Homeಮುಖಪುಟಪೆಗಾಸಸ್ ಫೋನ್‌ ಹ್ಯಾಕ್‌ಗೆ ಒಳಗಾದವರು ಯಾರು ಯಾರು? ಪ್ರಮುಖ 30 ಜನರ ಪಟ್ಟಿ ಇಲ್ಲಿದೆ

ಪೆಗಾಸಸ್ ಫೋನ್‌ ಹ್ಯಾಕ್‌ಗೆ ಒಳಗಾದವರು ಯಾರು ಯಾರು? ಪ್ರಮುಖ 30 ಜನರ ಪಟ್ಟಿ ಇಲ್ಲಿದೆ

ಒಕ್ಕೂಟ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದ ಪತ್ರಕರ್ತರು, ವಿರೋಧ ಪಕ್ಷಗಳು, ನ್ಯಾಯಾಧೀಶರು ಸೇರಿದಂತೆ ಹಲವರ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ.

- Advertisement -
- Advertisement -

ಫಾರ್ಬಿಡನ್‌ ಸ್ಟೋರಿಸ್‌ ಬಿಡುಗಡೆ ಮಾಡಿರುವ ತನಿಖಾ ವರದಿ ‘ಪೆಗಾಸಸ್‌ ಪ್ರಾಜೆಕ್ಟ್‌‌’ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ. ವಿಶ್ವದಾದ್ಯಂತ 50,000 ಫೋನ್‌ಗಳನ್ನು ಪೆಗಾಸಸ್‌‌ ತಂತ್ರಾಂಶವು ಟ್ಯಾಪ್‌ ಮಾಡಿದೆ ಎನ್ನಲಾಗಿದ್ದು, ಇದರಲ್ಲಿ ನಮ್ಮ ದೇಶದ 300 ಕ್ಕೂ ಹೆಚ್ಚು ಜನರನ್ನು ಗುರಿಮಾಡಲಾಗಿದೆ ಎಂದು ವರದಿ ಹೇಳಿದೆ. ಇದು ಸೋಮವಾರ ಪ್ರಾರಂಭವಾದ ಮಾನ್ಸುನ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ.

ಸೋಮವಾರದ ಅಧಿವೇಶನದಂದು ಒಕ್ಕೂಟ ಸರ್ಕಾರವು ಪೆಗಾಸಸ್ ಪ್ರಾಜೆಕ್ಟ್‌ ವರದಿನ್ನು ನಿರಾಕರಿಸಿದ್ದು, ಇದರಲ್ಲಿ ಯಾವುದೆ ವಾಸ್ತವಿಕ ನೆಲೆಗಟ್ಟಿಲ್ಲ ಎಂದು ಹೇಳಿದೆ. ಆದರೆ ತಾನು ಪೆಗಾಸಸ್‌ ಬಳಸುತ್ತಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿಲ್ಲ. ಯಾವುದೆ ರೀತಿಯ ಕಣ್ಗಾವಲು ಪ್ರಕ್ರಿಯೆಗಳು ಕಾನೂನಿಗೆ ಅನುಗುಣವಾಗಿಯೆ ನಡೆಯುತ್ತವೆ ಎಂದು ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಸದನದಲ್ಲಿ ಹೇಳಿದ್ದಾರೆ.

ತನಿಖಾ ವರದಿಯಲ್ಲಿ ಪೆಗಾಸಸ್‌ ತಂತ್ರಾಂಶ ಬಳಸಿಕೊಂಡು, ನರೇಂದ್ರ ಮೋದಿ ಸರ್ಕಾರದ ಸಚಿವರು, ವಿರೋಧ ಪಕ್ಷದ ನಾಯಕರು, ನ್ಯಾಯಾಂಗದ ವ್ಯಕ್ತಿಗಳು, ಪತ್ರಕರ್ತರು, ವಿಜ್ಞಾನಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಸೇರಿದಂತೆ ಹಲವು ಉದ್ಯಮಿಗಳ ಫೋನ್‌‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Explainer: ಏನಿದು ಪೆಗಾಸಸ್? ಹೇಗೆ ಫೋನ್ ಹ್ಯಾಕ್ ಮಾಡುತ್ತದೆ? ಅಪಾಯಗಳೇನು?

