Homeಚಳವಳಿನರಗುಂದ ಹೋರಾಟ ಮುಗಿಸಿ ತೆರಳುತ್ತಿದ್ದಾಗ ಅಪಘಾತ: ಹಿರಿಯ ರೈತ ಮುಖಂಡರಾದ ಜಿ.ಟಿ ರಾಮಸ್ವಾಮಿ, ರಾಮಣ್ಣ ನಿಧನ

ನರಗುಂದ ಹೋರಾಟ ಮುಗಿಸಿ ತೆರಳುತ್ತಿದ್ದಾಗ ಅಪಘಾತ: ಹಿರಿಯ ರೈತ ಮುಖಂಡರಾದ ಜಿ.ಟಿ ರಾಮಸ್ವಾಮಿ, ರಾಮಣ್ಣ ನಿಧನ

ಅವರೊಡನಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ರವಿಕಿರಣ್ ಪುಣಚರವರಿಗೂ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -
- Advertisement -

ಹುತಾತ್ಮ ದಿನಾಚರಣೆಯ ಅಂಗವಾಗಿ ಐತಿಹಾಸಿಕ ನರಗುಂದ ಬಂಡಾಯದ ಹೋರಾಟ ಮುಗಿಸಿ ವಾಪಸ್ ಹಾಸನಕ್ಕೆ ತೆರಳುತ್ತಿದ್ದಾಗ ಸಂಭವಿಸಿದ ಕಾರು ಅಪಘಾತದಲ್ಲಿ ಹಿರಿಯ ರೈತ ಮುಖಂಡರಾದ ಜಿ.ಟಿ ರಾಮಸ್ವಾಮಿ ಮತ್ತು ಚನ್ನಪಟ್ಟಣ ರಾಮಣ್ಣನವರು ನಿಧನರಾಗಿದ್ದಾರೆ. ಚಿಕ್ಕಮಗಳೂರು ಬಳಿ ಅಪಘಾತ ಸಂಭವಿಸಿದ್ದು ತಕ್ಷಣವೇ ಅವರನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.

ಅವರೊಡನಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ರವಿಕಿರಣ್ ಪುಣಚರವರಿಗೆ  ಗಾಯಗಳಾಗಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಗದಗ ಜಿಲ್ಲೆಯ ನರಗುಂದ ರೈತ ಹೋರಾಟ ಕಾರ್ಯಕ್ರಮ ಆಯೋಜಿಸುವಲ್ಲಿ ನಿರತರಾಗಿದ್ದ ಜಿ.ಟಿ ರಾಮಸ್ವಾಮಿ ಮತ್ತು ರಾಮಣ್ಣನವರು ನಿನ್ನೆ ಕಾರ್ಯಕ್ರಮ ಮುಗಿಸಿ ರಾತ್ರಿ 10ರ ವೇಳೆಗೆ ಅಲ್ಲಿಂದ ಹೊರಟಿದ್ದು, ಬೆಳಗ್ಗಿನ ಜಾವ 5 ಗಂಟೆಯ ಸಮಯದಲ್ಲಿ ಚಿಕ್ಕಮಗಳೂರು ಬಳಿ ಅಪಘಾತಕ್ಕೀಡಾಗಿದ್ದಾರೆ.

ನರಗುಂದ ರೈತ ಬಂಡಾಯ ಹೋರಾಟದಲ್ಲಿ ಹುತಾತ್ಮರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡುತ್ತಿರುವುದು

ಮೂಲತಃ ಕನಕಪುರದವರಾದ ಜಿ.ಟಿ ರಾಮಸ್ವಾಮಿಯವರು ಸೈನ್ಯದಲ್ಲಿ ಕೆಲ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ನಂತರ ಕೆಎಎಸ್‌ ಪಾಸು ಮಾಡಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿದ್ದವರು. ಅದಕ್ಕೂ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು ನಂತರ ಅಲ್ಲಿಂದ ಸಕ್ರಿಯ ರೈತ ಚಳವಳಿಯಲ್ಲಿ ತೊಡಗಿಕೊಂಡಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಅವರು ಹಾಸನ ಜಿಲ್ಲೆಯ ಆಲೂರಿನ ಬೆಳ್ಳವಾರದಲ್ಲಿ ತೋಟ ಮಾಡಿಕೊಂಡು ಕುಟುಂಬ ಸಮೇತ ವಾಸವಾಗಿದ್ದರು.

ಚನ್ನಪಟ್ಟಣ ರಾಮು ಎಂದೇ ಖ್ಯಾತಿಯಾಗಿದ್ದ ರಾಮಣ್ಣನವರು ಹಲವು ದಶಕಗಳಿಂದ ರೈತ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು.

ಸದಾ ರೈತ ಪರವಾಗಿ ನೂರಾರು ಹೋರಾಟಗಳನ್ನು ಸಂಘಟಿಸಿದ್ದ, ಸರಳ ಜೀವಿಗಳಾಗಿದ್ದ ಅವರ ಸಾವು ಬಹಳ ದುಃಖದ ಸಂಗತಿ, ನಾವು ಇಬ್ಬರು ಹೋರಾಟದ ಸಂಗಾತಿಗಳನ್ನು ಕಳೆದುಕೊಂಡಿದ್ದೇವೆ ಎಂದು ಅವರ ನಿಧನಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರರವರು, ಕಾರ್ಯದರ್ಶಿ ಗೋಪಾಲ್ ಸೇರಿದಂತೆ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸದ್ಯ ಅವರ ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿದ್ದು ಮರಣೋತ್ತರ ಪರೀಕ್ಷೆ ಮುಗಿದ ನಂತರ ಅಂತ್ಯಕ್ರಿಯೆಗೆ ಕೊಂಡೊಯ್ಯಲಾಗುತ್ತದೆ ಎನ್ನಲಾಗಿದೆ. ಜಿ ಟಿ ರಾಮಸ್ವಾಮಿ ಅವರ ಅಂತ್ಯಕ್ರಿಯೆಯು ಇಂದು ಸಂಜೆ 4 ಗಂಟೆಗೆ ಅವರ ತೋಟ ಹಾಸನ ಜಿಲ್ಲೆ ಆಲೂರು ತಾಲೂಕಿನ ಬೆಳ್ಳವಾರದಲ್ಲಿ ನಡೆಯಲಿದೆ.

ದಿವಂಗತ ಚನ್ನಪಟ್ಟಣ ರಾಮು ಅವರ ಅಂತ್ಯಕ್ರಿಯೆಯು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅವರ ಸ್ವಗ್ರಾಮ ಮೊಗೇನಹಳ್ಳಿಯಲ್ಲಿ ನಡೆಯಲಿದೆ.


ಇದನ್ನೂ ಓದಿ: ಹುತಾತ್ಮರ ದಿನಾಚರಣೆ: ಬಂಡಾಯದ ನೆಲ ನರಗುಂದದಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಿದ ರೈತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

0
ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ...