕ ದೆಹಲಿಗೆ ಕರೆತರಲಾಗಿದೆ. ಅಫ್ಘಾನಿಸ್ತಾನದಲ್ಲಿ ಉದ್ಭವವಾಗುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ. ನಮ್ಮ ಸಿಬ್ಬಂದಿಯ ಸುರಕ್ಷತೆ ಮುಖ್ಯವಾಗಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ತಾಲಿಬಾನ್ ಆಕ್ರಮಣ: ತಜಕಿಸ್ತಾನದಲ್ಲಿ ರಕ್ಷಣೆ ಪಡೆದ 1000 ಕ್ಕೂ ಹೆಚ್ಚು ಅಫ್ಘಾನ್ ಸೈನಿಕರು
“ಕಂದಹಾರ್‌ನ ಭಾರತದ ಕಾನ್ಸುಲೇಟ್ ಮುಚ್ಚಲಾಗಿಲ್ಲ. ಆದರೆ ನಗರದ ಸಮೀಪ ತೀವ್ರ ಸಂಘರ್ಷದಿಂದಾಗಿ ಭಾರತ ಮೂಲದ ಸಿಬ್ಬಂದಿಯನ್ನು ಸದ್ಯಕ್ಕೆ ಮರಳಿ ಕರೆತರಲಾಗಿದೆ. ಇದು ತಾತ್ಕಾಲಿಕ ಕ್ರಮವಾಗಿದ್ದು, ಪರಿಸ್ಥಿತಿ ತಿಳಿಗೊಳ್ಳುತ್ತಿದ್ದಂತೆ ರಾಯಭಾರಿ ಕಚೇರಿಯನ್ನು ಮತ್ತೆ ತೆರೆಯಲಾಗುತ್ತದೆ. ಸದ್ಯಕ್ಕೆ ಕಚೇರಿಯು ಸ್ಥಳೀಯ ಸಿಬ್ಬಂದಿಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಹೇಳಿದ್ದಾರೆ.
ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಮುಚ್ಚುವ ಯಾವುದೇ ಯೋಜನೆ ಇಲ್ಲ ಎಂದು ಭಾರತ ಮಂಗಳವಾರ ಸ್ಪಷ್ಟಪಡಿಸಿತ್ತು. ಕಂದಹಾರ್ ರಾಯಭಾರ ಕಚೇರಿಗಳು ಕೂಡಾ ಮುಕ್ತವಾಗಿರುತ್ತವೆ ಎಂದು ಅದು ಹೇಳಿತ್ತು. ಕಳೆದ ವರ್ಷದ ಏಪ್ರಿಲ್‌ನಲ್ಲಿ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಹೆರಾತ್ ಮತ್ತು ಜಲಾಲಾಬಾದ್‌ನ ರಾಯಭಾರಿ ಕಚೇರಿಗಳನ್ನು ಮುಚ್ಚಲಾಗಿತ್ತು.
ಇದನ್ನೂ ಓದಿ: ಅಫ್ಘಾನಿಸ್ಥಾನದಲ್ಲಿ ನಿರ್ದೋಷಿ ನಾಗರಿಕರು, ಪತ್ರಕರ್ತರನ್ನು ಗುರಿಯಾಗಿಸಲಾಗುತ್ತಿದೆ: ಪ್ರಧಾನಿ ಕಳವಳ


