Homeಮುಖಪುಟಫೋನ್ ಟ್ಯಾಪ್ ಮಾಡಲಿ, ಜೈಲಿಗೆ ಹಾಕಲಿ, ನನ್ನ ಕೊನೆಯ ಉಸಿರಿರುವ ತನಕ ಬರೆಯುತ್ತಲೇ ಇರುವೆ

ಫೋನ್ ಟ್ಯಾಪ್ ಮಾಡಲಿ, ಜೈಲಿಗೆ ಹಾಕಲಿ, ನನ್ನ ಕೊನೆಯ ಉಸಿರಿರುವ ತನಕ ಬರೆಯುತ್ತಲೇ ಇರುವೆ

- Advertisement -
- Advertisement -

ಪೆಗಸಸ್ ಬೇಹುಗಾರಿಕೆಗೆ ಒಳಗಾಗಿದ್ದ ಪತ್ರಕರ್ತನ ಸಂದರ್ಶನ

2017-2019ರ ನಡುವೆ ದೇಶದ 40 ಪತ್ರಕರ್ತರ ಫೋನ್‌ಗಳ ಮೇಲೆ ಕಣ್ಗಾವಲು ಇಡಲಾಗಿತ್ತು. ಇದಕ್ಕಾಗಿ ಇಸ್ರೇಲಿನ ಬೇಹುಗಾರಿಕಾ ಸಂಸ್ಥೆಯಾದ ಎನ್‌ಎಸ್‌ಒ ಗ್ರೂಪ್ ಸೃಷ್ಟಿಸಿದ ಪೆಗಸಸ್ ಎಂಬ ಸಾಫ್ಟ್‌ವೇರ್‌ಅನ್ನು ಬಳಸಲಾಗಿತ್ತು. ಈ 40 ಜನರ ಪಟ್ಟಿಯಲ್ಲಿ ಜಾರ್ಖಂಡಿನ ಸ್ವತಂತ್ರ ಪತ್ರಕರ್ತ ರೂಪೇಶ್ ಕುಮಾರ್ ಅವರ ಹೆಸರೂ ಇದೆ. ದೆಹಲಿಯ ದೊಡ್ಡದೊಡ್ಡ ಹೆಸರುಗಳ ನಡುವೆ ರೂಪೇಶ್ ಕುಮಾರ್ ಇವರ ಹೆಸರು ಎದ್ದುಕಾಣುತ್ತದೆ, ಏಕೆಂದರೆ ಅವರು ಒಂದು ಸಣ್ಣ ಪಟ್ಟಣದಿಂದ ವರದಿ ಮಾಡುತ್ತಿರುವವರು ಹಾಗೂ ಯಾವುದೇ ದೊಡ್ಡ ಸುದ್ದಿ ವಾಹಿನಿಗಳೊಂದಿಗೆ ಕೆಲಸ ಮಾಡಿಲ್ಲ ಅಥವಾ ಯಾವುದೇ ದೊಡ್ಡ ನಾಯಕರ ಪ್ರಕರಣಗಳನ್ನು ಎಕ್ಸ್‌ಪೋಸ್ ಮಾಡಿಲ್ಲ.

ರೂಪೇಶ್ ಅವರು ಜಲ್, ಜಂಗಲ್ ಮತ್ತು ಜಮೀನ್ (ನೆಲ, ನೀರು ಮತ್ತು ಅರಣ್ಯ ಹಕ್ಕುಗಳು) ವಿಷಯಗಳ ಬಗ್ಗೆ ಮತ್ತು ಆದಿವಾಸಿಗಳ ಮೇಲೆ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ಬರೆದಿದ್ದಾರೆ. ಆ ಕಾರಣಕ್ಕಾಗಿಯೇ ಹಲವು ಬಾರಿ ರಾಜ್ಯ ಮತ್ತು ಒಕ್ಕೂಟ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರೂಪೇಶ್ ಅವರು ನಮ್ಮ ಪತ್ರಿಕೆಗೂ ಹಲವಾರು ಸಲ ಬರೆದಿದ್ದಾರೆ. ಅವರ ವರದಿಗಳು ಸಾಕ್ಷ್ಯಾಧಾರಗಳ ಸಮೇತ ವಿವರವಾಗಿರುತ್ತವೆ. ಹಾಗೂ ಅವರು ಆದಿವಾಸಿ ಜನರ ಹಕ್ಕುಗಳ ವಿಷಯದ ಬಗ್ಗೆ ಅನೇಕ ಸಂಘಟನೆಗಳು ಧ್ವನಿ ಎತ್ತಲು ಸಹಾಯ ಮಾಡಿದ್ದಾರೆ.