ಒಕ್ಕೂಟ ಸರ್ಕಾರವು ತನಿಖಾ ವರದಿಯನ್ನು ನಿರಾಕರಿಸಿದೆಯಾದರೂ, ವರದಿಯಲ್ಲಿ ಹೆಸರು ಉಲ್ಲೇಖಿಸಲ್ಪಟ್ಟ ಹೆಚ್ಚಿನ ಜನರೆಲ್ಲರೂ ಸರ್ಕಾರದ ವಿರುದ್ದ ಧ್ವನಿ ಎತ್ತಿದವರೇ ಆಗಿದ್ದಾರೆ. ಅಂತವರ ಪಟ್ಟಿ ಇಲ್ಲಿದೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ

ದೇಶದ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ, ಒಕ್ಕೂಟ ಸರ್ಕಾರವನ್ನು ದೊಡ್ಡ ಧ್ವನಿಯಲ್ಲಿ ವಿರೋಧಿಸುವ ಪ್ರಮುಖ ನಾಯಕರಾಗಿದ್ದಾರೆ. ಇವರು ನಿರಂತರವಾಗಿ ಸರ್ಕಾರವನ್ನು ಪ್ರಶ್ನಿಸುತ್ತಲೆ ಬಂದಿದ್ದಾರೆ. ಬಿಜೆಪಿ ಅವರನ್ನು ‘ಪಪ್ಪು’ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವ ಹೊರತಾಗಿಯು ಸರ್ಕಾರವ ವಿರುದ್ದ ಸಮರ್ಪಕವಾದ ಪ್ರಶ್ನೆಗಳನ್ನು ಮಾಡುತ್ತಲೆ ಬಂದಿದ್ದಾರೆ. ರಾಫೆಲ್ ಹಗರಣದ ವರದಿಯ ಬಗ್ಗೆಗಿನ ಇವರ ಪ್ರಶ್ನೆಗಳು ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿತ್ತು.

ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್‌

ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್‌ 2014 ರಲ್ಲಿ ಬಿಜೆಪಿಗೆ ಚುನಾವಣಾ ರಣತಂತ್ರ ಹೆಣೆದುಕೊಟ್ಟವರಾಗಿದ್ದಾರೆ. ಆ ಸಮಯ ಸಾಮಾಜಿಕ ಜಾಲತಾಣದಲ್ಲಿ ಗುಜರಾತ್‌ ಮಾದರಿ ಎಂಬ ನಕಲಿ ಅಭಿವೃದ್ದಿ ಮಾದರಿ, ಪ್ರಧಾನಿ ಮೋದಿಯನ್ನು ಮಹಾನ್‌ ನಾಯಕನಂತೆ ಬಿಂಬಿದ್ದು ಇವರ ಕಾರ್ಯತಂತ್ರವೆ ಆಗಿದೆ. ಇದರ ನಂತರ ಅವರೊಂದಿಗೆ ಮುನಿಸಿಕೊಂಡ ಅವರನ್ನು ಬಿಜೆಪಿ ಗುರಿಯಾಗಿಸಿತ್ತು.

