ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎದುರು ಹೊಸದಾಗಿ ಹಾಕಿದ ‘ಅದಾನಿ ಏರ್‌ಪೋರ್ಟ್’ ಎಂಬ ಸೈನ್‌ಬೋರ್ಡ್‌ಗಳನ್ನು ಶಿವಸೇನೆ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ.
ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದ ನಿರ್ವಹಣೆಯ ಹಕ್ಕನ್ನು ಅದಾನಿ ಸಮೂಹ ಸಂಸ್ಥೆ ಪಡೆದುಕೊಂಡಿದೆ. ಹಾಗಾಗಿ ಅದು ‘ಅದಾನಿ ಏರ್‌ಪೋರ್ಟ್’ ಎಂಬ ಸೈನ್‌ಬೋರ್ಡ್‌ಗಳನ್ನು ಹಾಕಿತ್ತು. ಆದರೆ ವಿಮಾನ ನಿಲ್ದಾಣದ ಹೆಸರು ‘ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದಿರುವಾಗ ಅದನ್ನು ‘ಅದಾನಿ ಏರ್‌ಪೋರ್ಟ್’ ಎಂದು ಬದಲಿಸಬಾರದು. ಇದು ಶಿವಾಜಿಗೆ ಮಾಡುವ ಅವಮಾನ ಎಂದು ಶಿವಸೇನೆ ಕಾರ್ಯಕರ್ತರು ವಾದಿಸಿದ್ದಾರೆ.
ಈ ಕುರಿತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಪ್ರತಿಕ್ರಿಯಿಸಿದ್ದು, “ಮುಂಬೈ ವಿಮಾನ ನಿಲ್ದಾಣಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಇಡಲಾಗಿದೆ. ಅದಾನಿ ಸಮೂಹವು ವಿಮಾನ ನಿಲ್ದಾಣದ ನಿರ್ವಹಣೆಯ ನಿಯಂತ್ರಣವನ್ನು ವಹಿಸಿಕೊಂಡಿತು. ಆದರೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಮುಂದೆ ‘ಅದಾನಿ ಏರ್‌ಪೋರ್ಟ್’ ಎಂಬ ಫಲಕಗಳನ್ನು ಹಾಕಿದ್ದು ಜನರ ಭಾವನೆಗಳಿಗೆ ಧಕ್ಕೆ ತಂದಿದೆ” ಎಂದಿದ್ದಾರೆ.
छत्रपतींच्या नावाशी तडजोड नाही ? जय शिवराय?? pic.twitter.com/UvBkczo2Fl
— Ranjeet_M (@Ranjeet24728001) August 2, 2021
ವಿಮಾನ ನಿಲ್ದಾಣದ ಹೆಸರು ‘ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣ.’ ಎಂಬುದಾಗಿದೆ. ಆದರೆ ಅವರು ‘ಅದಾನಿ ವಿಮಾನ ನಿಲ್ದಾಣ’ ಎಂದು ಬರೆದಿದ್ದಾರೆ. ನೀವು ಅದನ್ನು ಖರೀದಿಸಿದ್ದೀರಾ? ಶಿವಾಜಿ ಮಹಾರಾಜರು ದೇಶದ ಹೆಮ್ಮೆ ಎಂದು ಶಿವಸೇನೆಯ ಶಾಸಕ ಅರವಿಂದ್ ಸಾವಂತ್ ತಿಳಿಸಿದ್ದಾರೆ.
ಈ ಕುರಿತು ಟ್ವಿಟರ್‌ನಲ್ಲಿ ಪರ-ವಿರೋಧದ ಚರ್ಚೆ ಆರಂಭಗೊಂಡಿದೆ. ಕೆಲವರು ಶಿವಸೇನೆ ಪರವಾಗಿಯೂ ಮತ್ತೆ ಕೆಲವರು ಅದಾನಿ ಏರ್‌ಪೋರ್ಟ್ ಪರವಾಗಿಯೂ ವಾದಿಸುತ್ತಿದ್ದಾರೆ.
ಇದನ್ನೂ ಓದಿ; ಅದಾನಿಗೆ ಮಂಗಳೂರು ಏರ್‌ಪೋರ್ಟ್ ಗುತ್ತಿಗೆ: ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್