ಪತ್ರಿಕೆಯ ಬಳಗದ ಸ್ವಾತಿ ಶುಕ್ಲಾ ಅವರು ರೂಪೇಶ್ ಅವರ ಮೇಲೆ ನಡೆದಿರುವ ಬೇಹುಗಾರಿಕೆಯ ಬಗ್ಗೆ ಮತ್ತು ಈ ಪಟ್ಟಿಯಲ್ಲಿ ಅವರ ನಂಬರ್ ಇರುವುದರ ಬಗ್ಗೆ ಅವರನ್ನು ಸಂದರ್ಶಿಸಿದ್ದಾರೆ.

ರೂಪೇಶ್ ಕುಮಾರ್: ನಾನು ನೋಡಿದ ಸುದ್ದಿಗಳ ಅನುಸಾರ, ನನ್ನ ನಂಬರ್ ಮೇಲೆ ಕಣ್ಗಾವಲು ಶುರು ಆಗಿದ್ದು, ಜೂನ್ 9, 2017ರಂದು. ದಿನಗೂಲಿ ನೌಕರರಾದ ಮೋತಿಲಾಲ್ ಬಾಸ್ಕೆ ಅವರ ಕೊಲೆಯನ್ನು ವರದಿ ಮಾಡಿದ ನಂತರ. ಮೋತಿಲಾಲ್ ಬಾಸ್ಕೆ ಅವರನ್ನು ಒಬ್ಬ ಮಾವೋವಾದಿ ಎಂದು ಬಿಂಬಿಸಿ, ಅವರ ತಲೆಯ ಮೇಲೆ ಬಹುಮಾನ ಇಟ್ಟು, ಜಾರ್ಖಂಡಿನ ಗಿರಿಧ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಕೋಬ್ರಾ ತಂಡವು ಕೊಲೆ ಮಾಡಿತ್ತು.

ಮೋತಿಲಾಲ್ ಬಾಸ್ಕೆ ಒಬ್ಬ ಮಾವೋವಾದಿ ಆಗಿರಲಿಲ್ಲ, ಅವರೊಬ್ಬ ದಿನಗೂಲಿ ಕಾರ್ಮಿಕರಾಗಿದ್ದು, ಅದರೊಂದಿಗೆ ಪಾರಸನಾಥ್ ಪರ್ವತದಲ್ಲಿ ಒಂದು ಪುಟ್ಟ ಹೋಟೆಲ್ ಕೂಡ ನಡೆಸುತ್ತಿದ್ದರು ಎಂಬ ಸತ್ಯವನ್ನು ನನ್ನ ವರದಿಗಳಲ್ಲಿ ಹೊರತಂದೆ. ನಾನು ಬರೆದ ಆ ವರದಿಯನ್ನು ದಿ ವೈರ್, ಜಂಜವಾರ್, ಹಸ್ತಕ್ಷೇಪ್, ಭಾಡಸ್ ಮುಂತಾದ ವೆಬ್ ಪೋರ್ಟಲ್‌ಗಳಲ್ಲಿ ಹಾಗೂ ದಸ್ತಕ್ ಮತ್ತು ಸಮ್ಯಾಂತರ್ ಎಂಬ ಹಿಂದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಆ ಆದಿವಾಸಿ ವ್ಯಕ್ತಿಯನ್ನು ನಕ್ಸಲೈಟ್ ಎಂಬ ಸುಳ್ಳು ಆರೋಪ ಮಾಡಿ ಕೊಲ್ಲಲಾಗಿ, ತದನಂತರ ಬಹುಮಾನದ ಹಣವನ್ನು ವಿತರಿಸಲಾಗಿತ್ತು. ಈ ಪ್ರಕರಣದಲ್ಲಿ ಆಗಿನ ಜಾರ್ಖಂಡನ ಡಿಜಿಪಿ ಸೇರಿ ಅನೇಕ ಜನರು ಶಾಮೀಲಾಗಿದ್ದರು. ಹಾಗೂ ಆ ನನ್ನ ವರದಿ ಮುಖ್ಯವಾಗಿ ಮಾಡಿದ್ದೇನೆಂದರೆ, ನಕ್ಸಲ್ ಆಪರೇಷನ್‌ಗಳ ಮೋಸವನ್ನು ಬಯಲು ಮಾಡಿತ್ತು.

ನಂತರ, ಮೋತಿಲಾಲ್ ಬಾಸ್ಕೆ ಅವರ ನಕಲಿ ಎನ್‌ಕೌಂಟರ್ ವಿರುದ್ಧ ಒಂದು ಆಂದೋಲನವನ್ನು ಪ್ರಾರಂಭಿಸಲಾಯಿತು. ಅದನ್ನು ದಿನಗೂಲಿ ನೌಕರರ ಮಜದೂ ಯುನಿಯನ್ ಸಮಿತಿ, ಸವಂತ ಸುಸರ್ ಬಾಯಸಿ, ಸಿಪಿಐಎಮ್‌ಎಲ್(ಲಿಬರೇಷನ್), ವಿಸ್ತಾಪನ್ ವಿರೋಧಿ ಜನ ವಿಕಾಸ ಆಂದೋಲನ್, ಜಾರ್ಖಂಡ್ ಮುಕ್ತಿ ಮೋರ್ಚಾ, ಜಾರ್ಖಂಡ್ ವಿಕಾಸ್ ಮೋರ್ಚಾ ಮತ್ತು ಎಜೆಎಸ್‌ಯು ಪಾರ್ಟಿ ಸೇರಿ ಜಂಟಿಯಾಗಿ ಪ್ರಾರಂಭಿಸಿದ ’ದಮನ್ ವಿರೋಧಿ ಮೋರ್ಚಾ’ ಎಂಬ ವೇದಿಕೆಯು ಮುನ್ನಡೆಸಿತ್ತು. ಈ ಆಂದೋಲನದ ಕೂಗುಗಳು, ಇದರ ಬೇಡಿಕೆಗಳು ಜಾರ್ಖಂಡಿನ ವಿಧಾನಸಭೆ ಸೇರಿ, ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಕೇಳಿಸಿಕೊಂಡಿದ್ದವು.

ಈ ಸಮಯದಲ್ಲಿಯೇ, ನನ್ನ ಫೋನ್‌ಅನ್ನು ಟ್ಯಾಪ್ ಮಾಡಿದ್ದಾರೆ ಎಂದು ನನಗೆ ಸಂದೇಹ ಆಯಿತು. ಆಗ ನನ್ನ ಸ್ನೇಹಿತ ಮಿಥಿಲೇಶ್ ಕುಮಾರ್ ಸಿಂಗ್ ಹಾಗೂ ವಾಹನ ಚಾಲಕ ಮೊಹಮ್ಮದ್ ಕಲಾಮ್‌ರೊಂದಿಗೆ ನನ್ನನ್ನು 4ನೇ ಜೂನ್ 2019ರಂದು ಕೇಂದ್ರ ಐಬಿ ತಂಡವು ಅಪಹರಣ ಮಾಡಿತು. ಆಗ ನನ್ನ ಫೋನ್‌ಅನ್ನು ಟ್ಯಾಪ್ ಮಾಡಲಾಗುತ್ತಿದೆ ಹಾಗಾಗಿಯೇ ನನ್ನ ನಿರ್ದಿಷ್ಟ ಸ್ಥಾನ ಅವರಿಗೆ ತಿಳಿಯಿತು ಎಂದು ನನಗೆ ಐಬಿ ಜನರು ಹೇಳಿದರು. ಎರಡು ದಿನಗಳ ನಂತರ 6ನೇ ಜೂನ್ 2019 ರಂದು ನನ್ನ ಕಣ್ಣೆದುರಿಗೇ ಬಿಹಾರದ ದೋಬಿ ಜಿಲ್ಲೆಯಲ್ಲಿ ಸ್ಫೋಟಕ ವಸ್ತುಗಳೊಂದಿಗೆ ನನ್ನ ಬಂಧನದ ನಾಟಕ ಆಡಲಾಯಿತು. ನನ್ನನ್ನು ಯುಎಪಿಎ ಎಂಬ ಕರಾಳ ಕಾನೂನಿನ ಅಡಿಯಲ್ಲಿ ಜೈಲಿಗೆ ಅಟ್ಟಲಾಯಿತು.