ಮುಂದಿನ ಹಲವು ಚುನಾವಣೆಗಳಲ್ಲಿ ಬಿಜೆಪಿ ವಿರುದ್ದ ಅವರು ತಂತ್ರ ರೂಪಿಸಿದ್ದರು. ತೀರಾ ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ವಿರುದ್ದ ಚುನಾವಣಾ ತಂತ್ರ ರೂಪಿಸಿ ಬಿಜೆಪಿಯನ್ನು ಸೋಲಿಸುವಂತೆ ಮಾಡಿದ್ದರು. ಅವರ ಫೋನ್ ಹ್ಯಾಕ್ ಆಗುತ್ತಿರುವ ಸುಳಿವು ಅರಿದು ಪ್ರಶಾಂತ್ ಕಿಶೋರ್‌ ಸುಮಾರು ಐದು ಮೊಬೈಲ್‌ಗಳನ್ನು ಬದಲಿಸಿದ್ದಾರೆ ಎಂಬ ವರದಿಗಳಿವೆ. ಅವರು ಮುಂದಿನ ವರ್ಷ ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ಗೆ ಚುನಾವಣಾ ತಂತ್ರ ರೂಪಿಸಲು ಒಪ್ಪಿಕೊಂಡಿದ್ದಾರೆ. ಜೊತೆಗೆ ಇತ್ತೀಚೆಗೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯೊಂದಿಗೆ ಸಭೆಯನ್ನೂ ಮಾಡಿದ್ದರು.

ಇದನ್ನೂ ಓದಿ: ನ್ಯಾ. ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾಕೆಯ ಇಡೀ ಕುಟುಂಬದ ಮೇಲೆ ಪೆಗಾಸಸ್ ಕಣ್ಗಾವಲು!

ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ

ಮಮತಾ ಬ್ಯಾನರ್ಜಿ‌ ಅವರ ಸೋದರಳಿಯ ಆಗಿರುವ ಅಭಿಷೇಕ್ ಬ್ಯಾನರ್ಜಿ ಟಿಎಂಸಿಯ ಪ್ರಮುಖ ನಾಯಕರಾಗಿದ್ದಾರೆ. ಇತ್ತೀಚೆಗೆ ನಡೆದಿರುವ ವಿಧಾನಸಭಾ ಚುನಾವಣೆಯಲ್ಲಿ ಬಲಿಷ್ಠ ಬಿಜೆಪಿ ವಿರುದ್ದ ಟಿಎಂಸಿ ಅಭೂತಪೂರ್ವ ಜಯಗಳಿಸುವುದರ ಹಿಂದೆ ಅಭಿಷೇಕ್ ಅವರ ಕೆಲಸವಿದೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್‌‌ ಅವರನ್ನು ಪಶ್ಚಿಮ ಬಂಗಾಳಕ್ಕೆ ಪರಿಚಯಿಸಿದ್ದು ಅಭಿಷೇಕ್ ಆಗಿದ್ದಾರೆ. ಚುನಾವಣೆ ಸಮಯದಲ್ಲಿ ಒಕ್ಕೂಟ ಸರ್ಕಾರದ ತನಿಖಾ ಸಂಸ್ಥೆ ಅವರ ಮೇಲೆ ದಾಳಿ ಮಾಡಿ ವಿಚಾರಣೆಗೂ ಒಳಪಡಿಸಿತ್ತು.

