ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪೆಗಾಸಸ್ ಕಣ್ಗಾವಲು ಪ್ರಕರಣಕ್ಕೆ ಒಳಗಾದವರ ಹೆಸರನ್ನು ದಿನೇ ದಿನೇ ಬಿಡುಗಡೆ ಮಾಡುತ್ತಿರುವ ದಿ ವೈರ್ ಇಂದು ಮಾಜಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ಅನಿಲ್ ಅಂಬಾನಿ ಕೂಡ ಪೆಗಾಸಸ್ ಪಟ್ಟಿಯಲ್ಲಿದ್ದರು ಎಂಬ ಅಂಶವನ್ನು ಬಹಿರಂಗಪಡಿಸಿದೆ.
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಮತ್ತು ಮಾಜಿ ಹೆಚ್ಚುವರಿ ಎಕೆ ಶರ್ಮಾ ಕೂಡ ಕಣ್ಗಾವಲು ಪಟ್ಟಿಯಲ್ಲಿದ್ದಾರೆ ಎಂದು ದಿ ವೈರ್ ಹೇಳಿದೆ. ಈ ಹೆಸರುಗಳು 2018ರ ಸಂದರ್ಭದಲ್ಲಿ ಕಣ್ಗಾವಲು ಪಟ್ಟಿಗೆ ಸೇರಿಸಲಾಗಿದೆ ಎನ್ನಲಾಗಿದೆ.
2018ರ ಅಕ್ಟೋಬರ್‌ನಲ್ಲಿ ಸಿಬಿಐ ಒಳಗೆ ಬಣ ರಾಜಕೀಯ ನಡೆಯುತ್ತಿತ್ತು. ಆಗ ಅಲೋಕ್ ವರ್ಮಾರವರು ರಾಕೇಶ್ ಅಸ್ಥಾನ ವಿರುದ್ಧ ಎಫ್‌ಐಆರ್ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಅವರ ನಂಬರ್ ಅನ್ನು ಟ್ಯಾಪ್ ಮಾಡುವ ಪಟ್ಟಿಗೆ ಸೇರಿಸಲಾಗಿದೆ ಎಂದು ವೈರ್ ತಿಳಿಸಿದೆ. ಆಗ ಅವರಿಬ್ಬರೂ ತಮ್ಮ ಕರ್ತವ್ಯಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಲೋಕ್ ವರ್ಮಾರವರ ಕುಟುಂಬ ಸದಸ್ಯರ ಫೋನ್ ನಂಬರ್‌ಗಳನ್ನು ಕೂಡ ಪಟ್ಟಿಗೆ ಸೇರಿಸಲಾಗಿದೆ. ವರ್ಮಾರವರ ಹೆಂಡತಿ, ಮಗಳು, ಅಳಿಯ, ಸೇರಿದಂತೆ ಒಟ್ಟು 8 ಕುಟುಂಬ ಸದಸ್ಯರ ಹೆಸರನ್ನು ಸೇರಿಸಲಾಗಿದೆ. ಕೆಲ ಸಮಯದ ನಂತರ ಈ ಮೊಬೈಲ್ ಸಂಖ್ಯೆಗಳನ್ನು ಕೈಬಿಡಲಾಗಿದೆ ಎನ್ನಲಾಗಿದೆ.
ಅದೇ ರೀತಿಯಲ್ಲಿ ಅನಿಲ್ ಅಂಬಾನಿ ಮತ್ತು ಅವರ ಉದ್ಯೋಗಿ ಟೋನಿ ಜೆಸುಡಾನ್ ಹಾಗೂ ಫ್ರೆಂಚ್ ಕಂಪನಿ ಡಸಾಲ್ಟ್ ಏವಿಯೇಷನ್‌ನ ಭಾರತದ ಪ್ರತಿನಿಧಿ ವೆಂಕಟ ರಾವ್ ಪೊಸಿನಾ ಅವರ ಸಂಖ್ಯೆಯೂ ಕಣ್ಗಾವಲು ಪಟ್ಟಿ ಸೇರಿದೆ ಎಂದು ವೈರ್ ತಿಳಿಸಿದೆ.
ರಫೇಲ್ ಜೆಟ್‌ಗಳನ್ನು ಖರೀದಿಸಲು ಡಸಾಲ್ಟ್‌ನೊಂದಿಗೆ ಭಾರತ ಸರ್ಕಾರವು ಮಾಡಿಕೊಂಡ ಒಪ್ಪಂದದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ದೂರು ದಾಖಲಾದ ಕೂಡಲೇ ಅವರ ನಂಬರ್‌ಗಳನ್ನು ಪಟ್ಟಿಗೆ ಸೇರಿಸಲಾಗಿದೆ ಎಂದು ವೈರ್ ಹೇಳಿದೆ. 2018 ರಿಂದ 2019ರವರೆಗೆ ಹಲವು ಉದ್ಯೋಗಿಗಳ ಸಂಖ್ಯೆಗಳನ್ನು ಸೇರಿಸಲಾಗಿದೆ.
ಸಿಬಿಐ ಮಾಜಿ ನಿರ್ದೇಶಕರಾದ ಅಲೋಕ್ ವರ್ಮಾರವರು ತಮ್ಮದೆ ಇಲಾಖೆಯ ಅಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಅವರ ನಂಬರ್ ಅನ್ನು ಟ್ಯಾಪ್ ಮಾಡುವ ಪಟ್ಟಿಗೆ ಏಕೆ ಸೇರಿಸಲಾಯಿತು? ಏಕೆ ಅವರನ್ನು ಬ್ಲಾಕ್‌ಮೇಲ್ ಮಾಡಲಾಯಿತು? ಇದನ್ನು ಯಾರು ಮಾಡಿದರು ಎಂಬುದು ನಿಜವಾದ ಪ್ರಶ್ನೆಯಲ್ಲವೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಜನರ ದನಿ ಅಡಗಿಸಲು ಪೆಗಾಸಸ್ ಆಯುಧ ಬಳಸಲಾಗುತ್ತಿದೆ : ರಾಹುಲ್ ಗಾಂಧಿ


