ದೇಶದ ಅತಿ ದೊಡ್ಡ ಮಾಧ್ಯಮ ಸಂಸ್ಥೆಗಳಲ್ಲೊಂದಾದ ದೈನಿಕ್ ಭಾಸ್ಕರ್ ಪತ್ರಿಕೆಯ ಹಲವು ಕಚೇರಿಗಳ ಮೇಲೆ ಇಂದು ಮುಂಜಾನೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ದೈನಿಕ್ ಭಾಸ್ಕರ್ ಪತ್ರಿಕೆಯ ದೆಹಲಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಕಚೇರಿಗಳ ಮೇಲೆ ಏಕಕಾಲಕ್ಕೆ ಐಟಿ ದಾಳಿ ನಡೆದಿದ್ದು, ಶೋಧ ಕಾರ್ಯ ಮುಂದುವರಿದಿದೆ ಎನ್ನಲಾಗಿದೆ.
ದೈನಿಕ್ ಭಾಸ್ಕರ್ ಪತ್ರಿಕೆಯು ಕೋವಿಡ್ ಎರಡನೇ ಅಲೆಯ ದುರಂತಗಳ ಕುರಿತು ಸತತ ವರದಿಗಳನ್ನು ಪ್ರಕಟಿಸಿತ್ತು. ಮುಖ್ಯವಾಗಿ ಹಲವು ರಾಜ್ಯಗಳು ಕೋವಿಡ್ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿವೆ ಎಂಬ ಸರಣಿ ತನಿಖಾ ವರದಿಗಳನ್ನು ಪ್ರಕಟಿಸಿತ್ತು. ಶ್ಮಶಾನದಲ್ಲಿ ಉರಿಯುತ್ತಿರುವ ಚಿತೆಗಳ ಸಂಖ್ಯೆಗೂ ಸರ್ಕಾರಗಳು ತೋರಿಸುತ್ತಿರುವ ಕೋವಿಡ್ ಸಾವಿನ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿರುವುದುನ್ನು ಇದು ಬಯಲಿಗೆಳೆದಿತ್ತು.
ಗುಜರಾತ್ ರಾಜ್ಯದ ಕೋವಿಡ್ ನಿರ್ವಹಣೆಯಲ್ಲಿನ ವಿಫಲತೆ, ದಿನನಿತ್ಯದ ಸಾವು ನೋವುಗಳನ್ನು ಈ ಪತ್ರಿಕೆ ನೇರಾ ನೇರ ವರದಿ ಮಾಡಿತ್ತು. ಒಂದು ಕಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಶಸ್ವಿಯಾಗಿ ಕೋವಿಡ್ ಅಲೆಯನ್ನು ಎದುರಿಸಿದ್ದೇವೆ ಎಂದು ಹೊಗಳಿಕೊಳ್ಳುವ ಸಮಯದಲ್ಲಿಯೇ ಈ ಪತ್ರಿಕೆ ಸರ್ಕಾರ ವೈಫಲ್ಯಗಳನ್ನು ತನ್ನ ಮುಖಪುಟದಲ್ಲಿ ಬೊಟ್ಟು ಮಾಡಿ ತೋರಿಸುತ್ತಿತ್ತು. ಆ ಪತ್ರಿಕೆಯ ಕಚೇರಿಗಳ ಮೇಲೆ ಐಟಿ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ದಲಿತ ಮಹಿಳೆಯ ಲಾಕಪ್ ಡೆತ್: ಮೂವರು ಪೊಲೀಸರು ಸೇವೆಯಿಂದ ವಜಾ