ಒಕ್ಕೂಟ ಸರ್ಕಾರದ ಐಟಿ ಸಚಿವ ಅಶ್ವಿನಿ ವೈಷ್ಣವ್

ಒಡಿಶಾ ಮೂಲದ ಮಾಜಿ ಐಎಎಸ್‌ ಆಗಿರುವ ಅಶ್ವಿನಿ ರಾಜ್ಯಸಭೆಗೆ ಸ್ಪರ್ಧಿಸುವ ಮೊದಲು ಬಿಜೆಡಿ ಅಭ್ಯರ್ಥಿ ಆಗಿದ್ದವರು. ಆದರೆ ನಂತರ ಅವರು ಬಿಜೆಪಿ ಅಭ್ಯರ್ಥಿಯಾದರು. ಈ ಸಮಯದಲ್ಲಿ ಅವರ ನಡೆಯನ್ನು ತಿಳಿದುಕೊಳ್ಳಲು ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎಂದು ದಿ ವೈರ್ ವರದಿ ಮಾಡಿದೆ. ಅಶ್ವಿನಿ ಮತ್ತು ಅವರ ಹೆಂಡತಿಯ ಫೋನ್‌ ನಂಬರ್‌ಗಳನ್ನು 2017 ರ ಮೊದಲಾರ್ದದಲ್ಲಿ ಹ್ಯಾಕ್ ಮಾಡಲಾಗಿತ್ತು ಎಂದು ಹೇಳಲಾಗಿದೆ. ಇವರು ಈ ಹಿಂದೆ ವಾಜಪೇಯಿ ಸಮಯದಲ್ಲಿ ಪ್ರಧಾನ ಮಂತ್ರಿ ಕಚೇರಿಯ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಒಕ್ಕೂಟ ಸರ್ಕಾರದ ಜಲಶಕ್ತಿ ಸಚಿವ ಪ್ರಹ್ಲಾದ್ ಪಟೇಲ್

ಮಧ್ಯಪ್ರದೇಶದ ದಮೋಹ್‌‌ ಕ್ಷೇತ್ರದ ಸಂಸತ್ ಸದಸ್ಯನಾಗಿರುವ ಇವರನ್ನು ಇತ್ತಿಚೆಗಷ್ಟೇ ಒಕ್ಕೂಟ ಸರ್ಕಾರದ ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿತ್ತು. ಸೋರಿಯಾದ ಪಟ್ಟಿಯಲ್ಲಿ ಪ್ರಹ್ಲಾದ್‌ ಪಟೇಲ್ ವಿಶೇಷ ವ್ಯಕ್ತಿಯಾಗಿದ್ದಾರೆ. ಈ ಪ್ರಕರಣದಲ್ಲಿ ಅವರ ಮತ್ತು ಅವರ ಹೆಂಡತಿಗೆ ಸೇರಿದ ಫೋನ್‌ಗಳು ಮಾತ್ರವಲ್ಲದೆ, ಅವರ ಖಾಸಗಿ ಕಾರ್ಯದರ್ಶಿಗಳು, ದಾಮೋದಲ್ಲಿನ ರಾಜಕೀಯ ಮತ್ತು ಸರ್ಕಾರಿ ಸಹಚರರು, ಅವರ ಅಡುಗೆ ಸಹಾಯಕರು, ತೋಟದ ಮಾಲಿಗಳು ಸೇರಿದಂತೆ ಒಟ್ಟು ಅವರ ಆಪ್ತ ಜನರಲ್ಲಿ ಕನಿಷ್ಠ 15 ಮಂದಿಯನ್ನು ಸಂಭಾವ್ಯ ಕಣ್ಗಾವಲು ಗುರಿಯನ್ನು ಹೊಂದಿದ್ದರು ಎಂದು ದಿ ವೈರ್ ವರದಿ ಹೇಳಿದೆ.

ಅಟಲ್‌ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು. 2004 ರಲ್ಲಿ ಉಮಾ ಭಾರತಿ ಬಿಜೆಪಿ ವಿರುದ್ದ ದಂಗೆಯೆದ್ದಾಗ ಅವರ ಪರವಾಗಿ ಇದ್ದವರು. ನಂತರ 2009 ರಲ್ಲಿ ಮತ್ತೆ ಬಿಜೆಪಿಗೆ ಸೇರಿದರು. ಆದರೆ ಮಧ್ಯ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಅತೀ ದೊಡ್ಡ ವಿರೋಧಿಯಾಗಿದ್ದಾರೆ. ಪ್ರಹ್ಲಾದ್ ಪಟೇಲ್ ಮತ್ತು ಅವರ ಸಹಚರರನ್ನು 2019 ರಲ್ಲಿ ಸಂಭಾವ್ಯ ಕಣ್ಗಾವಲಿಗೆ ಆಯ್ಕೆ ಮಾಡಲಾಗಿದೆ ಎಂದು ವೈರ್ ವರದಿ ಹೇಳಿದೆ.