ನನ್ನ ಜೀವನದ ಆರು ತಿಂಗಳು ಜೈಲಿನಲ್ಲಿ ಕೊಳೆಯುವಂತೆ ಮಾಡಲಾಯಿತು. ನನ್ನ ಸಾಮಾಜಿಕ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಸರಕಾರದ ಕಡೆಯಿಂದ ಇನ್ನಿಲ್ಲದ ಪ್ರಯತ್ನಗಳನ್ನು ಮಾಡಲಾಯಿತು. ನಾನು ಮತ್ತು ನನ್ನ ಕುಟುಂಬವು ಅತ್ಯಂತ ಒತ್ತಡದಲ್ಲಿದ್ದೆವು. ನಾನು ಜೈಲಿನಿಂದ ಹೊರಬಂದ ನಂತರವೂ ಐಬಿ ನನ್ನ ಮೇಲೆ ಕಣ್ಣಿಟ್ಟಿದೆ ಎಂಬ ಸೂಚನೆಗಳು ಸಿಕ್ಕಿದ್ದವು ಹಾಗೂ ನನಗೆ ಪರೋಕ್ಷ ಬೆದರಿಕೆಗಳನ್ನೂ ಹಾಕಲಾಯಿತು. ಇವೆಲ್ಲವೂ ಇಸ್ರೇಲಿನ ಸಾಫ್ಟ್‌ವೇರನ್ನು ಬಳಸಿ ಬೇಹುಗಾರಿಕೆ ಮಾಡಿದ್ದನ್ನು ತೋರಿಸುತ್ತದೆ.

ಸ್ವಾತಿ: ನಿನ್ನೆಯ ಮಾನ್ಸೂನ್ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ತುಂಬಾ ಗಲಾಟೆ ಆಯಿತು. ಈ ವಿಷಯದ ಬಗ್ಗೆ ತನಿಖೆ ಆಗುವುದು ಎಂಬುದರ ಬಗ್ಗೆ ನಿಮಗೆ ನಿರೀಕ್ಷೆಗಳಿವೆಯೇ?

ರೂಪೇಶ್: ಇಸ್ರೇಲಿನ ಕಂಪನಿ ತಮ್ಮ ಸ್ಪೈವೇರ್‌ಅನ್ನು ಇತರ ಸರಕಾರಗಳಿಗೆ ಮಾತ್ರ ಮಾರಾಟ ಮಾಡುವುದರಿಂದ, ನಮ್ಮೆಲ್ಲರ ಫೋನ್‌ಗಳನ್ನು ಟ್ಯಾಪ್ ಮಾಡಿದ್ದು ಸರಕಾರದ ಅನುಮತಿಯಿಂದಲೇ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಪತ್ರಿಕೆಗಳಿಗೆ ಹೇಳಿಕೆ ನೀಡಿದ ಐಟಿ ಸಚಿವರ ಹೆಸರು, ಅವರ ಹೆಂಡತಿಯ ಹೆಸರಿನ ಜೊತೆಗೆ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ರಾಹುಲ್ ಗಾಂಧಿ, ಪ್ರಭಾತ್ ಪಟೇಲ್ ಮತ್ತು ಅವರ 18 ಕುಟುಂಬದ ಜನರ ಹೆಸರೂ ಪಟ್ಟಿಯಲ್ಲಿದೆ.

ಸ್ವಾತಿ: ನ್ಯಾಯಾಲಯಗಳಿಂದ ನಿಮಗೆ ಏನಾದರೂ ನಿರೀಕ್ಷೆಗಳಿವೆಯೇ?

ರೂಪೇಶ್: ನನ್ನ ಅನುಭವದಲ್ಲಿ, ಸಾರ್ವಜನಿಕರ ಆಕ್ರೋಶ ಕಾಣಿಸಿಕೊಂಡಾಗ ವಿರೋಧ ಪಕ್ಷಗಳು ಮತ್ತು ನ್ಯಾಯಾಲಯಗಳು ಆ ವಿಷಯಗಳನ್ನು ಪರಿಗಣಿಸಿವೆ. ಈಗ ಒಬ್ಬ ಹಾಲಿ ನ್ಯಾಯಾಧೀಶರ ಹೆಸರೂ ಕಾಣಿಸಿಕೊಂಡಿದೆ ಎಂಬ ಸುದ್ದಿಯಿದೆ. ರಾಹುಲ್ ಗಾಂಧಿ ಮತ್ತು ಇವರ ನಿಕಟ ವಲಯದ ಹೆಸರುಗಳು ಪಟ್ಟಿಯಲ್ಲಿವೆ ಎಂಬ ಸುದ್ದಿಯಿದೆ, ಮಮತಾ ಬ್ಯಾನರ್ಜಿಯ ಸೋದರಳಿಯನ ಹೆಸರೂ ಇದೆ. ಭಾರತದ ಈ ವ್ಯವಸ್ಥೆಯಲ್ಲಿ ಸಾಧಾರಣವಾಗಿ, ವಿಷಯವನ್ನು ಮುಚ್ಚಿಹಾಕುವ ’ಒಳ ಒಪ್ಪಂದ’ ಆಗುವ ಸಾಧ್ಯತೆಗಳಿರುತ್ತವೆ, ಒಂದುವೇಳೆ ಸಾರ್ವಜನಿಕರ ಆಕ್ರೋಶ ಹೆಚ್ಚಾದರೆ, ಈ ವಿಷಯದಲ್ಲಿ ತನಿಖೆಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅನಿಸುತ್ತೆ.

ಸ್ವಾತಿ: ವೈಯಕ್ತಿಕ ನೆಲೆಯಲ್ಲಿ ಮತ್ತು ಸಾಮಾಜಿಕ ನೆಲೆಯಲ್ಲಿ ಈ ವಿಷಯವನ್ನು ನೀವು ಹೇಗೆ ನೋಡುತ್ತೀರಿ?

ರೂಪೇಶ್: ಸರಕಾರವು ನಮ್ಮ ಖಾಸಗಿತನದ ಹಕ್ಕುಗಳ ಮೇಲೆ ದಾಳಿ ಮಾಡಿದೆ. ಇದು ಸಂಪೂರ್ಣವಾಗಿ ಅಸಂವಿಧಾನಿಕವಾಗಿದೆ ಹಾಗೂ ನಮ್ಮ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡುವ ಪ್ರಯತ್ನವಾಗಿದೆ. ಈಗಲೂ ಜನರು ಎಚ್ಚೆತ್ತುಕೊಳ್ಳದಿದ್ದರೆ ಹಿಟ್ಲರ್‌ನಂತಹ ಸರ್ವಾಧಿಕಾರಿ ಮತ್ತು ಫ್ಯಾಸಿಸ್ಟ್ ಆಡಳಿತಕ್ಕೆ ನಮ್ಮ ದೇಶ ತಲುಪುವ ಸಮಯ ಬಹಳ ದೂರವಿಲ್ಲ. ಇದೇ ಆರ್‌ಎಸ್‌ಎಸ್‌ನ ಹಿಂದೂ ಮತ್ತು ಹಿಂದೂಸ್ತಾನ್‌ನ ಪರಿಕಲ್ಪನೆಯಾಗಿದೆ. ಈ ಫೋನ್ ಟ್ಯಾಪಿಂಗ್‌ನ ವಿಷಯವು ಮಂಜುಗಡ್ಡೆಯ ತುದಿ ಎಂದೆನಿಸುತ್ತದೆ.

