ಕಳೆದ 8 ತಿಂಗಳಿನಿಂದ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಿನ ವಿರುದ್ದ ದೆಹಲಿ ಗಡಿಗಳ ಸುತ್ತಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ರೈತರು ತಮ್ಮ ಹೋರಾಟವನ್ನು ಉತ್ತರ ಪ್ರದೇಶ ಮತ್ತು ಉತ್ತಾರಾಖಂಡ ರಾಜ್ಯಗಳಿಗೂ ವಿಸ್ತರಿಸುವುದಾಗಿ ಹೇಳಿದ್ದು, ಸೆಪ್ಟೆಂಬರ್ ತಿಂಗಳಿನಿಂದ ಅಲ್ಲಿ ಹೋರಾಟಗಳು ಪ್ರಾರಂಭವಾಗುತ್ತದೆ. ಈ ಹೋರಾಟವನ್ನು ರೈತ ಮುಖಂಡರು ಪ್ರಕಟಿಸುತ್ತಿದ್ದಂತೆ ಉತ್ತರ ಪ್ರದೇಶ ಬಿಜೆಪಿ ರೈತರನ್ನು ಬಹಿರಂಗವಾಗಿ ಬೆದರಿಸಿದೆ.
ಬಿಜೆಪಿಯು, “ಆದಿತ್ಯನಾಥ್ ನಿಮ್ಮ ಚರ್ಮ ಸುಲಿದು, ಪೋಸ್ಟರ್‌ಗಳನ್ನು ಗೋಡೆಗಳಿಗೆ ಅಂಟಿಸುತ್ತಾರೆ” ಎಂದು ಬೆದರಿಸಿದೆ. ಆದರೆ ರೈತರು, ಬಿಜೆಪಿಯ ಬೆದರಿಕೆಗೆ ಜಗ್ಗಲ್ಲ, ಹೋರಾಟವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆದಿತ್ಯನಾಥ್ ಜನ್ಮದಿನಕ್ಕೆ ಮೋದಿಯೇಕೆ ಶುಭಾಶಯದ ಟ್ವೀಟ್ ಮಾಡಲಿಲ್ಲ? ಬಿಜೆಪಿ ನಾಯಕತ್ವಕ್ಕೆ ಯೋಗಿ ಬಗ್ಗೆ ಅಸಮಾಧಾನವೇ?
ಜುಲೈ 26 ರಂದು ಲಕ್ನೋಗೆ ಭೇಟಿ ನೀಡಿದ್ದ ರೈತರ ನಾಯಕರು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ ಪ್ರತಿಭಟನೆಗಳನ್ನು ವಿಸ್ತರಿಸುವುದಾಗಿ ಘೋಷಿಸಿದ್ದರು. ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಮತ್ತು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಅವರು ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲಿ ಮಹಾಪಂಚಾಯತ್, ರ್‍ಯಾಲಿ ಮತ್ತು ಸಭೆಗಳನ್ನು ನಡೆಸುವುದಾಗಿ ಘೋಷಿಸಿದ್ದರು.
ಗುರುವಾರದಂದು ಈ ಹೋರಾಟಗಳ ವಿರುದ್ದ ಬಿಜೆಪಿಯ ಅಧೀಕೃತ ಕಾರ್ಟೂನ್ ಒಂದನ್ನು ಪೋಸ್ಟ್ ಮಾಡಿದೆ. ಅದರಲ್ಲಿ ರಾಕೇಶ್ ಟಿಕಾಯತ್ ಅವರಂತೆ ಕಾಣುವ ವ್ಯಕ್ತಿಯೊಬ್ಬರಿಗೆ ಮತ್ತೊಬ್ಬ ವ್ಯಕ್ತಿ ಹೆದರುತ್ತಾ, “ನೀವು ಲಕ್ನೋಗೆ ತೆರಳುತ್ತಿದ್ದೀರಿ ಎಂದು ಕೇಳಿದೆ. ಅಲ್ಲಿ ಯಾರೊಂದಿಗೂ ಘರ್ಷಣೆಗೆ ಇಳಿಯಬೇಡಿ. ಅಲ್ಲಿ ಯೋಗಿ ಕುಳಿತಿದ್ದು, ಅವರು ನಿಮ್ಮನ್ನು ಹೊಡೆದು ಚರ್ಮವನ್ನು ಸುಲಿಯುತ್ತಾರೆ. ಅಲ್ಲದೆ ನಿಮ್ಮ ಪೋಸ್ಟರ್ ಅನ್ನು ನಗರದ ಗೋಡೆಗಳ ಮೇಲೆ ಅಂಟಿಸುತ್ತಾರೆ” ಎಂದು ಹೇಳುವಂತೆ ಮತ್ತು ಕಾವಿಧಾರಿಯೊಬ್ಬ ರೈತ ಮುಖಂಡನ ಕೂದಲನ್ನು ಹಿಡಿದು ಎಳೆದುಕೊಂಡು ಹೋಗುತ್ತಿರುವಂತೆ ಚಿತ್ರಿಸಲಾಗಿದೆ. ಈ ಕಾರ್ಟೂನ್ ಅನ್ನು ಹಂಚಿರುವ ಬಿಜೆಪಿ, “ಓ ಅಣ್ಣಾ ಲಕ್ನೋಗೆ ಸ್ವಲ್ಪ ಎಚ್ಚರಿಕೆಯಿಂದ ತೆರಳಿ” ಎಂದು ಬರೆದಿದೆ.