ಇದನ್ನೂ ಓದಿ: ಪೆಗಾಸಸ್ ಪ್ರಾಜೆಕ್ಟ್: ಶೀಘ್ರದಲ್ಲೇ ನ್ಯಾಯಾಧೀಶರ ಹೆಸರು ಬಹಿರಂಗ!

ಸಚಿವೆ ಸ್ಮೃತಿ ಇರಾನಿ ಅವರ ವಿಶೇಷ ಕರ್ತವ್ಯದ ಅಧಿಕಾರಿ (ಒಎಸ್ಡಿ) ಸಂಜಯ್ ಕಚ್ರೂ

ಒಕ್ಕೂಟ ಸರ್ಕಾರದ ಸಚಿವೆ ಸ್ಮೃತಿ ಇರಾನಿ ಅವರ ವಿಶೇಷ ಕರ್ತವ್ಯದ ಅಧಿಕಾರಿ (ಒಎಸ್ಡಿ) ಸಂಜಯ್ ಕಚ್ರೂ, ಅವರ ತಂದೆ ಮತ್ತು ಅವರ ಅಪ್ರಾಪ್ತ ಮಗನ ದೂರವಾಣಿ ಸಂಖ್ಯೆಗಳು ಸಹ ಸೋರಿಕೆಯಾದ ದತ್ತಾಂಶದಲ್ಲಿ ಕಂಡುಬಂದಿವೆ ಎಂದು ವೈರ್‌ ಹೇಳಿದೆ.

ವಿಶ್ವ ಹಿಂದೂ ಪರಿಷದ್ ನಾಯಯ ಪ್ರವೀಣ್ ತೊಗಾಡಿಯ

ಸಂಘ ಪರಿವಾರದೊಂದಿಗೆ ಸಂಬಂಧ ಹೊಂದಿರುವ ಜನರ ಫೋನ್‌‌ ಸಂಖ್ಯೆಗಳು ದಾಖಲೆಗಳಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಪ್ರಧಾನವಾದ ಹೆಸರು ವಿಶ್ವ ಹಿಂದೂ ಪರಿಷತ್ತಿನ ಪ್ರವೀಣ್ ತೊಗಾಡಿಯಾ ಅವರದ್ದಾಗಿದೆ. ಪ್ರಧಾನ ಮಂತ್ರಿಯ ಕಟು ವಿಮರ್ಶಕರಾದ ಅವರ ಫೋನ್ ಸಂಖ್ಯೆಯನ್ನು 2018 ರ ಉದ್ದಕ್ಕೂ ಕಣ್ಗಾವಲಿಗಾಗಿ ಗುರಿಯಾಗಿಸಲಾಗಿತ್ತು.

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ಅವರ ವೈಯಕ್ತಿಕ ಕಾರ್ಯದರ್ಶಿ ಪ್ರದೀಪ್ ಅವಸ್ಥಿಯವರ ದೂರವಾಣಿ ಸಂಖ್ಯೆಯನ್ನು ಸಹ 2018 ರ ಆರಂಭದಲ್ಲಿ, 2018 ರ ಡಿಸೆಂಬರ್‌ನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮುಂಚೆಯೇ ಕಣ್ಗಾವಲುಗಾಗಿ ಸಂಭವನೀಯ ಅಭ್ಯರ್ಥಿ ಎಂದು ಗುರುತಿಸಲಾಗಿತ್ತು. ವಸುಂಧರಾ ಮತ್ತು ಬಿಜೆಪಿಯ ಕೇಂದ್ರ ನಾಯಕತ್ವದ ಮಧ್ಯೆ ವೈಮನಸ್ಸಿದೆ.

