ದಕ್ಷಿಣ ಏಷ್ಯಾ ದೇಶಗಳ ಮಹಿಳೆಯರೊಂದಿಗೆ ಆನ್‌ಲೈನ್‌ನಲ್ಲಿ ಸ್ನೇಹ ಬೆಳೆಸಿ, ಹಣದ ಆಮಿಷ ಒಡ್ಡಿ ಅವರ ನಗ್ನ ಫೋಟೋಗಳು ಮತ್ತು ಅಶ್ಲೀಲ ವಿಡಿಯೊಗಳನ್ನು ಕಳುಹಿಸುವಂತೆ ಒತ್ತಡ ಹೇರುತ್ತಿದ್ದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಒಮ್ಮೆ ಹಣದ ಬದಲಾಗಿ ಅವರ ಅಶ್ಲೀಲ ಫೋಟೋಗಳು ಮತ್ತು ವಿಡಿಯೊಗಳನ್ನು ಕಳುಹಿಸಿದ ಬಳಿಕ ಮತ್ತಷ್ಟು ಪೋಟೋ, ವಿಡಿಯೊ ಕಳುಹಿಸಲು ಒಪ್ಪದಿದ್ದರೇ, ಮೊದಲು ಕಳುಹಿಸಿರುವ ಚಿತ್ರಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಪ್ರಕರಣದಲ್ಲಿ 21 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಜತಿನ್ ಭಾರದ್ವಾಜ್ ಸಾಮಾನ್ಯವಾಗಿ ಖಿನ್ನತೆಯಿಂದ ಬಳಲುತ್ತಿರುವ ಮಹಿಳೆಯರನ್ನು ಅಥವಾ ಆರ್ಥಿಕವಾಗಿ ದುರ್ಬಲಗೊಂಡ ವರ್ಗಕ್ಕೆ ಸೇರಿದ ಮಹಿಳೆಯರನ್ನು “ಟಾಕ್ ಲೈಫ್” ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್: ಬುಡಕಟ್ಟು ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪತಿ ಮತ್ತು ಗ್ರಾಮಸ್ಥರು
ಇಂಡೋನೇಷ್ಯಾದ ಮಹಿಳೆಯೊಬ್ಬರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈ ಮಹಿಳೆಯೂ ಟಾಕ್ ಲೈಫ್ ಆ್ಯಪ್‌ನಲ್ಲಿ ಆರೋಪಿಯನ್ನು ಭೇಟಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಜತಿನ್ ಭಾರದ್ವಾಜ್ 15 ಕ್ಕೂ ಹೆಚ್ಚು ಮಹಿಳೆಯರನ್ನು ಈ ಆನ್‌ಲೈನ್ ಅಪ್ಲಿಕೇಶನ್ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ. ಅವರಲ್ಲಿ ಮೂವರು ಮಹಿಳೆಯರು ಈತನಿಗೆ ನಗ್ನ ಫೋಟೋಗಳು ಮತ್ತು ವಿಡಿಯೊಗಳನ್ನು ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಮ್ಮ ತಂಡವು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದೆ. ಆರೋಪಿಯ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದೆ. ಆದರೆ ಮೊಬೈಲ್ ಕರೆ ವಿವರಗಳು ಮತ್ತು ಸಂಖ್ಯೆಯ ಮಾಲೀಕರು ಯಾರು ಎಂಬುದನ್ನು ತನಿಖೆ ನಡೆಸಿದ ಬಳಿಕ ಆತನನ್ನು ಬಂಧಿಸಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತ (ಶಹದಾರಾ) ಆರ್.ಸತ್ಯಾಸುಂದರಂ ಹೇಳಿದ್ದಾರೆ.
ಇನ್ನು ತನಿಖೆ ಮುಂದುವರೆದಿದ್ದು, ಈ ಪ್ರಕರಣದಲ್ಲಿ ಮತ್ಯಾರಾದರೂ ಭಾಗಿಯಾಗಿದ್ದಾರಾ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಜೊತೆಗೆ ಅಶ್ಲೀಲ ವಿಷಯ ಹೊಂದಿದ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳಿಂದ ಪ್ರತಿದಿನ 6 ರಿಂದ 8 ಲಕ್ಷ ಗಳಿಸುತ್ತಿದ್ದರು: ಪೊಲೀಸರು