ಭಾರತದ ಡಿಸ್ಕಸ್ ಎಸೆತಗಾರ್ತಿ ಕಮಲ್‌ಪ್ರೀತ್ ಕೌರ್ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು, ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು ಫೈನಲ್‌ಗೆ ತಲುಪಿದ್ದಾರೆ. 25 ವರ್ಷದ ಕಮಲ್‌ಪ್ರೀತ್ ಬಿ ಗ್ರೂಪ್‌ನಲ್ಲಿದ್ದು ತನ್ನ ಮೂರನೇ ಮತ್ತು ಅಂತಿಮ ಎಸೆತದಲ್ಲಿ ಡಿಸ್ಕಸ್ ಅನ್ನು 64 ಮೀಟರ್ ದೂರಕ್ಕೆ ಎಸೆದು ಎರಡನೆ ಸ್ಥಾನಕ್ಕೆ ತಲುಪಿದ್ದಾರೆ. ಫೈನಲ್ ಪಂದ್ಯವು ಆಗಸ್ಟ್ 2ರ ಸೋಮವಾರದಂದು ನಡೆಯಲಿದ್ದು, ಒಟ್ಟ 12 ಮಂದಿ ಸ್ಪರ್ಧಿಗಳಿದ್ದಾರೆ.
#KamalpreetKaur has qualified for Women’s Discus Throw finals at #Tokyo2020
Let's cheer for her, let's #Cheer4India ?? pic.twitter.com/l8lY3WOoIV
— PIB India (@PIB_India) July 31, 2021
ಪಂಜಾಬ್ ಮೂಲದ ಕಮಲ್‌ಪ್ರೀತ್ ಈ ವರ್ಷ ಉತ್ತಮ ಫಾರ್ಮ್‌ನಲ್ಲಿದ್ದು, ಇತ್ತೀಚೆಗೆ ಎರಡು ಬಾರಿ 65 ಮೀಟರ್ ದೂರ ಡಿಸ್ಕಸ್ ಎಸೆದು ದಾಖಲೆ ಮಾಡಿದ್ದರು. ಮಾರ್ಚ್‌ನಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ ಅವರು 65.06 ಮೀಟರ್ ಎಸೆದು ರಾಷ್ಟ್ರೀಯ ದಾಖಲೆಯನ್ನು ಮುರಿದ್ದರು. ಈ ಮೂಲಕ 65 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರ ಜೂನ್‌ನಲ್ಲಿ, ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ -4 ರ ಸಮಯದಲ್ಲಿ 66.59 ಮೀಟರ್ ಎಸೆತದೊಂದಿಗೆ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದ ಅವರು ವಿಶ್ವ ಆರನೇ ಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್: ಬ್ಯಾಡ್ಮಿಂಟನ್ ತಾರೆ ‘ಪಿವಿ ಸಿಂಧು’ ಸೆಮಿಫೈನಲ್‌ಗೆ ಲಗ್ಗೆ!
ಶುಕ್ರವಾರ ನಡೆದ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿಯನ್ನು ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು 21-13, 22-20 ಅಂತರದಲ್ಲಿ ಸೋಲಿಸಿದ್ದಾರೆ. ಇಂದು ಸಂಜೆ 03:20 ಕ್ಕೆ ಅವರು ಚೈನೀಸ್ ತೈಪೆಯ ಥಾಯ್ ತ್ಸು ಯಿಂಗ್ ಅವರನ್ನು ಎದುರಿಸಲಿದ್ದಾರೆ.
ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಈ ಹಿಂದಿನ ವಿಶ್ವ ಚಾಂಪಿಯನ್ ಚೀನಾದ ತೈಪೆಯ ಚೆನ್ ನಿಯೆನ್ ಚಿನ್ ಅವರನ್ನು ಸೋಲಿಸಿ ಮಹಿಳಾ ವೆಲ್ಟರ್‌ವೈಟ್ (69 ಕೆಜಿ) ವಿಭಾಗದ ಸೆಮಿಫೈನಲ್‌ಗೆ ತಲುಪಿದ್ದಾರೆ. ಈ ಮೂಲಕ ಅವರು ಭಾತರಕ್ಕೆ ಕಂಚಿನ ಪದಕವನ್ನು ಖಾತ್ರಿ ಪಡಿಸಿದ್ದಾರೆ. ಲವ್ಲಿನಾ ಮುಂದಿನ ಪಂದ್ಯವನ್ನು ಆಗಸ್ಟ್ 4 ರ ಬುಧವಾರದಂದು ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ದ ಸೆಣಸಲಿದ್ದಾರೆ. ಅಲ್ಲಿ ಗೆದ್ದರೆ ಅವರು ಚಿನ್ನದ ಪದಕ ಪಡೆಯಲು ಒಂದು ಪಂದ್ಯವನ್ನು ಆಡಬೇಕಿದೆ.
ಭಾರತೀಯ ಮಹಿಳಾ ಹಾಕಿ ತಂಡವು ಶುಕ್ರವಾರ ಐರ್ಲೆಂಡ್ ವಿರುದ್ಧ 1-0 ಅಂತರದಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿದ್ದು, ಇಂದು ಮತ್ತೆ ಎರಡನೆ ಗೆಲುವನ್ನು ಸೌತ್ ಆಫ್ರಿಕಾ ತಂಡ ಎದುರು ಸಾಧಿಸಿದೆ. ‘ಎ’ ಫೋಲ್‌ನಲ್ಲಿರುವ ಭಾರತ ಮಹಿಳಾ ತಂಡವು ಸೌತ್ ಆಫ್ರಿಕಾ ಎದುರು 4-3 ಅಂತರದಲ್ಲಿ ಗೆದ್ದುಕೊಂಡಿದೆ.
ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ ಖಚಿತ!
ಪುರುಷರ ಸೂಪರ್ ಹೆವಿ ವೈಟ್ ಬಾಕ್ಸಿಂಗ್‌ನಲ್ಲಿ ಗುರುವಾರದಂದು ಭಾರತದ ಸತೀಶ್ ಕುಮಾರ್ ಅವರು ಜಮೈಕಾದ ರಿಕಾರ್ಡೊ ಬ್ರೌನ್ ವಿರುದ್ಧ 4: 1 ರ ಸುತ್ತಿನಲ್ಲಿ ಗೆದ್ದು, ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಭಾನುವಾರದಂದು ಉಜ್ಬೇಕಿಸ್ತಾನದ ಬಾಖೋದಿರ್ ಜಲಾಲೋವ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಹಾಕಿ ಪಂದ್ಯದಲ್ಲಿ ಭಾರತವು ಜಪಾನ್ ವಿರುದ್ದ 5-3 ಅಂತರದಲ್ಲಿ ಜಯಭೇರಿ ಬಾರಿಸಿ, ಕ್ವಾರ್ಟರ್ ಫೈನಲ್ ತಲುಪಿದೆ. ಮುಂದಿನ ಪಂದ್ಯವು ಗ್ರೇಟ್ ಬ್ರಿಟನ್ ಜೊತೆ ಭಾನುವಾರ ಸಂಜೆ 05:30 ಗೆ ನಡೆಯಲಿದೆ.
ಇನ್ನು, ಗುರುವಾರ ಪುರುಷರ ವೈಯಕ್ತಿಕ ಬಿಲ್ಲುಗಾರಿಕೆಯಲ್ಲಿ ಅತನು ದಾಸ್ ಅವರು 2012 ರ ಚಾಂಪಿಯನ್ ದಕ್ಷಣ ಕೊರಿಯಾದ ಓಹ್ ಜಿನ್ ಹೈಕಿನ್ ಅವರನ್ನು ಸೋಲಿಸಿ ಪ್ರೀ ಕ್ವಾಟರ್ ಫೈನಲ್‌ಗೆ ತಲುಪಿದ್ದರು. ಆದರೆ ಶನಿವಾರ(ಇಂದು) ನಡೆದ ಜಪಾನಿನ ತಕಹಾರು ಫುರುಕವ ಅವರ ವಿರುದ್ದ 4-6 ಅಂತರದಲ್ಲಿ ಅವರು ಸೋಲುಂಡಿದ್ದಾರೆ.
ಟೋಕಿಯೊ ಒಲಿಂಪಿಕ್‌ನಲ್ಲಿ 49 ಕೆಜಿ ವೈಟ್‌ಲಿಫ್ಟಿಂಗ್ ವಿಭಾಗದಲ್ಲಿ ಮಣಿಪುರ ಮೂಲದ ಮಿರಾಬಾಯಿ ಚಾನು ಅವರು ಬೆಳ್ಳಿ ಗೆದ್ದುಕೊಂಡಿದ್ದರು. ಇದರ ನಂತರ ಭಾರತಕ್ಕೆ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಮೂಲಕ ಎರಡನೆ ಪದಕ ಖಚಿತಗೊಂಡಿದೆ.
ಇದನ್ನೂ ಓದಿ: ಒಂದಿಡೀ ಸಮುದಾಯ ಮತ್ತು ದೇಶ ಸಂಭ್ರಮಿಸುವ ಕ್ರೀಡಾಸ್ಪೂರ್ತಿ ರಾಷ್ಟ್ರೀಯತೆಯ ಒಲಿಂಪಿಕ್ಸ್