ಚುನಾವಣಾ ಆಯೋಗದ ಮಾಜಿ ಆಯುಕ್ತ ಅಶೋಕ್ ಲವಾಸಾ

2019 ರ ಸಾರ್ವತ್ರಿಕ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ತೀರ್ಪು ನೀಡಿದ 3 ಮಂದಿಯ ಚುನಾವಣಾ ಆಯೋಗದ ಏಕೈಕ ಸದಸ್ಯ ಅಶೋಕ್ ಲವಾಸಾ. ಅವರ ಈ ಭಿನ್ನಾಭಿಪ್ರಾಯ ಬಂದ ಕೆಲವೇ ವಾರಗಳ ನಂತರ ಕಣ್ಗಾವಲಿನ ಸಂಭಾವ್ಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ ದಿ ವೈರ್ ಹೇಳಿದೆ.

ಆಯೋಗದ ಇತರ ಇಬ್ಬರು ಸದಸ್ಯರಾದ ಸುಶೀಲ್ ಚಂದ್ರ ಮತ್ತು ಸುನಿಲ್ ಅರೋರಾ ಅವರು ಮೋದಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡುಬಂದಿಲ್ಲ ಎಂದು ತೀರ್ಪು ನೀಡಿದ್ದರು. ಆದರೆ ಲವಾಸಾ ಅವರು ಅದರ ವಿರುದ್ದ ತೀರ್ಪು ನೀಡಿದ್ದರು. ಆದರೆ ಮೂವರು ಸದಸ್ಯರ ಆಯೋಗದಲ್ಲಿ ಬಹುಮತದ ತೀರ್ಪಿಗೆ ಮನ್ನಣೆ ಸಿಕ್ಕಿತ್ತು.

ಇದನ್ನೂ ಓದಿ: ಅವರು ಏನನ್ನು ಓದುತ್ತಿದ್ದಾರೆ ಎಂದು ನಮಗೆ ಗೊತ್ತು!: ‘ಪೆಗಾಸಸ್‌ ಪ್ರಾಜೆಕ್ಟ್‌’ಗೆ ರಾಹುಲ್ ಗಾಂಧಿ

ಸುಪ್ರೀಂ ಕೋರ್ಟ್‌‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್

ಏಪ್ರಿಲ್ 2019 ರಲ್ಲಿ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ದ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ, ಸುಪ್ರೀಂ ಕೋರ್ಟ್ ಸಿಬ್ಬಂದಿಗೆ ಸೇರಿದ ಮೂರು ದೂರವಾಣಿ ಸಂಖ್ಯೆಗಳನ್ನು ಪೆಗಾಸಸ್ ಕಣ್ಗಾವಲು ಮಾಡುವ ಸಂಭಾವ್ಯ ಗುರಿಗಳಾಗಿ ಆಯ್ಕೆ ಮಾಡಲಾಗಿತ್ತು ಎಂದು ದಿ ವೈರ್‌ ಹೇಳಿದೆ.

ವಿದ್ಯಾರ್ಥಿ ನಾಯಕ ಉಮರ್‌ ಖಾಲಿದ್‌

ದೆಹಲಿಯ ಜವಾಹರಲಾಲ್ ನೆಹರೂ ಯುನಿವರ್ಸಿಟಿಯ ವಿದ್ಯಾರ್ಥಿ ನಾಯಕ ಉಮರ್‌ ಖಾಲಿದ್‌ ಅವರನ್ನು ಕೂಡಾ ಕಣ್ಗಾವಲು ಮಾಡಲಾಗಿದೆ ಎಂದು ವರದಿ ಹೇಳಿದೆ. ದೆಹಲಿ ಗಲಭೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ. ಜೆಎನ್‌ಯುವಿನ ನಾಯಕನಾದ ಉಮರ್‌ ಖಾಲಿದ್ ಒಕ್ಕೂಟ ಸರ್ಕಾರದ ಪ್ರಮುಖ ಟೀಕಾಕಾರರಾಗಿದ್ದಾರೆ.