ಆದರೆ, ನನಗೆ ಜನರಲ್ಲಿ ನಂಬಿಕೆಯಿದೆ; ನಮ್ಮ ಜನರು ಅನೇಕ ಹೋರಾಟಗಳ ಭಾಗವಾಗಿದ್ದನ್ನು ನಾನು ನೋಡಿದ್ದೇನೆ ಹಾಗಾಗಿ ಇದರ ವಿರುದ್ಧವೂ ಹೋರಾಟ ಮಾಡುವರು ಎಂದು ನನಗೆ ತಿಳಿದಿದೆ. ಈ ಎಪಿಸೋಡ್‌ಅನ್ನು ಸಹಿಸಬಾರದು. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಹಾಗೂ ಇದರ ವಿರುದ್ಧ ಸತತವಾಗಿ ಮಾತನಾಡಬೇಕು.

ವೈಯಕ್ತಿಕವಾಗಿಯೂ, ನನ್ನ ಮತ್ತು ಪಟ್ಟಿಯಲ್ಲಿರುವ ಇತರರೊಂದಿಗೆ ಆಗಿದ್ದು ನಿಜಕ್ಕೂ ಕೆಟ್ಟದ್ದು. ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ. ನಾನು ಯಾರೊಂದಿಗೆ ಮಾತನಾಡಿದ್ದೆ, ಯಾವ ಫೋಟೊಗಳನ್ನು ತೆಗೆದಿದ್ದೆ, ಯಾರ ಜೊತೆಗೆ ಚಾಟ್, ಏನೆಲ್ಲ ಚಾಟ್ ಮಾಡಿದ್ದೆ ಎಂಬುದನ್ನೆಲ್ಲ ಪರೀಕ್ಷಿಸಲಾಗಿದೆ. ನನ್ನ ಮೇಲೆ ಆದ ನನ್ನ ಖಾಸಗಿತನದ ಉಲ್ಲಂಘನೆ ಒಂದು ಗಂಭೀರ ಅಪರಾಧ.

ಹಾಗಾಗಿ ನಾನು ಚಿಂತಿತನಾಗಿದ್ದೇನೆಯೇ ಹೊರತು ಹೆದರಿಲ್ಲ. ಸರಕಾರವು ಜನವಿರೋಧಿಯಾಗಿದ್ದಾಗ, ನೀವು ಸತ್ಯ ಹೇಳಿದಲ್ಲಿ, ಅದು ನಿಮ್ಮನ್ನು ಸುಮ್ಮನಿರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೆ. ಇದು ನಮ್ಮ ದೇಶದಲ್ಲಿ ಆಗುತ್ತಿದೆ ಹಾಗೂ ಯಾರು ಇದನ್ನು ಮಾಡುತ್ತಿದ್ದಾರೋ, ಅವರು ಇಂತಹ ಬೇಹುಗಾರಿಕೆ ಮಾಡಿದ ಇತಿಹಾಸವನ್ನು ಉಳ್ಳವರಾಗಿದ್ದಾರೆ. ಮೋದಿ-ಶಾ ಅವರ ಸರಕಾರವು ಅವರ ಸ್ನೇಹಿತನ ಮಗಳ ಮೇಲೆಯೇ ಕಣ್ಗಾವಲನ್ನು ಇರಿಸಿತ್ತು. ಈಗ ಆ ಗುಜರಾತ್ ಮಾದರಿಯನ್ನು ದೇಶದೆಲ್ಲೆಡೆ ಅನ್ವಯಿಸಲಾಗುತ್ತಿದೆ.