ओ भाई जरा संभल कर जइयो लखनऊ में…#BJP4UP pic.twitter.com/TKwrjaIXYz
— BJP Uttar Pradesh (@BJP4UP) July 29, 2021
ಬಿಜೆಪಿಯ ಬೆದರಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ರಾಜಕೀಯ ವಲಯ ಹಾಗೂ ರೈತರ ಆಂದೋಲನದ ಬೆಂಬಲಿಗರಲ್ಲಿ ಕೋಲಾಹಲವನ್ನು ಉಂಟುಮಾಡಿದೆ.
ಇದನ್ನೂ ಓದಿ: ಆದಿತ್ಯನಾಥ್ ಸರ್ಕಾರದ ಕೊರೊನಾ ನಿರ್ವಹಣೆಯನ್ನು ಶ್ಲಾಘಿಸಿದ ಬಿಜೆಪಿ!
“ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಅವರ ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರದ ಕಾರಣ ಜನ ಚಳುವಳಿಗಳನ್ನು ಹತ್ತಿಕ್ಕುತ್ತಿದ್ದಾರೆ. ಕಾರ್ಟೂನ್ ಪ್ರಕಟಿಸುವ ಮೂಲಕ, ಬಿಜೆಪಿ ತನ್ನ ನಿಜವಾದ ಮುಖವನ್ನು ಸಾರ್ವಜನಿಕರಿಗೆ ತೋರಿಸುತ್ತಿದೆ. ಯಾವುದೇ ಬೆದರಿಕೆಗೆ ಒಳಗಾಗಿ ತಮ್ಮ ಪ್ರತಿಭಟನೆಯನ್ನು ರೈತರು ಹಿಂತೆಗೆದುಕೊಳ್ಳುವುದಿಲ್ಲ” ಎಂದು ರೈತ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಉತ್ತರ ಪ್ರದೇಶದ ಪ್ರಧಾನ ವಿರೋಧ ಪಕ್ಷ ಸಮಾಜವಾದಿ ಪಕ್ಷ (ಎಸ್ಪಿ) ನಾಯಕ ಸುನಿಲ್ ಕುಮಾರ್ ಸಾಜನ್, “ಪ್ರಸ್ತುತ ಕಾರ್ಟೂನ್, ಬಡವರು ಮತ್ತು ರೈತರ ಬಗ್ಗೆಗಿನ ಬಿಜೆಪಿಯ ಆಲೋಚನೆ ಮತ್ತು ಸಿದ್ಧಾಂತವನ್ನು ಪ್ರತಿಬಿಂಬಿಸುತ್ತದೆ. ಕಾರ್ಟೂನ್‌ನಲ್ಲಿ ರೈತನ ತಲೆಯಿಂದ ಬೀಳುವ ಟೋಪಿ ವಾಸ್ತವವಾಗಿ ರೈತನ ಹೆಮ್ಮಯಾಗಿದೆ. ಕಾರ್ಟೂನ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಹಂಕಾರವನ್ನು ಪ್ರತಿಬಿಂಬಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕೂಡ ಕಾರ್ಟೂನ್ ಅನ್ನು ಖಂಡಿಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು, “ ಈ ಕಾರ್ಟೂನ್ ಮೂಲಕ ಸರ್ಕಾರವು ಗೂಂಡಾಗಿರಿಯನ್ನು ಬಳಸಿ ಪ್ರತಿಭಟನೆಯನ್ನು ಇಲ್ಲದಂತೆ ಮಾಡಲು ಬಯಸುತ್ತದೆ ಎಂದು ಜೋರಾಗಿ ಮತ್ತು ಸ್ಪಷ್ಟ ಸಂದೇಶವನ್ನು ನೀಡಿದೆ. ಕಾಂಗ್ರೆಸ್ ರೈತರ ಬೆಂಬಲಕ್ಕಿದ್ದು, ರೈತರ ಪ್ರತಿಭಟನೆಯನ್ನು ಅಡಗಿಸಲು, ಬಿಜೆಪಿಯ ಸೊಕ್ಕಿನ ಆಡಳಿತಕ್ಕೆ ನಾವು ಅನುಮತಿಸುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ವಿವಿಗಳಲ್ಲಿ ಯೋಗಿ ಆದಿತ್ಯನಾಥ್, ಬಾಬಾ ರಾಮದೇವ್ ಕುರಿತು ಪಠ್ಯ!