ಭೀಮಾ ಕೊರೆಗಾಂವ್‌ ಪ್ರಕರಣದಲ್ಲಿರುವ 12 ಮಾನವ ಹಕ್ಕುಗಳ ಹೋರಾಟಗಾರರು

ನಕ್ಸಲ್‌‌ವಾದಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಪ್ರಧಾನಿ ಮೋದಿಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪದಲ್ಲಿ ಬಂದಿತರಾಗಿರುವ ಭೀಮಾ ಕೊರೆಗಾಂವ್‌‌ ಪ್ರಕರಣದ 12 ಮಾನವ ಹಕ್ಕುಗಳ ಹೋರಾಟಗಾರ ಮೇಲೆಯು ಕಣ್ಗಾವಲು ನಡೆದಿದೆ ಎಂದು ವರದಿಯಾಗಿದೆ. ಹೋರಾಟಗಾರ ರೋಣ ವಿಲ್ಸನ್‌ ಅವರ ಲ್ಯಾಪ್‌ಟಾಪ್‌ಗೆ ಹೊರಗಡೆಯಿಂದ ತಂತ್ರಾಂಶಗಳನ್ನು ಹಾಕಿ ಷಡ್ಯಂತ್ರ ಹೂಡಲಾಗಿದೆ ಎಂದು ವಿದೇಶಿ ತಂತ್ರಜ್ಞಾನ ಸಂಸ್ಥೆಯೊಂದು ಹೇಳಿತ್ತು.

ದಿ ವೈರ್‌ನ ಸಂಸ್ಥಾಪಕ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್ ಮತ್ತು ಎಂ.ಕೆ.ವೇಣು

ದಿ ವೈರ್‌ನ ಸಂಸ್ಥಾಪಕ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್ ಮತ್ತು ಎಂ.ಕೆ.ವೇಣು ಅವರ ಸಂಖ್ಯೆಗಳನ್ನು ಕಣ್ಗಾವಲು ಮಾಡಲಾಗಿದೆ ಎಂದು ವೈರ್‌ ಹೇಳಿದೆ. ದಿವೈರ್‌ ಈ ಹಿಂದೆ ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್‌ ಶಾ ಅವರ ಮಗನ ಸಂಸ್ಥೆಯ ಮೇಲೆ ತನಿಖಾ ವರದಿ ಮಾಡಿದ್ದು ದೇಶದಾದ್ಯಂತ ಸುದ್ದಿಯಾಗಿತ್ತು. ಇದಲ್ಲದೆ ದಿ ವೈರ್‌ ಮಾಡಿರುವ ತನಿಖಾ ವರದಿಗಳು ಒಕ್ಕೂಟ ಸರ್ಕಾರವನ್ನು ಪ್ರಶ್ನಿಸುವಂತಾಗಿತ್ತು.

ಎಚ್.ಡಿ ಕುಮಾರಸ್ವಾಮಿ

2018ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲು ವಿಫಲವಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸಮ್ಮಿಶ್ರ ಸರ್ಕಾರ ರಚಿಸಿದ್ದವು. ಆಗ ಸರ್ಕಾರವನ್ನು ಉರುಳಿಸುವ ಸಲುವಾಗಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿಯವರ ಆಪ್ತ ಸಹಾಯಕರಾಗಿದ್ದ ಸತೀಶ್ ಅವರಿಗೆ ಸಂಬಂಧಿಸಿದ ಎರಡು ಫೋನ್ ಸಂಖ್ಯೆಗಳನ್ನು ಹ್ಯಾಕ್ ಮಾಡಲಾಗಿದೆ.