ಜನರಿಗೆ ನಾನು ಮಾಡುವ ಮನವಿ ಏನೆಂದರೆ, ಇದು ದೇಶದ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡುವ, ಅದರಿಂದ ಸರ್ವಾಧಿಕಾರವನ್ನು ತರುವ ಪ್ರಯತ್ನವಾಗಿದೆ, ಇದನ್ನು ಈ ಸರಕಾರವೇ ಮಾಡುತ್ತಿದೆ ಎಂದು ಅರ್ಥಮಾಡಿಕೊಳ್ಳಬೇಕು ಹಾಗೂ ಜನರೆಲ್ಲರೂ ಸೇರಿ ಇದರ ವಿರುದ್ಧ ಹೋರಾಟ ಮಾಡಬೇಕು.

ಸ್ವಾತಿ: ಈ ವಿಷಯಕ್ಕೆ ಸಂಬಂಧಿಸಿದಂತೆ ನೀವು ಸರಕಾರ ಅಥವಾ ಎನ್‌ಎಸ್‌ಒ ವಿರುದ್ಧ ದೂರು ದಾಖಲಿಸುವಿರಾ?

ರೂಪೇಶ್: ನಾನು ನಮ್ಮ ವಕೀಲರೊಂದಿಗೆ ಚರ್ಚೆಯಲ್ಲಿದ್ದೇನೆ, ಆದರೆ ಅನೇಕ ಹೆಸರುಗಳು ಹೊರಬಿದ್ದಿವೆ. ನಾನೊಬ್ಬ ಪುಟ್ಟ ವ್ಯಕ್ತಿ. ದೆಹಲಿಗೆ ಹೋಗಲು, ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣದ ಹೋರಾಟ ಮಾಡಲು ನನ್ನ ಬಳಿ ಅಷ್ಟು ಸಾಮರ್ಥ್ಯವಿಲ್ಲ. ಆದರೆ, ಪಟ್ಟಿಯಲ್ಲಿ ಯಾರೆಲ್ಲ ಪತ್ರಕರ್ತರ ಹೆಸರಿದೆಯೋ, ಅವರೆಲ್ಲ ಸೇರಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಾರೆ ಎಂತಾದರೆ, ನಾನು ಖಂಡಿತವಾಗಿಯೂ ಭಾಗಿಯಾಗುತ್ತೇನೆ ಹಾಗೂ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುತ್ತೇನೆ.

ಒಕ್ಕೂಟ ಸರಕಾರಕ್ಕೆ ನಾನು ಒಂದು ಸಂದೇಶ ನೀಡಬಯಸುತ್ತೇನೆ; ನನ್ನ ಫೋನ್ ಟ್ಯಾಪ್ ಮಾಡಲಿ ಬಿಡಲಿ, ನನ್ನನ್ನು ಜೈಲಿನಲ್ಲಿ ಹಾಕಿದರೂ ಹಾಕಲಿ, ನಾನು ನನ್ನ ಕೊನೆಯ ಉಸಿರಿರುವ ತನಕ ನಮ್ಮ ಜನರಿಗಾಗಿ ಬರೆಯುತ್ತಲೇ ಇರುವೆ.

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಡಾ. ಸ್ವಾತಿ ಶುಕ್ಲಾ

ಡಾ.ಸ್ವಾತಿ ಶುಕ್ಲಾ
ಜರ್ಮನಿಯಲ್ಲಿ ರೋಗ ನಿರೋಧಕ ಶಾಸ್ತ್ರದಲ್ಲಿ ಪಿಎಚ್‌ಡಿಯನ್ನು ಮುಗಿಸಿದ್ದಾರೆ. ಸ್ವೀಡನ್‌ನಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನೂ ಮುಗಿಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಗೌರಿಲಂಕೇಶ್‌ನ್ಯೂಸ್.ಕಾಮ್‌ನ ಸಹ ಸಂಪಾದಕರಾಗಿದ್ದಾರೆ


ಇದನ್ನೂ ಓದಿ: ಪೆಗಾಸಸ್ ಹಗರಣ: ಅಮಿತ್ ಶಾ ಮೇಲೆ ನೇರ ಆರೋಪ ಹೊರಿಸಿದ ಕಾಂಗ್ರೆಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....