ಸಿದ್ದರಾಮಯ್ಯ

2018ರಲ್ಲಿ ಬಿಜೆಪಿಗೆ ಅಧಿಕಾರ ದೊರಕದಂತೆ ಮಾಡುವುದರಲ್ಲಿ ಸಿದ್ದರಾಮಯ್ಯನವರು ಪ್ರಧಾನ ಪಾತ್ರ ವಹಿಸಿದ್ದರು. ಅವರ ಆಪ್ತ ಸಹಾಯಕರಾಗಿದ್ದ ವೆಂಕಟೇಶ್ ಅವರ ದೂರವಾಣಿ ಸಂಖ್ಯೆಯನ್ನು ಸಹ ಇದೇ ಅವಧಿಯಲ್ಲಿ ಪೆಗಾಸಸ್‌ ಹ್ಯಾಕ್‌ಗೆ ಸೇರಿಸಲಾಗಿದೆ ಎಂದು ದಿ ವೈರ್ ವರದಿ ಬಹಿರಂಗ ಪಡಿಸಿದೆ.

ಜಿ.ಪರಮೇಶ್ವರ್

2018ರಿಂದ ಜಿ.ಪರಮೇಶ್ವರ್‌ರವರು ಕರ್ನಾಟಕದ ಉಪಮುಖ್ಯಮಂತ್ರಿಯಾಗಿದ್ದರು. ಅವರ ಸಂಖ್ಯೆಯನ್ನು ಪೆಗಾಸಸ್ ಟಾರ್ಗೆಟ್‌ ಲಿಸ್ಟ್‌ನಲ್ಲಿ ಸೇರಿಸಿಕೊಳ್ಳಲಾಗಿದೆ.

ಎಚ್.ಡಿ ದೇವೇಗೌಡ

ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಭದ್ರತಾ ಸಿಬ್ಬಂದಿಯಲ್ಲಿ ಒಬ್ಬರಾಗಿದ್ದ ಮಂಜುನಾಥ್ ಮುದ್ದೇಗೌಡ ಎಂಬ ಪೊಲೀಸ್ ಅಧಿಕಾರಿಯ ಪೋನ್ ನಂಬರ್ ಕೂಡ ಹ್ಯಾಕ್ ಮಾಡಲಾಗಿದೆ. ನನ್ನ ಮೊಬೈಲ್ ಸಂಖ್ಯೆ ಎಂದು ಪೊಲೀಸ್ ಅಧಿಕಾರಿ ದೃಢಪಡಿಸಿದ್ದಾರೆ.  ಅವರ ಸಂಖ್ಯೆಯನ್ನು 2019 ರ ಮಧ್ಯದಲ್ಲಿ ಹ್ಯಾಕ್ ಮಾಡಲಾಗಿದೆ.

ಇಷ್ಟೇ ಅಲ್ಲದೆ ಒಕ್ಕೂಟ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದ ಪತ್ರಕರ್ತರಾದ ಸುಶಾಂತ್ ಸಿಂಗ್, ಸಾಕ್ಷಿ ಸಿಂಗ್, ಜೆ. ಗೋಪಿಕೃಷ್ಣನ್‌, ಶಿಶಿರ್‌ ಗುಪ್ತಾ, ರಿತಿಕಾ ಚೋಪ್ರಾ, ಪ್ರಶಾಂತ್‌ ಝಾ, ಪ್ರೇಮ್‌ ಶಂಕರ್‌ ಝಾ, ಸ್ವಾತಿ ಚತುರ್ವೇದಿ, ರಾಹುಲ್‌ ಸಿಂಗ್‌, ಮುಜಮ್ಮಿಲ್‌ ಜಲೀಲ್‌, ಇಫ್ತಿಕಾರ್‌ ಗೀಲಾನಿ, ಸಂದೀಪ್‌ ಉನ್ನಿತಾನ್‌ ಮುಂತಾದವರ ಮೇಲೆ ಕಣ್ಗಾವಲು ಮಾಡಿತ್ತು ಎಂದು ವೈರ್‌ ವರದಿ ಮಾಡಿದೆ.


ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಉರುಳಲು ಪೆಗಾಸಸ್ ಕಾರಣ? HDK, ಸಿದ್ದು ಆಪ್ತ ಸಹಾಯಕರು, ಜಿ.ಪರಮೇಶ್ವರ್ ಫೋನ್ ಹ್ಯಾಕ್!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...